ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇನ್‌–ಧವನ್‌ ಜೊತೆಯಾಟದ ಸೊಬಗು

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ : ಐಪಿಎಲ್‌ ಹತ್ತನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌  (89; 51ಎ, 6ಬೌಂ, 5ಸಿ) ಮತ್ತು ಭಾರತದ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ (70; 50ಎ, 7ಬೌಂ, 1ಸಿ) ಅವರ ಅಬ್ಬರದ ಆಟದ ಮುಂದೆ ಬುಧವಾರ ಡೆಲ್ಲಿ ಡೇರ್‌ ಡೆವಿಲ್ಸ್‌  ಬೌಲರ್‌ಗಳು ಬಸವಳಿದರು.

ಉಪ್ಪಳದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಇವರು ಕಟ್ಟಿದ ಸುಂದರ ಇನಿಂಗ್ಸ್‌ನ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಡೆಲ್ಲಿ ಗೆಲುವಿಗೆ ಕಠಿಣ ಗುರಿ ನೀಡಿದೆ.

ಮೊದಲು ಬ್ಯಾಟ್‌ ಮಾಡಿದ ಡೇವಿಡ್‌ ವಾರ್ನರ್‌ ಸಾರಥ್ಯದ ಸನ್‌ರೈಸರ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 191ರನ್‌ ಗಳಿಸಿದೆ. ಗುರಿ ಬೆನ್ನಟ್ಟಿರುವ ಜಹೀರ್‌ ಖಾನ್‌ ಸಾರಥ್ಯದ ಡೇರ್‌ಡೆವಿಲ್ಸ್ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 13.5 ಓವರ್‌ಗಳಲ್ಲಿ 4 ವಿಕೆಟ್‌ಗೆ  107ರನ್‌ ಗಳಿಸಿತ್ತು.

ಆರಂಭಿಕ ಆಘಾತ:
ಬ್ಯಾಟಿಂಗ್‌ ಆರಂಭಿಸಿದ ಆತಿಥೇಯರಿಗೆ ಆರಂಭಿಕ ಆಘಾತ ಎದುರಾಯಿತು. ಈ ಬಾರಿಯ ಟೂರ್ನಿ ಯಲ್ಲಿ ಹೆಚ್ಚು ರನ್‌ ಗಳಿಸಿರುವ ಆಸ್ಟ್ರೇ ಲಿಯಾದ ವಾರ್ನರ್‌ 4ರನ್‌ ಗಳಿಸಿ ಕ್ರಿಸ್‌ ಮೊರಿಸ್‌ಗೆ ವಿಕೆಟ್‌ ಒಪ್ಪಿಸಿದರು.

ಜೊತೆಯಾಟದ ಸೊಬಗು:
ಈ ಹಂತದಲ್ಲಿ ಒಂದಾದ ಧವನ್‌ ಮತ್ತು ವಿಲಿಯಮ್ಸನ್‌ ಸುಂದರ ಇನಿಂಗ್ಸ್‌ ಕಟ್ಟಿದರು. ಡೆಲ್ಲಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ‘ಮುತ್ತಿನ ನಗರಿಯ’ ಅಭಿಮಾನಿಗಳನ್ನು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿತು.
ಹೀಗಾಗಿ ತಂಡ 43 ಎಸೆತಗಳಲ್ಲಿ 50ರನ್‌ ಪೂರೈಸಿತು. ಬಳಿಕ ಇವರ ಆಟ ಇನ್ನಷ್ಟು ರಂಗು ಪಡೆದುಕೊಂಡಿತು. ಏಂಜೆಲೊ ಮ್ಯಾಥ್ಯೂಸ್‌ ಹಾಕಿದ 7ನೇ ಓವರ್‌ನ ಐದು ಮತ್ತು ಕೊನೆಯ ಎಸೆತ ವನ್ನು ಸಿಕ್ಸರ್‌ಗಟ್ಟಿದ ವಿಲಿಯಮ್ಸನ್‌ , ಪ್ಯಾಟ್‌ ಕಮಿನ್ಸ್‌ ಬೌಲ್‌ ಮಾಡಿದ 11ನೇ ಓವರ್‌ನಲ್ಲೂ ಸಿಕ್ಸರ್‌ ಸಿಡಿಸಿ ಮಿಂಚಿದರು.

ಅಮಿತ್‌ ಮಿಶ್ರಾ ಹಾಕಿದ 12ನೇ ಓವರ್‌ನ ಕೊನೆಯ ಎಸೆತವನ್ನು ಮಿಡ್‌ ವಿಕೆಟ್‌ನತ್ತ ಬಾರಿಸಿ ಎರಡು ರನ್‌ ಗಳಿಸಿದ ಬಲಗೈ ಬ್ಯಾಟ್ಸ್‌ಮನ್‌ ಕೇನ್‌ ಈ ಬಾರಿಯ ಟೂರ್ನಿಯಲ್ಲಿ ಮೊದಲ ಅರ್ಧಶತಕದ ಸಂಭ್ರಮ ಆಚರಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 33 ಎಸೆತ. ಇದರಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದ್ದವು.

ಅರ್ಧಶತಕದ ಬಳಿಕ ಕೇನ್‌ ಇನ್ನಷ್ಟು ಆಕ್ರಮಣಕಾರಿಯಾದರು. ಅವರು ಅಮಿತ್‌ ಮಿಶ್ರಾ ಬೌಲ್‌ ಮಾಡಿದ 14ನೇ ಓವರ್‌ನಲ್ಲಿ ಎರಡು ಭರ್ಜರಿ ಸಿಕ್ಸರ್‌ ಸಿಡಿಸಿ ಅಂಗಳದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

ಹೀಗಾಗಿ ಧವನ್‌ ಮತ್ತು ಕೇನ್‌ ನಡುವೆ 69 ಎಸೆತಗಳಲ್ಲಿ ಶತಕದ (100) ಜೊತೆಯಾಟ ಮೂಡಿಬಂತು.
ಆ ನಂತರ ಧವನ್‌ ಕೂಡ ರಟ್ಟೆ ಅರಳಿಸಿ ಆಡಿದರು. ಅವರು ತಾವೆದು ರಿಸಿದ 40ನೇ ಎಸೆತದಲ್ಲಿ ಅರ್ಧಶತಕ ಗಳಿಸಿದರು.
ಏಂಜೆಲೊ ಮ್ಯಾಥ್ಯೂಸ್‌ ಹಾಕಿದ 16ನೇ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿ ಮಿಂಚಿದ ವಿಲಿಯಮ್ಸನ್‌ ಶತಕದ ಹಾದಿಯಲ್ಲಿ ಎಡವಿದರು. 17ನೇ ಓವರ್‌ ಬೌಲ್‌ ಮಾಡಿದ ಕ್ರಿಸ್‌ ಮೊರಿಸ್‌ ಮೊದಲ ಎಸೆತದಲ್ಲಿ ಕೇನ್‌ ವಿಕೆಟ್‌ ಉರುಳಿಸಿದರು.
ಇದರೊಂದಿಗೆ  136ರನ್‌ಗಳ ಎರಡನೇ ವಿಕೆಟ್‌ ಜೊತೆಯಾಟಕ್ಕೂ ತೆರೆ ಬಿತ್ತು. 19ನೇ ಓವರ್‌ನಲ್ಲಿ ಮೊರಿಸ್‌ ಎದುರಾಳಿಗಳಿಗೆ ಮತ್ತೊಂದು ಆಘಾತ ನೀಡಿದರು. ಅವರು ಮೊದಲ ಎಸೆತದಲ್ಲಿ ಧವನ್‌ ವಿಕೆಟ್‌ ಕಬಳಿಸಿದರು. ಮರು ಎಸೆತದಲ್ಲಿ ಯುವರಾಜ್‌ ಸಿಂಗ್‌ಗೂ (3) ಪೆವಿಲಿಯನ್‌ ಹಾದಿ ತೋರಿಸಿದರು.

ಕೊನೆಯಲ್ಲಿ ಮೊಸಸ್‌ ಹೆನ್ರಿಕ್ಸ್‌ (ಔಟಾಗದೆ 12) ಮತ್ತು ದೀಪಕ್‌ ಹೂಡಾ (9) ದೊಡ್ಡ ಹೊಡೆತಗಳನ್ನು ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ಸ್‌ ಹೈದರಾಬಾದ್‌:
20 ಓವರ್‌ಗಳಲ್ಲಿ 4 ವಿಕೆಟ್‌ಗೆ 191 (ಡೇವಿಡ್‌ ವಾರ್ನರ್‌ 4, ಶಿಖರ್‌ ಧವನ್‌ 70, ಕೇನ್‌ ವಿಲಿಯಮ್ಸನ್‌ 89, ಯುವರಾಜ್‌ ಸಿಂಗ್‌ 3, ಮೊಸಸ್‌ ಹೆನ್ರಿಕ್ಸ್‌ ಔಟಾಗದೆ 12, ದೀಪಕ್‌ ಹೂಡಾ ಔಟಾಗದೆ 9; ಕ್ರಿಸ್‌ ಮೊರಿಸ್‌ 26ಕ್ಕೆ4).
(ವಿವರ ಅಪೂರ್ಣ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT