ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಮಹಿಳೆಯರ ಪಾದ ತೊಳೆದ ಸ್ವಾಮೀಜಿಗಳು

ಶ್ರೀರಂಗಪಟ್ಟಣದಲ್ಲಿ ‘ಜೀವಂತ ದುರ್ಗಾ ಪೂಜೆ’
Last Updated 17 ಏಪ್ರಿಲ್ 2017, 6:39 IST
ಅಕ್ಷರ ಗಾತ್ರ
ಶ್ರೀರಂಗಪಟ್ಟಣ: ಸ್ವಾಮೀಜಿಗಳು ದಲಿತ ಮಹಿಳೆಯರ ಪಾದ ತೊಳೆದು ನಮಸ್ಕರಿಸಿದರು. ಕರ್ಪೂರ, ಊದು ಬತ್ತಿಯಿಂದ ಅವರನ್ನು ಪೂಜಿಸಿದರು. ‘ಜೀವಂತ ದುರ್ಗಾ ಪೂಜೆ’ಯ ಹೆಸರಿನಲ್ಲಿ ಕೊಳಚೆ ಪ್ರದೇಶದಲ್ಲಿ ಭಕ್ತಿಯ ವಾತಾವರಣ ಸೃಷ್ಟಿಸಿದರು.
 
ಬೋವಿಗಳು, ಚಮ್ಮಾರರು, ನಾಯಕ ಇತರ ಹಿಂದುಳಿದ ಜನಾಂಗದವರು ವಾಸಿಸುವ ಪಟ್ಟಣದ ಬೂದಿಗುಂಡಿ ಬಡಾವಣೆಯ ಜನರಿಗೆ ಭಾನುವಾರ ವಿಶೇಷ ದಿನವಾಗಿತ್ತು. ಮೈಸೂರು ರಾಮಕೃಷ್ಣ ಆಶ್ರಮದ ನಿತ್ಯಸ್ಥಾನಂದಸ್ವಾಮಿ, ರಾಮಕೃಷ್ಣ ಅಧ್ಯಾತ್ಮ ಮತ್ತು ಶೈಕ್ಷಣಿಕ ವಿದ್ಯಾ ಕೇಂದ್ರದ ಮಹೇಶಾತ್ಮಾನಂದಸ್ವಾಮಿ, ಮಾತಾಜಿ ಅಮೋಘ ಮಾಯಿ ಇತರರು ಅಸ್ಪೃಶ್ಯ ಮಹಿಳೆಯರನ್ನು ದುರ್ಗೆಯ ರೂಪದಲ್ಲಿ ಪೂಜಿಸಿದರು. ಪಾದಗಳಿಗೆ ಪುಷ್ಪ, ಗಂಧ ಲೇಪಿಸಿ ನಮಿಸಿದರು. ಸುತ್ತಮುತ್ತಲಿನ ನೂರಾರು ಮಂದಿ ಈ ವಿಶೇಷ ಆಚರಣೆಗೆ ಸಾಕ್ಷಿಯಾದರು.
 
‘ಗುಲಾಮತನದಿಂದ ಬದುಕುವುದು ಮನುಷ್ಯನಿಗೆ ಶೋಭೆ ತರುವುದಿಲ್ಲ. ಪ್ರತಿಯೊಬ್ಬರಲ್ಲೂ ದಿವ್ಯತೆ ಇರುತ್ತದೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡಿ ಸ್ವಾವಲಂಬಿಗಳಾಗಿ ಬದುಕಬೇಕು. ಆತ್ಮ ಜಾಗೃತಿಗಾಗಿ ಭಗವಂತನನ್ನು ಸ್ಮರಿಸಬೇಕು.
 
ಧಾರ್ಮಿಕ ಸಂಸ್ಕೃತಿ ಅನುಸರಿಸಬೇಕು. ಧರ್ಮವನ್ನು ಕೇಂದ್ರವಾಗಿ ಇಟ್ಟುಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಬೇಕು’ ಎಂದು ನಿತ್ಯಸ್ಥಾನಂದಸ್ವಾಮಿ ಸಲಹೆ ನೀಡಿದರು.
 
ನಿವೃತ್ತ ಮುಖ್ಯ ಎಂಜನಿಯರ್‌ ಸ್ವಾಮಿಲಿಂಗಪ್ಪ ಮಾತನಾಡಿ, ತಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ, ಶುದ್ಧ ಆಹಾರ ಮತ್ತು ನೀರು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದನ್ನು ಕಲಿಯಬೇಕು’ ಎಂದು ಕಿವಿಮಾತು ಹೇಳಿದರು. 
 
‘ಪ್ರತಿ ಭಾನುವಾರ ಸತ್ಸಂಗ ನಡೆಯಲಿದ್ದು, ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮಾತಾಜಿ ಅಮೋಘ ಮಾಯಿ ಹೇಳಿದರು.
 
ರಾಮಕೃಷ್ಣ ಆಶ್ರಮದ ಪ್ರತಿನಿಧಿ ಶ್ರೀಕಂಠಯ್ಯ, ಇಎಸ್‌ಐ ನಿವೃತ್ತ ಅಧೀಕ್ಷಕ ರಮೇಶ್‌, ನಿವೃತ್ತ ಆರ್‌ಟಿಒ ಸೋಮಶೇಖರಯ್ಯ, ಕೆಆರ್‌ಎಸ್‌ ಡಿಸಿಸಿ ಬ್ಯಾಂಕ್‌ ಮ್ಯಾನೇಜರ್‌ ಡಾ.ಆನಂದ ಕುಮಾರ್‌, ಕೆ.ಆರ್‌. ಸೊಸೈಟಿ ಉಪಾಧ್ಯಕ್ಷ ಉಮೇಶ ಕುಮಾರ್‌, ಹಿಂದೂ ಜಾಗರಣಾ ವೇದಿಕೆ ತಾಲ್ಲೂಕು ಸಂಚಾಲಕ ಚಂದನ್‌, ಓಂಶಕ್ತಿ ದೇವಾಲಯದ ಅರ್ಚಕ ಶಿವು ಇದ್ದರು. ಮಹಿಳೆಯರಿಗೆ ಸೀರೆ, ಪುಸ್ತಕ ಮತ್ತು ಪ್ರಸಾದ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT