ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಘಂಟಿನಿಂದ ಚಿತ್ರರಂಗಕ್ಕೆ ಬಂದ ‘ಕಾದಲ್’

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಕಾದಲ್’ ಹೆಸರಿನ ಸಿನಿಮಾವೊಂದು ಕನ್ನಡದಲ್ಲಿ ರೂಪುಗೊಳ್ಳುತ್ತಿದೆ. ಕಾದಲ್ ಎಂದಾಕ್ಷಣ ತಮಿಳು ಸಿನಿಮಾ ಹೆಸರುಗಳು ನೆನಪಾಗುತ್ತವೆ. ಆದರೆ, ಈ ಪದ ಕನ್ನಡದಲ್ಲೂ ಇದೆ! ‘ಬೇಕಿದ್ದರೆ ಹಳಗನ್ನಡದ ಪಠ್ಯಗಳಲ್ಲಿ ಹುಡುಕಿ’ ಎಂದು ನಿಘಂಟಿನ ಉಲ್ಲೇಖ ನೀಡುತ್ತಾರೆ ನಿರ್ದೇಶಕ ವಿ. ರಾಘವಮುರಳಿ. ಅದೇ ವಾದ ಮುಂದಿಟ್ಟು ಅವರು ‘ಕಾದಲ್’ ಶೀರ್ಷಿಕೆಯನ್ನೂ ಪಡೆದುಕೊಂಡಿದ್ದಾರೆ.

‘ಮುಮ್ತಾಜ್’ ಎನ್ನುವ ಚಿತ್ರ ನಿರ್ದೇಶಿಸಿದ್ದ ರಾಘವಮುರಳಿ ಅವರಿಗೆ ಇದು ಎರಡನೇ ಯತ್ನ. ‘ಮುಮ್ತಾಜ್’ ಪ್ರೇರಣೆಯಿಂದಾಗಿ ಅವರು ‘ಮುಮ್ತಾಜ್‌ ಮುರಳಿ’ ಎಂದೇ ಮರು ನಾಮಕರಣವನ್ನೂ ಮಾಡಿಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕನದು ಸಹಾಯಕ ನಿರ್ದೇಶಕನ ಪಾತ್ರ. ಆತ ಕ್ಯಾನ್ಸರ್‌ಪೀಡಿತ ಯುವತಿಯೊಬ್ಬಳನ್ನು ಪ್ರೇಮಿಸುತ್ತಾನೆ. ಪ್ರೀತಿಯ ಬಲದಿಂದ ಆಕೆಯನ್ನು ಉಳಿಸಿಕೊಳ್ಳುತ್ತಾನಾ? ಸಹಾಯಕ ನಿರ್ದೇಶಕನ ಸ್ಥಾನದಿಂದ ಸ್ವತಂತ್ರ ನಿರ್ದೇಶಕನ ಸ್ಥಾನಕ್ಕೆ ಬಡ್ತಿ ಪಡೆದು ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾನಾ? ಎನ್ನುವುದು ಚಿತ್ರಕಥೆಯಲ್ಲಿನ ಕುತೂಹಲಕಾರಿ ಅಂಶಗಳು. ಶುದ್ಧ ಪ್ರೇಮಕಥೆಯೊಂದನ್ನು ತೋರಿಸುವ ಪ್ರಯತ್ನ ನಿರ್ದೇಶಕರದ್ದು.

ನಾಯಕ ಆಕಾಶ್ ಮೊದಲ ಬಾರಿ ನಟನೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ತುಮಕೂರಿನ ಆಕಾಶ್ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಮಗನನ್ನು ಹೀರೊ ಆಗಿ ಪಚಯಿಸುವ ಪ್ರಯತ್ನಕ್ಕೆ ಹಣ ಹೂಡಿದ್ದಾರೆ ಎಸ್. ಸುರೇಶ್. ರಂಗಭೂಮಿ ಕಲಾವಿದೆ ಧರಣಿಗೆ ಇದು ನಾಯಕಿಯಾಗಿ ನಾಲ್ಕನೇ ಸಿನಿಮಾ. ಸುಧಾಕರ್, ಮಂಜುನಾಥ್, ಭಾವನಾ ಮುಖ್ಯ ತಾರಾಗಣದಲ್ಲಿದ್ದಾರೆ.

ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ ತಂಡ ಈಗ ಹಾಡುಗಳ ಸೀಡಿ ಬಿಡುಗಡೆ ಮಾಡಿ ಸುದ್ದಿ ಮಾಡಿದೆ. ನಟ ಅಜಯ್ ರಾವ್ ಅವರು ಸೀಡಿ ಅನಾವರಣ ಮಾಡಿ ತಂಡಕ್ಕೆ ಶುಭ ಕೋರಿದರು. ಪ್ರವೀಣ್ ಕೆ.ಬಿ. ಏಳು ಹಾಡುಗಳನ್ನು ಸಂಯೋಜಿಸಿದ್ದಾರೆ. ಪವನ್ ಕೆ.ಬಿ. ಮತ್ತು ಪದ್ಮಪ್ರಸಾದ್ ಹಾಡುಗಳನ್ನು ರಚಿಸಿದ್ದಾರೆ. ‘ಸಿ ಮ್ಯೂಸಿಕ್ ಕಂಪೆನಿ’ ಸೀಡಿಯನ್ನು ಮಾರುಕಟ್ಟೆಗೆ ತಂದಿದೆ.

ಬೆಂಗಳೂರು, ಚಿಕ್ಕಮಗಳೂರು, ಮೈಸೂರಿನಲ್ಲಿ ನಲವತ್ತೈದು ದಿನಗಳ ಚಿತ್ರೀಕರಣ ನಡೆಸಲಾಗಿದೆ. ಹರಿಕೃಷ್ಣ ನೃತ್ಯ, ಪೂರ್ಣಚಂದ್ರ ಅವರ ಛಾಯಾಗ್ರಹಣ, ಕೆ.ಎಂ. ಕಾರ್ತಿಕ್ ಸಂಕಲನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT