ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಗೆ ಸಿಗರೇಟ್ ಸೇದಿಸಿ, ಕೈ ಕುಯ್ದರು?

Last Updated 20 ಏಪ್ರಿಲ್ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ಪಿಯುಸಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿ, ಬಲವಂತವಾಗಿ ಸಿಗರೇಟ್ ಸೇದಿಸಿದ ಆರೋಪದಡಿ ನಾಲ್ವರು ಅಪರಿಚಿತರ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಏ.17ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮಗಳು ಬಸವನಗುಡಿಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ’ ಎಂದು ವಿದ್ಯಾರ್ಥಿನಿಯ ತಾಯಿ ದೂರು ಕೊಟ್ಟಿದ್ದಾರೆ.

ಅಪಹರಣ ಯತ್ನ (ಐಪಿಸಿ 363) ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸುತ್ತಮುತ್ತಲ ರಸ್ತೆಗಳ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸುತ್ತಿದ್ದಾರೆ.

ಕಾರಿನಲ್ಲಿ ಚಿತ್ರಹಿಂಸೆ: ‘ಪರೀಕ್ಷೆ ಬರೆದು ಟ್ಯೂಷನ್‌ನಿಂದ ಹೊರಬಂದ ನಾನು, ಬಿಸ್ಕತ್ ತೆಗೆದುಕೊಳ್ಳಲು ಮ್ಯಾಕ್‌ ಡೋನಾಲ್ಡ್ ಸಮೀಪದ ಅಂಗಡಿಗೆ ಹೋಗುತ್ತಿದ್ದೆ. ಅಲ್ಲಿ ನಾಲ್ವರು ಅಪರಿಚಿತರು ನನ್ನನ್ನು ಚುಡಾಯಿಸಿದರು. ಹೀಗಾಗಿ, ಪಕ್ಕದ ರಸ್ತೆಯಿಂದ ಅಂಗಡಿಯತ್ತ ಹೋಗಲು ಮುಂದಾದೆ. ಆಗ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು, ನನ್ನನ್ನು ಅಪಹರಿಸಿಕೊಂಡು ಕರೆದೊಯ್ದರು’ ಎಂದು 16 ವರ್ಷದ ಆ ವಿದ್ಯಾರ್ಥಿನಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.

‘ಬಟ್ಟೆಯಿಂದ ಕೈ–ಕಾಲು ಕಟ್ಟಿ ಹಾಕಿ, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿದರು. ಪ್ರತಿರೋಧ ತೋರಿದಾಗ ಬ್ಲೇಡ್‌ನಿಂದ ಕೈ ಹಾಗೂ ಕುತ್ತಿಗೆ ಮೇಲೆ ಹಲ್ಲೆ ಮಾಡಿದರು. ನಂತರ ಸಿಗರೇಟಿನಲ್ಲಿ ಉಪ್ಪಿನ ರೀತಿಯ ಯಾವುದೋ ಪದಾರ್ಥ ತುಂಬಿ (ಮಾದಕ ವಸ್ತು ಇರಬಹುದು) ನನಗೆ ಸೇದಿಸಿದರು.’

‘ಸ್ವಲ್ಪ ಸಮಯದ ನಂತರ ಯಾರಿಗೋ ಕರೆ ಮಾಡಿದ ಒಬ್ಬಾತ, ‘ನೀವು ಹೇಳಿದ ಹುಡುಗಿಯನ್ನು ಅಪಹರಣ ಮಾಡಿದ್ದೇವೆ. ಇನ್ನು ಮೂರು ತಾಸಿನೊಳಗೆ ನಿಮ್ಮ ಬಳಿ ಕರೆದುಕೊಂಡು ಬರುತ್ತೇವೆ’ ಎಂದು ಹಿಂದಿ ಭಾಷೆಯಲ್ಲಿ ಹೇಳಿದ. ಮಾರ್ಗಮಧ್ಯೆ ಮಳೆ ಸುರಿಯಲಾರಂಭಿಸಿತು. ಆಗ ವಿಜಯನಗರದ ಪೈಪ್‌ಲೈನ್ ರಸ್ತೆ ಬಳಿ ಕಾರು ನಿಲ್ಲಿಸಿದರು.’

‘ಇಬ್ಬರು ವೈಪರ್ ಸರಿಪಡಿಸಲು ಕೆಳಗಿಳಿದರು. ಇನ್ನೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತ ನನ್ನ ಪಕ್ಕ ಕುಳಿತಿದ್ದರೆ, ಮತ್ತೊಬ್ಬ ಚಾಲಕನ ಪಕ್ಕದ ಸೀಟಿನಲ್ಲಿದ್ದ. ಕೂಡಲೇ ನಾನು ಕೆಳಗಿಳಿದು ಓಡಿ ಬಂದೆ.’

‘ಮಳೆಯ ಕಾರಣ ರಸ್ತೆಯಲ್ಲಿ ಹೆಚ್ಚು ಜನ ಇರಲಿಲ್ಲ. ಸುಮಾರು 1 ಕಿ.ಮೀ ದೂರ ಓಡಿದ ನಂತರ ಯಾರೋ ನೆರವಿಗೆ ಬಂದರು. ಆಗ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋದರು’ ಎಂದು ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಗಿ  ಪೊಲೀಸರು ಮಾಹಿತಿ ಕೊಟ್ಟರು.

**

ಹೇಳಿಕೆಯಲ್ಲಿ ಅನುಮಾನ
‘ಕೈ ಹಾಗೂ ಕುತ್ತಿಗೆ ಮೇಲೆ ಪಿನ್ನಿನಿಂದ ತರಚಿದಂಥ ಗಾಯದ ಗುರುತುಗಳಿವೆ. ಅದು ಅಪಹರಣಕಾರರು ನಡೆಸಿದ ಹಲ್ಲೆಯಂತೆ ಕಾಣುತ್ತಿಲ್ಲ. ವಿದ್ಯಾರ್ಥಿನಿಯ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಲಾಗಿದ್ದು, ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ಆಕೆ ಬಸವನಗುಡಿ ಸುತ್ತಮುತ್ತ ಇರಲಿಲ್ಲ ಎಂಬುದು ಗೊತ್ತಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಗೆ ಹೋಗುವುದು 3 ತಾಸು ತಡವಾಗಿದ್ದರಿಂದ ಪೋಷಕರು ಬಯ್ಯಬಹುದೆಂದು ವಿದ್ಯಾರ್ಥಿನಿಯೇ ಈ ರೀತಿ ಕತೆ ಕಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT