ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದೊಳಗೆ ಕಾಲೇಜು ಕಟ್ಟಡ ಪೂರ್ಣ

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್ ಭರವಸೆ
Last Updated 18 ಏಪ್ರಿಲ್ 2017, 6:16 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಟ್ಟಡ ಕಾಮಗಾರಿ ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು. 
 
 ಕಾಲೇಜು ವತಿಯಿಂದ ನಗರದ ಸಿಟಿಜನ್ ಕ್ಲಬ್‌ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು. 
 
‘ಕಾಲೇಜಿಗೆ ಸಂಬಂಧಪಟ್ಟ ಎಲ್ಲಾ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ನೂತನ ಕಟ್ಟಡಕ್ಕಾಗಿ ಸರ್ಕಾರಕ್ಕೆ ₹ 3 ಕೋಟಿ ವೆಚ್ಚದ ಅಂದಾಜುಪಟ್ಟಿ ಸಲ್ಲಿಸಿ ಮಂಜೂರಾತಿ ಪಡೆದುಕೊಂಡಿದ್ದೇವೆ.
 
ಅದರಲ್ಲಿ ಕಳೆದ ವರ್ಷ ₹ 25 ಲಕ್ಷ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿತ್ತು. ಒಂದು ತಿಂಗಳ ಹಿಂದೆ ₹ 90 ಲಕ್ಷ ಅನುದಾನ ಬಿಡುಗಡೆ ಯಾಗಿದೆ. ಅದರಿಂದ ನನೆಗುದಿಗೆ ಬಿದ್ದ ಕಾಮಗಾರಿ ಪುನಃ ಆರಂಭಗೊಂಡಿದೆ’ ಎಂದು ತಿಳಿಸಿದರು. 
 
‘ನೂತನ ಕಟ್ಟಡ ಕಾಮಗಾರಿಗೆ ಮತ್ತು ಮೂಲಭೂತ ಸೌಕರ್ಯಗಳಿಗೆ ಅಡಚಣೆಯಾಗದ ರೀತಿಯಲ್ಲಿ ಸಹಕಾರ ನೀಡುತ್ತೇನೆ. ಕಾಮಗಾರಿ ಮುಗಿಯಬೇಕಾದರೆ ಇನ್ನು ₹ 2 ಕೋಟಿ ಬೇಕಾಗುತ್ತದೆ. ಅದನ್ನು ಕೂಡ ಸರ್ಕಾರದಿಂದ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು. 
 
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಂ.ಮುನಿಯಪ್ಪ ಮಾತನಾಡಿ, ‘ಎಂ.ಜಿ.ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಿಟಿಜನ್ ಕ್ಲಬ್‌ನಲ್ಲಿ ಮಹಿಳಾ ಕಾಲೇಜಿನ ತರಗತಿಗಳು ನಡೆಯುತ್ತಿರುವ ಕಾರಣ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹೆಚ್ಚುವರಿ ಕೊಠಡಿಗಳು ನಿರ್ಮಾಣಗೊಂಡಿವೆ. ಹೀಗಾಗಿ ಅಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಶಾಸಕರು ಈ ಕುರಿತು ಗಮನ ಹರಿಸಬೇಕು’ ಎಂದು ತಿಳಿಸಿದರು. 
 
ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ನಾಗರಾಜಯ್ಯ, ‘2009–10ನೇ ಸಾಲಿನಲ್ಲಿ 40 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಕಾಲೇಜಿನಲ್ಲಿ ಇಂದು 640 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಚಿಕ್ಕಬಳ್ಳಾಪುರ ಮಾತ್ರವಲ್ಲದೆ ದೊಡ್ಡ ಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಹಿಂದೂಪುರ, ಚಾಕವೆಲ್, ದೇವನ ಹಳ್ಳಿ, ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಿಂದ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಾರೆ’ ಎಂದರು. 
 
‘ನಮ್ಮಲ್ಲಿ ಬಿ.ಕಾಂ ಪದವಿಗೆ ಅತಿ ಹೆಚ್ಚು ಬೇಡಿಕೆ ಇದೆ. ಆದರೆ ಸ್ಥಳದ ಅಭಾವ ಇರುವ ಕಾರಣ ನಾವೇ ಪ್ರವೇಶ ನಿರಾಕರಿಸುತ್ತಿದ್ದೇವೆ. ಆದ್ದರಿಂದ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿಸಿ ನೂತನ ಕಟ್ಟಡ ಕಾಮಗಾರಿ ಮುಗಿಸಿದರೆ ಇನ್ನೂ ಹೆಚ್ಚಿನ ಕೋರ್ಸ್‌ಗಳನ್ನು ಆರಂಭಿಸಲು ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು. 
 
‘ದೂರದ ಊರುಗಳಿಂದ ಬರುವ ವಿದ್ಯಾರ್ಥಿನಿಯರು ಅನೇಕ ಬಾರಿ ತಿಂಡಿ ತಿಂದು ಬರಲು ಆಗುವುದಿಲ್ಲ. ಹೀಗಾಗಿ ತರಗತಿಗಳಲ್ಲಿ ತಲೆ ಸುತ್ತಿ ಬೀಳುತ್ತಾರೆ. ಆದ್ದರಿಂದ ಶಾಸಕರು ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಪಾಹಾರ ವ್ಯವಸ್ಥೆ ಮಾಡಿಕೊಡಬೇಕು. ಕಾಲೇಜಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಆದ್ದರಿಂದ ಶುದ್ಧ ನೀರಿನ ಘಟಕ ಒದಗಿಸಿಕೊಡಬೇಕು’ ಎಂದು ತಿಳಿಸಿದರು. 
 
ಮಾಜಿ ಶಾಸಕಿ ಅನಸೂಯಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಸದಸ್ಯ ಮಿಲ್ಟನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಮುಖಂಡರಾದ ಗಂಗಾಧರ್, ವೆಂಕಟಾಚಲಪತಿ ರಾಜು ಉಪಸ್ಥಿತರಿದ್ದರು. 
****
ವಿದ್ಯಾಸಿರಿ ಇಲ್ಲ!
ಶಾಸಕ ಸುಧಾಕರ್‌ ಅವರು ತಮ್ಮ ಭಾಷಣದಲ್ಲಿ, ‘ನಮ್ಮ ಸರ್ಕಾರ ವಿದ್ಯಾಸಿರಿ ಯೋಜನೆಯಡಿ ₹ 15 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ನಿಮ್ಮಲ್ಲಿ ಎಷ್ಟು ಜನ ವಿದ್ಯಾಸಿರಿ ಸ್ಕಾಲರ್‌ಶಿಫ್‌ ಪಡೆಯುತ್ತಿದ್ದೀರಿ ಕೈ ಎತ್ತಿ’ ಎಂದರು.

ಕಾಲೇಜು ಆವರಣದ ತುಂಬ ಕುಳಿತಿದ್ದ ವಿದ್ಯಾರ್ಥಿನಿಯರ ಪೈಕಿ ಒಂದೆರಡು ವಿದ್ಯಾರ್ಥಿನಿಯರು ಮಾತ್ರ ಕೈ ಎತ್ತಿದರು. ಆಗ ಶಾಸಕರು, ‘ಯಾಕೆ ನಿಮ್ಮಲ್ಲಿ ವಿದ್ಯಾಸಿರಿ ಬರ್ತಾ ಇಲ್ವಾ’ ಎಂದು ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ವಿದ್ಯಾರ್ಥಿ ಸಮೂಹದಿಂದ, ‘ಇಲ್ಲ’ ಎಂಬ ಉತ್ತರ ಕೇಳಿ ಬಂತು.
***
ಶಾಸಕರನ್ನು ಹಾಡಿ ಹೊಗಳಿದರು!
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಆರ್.ನರಸಿಂಹಮೂರ್ತಿ ಅವರು ಶಾಸಕ ಸುಧಾಕರ್‌ ಅವರನ್ನು ಬರೋಬ್ಬರಿ 11 ನಿಮಿಷ ಹಾಡಿ ಹೊಗಳಿ ಸ್ವಾಗತಿಸಿದ್ದು ವಿದ್ಯಾರ್ಥಿಗಳು ಮತ್ತು ಸಭಿಕರನ್ನು ಹುಬ್ಬೇರಿಸುವಂತೆ ಮಾಡಿತು.

ಶಾಸಕರ ಕುರಿತು ಕವನವನ್ನೇ ರಚಿಸಿಕೊಂಡು ಬಂದಿದ್ದ ನರಸಿಂಹಮೂರ್ತಿ ಅವರು, ಶಾಸಕರು ಯುವ ಜನರ ಆಶಾಕಿರಣ,  ಸಾಧಕ, ಅಭಿವೃದ್ಧಿ ಹರಿಕಾರರು ಎಂದೆಲ್ಲ ಕೊಂಡಾಡಿದರು.
 
ಸುಧಾಕರ್ ಎಂಬ ಹೆಸರಿನಲ್ಲಿರುವ ಪ್ರತಿ ಪದದ ಅರ್ಥವನ್ನು ತಮ್ಮದೇ ಆದ ಶೈಲಿಯಲ್ಲಿ ವ್ಯಾಖ್ಯಾನಿಸಿದ ಅವರು, ಯಾವುದೇ ಸಂಕೋಚವಿಲ್ಲದೆ ವೇದಿಕೆ ಮೇಲಿದ್ದ ಅನೇಕ ಮುಖಂಡರನ್ನು ವಿಶೇಷಣ, ರೂಪಕಗಳನ್ನು ಬಳಸಿ ಸ್ವಾಗತಿಸಿದ ಪರಿ ಸಭಿಕರಿಗೆ ಮುಜುಗರ ಉಂಟು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT