ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗೆ ಯಡಿಯೂರಪ್ಪ ಕಾರಣ ಅಲ್ಲ: ಸಂಸದ ಶ್ರೀರಾಮುಲು

Last Updated 20 ಏಪ್ರಿಲ್ 2017, 5:53 IST
ಅಕ್ಷರ ಗಾತ್ರ

ರಾಯಚೂರು: ‘ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದಕ್ಕೆ ಯಡಿಯೂರಪ್ಪ ಅವರು ಕಾರಣರಲ್ಲ. ಕೆಲವರು ಅಸೂಯೆಯಿಂದ ಯಡಿಯೂರಪ್ಪ ವಿರುದ್ಧ ಹೇಳಿದ್ದಾರೆ. ಚುನಾವಣೆಯಲ್ಲಿ ಹಣದಿಂದ ಸೋತಿದ್ದೇವೆ. ಆದರೆ ಜನರಿಂದ ಸೋತಿಲ್ಲ’ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಬಿಜೆಪಿಗೆ ಶೇ 43 ರಷ್ಟು ಮತಗಳು ಬಂದಿವೆ. ಇದಕ್ಕೂ ಮೊದಲು ಅದೇ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಯಾವ ಚುನಾವಣೆಯಲ್ಲೂ ಇಷ್ಟೊಂದು ಜನ ಬೆಂಬಲ ಸಿಕ್ಕಿರಲಿಲ್ಲ. ಕಾಂಗ್ರೆಸ್‌  ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಗೆಲುವು ಸಾಧಿಸಿದೆ. 2018ರಲ್ಲಿ ನಡೆಯುವ ಚುನಾವಣೆ ಮೇಲೆ ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ 23 ರಂದು ಬಿಜೆಪಿ ಮುಖಂಡರ ಸಭೆ ನಡೆಯಲಿದೆ. ಚುನಾವಣೆ ಸೋಲಿನ ಬಗ್ಗೆ ಅವಲೋಕನ ಮಾಡಲಾಗುವುದು. ಮೈಸೂರಿನಲ್ಲಿ ಮೇ ಮೊದಲ ವಾರ ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲೂ ಚುನಾವಣೆ ವಿಷಯ ಚರ್ಚೆಗೆ ಬರಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲೆ 2018ರ ಚುನಾವಣೆಯನ್ನು ಗೆಲ್ಲುತ್ತೇವೆ. ‘ಮಿಷನ್‌ 150’ ಸಾಧನೆ ಮಾಡಿ ತೋರಿಸುತ್ತೇವೆ’ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದ ಸರ್ಕಾರಿ ಹಾಸ್ಟೆಲ್‌ಗಳ ಸ್ಥಿತಿ ಶೋಚನೀಯವಾಗಿದೆ. ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಾಲಯಗಳಿಲ್ಲ. ಸರಿಯಾದ ಅಡುಗೆ ಮನೆ ವ್ಯವಸ್ಥೆಯಿಲ್ಲ. ಅದೇ ರೀತಿ, ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರು ತುಂಬಾ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಸರ್ಕಾರಿ ಹಾಸ್ಟೆಲ್‌ಗಳು ಮತ್ತು ಕೊಳಚೆ ಪ್ರದೇಶ ವಿಷಯಗಳಿಗೆ ಸಂಬಂಧಿಸಿದಂತೆ ಬಿಜೆಪಿಯಿಂದಲೇ ಸಮೀಕ್ಷಾ ವರದಿಯೊಂದನ್ನು ಸಿದ್ಧಪಡಿಸಲಾಗಿದೆ. ಈ ವಿಷಯಗಳನ್ನು ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು. ‘ರಾಜ್ಯದಲ್ಲಿ ಬರ ನಿರ್ವಹಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬರಗಾಲ ಪರಿಸ್ಥಿತಿ ಇದ್ದರೂ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ದಿನಗಟ್ಟಲೆ ಬೀಡು ಬಿಟ್ಟಿದ್ದರು. ಬರ ಪರಿಹಾರ ಕೆಲಸ ಮಾಡಿಸುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಗಂಭೀರತೆ ಇಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT