ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮೇಶ್ವರ್‌ ಬದಲಾವಣೆಗೆ ಹೆಚ್ಚಿದ ಒತ್ತಡ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಪರಮೇಶ್ವರ್‌ ಅವರ ಬದಲಾವಣೆಗೆ ಕಾಂಗ್ರೆಸ್‌ ಪಕ್ಷದೊಳಗೆ  ಒತ್ತಡ ಹೆಚ್ಚುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಪರಮೇಶ್ವರ್‌ ಬದಲಾವಣೆಗೆ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ದೆಹಲಿಯಲ್ಲಿ ಭಾನುವಾರ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲಿರುವ ಸಿದ್ದರಾಮಯ್ಯ ಅವಕಾಶ ದೊರೆತರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಜ್ಯದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್‌ ಅವರ ಜತೆ ಅಧ್ಯಕ್ಷರ ಬದಲಾವಣೆ ಕುರಿತು ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ದೆಹಲಿಗೆ ತೆರಳಿದ ಬಳಿಕ ಹೈಕಮಾಂಡ್‌ ನಾಯಕರ ಜೊತೆ ಸಮಾಲೋಚಿಸುವುದಾಗಿ ಸಿಂಗ್‌ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಿಂಗ್‌ ಜೊತೆ ಸಿದ್ದರಾಮಯ್ಯ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ರಾಜ್ಯಕ್ಕೆ ಬಂದಾಗಲೆಲ್ಲ ಒಳ್ಳೆಯ ಆತಿಥ್ಯ ನೀಡಲಾಗುತ್ತಿದೆ. ಅಲ್ಲದೆ, ಕಾಂಗ್ರೆಸ್‌ ಹೈಕಮಾಂಡ್‌ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ಹೇಳುವುದನ್ನು ಕೇಳುತ್ತದೆ. ಹಾಗೇನಾದರೂ ಆದರೆ ಪರಮೇಶ್ವರ್‌ ಬದಲಾಗುವುದು ಖಚಿತ’ ಎಂದು ಕಾಂಗ್ರೆಸ್‌ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

‘ವಿಧಾನಸಭೆ ಚುನಾವಣೆಗೆ ಉಳಿದಿರುವುದು ಒಂದು ವರ್ಷ ಮಾತ್ರ. ಪಕ್ಷ ಸಂಘಟನೆ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಸಮಯವಾಗಿದ್ದು,  ಕ್ರಿಯಾಶೀಲವಾಗಿ ಕೆಲಸ ಮಾಡುವ ನಾಯಕರನ್ನು ಅಧ್ಯಕ್ಷರಾಗಿ ನೇಮಕ ಮಾಡಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ  ಇರಬೇಕು.  ಪರಮೇಶ್ವರ್‌ ಅವರಿಗೆ ಈ ಗುಣಗಳಿಲ್ಲ ಎಂಬ ನಿಲುವನ್ನು ಮುಖ್ಯಮಂತ್ರಿ ಹೊಂದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತಮ್ಮನ್ನು ಬದಲಾವಣೆ ಮಾಡಬಹುದೆಂದು ಸುಳಿವು ಸಿಕ್ಕ ಪರಮೇಶ್ವರ್‌ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ
ಮಾಡಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್‌ ಮೇಲೆ ಒತ್ತಡ ಹೇರುವಂತೆ  ಮನವಿ ಮಾಡಿದ್ದಾರೆ. ‘ನೋಡೋಣ’ ಎಂದಷ್ಟೇ ಖರ್ಗೆ ಹೇಳಿದ್ದಾರೆ ಎಂದೂ ಮೂಲಗಳು ಖಚಿತಪಡಿಸಿವೆ.

ಈ ಮಧ್ಯೆ, ಪರಮೇಶ್ವರ್‌ ಉತ್ತರಾಧಿಕಾರಿ ಆಗಲು ಪೈಪೋಟಿ ತೀವ್ರಗೊಂಡಿದ್ದು, ಸಚಿವರಾದ ಡಿ.ಕೆ. ಶಿವಕುಮಾರ್‌, ಎಂ.ಬಿ ಪಾಟೀಲ, ಎಸ್‌.ಆರ್‌.ಪಾಟೀಲ ಹಾಗೂ ಸಂಸದ ಕೆ.ಎಚ್‌. ಮುನಿಯಪ್ಪ ಅವರ ಹೆಸರೂ ಚಲಾವಣೆಯಲ್ಲಿವೆ.

ಮುನಿಯಪ್ಪ ತಮ್ಮನ್ನೇ ಅಧ್ಯಕ್ಷರಾಗಿ ನೇಮಿಸುವಂತೆ ಒತ್ತಾಯಿಸಲು ರಾಹುಲ್ ಬಳಿಗೆ ನಿಯೋಗ ಒಯ್ದಿದ್ದರು ಎನ್ನಲಾಗಿದೆ. ರಾಹುಲ್‌ ಅವರಿಂದ
ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ.

‘ಜೆಡಿಎಸ್‌ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯಲು ಶಿವಕುಮಾರ್‌ ಅವರು ಸೂಕ್ತ’ ಎಂಬ ಅಭಿಪ್ರಾಯವನ್ನು  ಪಕ್ಷದ ನಾಯಕರ ಒಂದು ಗುಂಪು ಹೊಂದಿದೆ.
ಮತ್ತೊಂದು ಗುಂಪು,‘ ಎಂ.ಬಿ. ಪಾಟೀಲರು ಅಧ್ಯಕ್ಷರಾದರೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಬೆಂಬಲ ಪಡೆಯುವುದು ಸುಲಭ’ ಎಂದು ಪ್ರತಿಪಾದಿಸುತ್ತಿದೆ.

‘ಅಧ್ಯಕ್ಷ ಸ್ಥಾನ  ಸಿಕ್ಕರೆ ಪಕ್ಷ ಅಧಿಕಾರಕ್ಕೆ’

‘ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ’ ಎಂದು ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಎಸ್‌.ಆರ್‌. ಪಾಟೀಲ ಹೇಳಿದರು.
‘ಸಚಿವ ಸ್ಥಾನದಿಂದ ನನ್ನನ್ನು ತೆಗೆಯುವ ಮುನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಯಾವುದೇ ಆಶ್ವಾಸನೆ ಕೊಟ್ಟಿರಲಿಲ್ಲ.   ಅಧಿಕಾರದ ಆಸೆಗೆ ದೆಹಲಿಗೆ ಹೋಗಿ ಲಾಬಿ ಮಾಡುವ ಅಭ್ಯಾಸವನ್ನೂ ನಾನು ಇಟ್ಟುಕೊಂಡಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT