ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಮೈದಾನ: ಅವ್ಯವಸ್ಥೆಯ ಆಡೊಂಬಲ

Last Updated 18 ಏಪ್ರಿಲ್ 2017, 5:57 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಇಲ್ಲಿನ ನೆಹರೂ ಮೈದಾನ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ. ಆದರೆ, ಅಸಮರ್ಪಕ ನಿರ್ವಹಣೆಯಿಂದ ಅಕ್ರಮ ಚಟವಟಿಕೆಗಳ ಆಗರವಾಗಿದೆ. ಕಣ್ಣು ಕಳೆದುಕೊಂಡಿರುವ ಇಲ್ಲಿನ ವಿದ್ಯುತ್‌ ದೀಪಗಳು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿಯಂತಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಮೈದಾನದಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗಿದೆ. ಅದರೆ, ಅವು ಯಾವುದಾದರೂ ಕಾರ್ಯಕ್ರಮಗಳಿದ್ದಾಗ ಮಾತ್ರ ಉರಿಯುತ್ತವೆ. ಉಳಿದ ಅವಧಿಯಲ್ಲಿ ಮೈದಾನ ಪೂರ್ಣ ಕತ್ತಲಲ್ಲಿ ಮುಳುಗುತ್ತದೆ. ರಾತ್ರಿ ವೇಳೆಯಲ್ಲಿ ಮೈದಾನದೊಳಗೆ ನುಗ್ಗುವ ಪುಂಡರು ಇಲ್ಲಿಯೇ ಗಾಂಜಾ ಸೇವಿಸುತ್ತಾರೆ. ಅಕ್ರಮ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ’ ಎಂದು ಸ್ಥಳೀಯರಾದ ಮಹಾದೇವ ಬಿಸ್ವಾಗರ್‌ ದೂರುತ್ತಾರೆ.

‘ಮೈದಾನ ರಕ್ಷಣೆಗೆ ಎಂದು ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ. ಆದರೆ, ರಾತ್ರಿಯಾದರೆ, ಇವರನ್ನು ಹೆದರಿಸಿ ಕೆಲವು ಪುಂಡರು ಒಳಗೆ ನುಗ್ಗುತ್ತಾರೆ. ಸಂಜೆ ವೇಳೆ ಈ ಮೈದಾನದಲ್ಲಿ ವಾಯುವಿಹಾರಕ್ಕೆ ಬರಲು ಮಹಿಳೆಯರು ಹಿಂಜರಿಯುವಂತಹ ವಾತಾವರಣ ಇಲ್ಲಿದೆ’ ಎಂದು ಅವರು ಹೇಳುತ್ತಾರೆ.‘ಮೈದಾನಕ್ಕೆ ಹೋಗುವ ಮುಂದಿನ ಬಾಗಿಲನ್ನು ಮುಚ್ಚಲಾಗಿರುತ್ತದೆ. ಆದರೆ, ಹಿಂದಿನ ಗೇಟ್‌ ಒಡೆದಿರುವುದರಿಂದ ಅಲ್ಲಿಂದ ಕೆಲವರು ಒಳ ನುಗ್ಗಿ ಮೈದಾನಕ್ಕೆ ಪ್ರವೇಶ ಪಡೆಯುತ್ತಾರೆ. ಅದನ್ನು ದುರಸ್ತಿ ಮಾಡಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಮಾಡಿಲ್ಲ’ ಎಂದು ಅವರು ದೂರುತ್ತಾರೆ.

‘ಮೈದಾನದ ನಾಲ್ಕು ಮೂಲೆಗಳಿಗೂ ಹೈಮಾಸ್ಟ್‌ ದೀಪ ಹಾಕಿದ್ದಾರೆ. ಯಾವಾಗಲೂ ಎಲ್ಲ ದೀಪಗಳು ಉರಿಯಲಿ ಎಂದು ನಾವು ಬಯಸುವುದಿಲ್ಲ. ಆದರೆ, ಮೈದಾನ ಪೂರ್ತಿ ಕಾಣುವಷ್ಟಾದರೂ ಬೆಳಕು ಇರುವಂತೆ ವ್ಯವಸ್ಥೆ ಮಾಡಬೇಕು. ಮೈದಾನದೊಳಗೆ ಬ್ಯಾಡ್ಮಿಂಟನ್‌ ಕೋರ್ಟ್‌ ಇದೆ. ಅಲ್ಲಿ ಮಾತ್ರ ಯಾವಾಗಲೂ ದೀಪಗಳು ಉರಿಯುತ್ತಿರುತ್ತವೆ. ಪಾಲಿಕೆ ಅಧಿಕಾರಿಗಳೇ ಹೆಚ್ಚಾಗಿ ಈ ಅಂಗಣವನ್ನು ಉಪಯೋಗಿಸುತ್ತಾರೆ’ ಎಂದು ಬಿಸ್ವಾಗರ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ದುರ್ವಾಸನೆ ‘ಭಾಗ್ಯ’:  ‘ವಾಯು ವಿಹಾರಿಗಳಿಗೆ ಅನುಕೂಲವಾಗಲಿ ಎಂದು ಪೇವರ್ಸ್‌ ಹಾಕಿಸಲಾಗಿದೆ. ಆದರೆ, ಒಳಚರಂಡಿ ತುಂಬಿ ಕೊಳಚೆ ನೀರು ಮೈದಾನದ ಸುತ್ತ ಆವರಿಸಿದೆ. ದುರ್ವಾಸನೆಯಿಂದ ಒಳಗೆ ಹೋಗುವುದಕ್ಕೇ ಅಸಹ್ಯವಾಗುತ್ತದೆ’ ಎಂದು ಎಂ.ಬಿ. ಮುಬಾರಕ್‌ ಹೇಳುತ್ತಾರೆ.

ಅಭಿವೃದ್ಧಿಗೆ ₹50 ಲಕ್ಷ:  ‘ನೆಹರೂ ಮೈದಾನದ ಅಭಿವೃದ್ಧಿಗೆ ಈ ವರ್ಷದ ಬಜೆಟ್‌ನಲ್ಲಿ ₹50ಲಕ್ಷ ತೆಗೆದಿರಿಸಲಾಗಿದೆ. ಹಣ ಬಿಡುಗಡೆಯಾದ ಕೂಡಲೇ, ದುರಸ್ತಿ ಕಾರ್ಯ ಆರಂಭಿಸಲಾಗುತ್ತದೆ’ ಎಂದು ಪಾಲಿಕೆ ಸದಸ್ಯೆ ಸ್ಮಿತಾ ಜಾಧವ ಹೇಳಿದರು.‘₹17 ಲಕ್ಷ ವೆಚ್ಚದಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳನ್ನು ಹೊತ್ತಿಸುವುದಿಲ್ಲ ಎಂಬುದು ಗಮನಕ್ಕೆ ಬಂದಿಲ್ಲ. ಅಲ್ಲದೆ, ಒಳಚರಂಡಿ ಪೈಪ್‌ ಒಡೆದಿರುವ ಬಗ್ಗೆ ಈವರೆಗೆ ಯಾರೂ ದೂರು ಕೊಟ್ಟಿಲ್ಲ. ಕೂಡಲೇ ಪರಿಶೀಲಿಸುತ್ತೇನೆ’ ಎಂದು ಹೇಳಿದರು.

‘ಇನ್ನು, ಅಕ್ರಮ ಚಟುವಟಿಕೆಗಳು ನಡೆಯುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅಲ್ಲದೆ, ಈ ವಿಚಾರ ನನ್ನ ವ್ಯಾಪ್ತಿಗೂ ಬರುವುದಿಲ್ಲ. ಪೊಲೀಸ್‌ ಇಲಾಖೆ ಗಮನ ಹರಿಸಬೇಕು. ಆದರೆ, ಈ ಬಗ್ಗೆ ಪೊಲೀಸರ ಗಮನಕ್ಕೆ ಹಾಗೂ ಪಾಲಿಕೆ ಆಯುಕ್ತರ ಗಮನಕ್ಕೆ ತರುತ್ತೇನೆ ಎಂದು ಸ್ಮಿತಾ ಜಾಧವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT