ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ ಹುಡುಕುತ್ತಾ ಸಿನಿಮಾ ದಾರಿಯಲ್ಲಿ...

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮೂವತ್ತೈದು ವರ್ಷಗಳಿಂದ ಹಲವು ಉದ್ಯಮ ಸಂಸ್ಥೆಗಳ ಮಾರುಕಟ್ಟೆ ಮತ್ತು ಬ್ರ್ಯಾಂಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆಗಾರನಾಗಿ ಕಾರ್ಯ ನಿರ್ವಹಿಸಿರುವ ನಂದಕಿಶೋರ್ ಎಂ.ಪಿ. ಇದೀಗ ಸಿನಿಮಾ ನಿರ್ದೇಶನದ ಸಾಹಸಕ್ಕೆ ಕೈಹಾಕಿದ್ದಾರೆ. ಕಾರ್ಪೊರೇಟ್ ಜಗತ್ತಿನ ನಂಟಿನ ಜೊತೆಗೆ ತಮ್ಮ ನಿಡುಗಾಲದ ಹವ್ಯಾಸವಾದ ನಾಟಕ, ಸಂಗೀತವನ್ನೂ ಪೋಷಿಸಿಕೊಂಡು ಬಂದವರು ನಂದಕಿಶೋರ್.

ನಂದಕಿಶೋರ್ ಅವರ ತಾಯಿ ಹಿರಿಯ ಅಭಿನೇತ್ರಿ ಎಸ್.ಕೆ. ಪದ್ಮಾದೇವಿ – ‘ಭಕ್ತಧ್ರುವ’, ‘ಸಂಸಾರ ನೌಕ’ ಚಿತ್ರಗಳಲ್ಲಿ ಅಭಿನಯಿಸಿದವರು. ಅಮ್ಮನ ಕಾರಣದಿಂದಾಗಿ ಚಿತ್ರರಂಗ ಹಾಗೂ ಕಲಾಪ್ರಪಂಚದ ನಂಟು ನಂದಕಿಶೋರ್ ಅವರಿಗೆ ದೊರೆತಿದೆ. ಶಾಲಾ ದಿನಗಳಿಂದಲೇ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

1979ರಲ್ಲಿ ಅವರು ‘ಡ್ರೀಮ್ಸ್ ಫಾರ್ ಸೇಲ್’ ಎಂಬ ಮೂಕಿ ಕಿರುಚಿತ್ರ ಮಾಡಿ, ರಾಷ್ಟ್ರಪ್ರಶಸ್ತಿ ಪಡೆದರು. ಅದು ಬೇರೆ ಬೇರೆ ರಾಷ್ಟ್ರಗಳ ಚಿತ್ರೋತ್ಸವಗಳಲ್ಲೂ ಪ್ರದರ್ಶನವಾಯಿತು. ನಂತರದ ದಿನಗಳಲ್ಲಿ ಆರೋಗ್ಯ, ಕೃಷಿ, ಭದ್ರತೆ ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮುನ್ನೂರಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ಸರ್ಕಾರಕ್ಕಾಗಿ ತಯಾರಿಸಿದ್ದಾರೆ. ಇಂಥದ್ದೇ ವಿಭಾಗದಲ್ಲಿ ಚಿತ್ರಮಾಡುತ್ತೇನೆ ಎಂಬ ಬೇಲಿ ಅವರಿಗಿಲ್ಲ. 1994ರಲ್ಲಿ ಮೊದಲ ಬಾರಿ ದೂರದರ್ಶನದಲ್ಲಿ ‘ಚಿತ್ರಿಕೆ’ ಎಂಬ ಕನ್ನಡದ ವಿಡಿಯೊ ಮ್ಯಾಗಜಿನ್ ಮಾಡಿದ ಅನುಭವಿ ಅವರು. ಶಾಲೆಗಳಿಗಾಗಿ ‘ಕಿರಣ’ ಎಂಬ ಮೋಟಿವೇಶನಲ್ ಕಿರು ದೃಶ್ಯಗಳನ್ನು ಮಾಡಿಕೊಟ್ಟಿದ್ದರು.

ನಂದಕಿಶೋರ್ ಅವರಿಗೆ ಸಾಕ್ಷ್ಯಚಿತ್ರಗಳಲ್ಲಿ ಇದ್ದಷ್ಟು ಒಲವು ಕಥಾಚಿತ್ರಗಳಲ್ಲಿ ಇರಲಿಲ್ಲ. ಅದರಿಂದಲೇ ಇಷ್ಟು ವರ್ಷವೂ ಸಿನಿಮಾಗಳಿಂದ ದೂರವಿದ್ದರು. ಈಗ್ಗೆ ಕೆಲವು ವರ್ಷಗಳಿಂದ ಸ್ನೇಹಿತರ ಒತ್ತಾಯದಿಂದಾಗಿ ಕಥಾಚಿತ್ರವನ್ನೂ ಒಂದು ಕೈ ನೋಡಿಬಿಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಂದು ಮಾಡಿದ ಕೆಲಸ ಮುಂದೆಯೂ ಅನೇಕ ವರ್ಷಗಳವರೆಗೆ ನೆನಪಲ್ಲಿ ಉಳಿಯುವಂತಾಗಬೇಕು ಎಂಬುದು ಅವರ ನಿಲುವು. ಆ ಉದ್ದೇಶದಲ್ಲೇ ಹೊಸತನದ ಎರಡು ಸಿನಿಮಾಗಳ ನಿರ್ದೇಶನದ ಹುಮ್ಮಸ್ಸಿನಲ್ಲಿದ್ದಾರೆ.

ಪ್ರವಾಸೋದ್ಯಮವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಥಾಚಿತ್ರ ನಿರ್ದೇಶಿಸುವ ಯೋಜನೆ ಅವರದ್ದು. ನಿಧಿ ಶೋಧ, ಕೊಲೆ ರಹಸ್ಯ, ಪ್ರೀತಿ ಹೀಗೆ ಭಿನ್ನ ಹಂದರಗಳ ಸುತ್ತ ಕಥೆ ಹೆಣೆದು, ಆ ಮೂಲಕ ಕರ್ನಾಟಕದ ಬೇರೆ ಬೇರೆ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವುದು ಈ ಚಿತ್ರದ ಉದ್ದೇಶ. ಚಿತ್ರಕಥೆ ಸಿದ್ಧವಾಗಿದ್ದು, ಪಾತ್ರಕ್ಕಾಗಿ ಒಬ್ಬ ವಿದೇಶಿ ನಟಿಯ ನಿರೀಕ್ಷೆಯಲ್ಲಿದ್ದಾರೆ. ನಿರ್ಮಾಪಕರ ಹುಡುಕಾಟವೂ ನಡೆದಿದೆ. ತಮ್ಮ ಈವರೆಗಿನ ಅನುಭವದ ಹಿನ್ನೆಲೆಯಲ್ಲಿ ಬೇರೆ ಬೇರೆ ಸಂಸ್ಥೆಗಳ ಉತ್ಪನ್ನಗಳನ್ನು ಪ್ರಚುರ ಪಡಿಸುವಂಥ ದೃಶ್ಯಗಳನ್ನು ಸಿನಿಮಾದಲ್ಲಿ ಅಳವಡಿಸಿ, ಅದರಿಂದ ಒಂದಷ್ಟು ಪ್ರಾಯೋಜಕರನ್ನು ಹುಡುಕುವ ಚಿಂತನೆ ಅವರಲ್ಲಿದೆ. ಮೈಸೂರಿನ ಸುತ್ತಮುತ್ತ ಇರುವ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ನಂದಕಿಶೋರ್‌ ರೂಪಿಸಲಿರುವ ಇನ್ನೊಂದು ಸಿನಿಮಾ ಮಕ್ಕಳದು. ನಿಯಮಿತವಾಗಿ ಬದಲಾಗುತ್ತಿರುವ ಹವಾಮಾನದ ಕುರಿತಾಗಿ ಮಕ್ಕಳಲ್ಲಿ ಅರಿವು ಮೂಡಿಸುವ ಸಿನಿಮಾ ಇದು. ಪರಿಸರದ ಬಗೆಗೆ ಕಾಳಜಿ ವಹಿಸುವುದು ಮಕ್ಕಳ ವ್ಯವಹಾರ ಅಲ್ಲದಿದ್ದರೂ, ಮಕ್ಕಳ ಮೂಲಕ ಅದನ್ನು ಹಿರಿಯರಿಗೂ ವರ್ಗಾಯಿಸುವ ಉದ್ದೇಶ ನಿರ್ದೇಶಕರದ್ದು. ಈ ಚಿತ್ರ ಹೆಚ್ಚು ಅಗತ್ಯವಿರುವುದು ನಗರ ಪ್ರದೇಶದ ಜನತೆಗೆ ಎಂಬುದು ಅವರ ಅನಿಸಿಕೆ. ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಮಕ್ಕಳ ಆಯ್ಕೆ ಇನ್ನೂ ಆಗಬೇಕಿದೆ. ಬೇಸಿಗೆ ರಜೆಯಲ್ಲಿ ಅವರಿಗೆ ತರಬೇತಿ ನೀಡಿ, ಚಿತ್ರೀಕರಣ ನಡೆಸಿ ಅಕ್ಟೋಬರ್–ನವೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವುದು ಯೋಜನೆ. ಈ ಚಿತ್ರಕ್ಕೂ ನಿರ್ಮಾಪಕರ ನಿರೀಕ್ಷೆಯಲ್ಲಿ ಇರುವ ನಂದಕಿಶೋರ್, ಪ್ರಾಯೋಜಕರನ್ನು ಕರೆತರುವ ಉದ್ದೇಶದಿಂದ ದೂರವಿದ್ದಾರೆ. ಯಾವುದೋ ಸಂಸ್ಥೆಯ ಉತ್ಪನ್ನಗಳ ಪ್ರಾಯೋಜಕತ್ವ ಪಡೆದುಕೊಂಡರೆ ತಾವು ಹೇಳಲು ಹೊರಟಿರುವ ಮೂಲ ವಿಚಾರದ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂಬುದು ಅವರ ಆತಂಕ.

ಎರಡೂ ಚಿತ್ರಗಳಿಗೆ ಇನ್ನೂ  ಶೀರ್ಷಿಕೆ ಇಟ್ಟಿಲ್ಲ. ಮಕ್ಕಳ ಚಿತ್ರವನ್ನೇ ಮೊದಲು ನಿರ್ಮಿಸಲಿರುವ ನಂದಕಿಶೋರ್, ಇಷ್ಟು ವರ್ಷ ತಮ್ಮ ಜೊತೆಗಿದ್ದು ಸಾಕ್ಷ್ಯಚಿತ್ರ–ಕಿರುಚಿತ್ರಗಳಿಗೆ ಕೆಲಸ ಮಾಡಿದ ತಂತ್ರಜ್ಞರನ್ನೇ ಈ ಸಿನಿಮಾಗಳಿಗೂ ದುಡಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ.

* ನಂದಕಿಶೋರ್ ಪ್ರಸ್ತುತ ಎರಡು ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. ಸಲಿಂಗಿಗಳ ಲೈಂಗಿಕ ಸಂಬಂಧ ಅಪರಾಧ, ಅದಕ್ಕೆ ಶಿಕ್ಷೆ ವಿಧಿಸಬೇಕು ಎಂಬ ಕಾನೂನಿಗೆ ಸಂಬಂಧಿಸಿದಂತೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಒಂದು ಸಾಕ್ಷ್ಯಚಿತ್ರ ರೂಪಿಸುತ್ತಿದ್ದಾರೆ. ಇನ್ನೊಂದು ಧರ್ಮ ಜಿಜ್ಞಾಸೆಗೆ ಸಂಬಂಧಿಸಿದ್ದು. ಹಿಂದೂ ಎಂಬುದು ಧರ್ಮವೇ, ಜೀವನ ಶೈಲಿಯೇ ಅಥವಾ ಆಚರಣೆಯೇ ಎಂಬ ಚರ್ಚೆ ಯಾವಾಗಲೂ ನಡೆದುಕೊಂಡು ಬಂದಿದೆ. ಇದರ ಹಿನ್ನೆಲೆಯಲ್ಲಿ ಹಿಂದೂ ಎಂದರೆ ಏನು ಎಂದು ಚರ್ಚಿಸುವ ಸಾಕ್ಷ್ಯಚಿತ್ರವನ್ನು ಅವರು ಕೈಗೆತ್ತಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT