ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಪೂರೈಕೆ ಮಾಹಿತಿ ಆ್ಯಪ್…

ವಾರದ ಆ್ಯಪ್ಸ್‌
Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ವಿದ್ಯುತ್ ಸರಬರಾಜುಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಾಗೂ ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತಹ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಇದಕ್ಕೆ ಡಿಸ್ಕಾಮ್ಸ್‌ (discoms/urja mitra) ಅಥವಾ ‘ಊರ್ಜಾ ಮಿತ್ರ’ ಎಂದು ಹೆಸರಿಡಲಾಗಿದೆ. 

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯಾವ ರೀತಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಗ್ರಾಹಕರು ಈ ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ಇತರೆ ಸಮಸ್ಯೆ ಹಾಗೂ ದೂರುಗಳನ್ನು ಆ್ಯಪ್ ಮೂಲಕ ದಾಖಲಿಸಬಹುದು.

ದೂರನ್ನು ಸ್ವೀಕರಿಸಿದ ಸಂಬಂಧಪಟ್ಟ ಅಧಿಕಾರಿಗಳು ಕೆಲವೇ ಗಂಟೆಗಳಲ್ಲಿ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ಸರ್ಕಾರ ಹೇಳಿದೆ. ಆಂಡ್ರಾಯ್ಡ್‌ ಮಾದರಿಯಲ್ಲಿ ಈ ಆ್ಯಪ್ ಲಭ್ಯವಿದ್ದು ಗ್ರಾಹಕರು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಗೂಗಲ್ ಪ್ಲೇಸ್ಟೋರ್: discoms/urja mitra

*


ಪಿಎಫ್ ಹಣ ಪಡೆಯಲು ಆ್ಯಪ್ ನೆರವು
ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್) ಮತ್ತು ಪಿಂಚಣಿ ಹಣವನ್ನು ತ್ವರಿತವಾಗಿ ಪಡೆಯುವ ಸಲುವಾಗಿ ಕೇಂದ್ರ ಸರ್ಕಾರವು ಹೊಸದಾಗಿ ವುಮಂಗ್ ( UMANG) ಆ್ಯಪ್  ಅಭಿವೃದ್ಧಿಪಡಿಸುತ್ತಿದೆ.

ಕಾರ್ಮಿಕರು ಪಿಎಫ್‌ ಅಥವಾ ಪಿಂಚಣಿ ಹಣ ಪಡೆಯಲು ತಿಂಗಳುಗಟ್ಟಲೆ  ಕಚೇರಿಗಳಿಗೆ ಅಲೆದು, ಅಲೆದು ಹೈರಾಣಾಗುತ್ತಾರೆ. ಸಕಾಲದಲ್ಲಿ ಹಣ ದೊರೆಯದೆ   ಪರಿತಪಿಸುತ್ತಿದ್ದಾರೆ. ಈ ವಿಳಂಬ ತಪ್ಪಿಸಿ, ಅವರ ದುಡಿಮೆಯ ಉಳಿತಾಯದ ಹಣವನ್ನು ಕೇವಲ ಮೂರೇ ಗಂಟೆಗಳಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಈ  ಆ್ಯಪ್ ಮೂಲಕ ವರ್ಗಾವಣೆ ಮಾಡುವ ಸೌಲಭ್ಯ ಜಾರಿಗೆ ಬರಲಿದೆ.

ಉದಾಹರಣೆಗೆ ಒಬ್ಬ ಕಾರ್ಮಿಕ ತನ್ನ ಭವಿಷ್ಯ ನಿಧಿ ಹಣವನ್ನು ಪಡೆಯಬೇಕಾದರೆ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ತೆರಳಿ ಅಲ್ಲಿನ ಅಧಿಕಾರಿಗಳು ನೀಡುವ ಅರ್ಜಿಯನ್ನು ಭರ್ತಿ ಮಾಡಿ ಕೊಡಬೇಕು. ನಂತರ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ 20 ದಿನಗಳೊಳಗಾಗಿ ಹಣ ನೀಡಲಾಗುವುದು ಎಂದು ಹೇಳಿ ಕಳುಹಿಸುತ್ತಾರೆ.

ತಾಂತ್ರಿಕ ಅಧಿಕಾರಿಗಳು ಹೇಳಿದಂತೆ ಸಕಾಲಕ್ಕೆ ಹಣ ದೊರೆಯುವುದಿಲ್ಲ! ಕಾರ್ಮಿಕರು ತಮ್ಮ ಉಳಿತಾಯದ ಹಣ ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಇದೀಗ ಸರ್ಕಾರ ವಿನ್ಯಾಸ ಮಾಡುತ್ತಿರುವ ನೂತನ ಆ್ಯಪ್ ಮೂಲಕ ಗ್ರಾಹಕರು ಮೂರೇ ಗಂಟೆಗಳಲ್ಲಿ ಹಣ ಪಡೆಯಬಹುದು.

ಉಚಿತವಾಗಿ ಲಭ್ಯವಿರುವ ಈ ಆ್ಯಪ್ ಅನ್ನು ಬಳಕೆದಾರರು ತಮ್ಮ ಮೊಬೈಲ್ ಪೋನ್‌ಗಳಿಗೆ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಪಿಎಫ್ ಮಾಹಿತಿಯನ್ನು ಆ್ಯಪ್‌ನಲ್ಲಿ ಭರ್ತಿ ಮಾಡಬೇಕು. ಹೀಗೆ ಭರ್ತಿ ಮಾಡಿದ ಮಾಹಿತಿ ದೇಶದ 110 ಪ್ರಾದೇಶಿಕ ಪಿಎಫ್ ಕಚೇರಿಗಳಿಗೆ ಕೆಲವೇ ಕ್ಷಣಗಳಲ್ಲಿ ತಲುಪುತ್ತದೆ.

ಆ್ಯಪ್ ಮೂಲಕ ಬಂದ ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಅರ್ಜಿದಾರನ ಖಾತೆಗೆ ಪಿಎಫ್ ಹಣ ರವಾನೆ ಮಾಡಲಾಗುತ್ತದೆ ಎಂಬುದು ಸರ್ಕಾರದ ವಿವರಣೆಯಾಗಿದೆ. ಈ ಸೌಲಭ್ಯ  ಮೇ ತಿಂಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.

*


ಪ್ರಯಾಣಿಕರು ಮತ್ತು ಚಾಲಕರ ರಕ್ಷಣೆ
ಎಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಬಾಷ್ ಕಂಪೆನಿ ಅಮೆರಿಕದ ಡಿಜಿಟಲ್ ಆ್ಯಪ್ ಕಂಪೆನಿಯ ಸಹಯೋಗದಲ್ಲಿ ಪ್ರಯಾಣಿಕರು ಮತ್ತು ಚಾಲಕರ ರಕ್ಷಣೆಯ ಆ್ಯಪ್  ಅಭಿವೃದ್ಧಿಪಡಿಸಿದೆ. ಇದಕ್ಕೆ ‘ಯುವರ್‌ ಸೇಫ್‌’ (URSAFE) ಎಂದು ಹೆಸರಿಡಲಾಗಿದೆ.

ಬಳಕೆದಾರರು ಈ ಆ್ಯಪ್ ಅನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿರಬೇಕು. ನಂತರ ಈ ಆ್ಯಪ್ ನಲ್ಲಿ ತಮ್ಮ ಕುಟುಂಬದವರು ಹಾಗೂ ಸ್ನೇಹಿತರ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿರಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಏನಾದರೂ ತೊಂದರೆಯಾದರೆ ಮೊಬೈಲ್‌ನಲ್ಲಿರುವ ‘ಯುವರ್‌ ಸೇಫ್‌’ ಗುಂಡಿ ಒತ್ತಬೇಕು.

ಆಗ ತೊಂದರೆಯಲ್ಲಿರುವವರ ಮಾಹಿತಿಯು ಕುಟುಂಬದವರು ಹಾಗೂ ಸಂಬಂಧಿಕರಿಗೆ ತಿಳಿಯುತ್ತದೆ. ಅವರು ಗೂಗಲ್ ಮ್ಯಾಪ್ ಮೂಲಕ  ತೊಂದರೆಯಲ್ಲಿರುವವರ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆ ಸ್ಥಳದಲ್ಲಿರುವ ಪೊಲೀಸ್ ಠಾಣೆಗಳ ಮಾಹಿತಿಯು ಲಭ್ಯವಾಗುತ್ತದೆ.

ಕೂಡಲೇ ಆ ಠಾಣೆಗೆ ದೂರು ನೀಡಿ ಆಪತ್ತಿನಲ್ಲಿ ಇರುವವರನ್ನು ಕೆಲವೇ ಕ್ಷಣಗಳಲ್ಲಿ ರಕ್ಷಣೆ ಮಾಡಬಹುದು ಎಂದು ಆ್ಯಪ್ ವಿನ್ಯಾಸಕರಾದ ಕೃಷ್ಣನ್ ಹೇಳುತ್ತಾರೆ. ಕ್ಯಾಬ್ ಅಥವಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರಿಗೆ ಈ ಆ್ಯಪ್ ರಕ್ಷಣೆ ನೀಡುತ್ತದೆ ಎಂದು ವಿನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ.
ಗೂಗಲ್ ಪ್ಲೇಸ್ಟೋರ್: URsafe app

*


ಫೇಸ್‌ಬುಕ್‌ ಮೆಸೆಂಜರ್ ಬಳಕೆ ಹೆಚ್ಚಳ
ಜಾಗತಿಕವಾಗಿ ಫೇಸ್‌ಬುಕ್‌  ಮೆಸೆಂಜರ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಫೇಸ್‌ಬುಕ್‌ ಮೆಸೆಂಜರ್ ಕಂಪೆನಿಯ ಮುಖ್ಯಸ್ಥ ಡೇವಿಡ್ ಮಾರ್ಕಸ್ ತಿಳಿಸಿದ್ದಾರೆ.

ಪ್ರತಿ ತಿಂಗಳು 10.2 ಕೋಟಿ ಜನರು ಮೆಸೆಂಜರ್ ಅನ್ನು ಸಕ್ರಿಯವಾಗಿ ಬಳಕೆ ಮಾಡುತ್ತಿದ್ದಾರೆ. ಎಂಟು ತಿಂಗಳಲ್ಲಿ 2 ಕೋಟಿ ಹೊಸ ಬಳಕೆದಾರರು ಮೆಸೆಂಜರ್ ಬಳಗಕ್ಕೆ ಬಂದಿದ್ದಾರೆ.

ಭಾರತದಲ್ಲಿ ಒಟ್ಟು 20 ಕೋಟಿಗೂ ಹೆಚ್ಚು ಜನರು ವಾಟ್ಸ್್ಆ್ಯಪ್ ಬಳಕೆ ಮಾಡುತ್ತಿದ್ದಾರೆ ಎಂದು ಮಾರ್ಕಸ್ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಫೇಸ್‌ಬುಕ್‌, ಮೆಸೆಂಜರ್, ವಾಟ್ಸ್ಆ್ಯಪ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಕಂಪೆನಿ ನೀಡುತ್ತಿರುವ ಹೊಸ ಹೊಸ ವೈಶಿಷ್ಟ್ಯಗಳೇ ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT