ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರರ ಕಷ್ಟಗಳಿಗೆ ಬೆಳಕಾಗಿ...

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಂದು, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಅವರಂತೆ ಗಗನಯಾತ್ರಿಯಾಗಬೇಕು ಎಂದು ಕನಸು ಕಂಡ ಬಾಲಕಿ, ಇಂದು 21ನೇ ವಯಸ್ಸಿಗೆ ಪೈಲಟ್ ಆಗುವ ಮೂಲಕ ಕನಸಿನ ಅರ್ಧದಾರಿ ಸವೆಸಿದ್ದಾರೆ. ಆ ಯುವ ಸಾಧಕಿಯೇ ಆಯೆಷಾ ಆಝಿಜ್.

ಆಯೆಷಾ ಅವರು ಕಾಶ್ಮೀರದವರು. 80ರ ದಶಕದಲ್ಲಿ ಆಯೆಷಾ ಕುಟುಂಬ ಮುಂಬೈಗೆ ವಲಸೆ ಬಂದು ನೆಲೆಸಿತು. ಆಯೆಷಾಗೆ ಚಿಕ್ಕ ವಯಸ್ಸಿನಲ್ಲೇ ವಿಮಾನ ವೆಂದರೆ ಅತೀವ ಆಸಕ್ತಿ. ವಿಮಾನದ ಸದ್ದು ಕೇಳಿದ ಕೂಡಲೇ ಮನೆಯಿಂದ ಹೊರಬಂದು ಆಕಾಶದತ್ತ ಮುಖ ಮಾಡಿ ವಿಮಾನ ನೋಡಿ ಖುಷಿಪಡುತ್ತಿದ್ದರಂತೆ! ಸಾಮಾನ್ಯವಾಗಿ ಹೆಣ್ಣು ಮಕ್ಕಳು ಚಿಕ್ಕವರಿದ್ದಾಗ ಗೊಂಬೆಗಳ ಜತೆ ಆಟವಾಡುತ್ತಾರೆ.

ಆದರೆ ಆಯೆಷಾ ಮಾತ್ರ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಜತೆಯಲ್ಲೇ ಆಟವಾಡುತ್ತಿದ್ದರಂತೆ. ಹೀಗೆ ಬೆಳೆದ ಆಯೆಷಾ ಅವರ ಮೇಲೆ ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಕಲ್ಪನಾ ಚಾವ್ಲಾ ಅವರ ಸಾಧನೆಯ ಪಠ್ಯ ಸಾಕಷ್ಟು ಪ್ರಭಾವ ಬೀರಿತು. ಮುಂದೆ ಕಲ್ಪನಾ ಚಾವ್ಲಾ ಅವರಂತೆ ಗಗನಯಾತ್ರಿಯಾಗಬೇಕು ಎಂಬ ಕನಸು ಕಟ್ಟಿಕೊಂಡ ಆಯೆಷಾ 9ನೇ ತರಗತಿ ಓದುವಾಗಲೇ ಪೈಲಟ್  ತರಬೇತಿಗೆ ಸೇರಿಕೊಂಡರು.

ಹತ್ತನೇ ತರಗತಿ ಮುಗಿಯುವುದರೊಳಗೆ ವಿದ್ಯಾರ್ಥಿ ಪೈಲಟ್ ಲೈಸೆನ್ಸ್ ಪಡೆದುಕೊಂಡು ದೇಶದ ಗಮನ ಸೆಳೆದರು. ಪಿಯುಸಿ ಬಳಿಕ ಅಮೆರಿಕದ ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ತರಬೇತಿಗೆ ಸೇರಿಕೊಂಡರು. ಮೂರು ವರ್ಷದ ಆ ಕೋರ್ಸ್ ಪೂರೈಸಿ ಕೇವಲ 21ನೇ ವಯಸ್ಸಿಗೆ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದರು. ಇದೀಗ ಖಾಸಗಿ ವಿಮಾನಗಳಲ್ಲಿ ಆಯೆಷಾ ಕೆಲಸ ಮಾಡುತ್ತಿದ್ದಾರೆ.

ಮಿಗ್-29 ಯುದ್ಧ ವಿಮಾನವನ್ನು ಚಲಾಯಿಸುವುದು ಸೇರಿದಂತೆ ಭಾರತದ ಬಾಹ್ಯಾಕಾಶ ಯೋಜನೆಗಳಲ್ಲಿ ಭಾಗವಹಿಸಿ ಗಗನಯಾತ್ರಿಯಾಗಬೇಕು ಎಂಬ ಕನಸು ಅವರದ್ದು. www.facebook.com/ayesha.aziz

*


ಲಾನ್‌ಟುಬಾ ತಂಡ
ಹವ್ಯಾಸಿ ಸಂಗೀತ ಕಲಾವಿದರ ತಂಡವೇ ಲಾನ್‌ಟುಬಾ. ಸಂಗೀತದಲ್ಲಿ ಅಭಿರುಚಿಯುಳ್ಳ ನಾಲ್ವರು ಗೆಳೆಯರು ಮುಂಬೈನಲ್ಲಿ ಲಾನ್‌ಟುಬಾ ಸಂಗೀತ ತಂಡ ಕಟ್ಟಿದ್ದಾರೆ. ವಾರಾಂತ್ಯದಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಅದರಿಂದ ಸಂಗ್ರಹವಾಗುವ ಹಣವನ್ನು ಬಡ ಮಕ್ಕಳ ಶಿಕ್ಷಣ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವಿನಿಯೋಗ ಮಾಡುತ್ತಿದ್ದಾರೆ.

ಮುಂಬೈನವರಾದ ಸಿದ್ಧಾಂತ ವರ್ನೇಕರ್, ಕೃಷ್ಣ ಪುರೋಹಿತ, ಶಾಲೂನ್ ಬೆಂಜಮಿನ್, ಆರೀಫ್ ರೆಬೆಲೋ ಸೇರಿ ಈ ತಂಡ ಕಟ್ಟಿದ್ದಾರೆ. ಬೇರೆ ಬೇರೆ ವೃತ್ತಿಯಲ್ಲಿ ತೊಡಗಿರುವ ಈ ಗೆಳೆಯರು ಪ್ರವೃತ್ತಿಯಾಗಿ ಸಂಗೀತವನ್ನು ಅಪ್ಪಿಕೊಂಡಿದ್ದಾರೆ. ವಾಯವ್ಯ ಮುಂಬೈ ಭಾಗದಲ್ಲಿ ಬೆಳಿಗ್ಗೆ 7 ಗಂಟೆಗೆ ಟೀ ಅಂಗಡಿಗಳು ತೆರೆದಿರುತ್ತವೋ ಇಲ್ಲವೋ, ಲಾನ್‌ಟುಬಾ ಸಂಗೀತ ಸ್ಟುಡಿಯೊ ಮಾತ್ರ ತೆರೆದಿರುತ್ತದೆ.

ಶಾಲೂನ್ ಡ್ರಮ್ಸ್, ಸಿದ್ಧಾಂತ ಗೀಟಾರ್, ಕೃಷ್ಣ ಕೀ ಬೋರ್ಡ್ ನುಡಿಸುತ್ತಿದ್ದರೆ ಆರೀಫ್ ಮಧುರ ಸ್ವರದಲ್ಲಿ  ಹಾಡುತ್ತಿರುತ್ತಾರೆ. ಹೊಸ ಹೊಸ ಹಾಡುಗಳಿಗೆ ಟ್ಯೂನ್ ಹಾಕುತ್ತ, ಸಂಗೀತ ಆಲ್ಬಂಗಳ ತಯಾರಿಯಲ್ಲಿ ತೊಡಗಿರುತ್ತಾರೆ. ಕಳೆದ ವರ್ಷವಷ್ಟೇ ಆರಂಭವಾದ ಈ ಸಂಗೀತ ತಂಡ ಇದುವರೆಗೂ ವಿವಿಧ ರೀತಿಯ 11 ಹಾಡುಗಳಿಗೆ ರಾಗಸಂಯೋಜನೆ ಮಾಡಿದೆ.

ಶನಿವಾರ ಮತ್ತು ಭಾನುವಾರ ಸಂಜೆ ಹೊತ್ತಿನಲ್ಲಿ ಪಾರ್ಕ್, ವೃತ್ತಗಳು, ಶಾಲಾ ಮೈದಾನಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿ ಜನರಿಗೆ ಮನರಂಜನೆ ನೀಡುತ್ತಾರೆ. ಇದರಿಂದ ಸಂಗ್ರಹವಾದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತಾರೆ. ಒಂದು ವರ್ಷದಲ್ಲಿ 800 ಅನಾರೋಗ್ಯಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

1000ಕ್ಕೂ ಹೆಚ್ಚು ಬಡ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಪಠ್ಯ ಸಾಮಗ್ರಿಗಳನ್ನು ನೀಡಿದ್ದಾರೆ. ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ನಮಗೆ ಬೇರೆ ವೃತ್ತಿಗಳಿವೆ! ಸಂಗೀತ ನಮಗೆ ಪ್ಯಾಶನ್. ಜನರಿಗೆ ಮನರಂಜನೆ ನೀಡುವುದೇ ನಮ್ಮ ಉದ್ದೇಶ. ಇಂತಹ ಸಂದರ್ಭಗಳಲ್ಲಿ ಅಭಿಮಾನಿಗಳು ನೀಡುವ ಹಣವನ್ನು ಸಮಾಜ ಸೇವೆಗೆ ಬಳಸುತ್ತಿದ್ದೇವೆ ಎಂದು ಲಾನ್‌ಟುಬಾ ತಂಡದ ನಾಯಕ ಸಿದ್ಧಾಂತ ಹೇಳುತ್ತಾರೆ. 
www.facebook.com/lawntuba/

*


ಸರ್ವೇಶ್ ಅಗರ್‌ವಾಲ್
ವಿಶ್ವವಿದ್ಯಾಲಯದಿಂದ ಕೋರ್ಸ್ ಮುಗಿಸಿಕೊಂಡು ಬರುವ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಉತ್ತಮ ವೇದಿಕೆ ಕಲ್ಪಿಸುವ ಸಲುವಾಗಿ ಇಂಟರ್ನ್‌ಶಿಪ್‌ ಸಂಸ್ಥೆ ಸ್ಥಾಪಿಸಿದ ಸರ್ವೇಶ್ ಅಗರ್‌ವಾಲ್ ಅವರ ಸಾಧನೆಯ ಕಥೆ ಇದು.

ರಾಜಸ್ತಾನದವರಾದ ಸರ್ವೇಶ್ ಹುಟ್ಟಿದ್ದು ಮಾರ್ವಾಡಿ ಕುಟುಂಬದಲ್ಲಿ. ಮಗ ವ್ಯಾಪಾರ ಮಾಡಿಕೊಂಡು ಮನೆಯಲ್ಲಿ ಇರಲಿ ಎಂದು ಬಯಸಿದ್ದರು! ಆದರೆ ಸರ್ವೇಶ್‌ಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದುದರಿಂದ ಉನ್ನತ ವ್ಯಾಸಂಗ ಮಾಡಲು ಬಯಸಿದರು. ಐಐಟಿ-ಮದ್ರಾಸ್‌ನಲ್ಲಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್‌ ಪದವಿ ಪಡೆದರು.

ಸರ್ವೇಶ್ ಅದೃಷ್ಟಕ್ಕೆ ಪದವಿ ಮುಗಿದ ಕೆಲ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಸ್ವಂತ ಸ್ಟಾರ್ಟ್ ಅಪ್‌ ಆರಂಭಿಸಲು ಸರ್ವೇಶ್ ಯೋಚಿಸಿದರು. ಇಲ್ಲಿಗಿಂತ ಭಾರತವೇ ಸ್ಟಾರ್ಟ್ಅಪ್‌ ಪ್ರಾರಂಭಿಸಲು ಸೂಕ್ತ ಸ್ಥಳ ಎಂದು ಮನವರಿಕೆಯಾಯಿತು. ಬಳಿಕ ಕೆಲಸಕ್ಕೆ ರಾಜೀನಾಮೆ ಕೊಟ್ಟು ಭಾರತಕ್ಕೆ ಮರಳಿದರು.

ಏನು ಮಾಡಬೇಕು ಎಂಬ ಆಲೋಚನೆಯಲ್ಲಿದ್ದ ಅವರಿಗೆ, ವೃತ್ತಿಪರತೆ ಮಾಹಿತಿಗಾಗಿ ಲಿಂಕ್ಡ್‌ಇನ್ ಇದೆ, ಸಾಮಾಜಿಕ ಮಾಹಿತಿಗಾಗಿ ಫೇಸ್‌ಬುಕ್ ಇದೆ. ಆದರೆ ಅಕಾಡೆಮಿಕ್  ಮಾಹಿತಿಗೆ ಯಾವ ವೇದಿಕೆ ಇಲ್ಲ ಅನ್ನಿಸಿತು. ಈ ವಿಷಯವನ್ನು ಗೆಳೆಯರ ಜೊತೆ ಚರ್ಚಿಸಿ ವಿದ್ಯಾರ್ಥಿಗಳ ಇಂಟರ್ನ್‌ಶಿಪ್‌ಗಾಗಿ ಮಾಹಿತಿ ನೀಡುವ ‘ಇಂಟರ್ನ್‌ಶಾಲಾ’ ಎಂಬ ಬ್ಲಾಗ್ ಅನ್ನು ಕಾರ್ಯರೂಪಕ್ಕೆ ಇಳಿಸಿದರು. ಕೇವಲ 15 ಲಕ್ಷ ರೂಪಾಯಿ ಬಂಡವಾಳದಲ್ಲಿ ಇಂಟರ್ನ್‌ಶಾಲಾ ಸಂಸ್ಥೆಯಾಗಿ ಬೆಳೆದಿದ್ದು, ಇಂದು ನಮ್ಮ ಸಂಸ್ಥೆ ವಾರ್ಷಿಕ 3 ಕೋಟಿ ರೂಪಾಯಿ ವರಮಾನ ಗಳಿಸುತ್ತಿದೆ ಎಂದು ಸರ್ವೇಶ್ ಹೇಳುತ್ತಾರೆ.

ಇಲ್ಲಿ ಸೇಲ್ಸ್ ಮಾರ್ಕೆಟಿಂಗ್, ಕಂಟೆಂಟ್‌ ರೈಟಿಂಗ್, ಪ್ಯಾಶನ್, ಎಂಜಿನಿಯರಿಂಗ್, ಮ್ಯಾನೇಜ್್ಮೆಂಟ್, ಡಿಸೈನಿಂಗ್, ಮಾನವಸಂಪನ್ಮೂಲ ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಇಂಟರ್ನ್‌ಶಿಪ್‌ ತರಬೇತಿ ಕೊಡಲಾಗುವುದು. ಬೆಂಗಳೂರು ಸೇರಿದಂತೆ  ದೇಶದ ಆಯ್ದ ನಗರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಆಸಕ್ತರು ಆನ್‌ಲೈನ್‌ ಮೂಲಕ ತರಬೇತಿ ಪಡೆದುಕೊಳ್ಳಬಹುದು ಎನ್ನುತ್ತಾರೆ ಸರ್ವೇಶ್.  internshala.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT