ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಮತ್ತೆ ಶುರುವಾದ ಕಂಟಕ

Last Updated 21 ಏಪ್ರಿಲ್ 2017, 7:33 IST
ಅಕ್ಷರ ಗಾತ್ರ

ಗದಗ: ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಜಾಕ್‌ವೆಲ್‌ ಬಳಿ ನದಿ ಪಾತ್ರದಲ್ಲಿ ನೀರಿನ ಸಂಗ್ರಹ ಖಾಲಿಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಗರಕ್ಕೆ ಮತ್ತೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಹಮ್ಮಿಗೆ ಬ್ಯಾರೇಜ್‌ನಿಂದ ಕೊರ್ಲಹಳ್ಳಿ ಜಾಕ್‌ವೆಲ್‌ಗೆ ಹರಿಸಲಾಗಿದ್ದ ಭದ್ರಾ ಜಲಾಶಯದ ನೀರಿನ ಸಂಗ್ರಹ ಗುರುವಾರ ಸಂಜೆಯ ವೇಳೆಗೆ ಮುಗಿಯಲಿದೆ. ಶುಕ್ರವಾರದಿಂದ ನೀರೆತ್ತುವ ಕಾರ್ಯ ಸ್ಥಗಿತಗೊಳ್ಳಲಿದೆ. ಹಮ್ಮಿಗೆ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿದ ನಂತರವೇ ಮತ್ತೆ ನೀರೆತ್ತುವ ಕಾರ್ಯ ಪ್ರಾರಂಭವಾಗಲಿದೆ ಎಂದು ಜಾಕ್‌ವೆಲ್‌ ಘಟಕದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾದಾಗ ಕಳೆದ ಮಾ. 20ರಂದು ಭದ್ರಾ ಜಲಾಶಯದಿಂದ 230 ಕಿಮೀ ಕೆಳಗಿರುವ ಹಮ್ಮಿಗಿ ಜಲಾಶಯಕ್ಕೆ 3 ಟಿಎಂಸಿ ಅಡಿ ನೀರು ಹರಿಸಲಾಗಿತ್ತು. ಆದರೆ, ಈ 3 ಟಿಎಂಸಿಯಲ್ಲಿ ಸರಾಸರಿ 1 ಟಿಎಂಸಿ ಅಡಿ ನೀರಷ್ಟೇ ಹಮ್ಮಿಗಿ ಬ್ಯಾರೇಜ್‌ ತಲುಪಿತ್ತು.ಹಮ್ಮಿಗೆ ಬ್ಯಾರೇಜ್‌ನಿಂದ ಕೊರ್ಲಹಳ್ಳಿ ಜಾಕ್‌ವೆಲ್‌ಗೆ ಏಪ್ರಿಲ್‌ ಮೊದಲ ವಾರದಲ್ಲಿ ನೀರು ಬಿಡಲಾಗಿತ್ತು. ಈ ನೀರನ್ನು ಪಂಪ್‌ ಮಾಡಿ, ಸರಾಸರಿ 40 ದಿನಗಳ ಬಳಿಕ ಅಂದರೆ ಏ.8ರಿಂದ ಮತ್ತೆ ಗದುಗಿನಲ್ಲಿ ನಗರಸಭೆ ಕುಡಿಯುವ ನೀರಿನ ಪೂರೈಕೆ ಪುನರಾರಂಭಿಸಿತ್ತು. ಇದಾಗಿ 12 ದಿನ ಕಳೆಯುವಷ್ಟರಲ್ಲಿ ಮತ್ತೆ ನೀರಿನ ಕೊರತೆ ಎದುರಾಗಿದೆ.

ಡಂಬಳದ ಪಾಪನಾಶಿಯ ಜಲಸಂಗ್ರಹಗಾರದಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣದ ಆಧಾರದ ಇನ್ನೆರಡು ದಿನ ನಗರಕ್ಕೆ ನೀರು ಪೂರೈಕೆ ಮಾಡಬಹುದು. ನಂತರ ಹಮ್ಮಿಗೆ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿದರೆ ಮಾತ್ರ ನೀರು ಪೂರೈಕೆ ಮುಂದುವರಿಸಲು. ಆದರೆ, ಸದ್ಯ ಹಮ್ಮಿಗೆ ಬ್ಯಾರೇಜ್‌ನಲ್ಲಿ ಡೆಡ್‌ಸ್ಟೋರೇಜ್‌ ಮಾತ್ರ ಉಳಿದಿದೆ.
ಕುಡಿಯುವ ಉದ್ದೇಶಕ್ಕೆ ಡೆಡ್‌ಸ್ಟೋರೇಜ್‌ ಬಿಡುಗಡೆ ಮಾಡುವಂತೆ ಅಥವಾ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಬ್ಯಾರೇಜ್‌ಗೆ  ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸಿದ ನಗರಸಭೆ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.

ತಡೆಗೋಡೆ ಅಗತ್ಯ: ಕೊರ್ಲಹಳ್ಳಿ ಜಾಕ್‌ವೆಲ್‌ ಬಳಿ ನದಿಪಾತ್ರದಲ್ಲಿ ಕನಿಷ್ಠ 5.2 ಅಡಿ ಎತ್ತರಕ್ಕೆ ಮರಳಿನ ಚೀಲಗಳನ್ನಿಟ್ಟು ತಡೆಗೋಡೆ ನಿರ್ಮಿಸಬೇಕಾಗಿತ್ತು. ಆದರೆ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು, ಕೇವಲ 4.2 ಅಡಿ ಎತ್ತರದ ತಡೆಗೋಡೆ ನಿರ್ಮಿಸಿದ್ದರು. ಹೀಗಾಗಿ ಹಮ್ಮಿಗೆ ಬ್ಯಾರೇಜ್‌ನಿಂದ ಬಿಡುಗಡೆ ಮಾಡಿದ ಸಂಪೂರ್ಣ ನೀರು, ಇಲ್ಲಿ ಸಂಗ್ರಹವಾಗದೇ ಮುಂದಿನ ಗ್ರಾಮಗಳಿಗೆ ಸಾಕಷ್ಟು ಹರಿದುಹೋಯಿತು. ಈಗ ಮತ್ತೆ ಭದ್ರಾ ಜಲಾಶಯದಿಂದ ನೀರು ಬಿಟ್ಟರೂ ಅದು ಹಮ್ಮಿಗೆ ಬ್ಯಾರೇಜಿಗೆ ಬಂದು ತಲುಪಲು ಸಾಕಷ್ಟು ದಿನ ಹಿಡಿಸುತ್ತದೆ.

ಹಮ್ಮಿಗೆ ಬ್ಯಾರೇಜ್‌ನಲ್ಲಿ ಡೆಡ್‌ಸ್ಟೋರೇಜ್‌  ಮಾತ್ರ ಉಳಿದಿದೆ. ಇದನ್ನು 18 ಕಿ.ಮೀ ದೂರದಲ್ಲಿರುವ ಕೊರ್ಲಹಳ್ಳಿಗೆ ಹರಿಸುವ ಬದಲು ನೇರವಾಗಿ ಡಂಬಳ ಪಂಪ್‌ಹೌಸಿಗೆ ಬಿಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.  ನಗರದ ಝಾಕಿರ ಹುಸೇನ ಕಾಲನಿ ಹಾಗೂ ಸಿದ್ದಲಿಂಗ ನಗರಕ್ಕೆ ಕಳೆದ ತಿಂಗಳಿಂದ ನೀರು ಪೂರೈಕೆ ಆಗಿರುವುದಿಲ್ಲ. ಈಗ ಮತ್ತೆ ನೀರು ಪೂರೈಕೆ ನಿಂತಲ್ಲಿ 45 ಕ್ಕಿಂತ ಹೆಚ್ಚಿನ ದಿವಸ ಆದಂತಾಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT