ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾಂಬಿಕಾ ದೇವಿ ಮಹಾರಥೋತ್ಸವ 25ರಂದು

ಹೊಸದುರ್ಗ ಪಟ್ಟಣದ ಗ್ರಾಮದೇವತೆಯ ಜಾತ್ರೆಗೆ ಇಂದು ಚಾಲನೆ
Last Updated 18 ಏಪ್ರಿಲ್ 2017, 4:17 IST
ಅಕ್ಷರ ಗಾತ್ರ
ಹೊಸದುರ್ಗ: ಪಟ್ಟಣದ ಗ್ರಾಮದೇವತೆ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಏ.18ರಿಂದ 29ರವರೆಗೆ ನಡೆಯಲಿದೆ.

18ರಂದು ರಾತ್ರಿ 8.30ಕ್ಕೆ ಧ್ವಜಾರೋಹಣ, ಐತಿಹಾಸಿಕ ಹೊಂಡದಲ್ಲಿ ಗಂಗಾಪೂಜೆ, ನಡೆಮುಡಿ ಉತ್ಸವ, ಮಾಂಗಲ್ಯಧಾರಣೆ, ಮಧುವಣಿಗೆ ಶಾಸ್ತ್ರ, ನಂದಾದೀಪ ಸೇವೆ ನಡೆಯಲಿದೆ. 19ರಂದು ಪಟ್ಟಣದ ಮುಖ್ಯ ಬೀದಿಗಳಲ್ಲಿ ಅಲಂಕೃತ ದುರ್ಗಾಂಬಿಕಾದೇವಿ ಅದ್ಧೂರಿ ಹೂವಿನೋತ್ಸವ ಜರುಗಲಿದೆ.

20ರಂದು ಶಿವನೇಕಟ್ಟೆ ಕಾಳಮ್ಮದೇವಿ ದೇಗುಲಕ್ಕೆ, 21ರಂದು ಹೊಸಹಳ್ಳಿ ಗ್ರಾಮಕ್ಕೆ ಹಾಗೂ 22ರಂದು ಬಜ್ಜಪ್ಪನಹಟ್ಟಿಗೆ ದುರ್ಗಾಂಬಿಕಾ ದೇವಿ ಆಗಮನವಾಗಲಿದೆ. 
 
23ರಂದು ಉತ್ಸವ ಪೂಜೆ, 24ರಂದು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಗೊರವಿನಕಲ್ಲು ಗ್ರಾಮಕ್ಕೆ ದೇವಿಯ ಆಗಮನ. 25ರಂದು ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ದುರ್ಗಾಂಬಿಕಾ ದೇವಿಯ ರಥಾರೋಹಣ, ಬೆಳಿಗ್ಗೆ 10ಕ್ಕೆ ಮಹಾರಥೋತ್ಸವ ಜರುಗಲಿದೆ.

ಶಾಸಕ ಬಿ.ಜಿ.ಗೋವಿಂದಪ್ಪ ಅವರಿಂದ ಪ್ರಸಾದ ವಿನಿಯೋಗ, ಇಲ್ಲಿನ ಖಾಸಗಿ ಬಸ್‌ ಏಜೆಂಟರಿಂದ ಮಜ್ಜಿಗೆ ಸೇವೆ, ಮಧ್ಯಾಹ್ನ 2ಕ್ಕೆ ಪಾನಕ ಬಂಡಿ, ಸಂಜೆ 5ಕ್ಕೆ ಬೇವಿನ ಸೀರೆ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
 
26ರಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಸಿಡಿ ಉತ್ಸವ, ಸಂಜೆ 7.30ಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಜಿ.ರಮೇಶ್‌ ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
 
27ರಂದು ಹಾಲುಪಲ್ಲಕ್ಕಿ ಉತ್ಸವ, 28ರಂದು ಬೆಲ್ಲದ ರಾಶಿ ಮತ್ತು ರಾಶಿ ಬುತ್ತಿ ಎಡೆ, 29ರಂದು ಅವಭೃತ ಸ್ನಾನ, ಕಂಕಣ ವಿಸರ್ಜನೆ ನಡೆಯಲಿದೆ. ಮೇ 2ರಂದು ಪಟ್ಟಣದ ಹೊರವಲಯದ ಸಿದ್ದಪ್ಪನ ಬೆಟ್ಟದಲ್ಲಿ ಪರೇವು ಸೇವೆ ನಡೆಯಲಿವೆ. 
 
ಎಲ್ಲಾ ಜನಾಂಗದವರು ಸಾಮರಸ್ಯದಿಂದ ಆಚರಿಸುವ ಜಾತ್ರೋತ್ಸವ ಇದಾಗಿದೆ. ನಾಯಕರು ಪೂಜೆ, ಚಲವಾದಿಯರು ವಾದ್ಯ, ಕೊರಮರು ಓಲಗ, ಹರಿಜನರು ದೋಣ ಹಾಗೂ ಉರುಮೆ, ಮಡಿವಾಳರು ಪಂಜು, ಉಪ್ಪಾರರು ಮರಿಸೇವೆ ಮತ್ತು ಹಾಲುಮತಸ್ಥರು ಸಿಡಿಬಾನ ಕಾರ್ಯ ಮಾಡುತ್ತಾರೆ. 
 
ಸಕಲ ಸಿದ್ಧತೆ:  ಪ್ರತಿ ವರ್ಷ ಚೈತ್ರ ಮಾಸದಲ್ಲಿ ಒಂದು ವಾರ ಜಾತ್ರೆಯನ್ನು ಆಚರಿಸುತ್ತೇವೆ. ಜಾತ್ರೆಯ ಸಿದ್ಧತೆ ಒಂದು ವಾರದಿಂದಲೂ ಭರದಿಂದ ಸಾಗುತ್ತಿದೆ. ದೇಗುಲಕ್ಕೆ ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಲಾಗಿದೆ. ವಿದ್ಯುತ್‌ ದೀಪಗಳಿಂದ ಶೃಂಗಾರ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ತಿಳಿಸಿದರು. 
 
ದೇವಿ ನೆಲೆಸಿದ ಬಗೆ:  ಪಟ್ಟಣದ ರಾಗಿ ಮನೆತನದವರು ಮುನ್ನೂರು ವರ್ಷಗಳ ಹಿಂದೆ ಮಲೆನಾಡಿನಿಂದ ವ್ಯಾಪಾರ ಮುಗಿಸಿ ವಾಪಸ್‌ ಬರುತ್ತಿದ್ದಾಗ ಈ ದುರ್ಗಾಂಬಿಕಾ ದೇವಿ ಜೊತೆಯಲ್ಲಿ ಬಂದು ಅವರ ಮನೆಯ ಒಳಕಲ್ಲಿನಲ್ಲಿ ನೆಲೆಯೂರಿದಳು. ತನ್ನ ಶಕ್ತಿಯಿಂದ ವಿವಿಧ ಪವಾಡ ಪ್ರದರ್ಶಿಸಿದಳು. ಒರಳು ಕಲ್ಲಿನಲ್ಲಿ ನೆಲೆಸಿದ್ದ ದೇವಿಗೆ ಭಕ್ತರು ಪೂಜೆ ಸಲ್ಲಿಸಿದರು ಎಂಬ ಪ್ರತೀತಿ ಇದೆ. 
 
ಒರಳು ಕಲ್ಲಿನಲ್ಲಿ ಉದ್ಭವಿಸಿದ ದೇವಿಯ ವಿಗ್ರಹದ ದರ್ಶನವನ್ನು ಇಂದಿಗೂ ದೇವಾಲಯದಲ್ಲಿ ಪಡೆಯಬಹುದಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT