ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಗ್ರಾಮಸ್ಥರಿಗೆ ಮಳೆಯೆಂದರೆ ಮುನಿಸು!

ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವುದೇ ನಿಯಮಗಳು ಇಲ್ಲಿ ಪಾಲನೆಯಾಗಿಲ್ಲ. ರಾಶಿ ರಾಶಿ ಕೋಳಿ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿಯಲಾಗಿದೆ. ಸತ್ತ ಕೋಳಿಗಳ ವ್ಯವಸ್ಥಿತ ನಿರ್ವಹಣೆ ಇಲ್ಲ. ಇಡೀ ಗ್ರಾಮದ ಸುತ್ತ ಕೋಳಿ ತ್ಯಾಜ್ಯದ ದುರ್ವಾಸನೆ. ಮಳೆ ಬಂದರಂತೂ ಗ್ರಾಮದ ಜನ–ಜಾನುವಾರು ಸ್ಥಿತಿ ಹೇಳತೀರದು’.ಕೋಳಿ ಫಾರ್ಮ್‌ಗಳ ದುರ್ವಾಸನೆ ಹಾಗೂ ನೊಣಗಳ ಹಾವಳಿಯನ್ನು ಪ್ರತಿ ಬಾರಿ ಎದುರಿಸುತ್ತಿರುವ ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ವಿಜಯಕುಮಾರ್‌ ಅವರ ಅಳಲು ಇದು.

ಎಲ್ಲರೂ ಮಳೆ ಬರಲಿ ಎಂದು ಪ್ರಾರ್ಥಿಸುತ್ತಿರುವ ಹೊತ್ತಲ್ಲಿ ಈ ಗ್ರಾಮದ ಜನರು ಮಳೆ ಬಾರದೇ ಇರಲಿ ಬೇಡುವ ಸ್ಥಿತಿ ಇದೆ. ಮೂರು ವರ್ಷಗಳಿಂದ ಇಲ್ಲಿ ಮಳೆ ಬಂದಿಲ್ಲ. ಬೇಸಿಗೆಯಲ್ಲಿ ಮಾತ್ರ ಇವರು ನೆಮ್ಮದಿಯಾಗಿ ಊಟ ಮಾಡುತ್ತಾರೆ. ಮೇ ಹಾಗೂ ಜೂನ್‌ನಲ್ಲಿ ಮಳೆ ಸುರಿದರೆ ಅಡುಗೆ ಮುಚ್ಚಿಟ್ಟು, ನೊಣಗಳ ಹಾವಳಿಯಿಂದ ಕಾಪಾಡಿ ಕೊಳ್ಳುವುದೇ ಇವರಿಗೆ ದೊಡ್ಡ ಸವಾಲು.ಹೆಬ್ಬಾಳು ಗ್ರಾಮದ ಸುತ್ತಮುತ್ತ ಬಿಎಸ್‌ಆರ್‌, ಎಂಆರ್‌ಎಂ, ಶ್ರೀನಿವಾಸ್‌ ರೆಡ್ಡಿ, ವಿಜ್ಞೇಶ್ವರ, ಗೀತಾ, ವೆಂಕಟಲಕ್ಷ್ಮಿ, ಅಂಜನಾದ್ರಿ ಹೆಸರಿನ 7 ಕೋಳಿ ಫಾರ್ಮ್‌ಗಳಿವೆ. ಕೋಳಿ ತ್ಯಾಜ್ಯದ ದುರ್ವಾಸನೆ ಹಾಗೂ ನೊಣಗಳ ಹಾವಳಿ ನಿಯಂತ್ರಣಕ್ಕೆ ಪರಿಸರ ನಿಯಂತ್ರಣ ಮಂಡಳಿ ಸೂಚಿಸಿರುವ ಯಾವ ಮಾರ್ಗಗಳೂ ಇವುಗಳಲ್ಲಿ ಪಾಲನೆಯಾಗಿಲ್ಲ.

‘ಈಗ ನೊಣಗಳ ಸಮಸ್ಯೆ ಇಲ್ಲ. ಆದರೆ, ಮಳೆಗಾಲ ಹಾಗೂ ಮಾವಿನ ಸುಗ್ಗಿ ಆರಂಭವಾಗುತ್ತಿದ್ದಂತೆ ಹಾವಳಿ ಮರುಕಳಿಸುತ್ತದೆ. ಇಲ್ಲಿನ ಯಾವ ಕೋಳಿ  ಫಾರ್ಮ್‌ನಲ್ಲಿಯೂ ಕೋಳಿಗಳ ತ್ಯಾಜ್ಯ ನಿರ್ವಹಣೆ  ವೈಜ್ಞಾನಿಕವಾಗಿ  ನಡೆಯುತ್ತಿಲ್ಲ.  ಬಿಸಿಲಿನ  ಜಳದಿಂದ ಸತ್ತ  ಕೋಳಿಗಳನ್ನು ಗ್ರಾಮದ  ಹೊರವಲಯದಲ್ಲಿ ಬಿಸಾಡುತ್ತಾರೆ. ಇದರಿಂದಾಗಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ನೊಣಗಳ ನಿಯಂತ್ರಣಕ್ಕಾಗಿ ಈ ಹಿಂದೆ ಮನೆಗಳ ಮುಂದೆ ಹಾಗೂ ರಸ್ತೆಯ ಬದಿಯಲ್ಲಿ ‘ನುವಾನ್‌’ ಎಂಬ ಹೆಸರಿನ ಔಷಧ ಸಿಂಪರಣೆ ಮಾಡಲಾಗುತ್ತಿತ್ತು. ಇದರಿಂದ ನೊಣಗಳು ಸಾಯುತ್ತಿರಲಿಲ್ಲ.

ಬದಲಿಗೆ ಜನರಿಗೆ ಉಸಿರಾಟದ ತೊಂದರೆ, ಎದೆ ಉರಿ ಶುರುವಾಯಿತು. ಮಕ್ಕಳ ಹಾಗೂ ಮಹಿಳೆಯರ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರತೊಡಗಿತು. ಇದರ ಜೊತೆಗೆ  ಬೀದಿಯಲ್ಲಿದ್ದ  ನೊಣಗಳು ಮನೆ ಸೇರಿದವು.  ಔಷಧದ ಪ್ರಭಾವ ಕಡಿಮೆ  ಆಗುತ್ತಿದ್ದಂತೆ  ಹೊರಬರುತ್ತಿದ್ದವು. ಇಂದಿಗೂ ನೊಣಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ನೊಣಗಳಿಂದ ತಪ್ಪಿಸಿಕೊಳ್ಳಲು ಬೇಸಿಗೆ ಕಾಲವೇ ಇರಲಿ ಎಂದು ಬಯಸುವಂತಾಗಿದೆ’ ಎಂದು ಹೆಬ್ಬಾಳು ಗ್ರಾಮದ ವಿಜಯಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

8 ಲಕ್ಷ ಕೋಳಿ ಸಾಕಣೆ: ‘ಗ್ರಾಮದ ಜನವಸತಿ ಪ್ರದೇಶದಿಂದ ಕೇವಲ 2 ಕಿ.ಮೀ ಅಂತರದಲ್ಲಿ 7 ಕೋಳಿ ಫಾರ್ಮ್‌ಗಳು ತಲೆಎತ್ತಿದ್ದು, 8 ಲಕ್ಷಕ್ಕೂ ಅಧಿಕ ಕೋಳಿಗಳನ್ಉ ಇಲ್ಲಿ ಸಾಕಣೆ ಮಾಡಲಾಗುತ್ತಿದೆ. ಆದರೆ, ನಿರ್ವಹಣೆ ಮಾತ್ರ ವ್ಯವಸ್ಥಿತವಾಗಿ ನಡೆಯುತ್ತಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ ಎಂದು ಹೇಳಿದರು.‘ಹೆಬ್ಬಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೆಬ್ಬಾಳು ಸೇರಿದಂತೆ ಹಾಲುವರ್ತಿ, ಮಂಡ್ಲೂರು, ಮಂಡಲೂರು, ಗೊಲ್ಲರಹಟ್ಟಿ, ನಿರ್ತಡಿ, ಲಕ್ಕಮುತ್ತೇನಹಳ್ಳಿ, ಕಾಟಿಹಳ್ಳಿ ಮತ್ತು ಲಂಬಾಣಿ ಹಟ್ಟಿ  ಗ್ರಾಮಗಳಿದ್ದು,  ಒಟ್ಟು 9 ಸಾವಿರ  ಜನರು  ವಾಸಿಸುತ್ತಿದ್ದಾರೆ.  ಮಳೆಗಾಲ  ದಲ್ಲಿ ಎಲ್ಲರೂ ನೊಣಗಳ ಸಮಸ್ಯೆ ಎದುರಿಸುತ್ತಾರೆ. ಮಳೆಗಾಲ ಆರಂಭವಾಗುವ ಮುಂಚೆಯೇ ಕೋಳಿ ತ್ಯಾಜ್ಯವನ್ನು ವಿಲೇವಾರಿ ಮಾಡಿ, ನೊಣಗಳ ಹಾವಳಿಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೋಳಿಗಳ ತ್ಯಾಜ್ಯದಿಂದಾಗಿ ಇದುವರೆಗೂ ಜನರಿಗೆ ತೊಂದರೆಯಾಗಿಲ್ಲ. ಮಳೆ ಸುರಿದರೆ ಕಷ್ಟವಾಗುತ್ತದೆ. ಕೋಳಿ ಫಾರ್ಮ್‌ಗಳ ಸ್ವಚ್ಛತೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ಪ್ರತಿ ತಿಂಗಳು ವರದಿ ಸಲ್ಲಿಸುತ್ತಿದ್ದೇನೆ’ ಎಂದು ಹೆಬ್ಬಾಳು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಜ್ಯೋತಿ ಹೇಳುತ್ತಾರೆ.‘ತ್ಯಾಜ್ಯ ವಿಲೇವಾರಿಗೆ ಸೂಚನೆ ನೀಡಲಾಗಿದೆ. ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿಯಮ ಉಲ್ಲಂಘಿಸುವ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗುವುದು’ ಎನ್ನುತ್ತಾರೆ ಹೆಬ್ಬಾಳು ಗ್ರಾಮದ ಪಿಡಿಒ ಸುರೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT