ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಗುಂಡಿ ಸ್ವಚ್ಛತೆಗೆ ಕಾರ್ಮಿಕರ ಬಳಕೆ

ಹರಿಹರ ನಗರಸಭೆ ಅಧಿಕಾರಿಗಳ ಅಮಾನವೀಯ ಕೃತ್ಯ
Last Updated 22 ಏಪ್ರಿಲ್ 2017, 3:47 IST
ಅಕ್ಷರ ಗಾತ್ರ
ಹರಿಹರ: ಒಳಚರಂಡಿ ಹಾಗೂ ಶೌಚದ ಗುಂಡಿಗಳ ಸ್ವಚ್ಛತೆಗೆ ಮಾನವ ಶಕ್ತಿಯನ್ನು ಬಳಸಿಕೊಳ್ಳದೇ, ಯಂತ್ರಗಳನ್ನು ಬಳಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರನ್ನು ಸುರಕ್ಷತಾ ಪರಿಕರಗಳನ್ನು ನೀಡದೇ ಒಳಚರಂಡಿ ಸ್ವಚ್ಛತೆಗೆ ಬಳಸಿಕೊಳ್ಳಲು ಶುಕ್ರವಾರ ಗುತ್ತೂರು ಕಾಲೊನಿಯಲ್ಲಿ ಯತ್ನಿಸಿದೆ.
 
ನಗರಸಭೆ ವ್ಯಾಪ್ತಿಯ ಗುತ್ತೂರಿನ ಲೇಬರ್ ಕಾಲೋನಿಯ ನಾಲ್ಕನೇ ಕ್ರಾಸ್‌ನ ಒಳಚರಂಡಿಯ ಶೌಚದ ಗುಂಡಿಯನ್ನು ಅಧಿಕಾರಿಗಳ ಅಣತಿ ಮೇರೆಗೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಸ್ವಚ್ಛಗೊಳಿಸಲು ಪೌರ ಕಾರ್ಮಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಇದನ್ನು ಸಾರ್ವಜನಿಕರು ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಿದ್ದಂತೆ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಆ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.
ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸಲು ಮಾನವ ಶಕ್ತಿಯನ್ನು ಬಳಸದೇ ಯಂತ್ರಗಳನ್ನು ಬಳಕೆ ಮಾಡುವಂತೆ ಆದೇಶವಿವೆ. ಆದರೂ, ಈ ಆದೇಶ ಪಾಲನೆ ಮಾಡದೇ ಪೌರಕಾರ್ಮಿಕರ ಆರೋಗ್ಯ ಹಾಗೂ ಜೀವದೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ನಗರದ ಹೊರವಲಯಲ್ಲಿದ್ದ ಗುತ್ತೂರು ಕಾಲೊನಿ ಹರ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿತ್ತು. 2015ರಲ್ಲಿ ಈ ಪ್ರದೇಶವನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಯಿತು. ನಗರಸಭೆ ವ್ಯಾಪ್ತಿಗೆ ಸೇರಿದಾಗಿನಿಂದ ಕಾಲೊನಿಯ ಸ್ವಚ್ಛತೆ ಮರಿಚಿಕೆಯಾಗಿದೆ.

ಒಳಚರಂಡಿಯ ಶೌಚಗುಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿವೆ. ಇವುಗಳನ್ನು ಸ್ವಚ್ಛಗೊಳಿಸುವುಂತೆ ನಗರಸಭೆ ಪೌರಾಯುಕ್ತರಿಗೆ ಹಾಗೂ ಪರಿಸರ ಎಂಜಿನಿಯರ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜೇಶ್‌ ಬೇಸರ ವ್ಯಕ್ತಪಡಿಸಿದರು.
 
ನಗರಸಭೆ ₹ 17 ಲಕ್ಷ ವೆಚ್ಚದಲ್ಲಿ ಶೌಚಗುಂಡಿಗಳನ್ನು ಸ್ಚಚ್ಛ ಗೊಳಿಸುವುದಕ್ಕಾಗಿ ಸಕ್ಕಿಂಗ್ ಯಂತ್ರವನ್ನು ಖರೀದಿಸಿತ್ತು. ಆ ಯಂತ್ರ ಇದ್ದರೂ, ಶೌಚಗುಂಡಿ ಸ್ವಚ್ಛತೆಗೆ ಪೌರಕಾರ್ಮಿಕರ ಬಳಕೆ ಮಾಡಿದ್ದಾರೆ.
****
‘ಮಾಹಿತಿ ಇಲ್ಲ’
ನಗರಸಭೆಯ ಸಕ್ಕಿಂಗ್ ಯಂತ್ರ ವಿಜಯನಗರ ಬಡಾವಣೆಯ ಲೇಬರ್ ಕಾಲೊನಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗುತ್ತೂರು ಲೇಬರ್ ಕಾಲೋನಿಯ ಶೌಚಗುಂಡಿಗಳ ಸ್ವಚ್ಛತೆಗೆ ಯಾರನ್ನೂ ನಿಯೋಜಿಸಿಲ್ಲ. ಸ್ವಚ್ಛತಾ ಕಾರ್ಯಕ್ಕೆ ಯಾರು ಹೋಗಿದ್ದರು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಗರಸಭೆಯ ಪರಿಸರ ಎಂಜಿನಿಯರ್‌ ಮಹೇಶ್ವರ ಕೋಡಬಾಳ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT