ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ಅಗತ್ಯ

Last Updated 17 ಏಪ್ರಿಲ್ 2017, 17:59 IST
ಅಕ್ಷರ ಗಾತ್ರ

ಭಾರತದ ಎಲ್ಲ ನಾಗರಿಕರಿಗೆ ಸಂವಿಧಾನದ ಪ್ರಾಥಮಿಕ ಅರಿವು ಇರಬೇಕು. ಅದರಲ್ಲಿಯೂ ಮುಖ್ಯವಾಗಿ ಚುನಾಯಿತ ಪ್ರತಿನಿಧಿಗಳಿಗೆ ಸಂವಿಧಾನದ ಮೂಲಭೂತ ಅಂಶಗಳನ್ನು ಸರಳವಾಗಿ ಹೇಳಿಕೊಡುವ ವ್ಯವಸ್ಥೆ ಇರಬೇಕು ಎಂಬ ಅರ್ಥದಲ್ಲಿ ಟಿ.ಎನ್.ಪ್ರಭಾಕರ್ ಅವರು ಬರೆದ ಪತ್ರ (ವಾ.ವಾ. ಏ.17) ಮೆಚ್ಚುವಂಥದ್ದು.

ವಂದೇಮಾತರಂ ಗೀತೆಯನ್ನು ನಾನು ಸೊಗಸಾಗಿ ಭಾವಪೂರ್ಣವಾಗಿ ಹಾಡುತ್ತೇನೆ. ಅರ್ಥಪೂರ್ಣ ಸಾಹಿತ್ಯವಿರುವ ಈ ಗೀತೆ ಹಾಡಿದರೆ ಅಭಿಮಾನದಿಂದ ಮೈ ಜುಮ್ಮೆನ್ನುತ್ತದೆ ಎನ್ನುವುದೆಲ್ಲಾ ಸರಿಯೇ. ಆದರೂ, (ಪ್ರಭಾಕರ್ ಅವರು ಬರೆದಂತೆ) ‘ಸರ್ಕಾರಿ ಸಭೆ, ಸಮಾರಂಭಗಳ ಆದಿಯಲ್ಲಿ ವಂದೇಮಾತರಂ ಹಾಡಬೇಕು’ ಎಂದು ಸಂವಿಧಾನದಲ್ಲಿ ಎಲ್ಲೂ ನಿರ್ದೇಶನವಿಲ್ಲ. ಅದು ನಮ್ಮ ಅಭಿಮಾನದ ಆಯ್ಕೆ, ಅಷ್ಟೆ. ಅಭಿಮಾನವನ್ನು ಪ್ರತಿಪಾದಿಸಲು ಇಲ್ಲದ್ದನ್ನು ಇದೆ ಎಂದು ಹೇಳುವುದು ಅಪಾಯಕಾರಿ ಅಭ್ಯಾಸ. ಜನ ಯಾವುದಕ್ಕೆ ಬೇಕಾದರೂ ಈ ವಿಧಾನವನ್ನು ಬಳಸಿಕೊಳ್ಳಬಹುದು.

ಈ ಕುರಿತು ಬಿಜೆಪಿಯ ವಕ್ತಾರ ಅಶ್ವಿನಿ ಉಪಾಧ್ಯಾಯ ಅವರು, ‘ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಜೊತೆಯಲ್ಲಿ ರಾಷ್ಟ್ರಗಾನ’ವನ್ನು (ವಂದೇಮಾತರಂ) ಪ್ರಚಾರ ಮತ್ತು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ‘ಸಂವಿಧಾನದಲ್ಲಿ ‘ರಾಷ್ಟ್ರಗಾನ’ ಎಂಬ ಪರಿಕಲ್ಪನೆ ಇಲ್ಲ’ ಎಂದು ಹೇಳುವ ಮೂಲಕ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದಲ್ಲದೆ ನ್ಯಾಯಮೂರ್ತಿಗಳಾದ  ದೀಪಕ್ ಮಿಶ್ರಾ, ಆರ್. ಭಾನುಮತಿ ಮತ್ತು ಎಸ್.ಎಮ್. ಮಲ್ಲಿಕಾರ್ಜುನ ಗೌಡ  ಅವರನ್ನೊಳಗೊಂಡ ನ್ಯಾಯಪೀಠವು, ಭಾರತ ಸಂವಿಧಾನದ ‘ಅನುಚ್ಛೇದ 51 ಎ (ಮೂಲಭೂತ ಕರ್ತವ್ಯ) ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಮಾತ್ರ ಉಲ್ಲೇಖಿಸುತ್ತದೆ. ಇಲ್ಲಿ ರಾಷ್ಟ್ರಗಾನದ ಉಲ್ಲೇಖವಿಲ್ಲ. ಆದ್ದರಿಂದ (National Song) ‘ರಾಷ್ಟ್ರಗಾನ’ದ ಕುರಿತಾದ ಚರ್ಚೆಯಲ್ಲಿ ನಾವು ಭಾಗವಹಿಸಬಯಸುವುದಿಲ್ಲ’ ಎಂದು ಹೇಳಿದೆ.

‘ಕಚೇರಿ, ನ್ಯಾಯಾಲಯಗಳು, ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಬೇಕು’ ಎಂಬ ಮನವಿಯನ್ನು ಸಹ ನ್ಯಾಯಪೀಠ ತಿರಸ್ಕರಿಸಿದೆ.

ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸುವುದು ಮೂಲಭೂತ ಕರ್ತವ್ಯ. ಕರ್ತವ್ಯ ಪಾಲನೆ ಅರಿವು, ಒಲವು, ಜಾಗೃತಿಯಿಂದ ಸಾಧ್ಯವಾಗುತ್ತದೆಯೇ ವಿನಾ ದೂಷಣೆ, ಘರ್ಷಣೆಯಿಂದಲ್ಲ. ಇವು ವೈಯಕ್ತಿಕ ಭಾವನೆಗಳ ಶ್ರೀಮಂತಿಕೆಯ ವಿಚಾರಗಳಾಗಬೇಕೇ ವಿನಾ ಸಂಘರ್ಷದ ಅಸ್ತ್ರಗಳಾಗಬಾರದು ಎಂಬುದೇ ನಮ್ಮ ಕಾಳಜಿ.  ‘ವೈಜ್ಞಾನಿಕ ಮನೋಭಾವ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು’ ಕೂಡ [51 ಎ (ಎಚ್)] ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದು.
-ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT