ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ ಕಾಮಗಾರಿ: ನಗರ ಸೌಂದರ್ಯ ಹಾಳು

ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸದಸ್ಯರ ಆಕ್ರೋಶ; ಕ್ರಮಕ್ಕೆ ಒತ್ತಾಯ
Last Updated 18 ಏಪ್ರಿಲ್ 2017, 4:42 IST
ಅಕ್ಷರ ಗಾತ್ರ
ಬೀದರ್‌: ಮೂರೂವರೆ ವರ್ಷಗಳಿಂದ ನಗರದಲ್ಲಿ ಒಳಚರಂಡಿ ಹಾಗೂ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆದಿದೆ. ಕಾಮಗಾರಿಯ ಗುತ್ತಿಗೆ ಪಡೆದಿರುವ ಏಜೆನ್ಸಿಗಳು ನಗರದ ಎಲ್ಲೆಡೆ ರಸ್ತೆಗಳನ್ನು ಅಗೆದು ನಗರದ ಸೌಂದರ್ಯವನ್ನೇ  ಹಾಳು ಮಾಡಿವೆ. ಕಾಮಗಾರಿ ಹೆಸರಲ್ಲಿ ನಗರವನ್ನು  ಹಾಳು ಮಾಡಲಾಗಿದೆ.
 
ಹೀಗೆಂದು ನಗರಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ ಅಧ್ಯಕ್ಷತೆಯಲ್ಲಿ ನಗರದಲ್ಲಿ ಸೋಮವಾರ ನಡೆದ  ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(ಕೆಯುಐಡಿಎಫ್‌)ದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 
ಸರಿಯಾಗಿ ಸಮೀಕ್ಷೆ ಮಾಡದೆ ಕುಡಿಯುವ ನೀರಿನ ಪೈಪ್‌ಲೈನ್‌ ಜೋಡಣೆ ಮಾಡಲಾಗುತ್ತಿದೆ. ಎಲ್ಲ ವಾರ್ಡ್‌ನಲ್ಲೂ ಕಾಮಗಾರಿ ಅಪೂರ್ಣವಾಗಿವೆ. ಅಧಿಕಾರಿಗಳು ನಗರಸಭೆ ಸದಸ್ಯರ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರಿದರು.
 
ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುತ್ತ ಅಧಿಕಾರಿಗಳು ಮೂರೂವರೆ ವರ್ಷ ಕಳೆದಿದ್ದಾರೆ. ಒಳಚರಂಡಿ ಪೈಪ್‌ ಅಳವಡಿಸುವ ನೆಪದಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಅಗೆಯಲಾಗಿದ್ದು, ನಗರದಲ್ಲಿ ಸಂಚರಿಸುವುದು ಕಷ್ಟವಾಗಿದೆ. ಕಾಮಗಾರಿ ಹೆಸರಲ್ಲಿ ಬೀದರ್ ನಗರವನ್ನು ಅಕ್ಷರಶಃ ಹಾಳು ಮಾಡಲಾಗಿದೆ ಎಂದು ಸದಸ್ಯ ನಾಗಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
 
ಫಿಲೋಮನ್‌ರಾಜ್‌ ಮಾತನಾಡಿ, ಕೆಯುಐಡಿಎಫ್‌ ಅಧಿಕಾರಿಗಳು ಕಾಮಗಾರಿ ಮೇಲೆ ಸರಿಯಾಗಿ ನಿಗಾ ಇಟ್ಟಿಲ್ಲ. ವಾರ್ಡ್‌ ಸಂಖ್ಯೆ 34ರಲ್ಲಿ ಇನ್ನೂ ಅನೇಕ ಮನೆಗಳಿಗೆ ನಿರಂತರ ನೀರು ಯೋಜನೆಯ ನಲ್ಲಿ ಜೋಡಣೆ ಮಾಡಿಲ್ಲ. ಈ ರೀತಿಯಾದರೆ ನಗರದ ಜನತೆಗೆ ಕುಡಿಯುವ ನೀರು ದೊರಕುವುದು ಯಾವಾಗ ಎಂದು ಪ್ರಶ್ನಿಸಿದರು.
 
ತೆರಿಗೆ ಹೆಚ್ಚಳಕ್ಕೆ ವಿರೋಧ: ತೆರಿಗೆ ಹೆಚ್ಚಳ ಪ್ರಸ್ತಾವಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನಿರಂತರ ನೀರು ಸಹ ಸರಬರಾಜು ಆಗುತ್ತಿಲ್ಲ. ಆದ್ದರಿಂದ ತೆರಿಗೆ ಹೆಚ್ಚಳದ ಪ್ರಸ್ತಾವ ಕೈಬಿಡಬೇಕು ಎಂದು ಸಯ್ಯದ್‌ ಮನ್ಸೂರ್‌ ಅಹಮ್ಮದ್‌ ಖಾದ್ರಿ ಒತ್ತಾಯಿಸಿದರು.
 
ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಜನ ನೀರಿನ ತೆರಿಗೆ ಪಾವತಿಸಿಲ್ಲ. ₹ 7 ಕೋಟಿ ತೆರಿಗೆ ಬಾಕಿ ಉಳಿದಿದೆ.  ನಗರಸಭೆ ಸಿಬ್ಬಂದಿ ತೆರಿಗೆ ವಸೂಲಿಗೆ ಹೋದರೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ನಗರಸಭೆ ಆಯುಕ್ತ ನರಸಿಂಹಮೂರ್ತಿ ಹೇಳಿದರು.
 
ತೆರಿಗೆ ವಸೂಲಿ ಮಾಡದಿದ್ದರೆ ಸರ್ಕಾರದಿಂದ ಅನುದಾನ ಬರುವುದು ನಿಂತು ಹೋಗಲಿದೆ. ಹೀಗಾಗಿ ಬಾಕಿ ತೆರಿಗೆಯನ್ನು ವಸೂಲಿ ಮಾಡಬೇಕಾದ ಅನಿವಾರ್ಯತೆ ಇದೆ. ನಗರಸಭೆ ಸದಸ್ಯರು ಸಹಕರಿಸಿದರೆ ಬಾಕಿ ವಸೂಲಿ ಸಾಧ್ಯವಾಗಲಿದೆ ಎಂದು ಹೇಳಿದರು. 
 
ನಗರಸಭೆ ಆದಾಯ ಹೆಚ್ಚಿಸಿ: ನಗರಸಭೆ ಅಧಿಕಾರಿಗಳು ಆದಾಯದ ಮೂಲ ಕಂಡುಕೊಳ್ಳಬೇಕು. ನಗರಸಭೆಯ ಮಳಿಗೆಗಳ ಬಾಡಿಗೆ ಹೆಚ್ಚಿಸಬೇಕು ಹಾಗೂ ಹೊಸ ಮಳಿಗೆಗಳನ್ನು ನಿರ್ಮಾಣ ಮಾಡಬೇಕು ಎಂದು ಫಿಲೋಮನ್‌ರಾಜ್‌ ಸಲಹೆ ನೀಡಿದರು.
 
ನಗರಸಭೆಯ ಸೌಕರ್ಯ ಪಡೆಯುತ್ತಿರುವ ಪೊಲೀಸ್‌, ಜೆಸ್ಕಾಂ ಸಿಬ್ಬಂದಿ ಗೃಹ, ಸರ್ಕಾರಿ ಕಚೇರಿಗಳಿಂದಲೂ ತೆರಿಗೆ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
 
ನಗರಸಭೆಗೆ ಜಾಗದ ಕೊರತೆ ಇಲ್ಲ. ಮಳಿಗೆಗಳನ್ನು ನಿರ್ಮಾಣ ಮಾಡಲು ಅವಕಾಶ ಇದೆ.  ಭೂ ಬಾಡಿಗೆ ಹೆಚ್ಚಿಸಿ ನಗರಸಭೆಯ ಆದಾಯ ಹೆಚ್ಚಿಸಬಹುದು. ಇದಕ್ಕೆ ಸದಸ್ಯರ ಸಹಕಾರ ಅಗತ್ಯ ಎಂದು ಆಯುಕ್ತ ನರಸಿಂಹಮೂರ್ತಿ ತಿಳಿಸಿದರು.ಕೆಎಸ್‌ಆರ್‌ಟಿಸಿ ಮಾತ್ರ ನಗರಸಭೆಗೆ ತೆರಿಗೆ ಪಾವತಿಸಿದೆ. ಬೇರೆ ಇಲಾಖೆಗಳು ತೆರಿಗೆ ಪಾವತಿಸಿಲ್ಲ. 
 
ಸರ್ಕಾರದ ವಿವಿಧ ಇಲಾಖೆಗಳ ಕಚೇರಿ ಮುಖ್ಯಸ್ಥರಿಗೂ ಪತ್ರ ಬರೆಯಲಾಗಿದೆ. ಇಲಾಖೆಯ ಬಜೆಟ್‌ನಲ್ಲಿ ಹಣ ಉಳಿದರೆ ಮಾತ್ರ ತೆರಿಗೆ ಪಾವತಿಸುವ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ. ಜಿಲ್ಲಾಧಿಕಾರಿ ಗಮನಕ್ಕೆ ತಂದು ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
 
ಶೌಚಾಲಯ ನಿರ್ಮಿಸಿ: ಓಲ್ಡ್‌ಸಿಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಒಟ್ಟು ಮೂರು ಕಾಲೇಜು ಹಾಗೂ ಒಂದು ಪ್ರೌಢಶಾಲೆ ಇದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದರೂ ಆವರಣದಲ್ಲಿ ಶೌಚಾಲಯ ಇಲ್ಲ. ನಗರಸಭೆಯ ವತಿಯಿಂದ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಸದಸ್ಯ ಮುನ್ನಾ ಮನವಿ ಮಾಡಿದರು.
 
ಶಿಕ್ಷಣ ಇಲಾಖೆಗೆ ಅನುದಾನದ ಕೊರತೆ ಇಲ್ಲ. ಶಿಕ್ಷಣ ಇಲಾಖೆಯ ಮೂಲಕವೇ ಶೌಚಾಲಯ ನಿರ್ಮಾಣ ಮಾಡಲು ಒತ್ತಡ ತರಬೇಕು ಎಂದು ನಬಿ ಖುರೇಶಿ ಹೇಳಿದರು.
****
ಹೊಸ ಕಟ್ಟಡಕ್ಕಿಂತ ನವೀಕರಣಕ್ಕೆ ಹೆಚ್ಚು ಹಣ!
ಅಧಿಕಾರಿಗಳು ನಗರಸಭೆ ಸಭಾಂಗಣ ಹಾಗೂ ಉಪಾಧ್ಯಕ್ಷರ ಕೊಠಡಿ ನವೀಕರಣಕ್ಕೆ ₹ 35 ಲಕ್ಷ ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ. ಇಷ್ಟು ಹಣದಲ್ಲಿ ಹೊಸ ಕಟ್ಟಡವನ್ನೇ ನಿರ್ಮಿಸಬಹುದು ಎಂದು ಸದಸ್ಯ ಎಚ್‌.ಎಸ್. ಮಾರ್ಟಿನ್‌ ಹೇಳಿದರು.

ಸಭಾಭವನ ನವೀಕರಣಕ್ಕೆ ₹ 20 ಲಕ್ಷ, ಉಪಾಧ್ಯಕ್ಷರ ಕೊಠಡಿ ನವೀಕರಣಕ್ಕೆ ₹ 10 ಲಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿ ನವೀಕರಣಕ್ಕೆ ₹ 5 ಲಕ್ಷ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಹಿಂದಿನ ಬಾರಿ ಸಭಾಭವನದ ಹೆಸರಲ್ಲಿ ಲಕ್ಷಾಂತರ ಹಣ ದುರ್ಬಳಕೆ ಆಗಿದೆ. ಸಭಾಭವನದಲ್ಲಿ ಅಳವಡಿಸಲಾದ ಒಂದೂ ಏರ್‌ಕೂಲರ್‌ ಕಾರ್ಯನಿರ್ವಹಿಸುತ್ತಿಲ್ಲ. ಮೈಕ್‌ಗಳು ಸಹ ಸರಿ ಇಲ್ಲ ಎಂದು ದೂರಿದರು.

ಅಗತ್ಯ ಇಲ್ಲದಿದ್ದರೂ ಸ್ಮಶಾನದ ಅಭಿವೃದ್ಧಿಗೆ ಒಂದು ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ. ಜನರ ಹಣವನ್ನು ಮೂಲಸೌಕರ್ಯ ಒದಗಿಸಲು  ಬಳಸಬೇಕು. ತೆರಿಗೆ ಹಣ ದುರ್ಬಳಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT