ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಹಳಿ ಕಾಮಗಾರಿ ತ್ವರಿತಕ್ಕೆ ಸೂಚನೆ

Last Updated 19 ಏಪ್ರಿಲ್ 2017, 5:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೋಡಿ ಹಳಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಸಂಸದ ಪ್ರಹ್ಲಾದ ಜೋಶಿ ಮತ್ತು ಕೊಪ್ಪಳ ಸಂಸದ ಕರಡಿ ಸಂಗಣ್ಣ ರೈಲ್ವೆ ಅಧಿಕಾರಿಗಳಿಗೆ ಇಲ್ಲಿ ಸೂಚಿಸಿದರು.ನಗರದ ರೈಲ್ವೆ ಅಧಿಕಾರಿಗಳ ಕ್ಲಬ್‌ನಲ್ಲಿ ಮಂಗಳವಾರ ನಡೆದ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ಕೆಲವೆಡೆ ಜೋಡಿ ರೈಲು ಮಾರ್ಗ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದೇ ಆದಲ್ಲಿ ಪ್ರಯಾಣಿಕರ ದಟ್ಟಣೆ ಸರಿದೂಗಿಸಬಹುದು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕಕುಮಾರ ಗುಪ್ತ ‘2016ನೇ ಸಾಲಿನಲ್ಲಿ 59 ಕಿ.ಮೀ. ಜೋಡಿ ಹಳಿ ಮಾರ್ಗ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪೂರ್ಣಗೊಂಡಿದೆ. ಯಲಹಂಕ– ಚನ್ನಸಂದ್ರ ಮಾರ್ಗದ 13 ಕಿ.ಮೀ, ಯಶವಂತಪುರ– ಯಲಹಂಕ ಮಾರ್ಗದ 7 ಕಿ.ಮೀ., ಹೊಸಪೇಟೆ– ತಿನೆಘಾಟ್‌ ಮಾರ್ಗದ 40 ಕಿ.ಮೀ. ಜೋಡಿ ಮಾರ್ಗ ಪೂರ್ಣಗೊಂಡಿದೆ. ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ 2016–17ನೇ ಸಾಲಿನಲ್ಲಿ ಒಟ್ಟು 72 ಲೆವೆಲ್‌ ಕ್ರಾಸಿಂಗ್‌ಗಳನ್ನು ತೆಗೆದುಹಾಕಲಾಗಿದೆ’ ಎಂದು ಹೇಳಿದರು.

‘ಹುಬ್ಬಳ್ಳಿ–ಚಿಕ್ಕಜಾಜೂರು ಮಾರ್ಗದ ಯೋಜನೆ ಬರುವ 2019–20ನೇ ಸಾಲಿಗೆ ಪೂರ್ಣಗೊಳ್ಳಲಿದೆ. ಹುಬ್ಬಳ್ಳಿ ರೈಲು ನಿಲ್ದಾಣದ ಮುಂದೆ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ಗದಗ ರಸ್ತೆಯಲ್ಲಿ ಮತ್ತೊಂದು ಪ್ರವೇಶ ದ್ವಾರ ತೆರೆಯಲಾಗುತ್ತಿದೆ’ ಎಂದರು.‘ನವಲಗುಂದ ತಾಲ್ಲೂಕಿನ ಹಳ್ಳಿಕೇರಿ ಕ್ರಾಸ್‌ ಬಳಿ ಮಾಡಿರುವ ರೈಲ್ವೆ ಕೆಳ ಸೇತುವೆ ಅಗಲ ಕಡಿಮೆ ಇದ್ದು, ಕೃಷಿ ಪರಿಕರಗಳನ್ನು ಸಾಗಿಸಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸುತ್ತಮುತ್ತಲಿನ ಗ್ರಾಮಸ್ಥರಿಂದ ದೂರುಗಳು ಕೇಳಿಬಂದಿವೆ. ಕೂಡಲೇ ಸ್ಥಳ ಪರಿಶೀಲನೆ ಮಾಡಿ ಟ್ರ್ಯಾಕ್ಟರ್‌ ಮತ್ತು ಇತರೆ ವಾಹನಗಳು ಮುಕ್ತವಾಗಿ ಸಾಗಲು ಅನುಕೂಲ ಮಾಡಿಕೊಡಬೇಕು’ ಎಂದು ಪ್ರಹ್ಲಾದ ಜೋಶಿ ಅಧಿಕಾರಿಗಳಿಗೆ ಸೂಚಿಸಿದರು.

ರೈಲು ವಿಳಂಬ: ‘ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ನಿತ್ಯ ಅರ್ಧ ಗಂಟೆ ತಡವಾಗಿ ರಾಜಧಾನಿ ತಲುಪುತ್ತಿದೆ. ಬೆಳಿಗ್ಗೆ 6.45ಕ್ಕೆ ರಾಜಧಾನಿ ತಲುಪುವ ಹಾಗೆ ನೋಡಿಕೊಳ್ಳಬೇಕು. ಸದ್ಯ ರೈಲು ಬೆಳಿಗ್ಗೆ 7.20ಕ್ಕೆ ತಲುಪುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಅನನುಕೂಲ ಆಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT