ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ನ ಹೊಸ ಮಾರ್ಗ ಅಕ್ವಾ ಏರೊಬಿಕ್ಸ್‌

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ವಿಪರೀತ ಸೆಖೆ. ದಿನೇದಿನೇ ತನ್ನ ಕಾವನ್ನು ಹೆಚ್ಚಿಸಿಕೊಂಡು ಉರಿಯುತ್ತಿದ್ದಾನೆ ಸೂರ್ಯ. ಹೀಗೆ ಉರಿವ ರವಿಯ ಶಪಿಸುತ್ತಾ ಸೆಖೆಯಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಜನ ಹುಡುಕುತ್ತಿದ್ದಾರೆ. ಈ ದಾರಿಯಲ್ಲಿ ಜನಪ್ರಿಯಗೊಳ್ಳುತ್ತಿರುವುದು ಅಕ್ವಾ ಏರೊಬಿಕ್ಸ್‌.

ಫಿಟ್‌ನೆಸ್‌ ಹೆಚ್ಚಿಸುವ ವ್ಯಾಯಾಮ ಹಾಗೂ ಬಿಸಿಲಿನ ಬೇಗೆಗೆ ತಂಪೆರೆಯುವ ನೀರಿನ ಸಖ್ಯದಲ್ಲಿ ಜನಪ್ರಿಯಗೊಂಡಿರುವುದು ಈ ಅಕ್ವಾ ಏರೊಬಿಕ್ಸ್‌. ನೀರಿನಲ್ಲಿ ವಿವಿಧ ವ್ಯಾಯಾಮ, ಯೋಗ, ಜಿಮ್‌, ನೃತ್ಯ ಮಾಡುವ ರೂಢಿಯೂ ಇದೆ. ಕಳೆದ ಐದು ವರ್ಷಗಳಿಂದ ಅಕ್ವಾ ಏರೊಬಿಕ್ಸ್‌ ಪರಿಕಲ್ಪನೆಯನ್ನು ಬೆಂಗಳೂರಿನಲ್ಲಿ ಜನಪ್ರಿಯಗೊಳಿಸುತ್ತಿದ್ದಾರೆ ಪೂಜಾ ಅರೋರಾ.

ಮೊದಲಿನಿಂದಲೂ ದಪ್ಪಗಿದ್ದ ಪೂಜಾ ಅವರು ಸಣ್ಣಗಾಗಲು ಮಾಡಿದ ಯಾವ ಪ್ರಯತ್ನವೂ ಫಲ ನೀಡಲಿಲ್ಲ. ಅದೇ ಸಮಯದಲ್ಲಿ ಅಪಘಾತವೊಂದರಲ್ಲಿ ಅವರ ಮೊಣಕಾಲಿಗೂ ಏಟಾಯಿತು. ಆಗ ತೂಕ ಕಡಿಮೆ ಮಾಡಿಕೊಳ್ಳಲೇಬೇಕು ಎಂದು ವೈದ್ಯರು ತಾಕೀತು ಮಾಡಿ
ದರು. ಮೊಣಕಾಲು ನೋವಿದ್ದುದರಿಂದ ಅವರು ಎಲ್ಲರಂತೆ ವ್ಯಾಯಾಮ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ನೀರಿನಲ್ಲಿ ವ್ಯಾಯಾಮ ಮಾಡಬೇಕಾದ ಅನಿವಾರ್ಯತೆ ಎದುರಾಯಿತು.

ಸಿಂಗಪುರಕ್ಕೆ ತೆರಳಿ ಅಕ್ವಾ ಏರೊಬಿಕ್ಸ್‌ ಕಲಿತರು. ಅಂದಿನಿಂದ ತಮ್ಮ ತೂಕವನ್ನೂ ಇಳಿಸಿಕೊಂಡ ಅವರು ಅನೇಕರಿಗೆ ಈ ಕುರಿತಂತೆ ಫಿಟ್‌ನೆಸ್‌ ಪಾಠವನ್ನೂ ಹೇಳುತ್ತಾರೆ.

ಪ್ರಾರಂಭದಲ್ಲಿ ಅವರು ಅಕ್ವಾ ಏರೊಬಿಕ್ಸ್‌ ಕುರಿತಂತೆ ಯೂಟ್ಯೂಬ್‌ ಚಾನೆಲ್‌ ಪ್ರಾರಂಭಿಸಿದರು. ನಂತರ ಹೆಚ್ಚು ಜನರು ಅಕ್ವಾ ಏರೊಬಿಕ್ಸ್‌ನೆಡೆಗೆ ಗಮನಹರಿಸಿದರು.

‘ಬೆಂಗಳೂರಿನಲ್ಲಿ ಮೊದಲಿಗೆ ಆಸಕ್ತಿ ತೋರಿದವರು ಫ್ರೆಂಚ್‌ ಜನರು. ಆದರೆ ಈಗ ಫಿಟ್‌ನೆಸ್‌ ಬಗೆಗೆ ಕಾಳಜಿ ಇರುವ ಎಲ್ಲರೂ ಬರುತ್ತಾರೆ’ ಎನ್ನುತ್ತಾರೆ ಪೂಜಾ. ಇದರ ಉಪಯೋಗ ಏನು ಎನ್ನುವುದರ ಬಗೆಗೆ ಅವರು ಮೆಟ್ರೊದೊಂದಿಗೆ ವಿವರ ಹಂಚಿಕೊಂಡಿದ್ದಾರೆ.

*ಅತಿಹೆಚ್ಚು ತೂಕದಿಂದ ಬಳಲುತ್ತಿರುವವರು ನೀರಿನಲ್ಲಿ ವ್ಯಾಯಾಮ ಮಾಡುವುದು ಉತ್ತಮ. ಯಾಕೆಂದರೆ ನೀರಿನಲ್ಲಿ ದೇಹದ ತೂಕ ಕಡಿಮೆ ಆಗುತ್ತದೆ. ಗಂಟುನೋವಿನಂಥ ಸಮಸ್ಯೆಗಳು ಉಂಟಾಗುವುದಿಲ್ಲ.

*ಹೆಚ್ಚು ಕ್ಯಾಲರಿ ಬರ್ನ್‌ ಆಗುತ್ತದೆ.
*ಸ್ನಾಯುಗಳ ಶಕ್ತಿ ಹೆಚ್ಚುತ್ತದೆ. ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚುತ್ತದೆ.
*ರಕ್ತದೊತ್ತಡದ ಜತೆಗೆ ಖಿನ್ನತೆಯನ್ನೂ ಕಡಿಮೆಗೊಳಿಸುತ್ತದೆ.
*ಈ ವ್ಯಾಯಾಮ ಮಾಡುವುದಕ್ಕೆ ವಯಸ್ಸಿನ ಅಥವಾ ಕಾಲದ ಮಿತಿ ಇಲ್ಲ.  25 ವರ್ಷದಿಂದ 60 ವರ್ಷ ವಯೋಮಾನ
ದವರು ಈ ವ್ಯಾಯಾಮವನ್ನು ಮಾಡಬಹುದು.
*ಮೊಣಕಾಲು ನೋವು ಅಥವಾ ಇನ್ಯಾವುದೇ ಬಗೆಯ ಮೂಳೆಮುರಿತ ಸಮಸ್ಯೆಯಿಂದ ಬಳಲುತ್ತಿರುವವರೂ ಈ ವ್ಯಾಯಾಮ ಮಾಡಬಹುದು.
*ನೀರಿನಲ್ಲಿ ವ್ಯಾಯಾಮ ಮಾಡುವುದಕ್ಕೆ ಈಜು ತಿಳಿದಿರಲೇಬೇಕು ಎನ್ನುವ ನಿಯಮವಿಲ್ಲ.
*ಜಿಮ್‌ಗಳಲ್ಲಿ ವರ್ಕ್‌ಔಟ್ ಮಾಡುವವರಿಗೆ ಬೆನ್ನುನೋವು, ಭುಜನೋವು, ಕಾಲುನೋವಿನಂಥ ಸಮಸ್ಯೆ ಸಾಮಾನ್ಯ. ಆದರೆ ಇಲ್ಲಿ ಅಂಥ ಸಮಸ್ಯೆ ಇಲ್ಲ.
*ನೀರಿನಲ್ಲಿ ವ್ಯಾಯಾಮ ಮಾಡುವುದು ಮೋಜಿನಿಂದ ಕೂಡಿರುತ್ತದೆ. ಮನಸ್ಸಿಗೆ ಉಲ್ಲಾಸ, ದೇಹಕ್ಕೆ ವ್ಯಾಯಾಮ ಎರಡೂ ಆಗುತ್ತದೆ. ಫ್ರೆಶ್‌ ಎನ್ನುವ ಭಾವನೆ ಬರುವುದರ ಜೊತೆಗೆ ಬೇಸಿಗೆಯ ಬೇಗೆಯಿಂದ ಸಮಾಧಾನ ನೀಡುತ್ತದೆ.     

*ತಿಂಡಿ ತಿಂದ ಕೂಡಲೇ ನೀರಿನಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಸ್ವಲ್ಪ ಆಹಾರ ಸೇವಿಸಿ, 2 ಗಂಟೆಯ ಬಳಿಕ ನೀರಿನಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು.

* ತರಬೇತಿ ಪಡೆದೇ ಈ ವ್ಯಾಯಾಮ ಮಾಡಬೇಕು ಎನ್ನುವ ನಿಯಮವಿಲ್ಲ. ನೀರಿನ ಭಯ ಇಲ್ಲದವರು ಈ ವ್ಯಾಯಾಮವನ್ನು ಸ್ವಂತವಾಗಿ ಪ್ರಯತ್ನಿಸಬಹುದು. ಆದರೆ ಗುಂಪಿನಲ್ಲಿ ಈ ವ್ಯಾಯಾಮ ಮಾಡುವುದು ಹೆಚ್ಚು ಮೋಜಿನಿಂದ ಕೂಡಿರುತ್ತದೆ.
*ಎಲ್ಲಾ ಕಾಲದಲ್ಲಿಯೂ ಈ ವ್ಯಾಯಾಮವನ್ನು ಮಾಡಬಹುದು. ಆದರೆ ಹೆಚ್ಚಿನವರು ಬೇಸಿಗೆ ಕಾಲದಲ್ಲಿ ಅಕ್ವಾ ಏರೊಬಿಕ್ಸ್‌ ತರಗತಿಗೆ ಸೇರಿಕೊಳ್ಳುತ್ತಾರೆ. ಒಮ್ಮೆ ಇದರ ಮೋಜಿನ ಅನುಭವವಾದರೆ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ.
*ಮಹಿಳೆಯರು ನಾಚಿಕೆಯ ಪರಿಧಿ ದಾಟಿ ಈಜುಡುಗೆ ತೊಟ್ಟು, ಅಕ್ವಾ ವ್ಯಾಯಾಮಕ್ಕೆ ತೆರೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಜನರಲ್ಲಿ ಫಿಟ್‌ನೆಸ್‌ ಬಗೆಗೆ ಜಾಗೃತಿ ಮೂಡುತ್ತಿರುವುದಕ್ಕೆ ಇದೂ ಸಾಕ್ಷಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT