ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಪನಹಳ್ಳಿ ವ್ಯಕ್ತಿ ಅನುಮಾನಾಸ್ಪದ ಸಾವು

ಸುಗಟೂರು ಹೊರ ಠಾಣೆ ಎದುರು ಶವವಿಟ್ಟು ಪ್ರತಿಭಟನೆ; ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲು ಯತ್ನ
Last Updated 18 ಏಪ್ರಿಲ್ 2017, 5:44 IST
ಅಕ್ಷರ ಗಾತ್ರ
ಕೋಲಾರ: ತಾಲ್ಲೂಕಿನ ಬೈಪನಹಳ್ಳಿಯ ಮುನಿಶಾಮಿ (40) ಎಂಬುವರು ತಮಿಳುನಾಡಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಸುಗಟೂರು ಪೊಲೀಸ್‌ ಹೊರ ಠಾಣೆ ಎದುರು ಸೋಮವಾರ ಶವವಿಟ್ಟು ಪ್ರತಿಭಟನೆ ಮಾಡಿದರು.
 
ಮುನಿಶಾಮಿ ಅವರನ್ನು ಕೊಲೆ ಮಾಡಲಾಗಿದೆ. ಅವರ ಸ್ನೇಹಿತರಾದ ಮಂಜುನಾಥ್‌ ಮತ್ತು ವೆಂಕಟೇಶ್‌ ಈ ಕುಕೃತ್ಯ ಎಸಗಿದ್ದಾರೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
 
ಆರೋಪಿಗಳಾದ ಮಂಜುನಾಥ್‌ ಮತ್ತು ವೆಂಕಟೇಶ್‌ ತಲೆಮರೆಸಿಕೊಂಡಿದ್ದಾರೆ. ಅವರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿವೆ. ಕೊಲೆ ನಡೆದು ನಾಲ್ಕೈದು ದಿನಗಳಾಗಿವೆ. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬಲಾಢ್ಯರಾಗಿರುವ ಮಂಜುನಾಥ್‌ ದೂರು ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡ ತಂದಿದ್ದಾರೆ ಎಂದರು.
 
ಕೊಲೆ ಸಂಚು: ತಮಿಳುನಾಡಿನ ಮಂಜುನಾಥ್‌, ಸುಗಟೂರು ಗ್ರಾಮದಲ್ಲಿರುವ ಸಂಬಂಧಿಕರ ಬಾರ್‌ನಲ್ಲಿ ಕ್ಯಾಷಿಯರ್‌ ಆಗಿದ್ದರು. ಕೂಲಿ ಕಾರ್ಮಿಕರಾಗಿದ್ದ ಮುನಿಶಾಮಿ ಅವರು ಮಂಜುನಾಥ್‌ಗೆ ಸ್ನೇಹಿತರಾಗಿದ್ದರು. ಯುವತಿಯೊಬ್ಬರ ವಿಷಯವಾಗಿ ಅವರ ನಡುವೆ ತಿಂಗಳ ಹಿಂದೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಮಂಜುನಾಥ್‌, ಮುನಿಶಾಮಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಸಂಬಂಧಿಕರು ಆರೋಪಿಸಿದರು.
 
ಪೂರ್ವಯೋಜಿತ ಸಂಚಿನಂತೆ ಮಂಜುನಾಥ್‌ ಮತ್ತು ವೆಂಕಟೇಶ್‌ ಕಳೆದ ವಾರ ಮುನಿಶಾಮಿಯನ್ನು ಶಬರಿಮಲೆಗೆ ಕರೆದೊಯ್ದಿದ್ದರು. ದೇವರ ದರ್ಶನ ಮುಗಿಸಿಕೊಂಡು ರೈಲಿನಲ್ಲಿ ಊರಿಗೆ ಹಿಂದಿರುಗುವಾಗ ತಮಿಳುನಾಡಿನ ಈರೋಡ್‌ ಬಳಿ ಅವರು ಮುನಿಶಾಮಿಯನ್ನು ರೈಲಿನಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ. ಬಳಿಕ ಅವರೇ ಸ್ಥಳೀಯ ಪೊಲೀಸ್‌ ಠಾಣೆಗೆ ಹೋಗಿ ಮುನಿಶಾಮಿ ರೈಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ದೂರು ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಈರೋಡ್‌ ಪೊಲೀಸರು ಮುನಿಶಾಮಿ ಸಾವಿನ ಬಗ್ಗೆ ಏ.15ರಂದು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಗ್ರಾಮಾಂತರ ಪೊಲೀಸರು ಮುನಿಶಾಮಿ ಕುಟುಂಬ ಸದಸ್ಯರಿಗೆ ಆ ವಿಷಯ ತಿಳಿಸಿದ್ದರು. ನಂತರ ತಮಿಳುನಾಡಿಗೆ ಹೋಗಿದ್ದ ಕುಟುಂಬ ಸದಸ್ಯರು ಭಾನುವಾರ (ಏ.16) ರಾತ್ರಿ ಬೈಪನಹಳ್ಳಿಗೆ ಶವ ತೆಗೆದುಕೊಂಡು ಬಂದಿದ್ದರು.
 
ಬಿಗುವಿನ ವಾತಾವರಣ: ಪೊಲೀಸರು ಪ್ರತಿಭಟನಾಕಾರರು ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
 
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಆರೋಪಿಗಳ ವಿರುದ್ಧ ದಾಖಲಿಸಿಕೊಳ್ಳಬೇಕು ಮತ್ತು ಆರೋಪಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು.
 
ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌ ಹಾಗೂ ಡಿವೈಎಸ್ಪಿ ಅಬ್ದುಲ್‌ ಸತ್ತಾರ್‌ ಅವರು ಮುನಿಶಾಮಿ ಸಂಬಂಧಿಕರಿಂದ ದೂರು ಪಡೆದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ, ಈರೋಡ್‌ಗೆ ಪೊಲೀಸರನ್ನು ಕಳುಹಿಸಿ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದರು.
 
ಮೃತ ಮುನಿಶಾಮಿ ಪರಿಶಿಷ್ಟ ಜಾತಿಗೆ ಸೇರಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಪರಿಹಾರದ ಭರವಸೆ ನೀಡಿದರು.

ಅಲ್ಲದೇ, ಅಂತ್ಯಕ್ರಿಯೆಗಾಗಿ ₹ 5 ಸಾವಿರ ಹಣಕಾಸು ನೆರವು ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆದ ಸಂಬಂಧಿಕರು ಗ್ರಾಮಕ್ಕೆ ಶವ ತೆಗೆದುಕೊಂಡು ಹೋಗಿ ಸಂಜೆ ಅಂತ್ಯಕ್ರಿಯ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT