ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ

ಬಸವ ತತ್ವಜ್ಞಾನ ಪ್ರವಚನ ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಪಾಟೀಲ ಅಭಿಮತ
Last Updated 22 ಏಪ್ರಿಲ್ 2017, 4:36 IST
ಅಕ್ಷರ ಗಾತ್ರ
ಕಲಬುರ್ಗಿ: ‘ಶರಣರು ರಚಿಸಿದ ವಚನ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದ್ದು, ವಚನಗಳು ಸಾರಿರುವ ತತ್ವ ಮತ್ತು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ತಿಳಿಸಿದರು.
 
ಮಹಾನಗರ ಪಾಲಿಕೆ ಸಮೀಪದ ಬಸವೇಶ್ವರ ಮೂರ್ತಿ ಆವರಣದಲ್ಲಿ ಶುಕ್ರವಾರ 884ನೇ ಬಸವ ಜಯಂತಿ ಉತ್ಸವ ಸಮಿತಿ ಆಯೋಜಿಸಿದ್ದ ಬಸವ ತತ್ವಜ್ಞಾನ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರತಿಯೊಂದು ವಚನವು ಸಾಮಾಜಿಕ ಕಳಕಳಿ ಹೊಂದಿದೆ’ 
ಎಂದು ಹೇಳಿದರು.  
 
‘ಜಾತೀಯತೆ, ಮೌಢ್ಯ, ಅಂಧಶ್ರದ್ಧೆ ಕೊನೆಗಾಣಿಸಲು ಶರಣರು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಸಮಾಜವು ಜಾತಿ ಸಂಕೋಲೆಯಿಂದ ಹೊರಬರಬೇಕು. ಜಾತಿರಹಿತ ಸಮಾಜ ನಿರ್ಮಾಣಗೊಂಡು ಎಲ್ಲರೂ ಸಮಾನತೆಯ ತಳಹದಿ ಮೇಲೆ ಬಾಳಬೇಕು ಎಂದು ವಚನಕಾರರು ಬಯಸಿದ್ದರು’ ಎಂದರು.
 
‘12ನೇ ಶತಮಾನದಲ್ಲಿ ವಚನ ಕ್ರಾಂತಿ ನಡೆದರೂ ಸಾಮಾಜದಲ್ಲಿ ನಿರೀಕ್ಷಿತ ಬದಲಾವಣೆ ಆಗದಿರುವುದು ಬೇಸರದ ಸಂಗತಿ. ಈಗಲೂ ಜನರು ಜಾತಿ, ಧರ್ಮದೊಂದಿಗೆ ಗುರುತಿಸಿಕೊಂಡು ಸಂಕುಚಿತರಾಗುತ್ತಿರುವುದು ವಿಷಾದನೀಯ. ವಚನಗಳ ಮಹತ್ವವನ್ನು ಅರಿತು ಪ್ರತಿಯೊಬ್ಬರು ಜಾಗೃತರಾಗಬೇಕಾದ ಅಗತ್ಯವಿದೆ’ ಎಂದರು.
 
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ‘ಜಾತಿ, ಕುಲ, ಪಂಗಡದಲ್ಲಿ ಬಂಧಿಯಾದ ಪ್ರತಿಯೊಬ್ಬರು ಬಿಡುಗಡೆಯತ್ತ ಚಿಂತನೆ ಮಾಡಬೇಕಿದೆ. ಸಂಕುಚಿತ ಮನಸ್ಥಿತಿಯಿಂದ ಸಮಾಜಕ್ಕೆ ಹಿನ್ನಡೆಯಾಗುತ್ತದೆ. ಬಸವಣ್ಣ ಸಾರಿದ ತತ್ವದಂತೆ ಜೀವನ ರೂಪಿಸಿಕೊಳ್ಳಬೇಕಿದೆ’ ಎಂದರು.
 
ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಶರಣು ಸಲಗರ ಮಾತನಾಡಿ, ‘ಬಸವಣ್ಣ, ಕನಕದಾಸ, ಅಂಬೇಡ್ಕರ್‌ ರಂತಹ ಮಹನೀಯರನ್ನು ಜಾತಿ, ಧರ್ಮದ ಮೂಲಕ ಗುರುತಿಸುವುದು ಸರಿಯಲ್ಲ. ಆಯಾ ಜಾತಿ, ಸಮುದಾಯದವರು ಮಾತ್ರವೇ ಆ ಮಹನೀಯರ ಜಯಂತಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು. 
 
‘ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಆ ಮಹನೀಯರನ್ನು ಎಲ್ಲ ಜಾತಿ, ಧರ್ಮದವರು ಸ್ಮರಿಸಬೇಕು. ಕೇವಲ ಜಯಂತಿ ಆಚರಿಸಿದರಷ್ಟೇ ಸಾಲದು, ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಆಗ ಅವರಿಗೆ ಪೂರ್ಣಪ್ರಮಾಣದಲ್ಲಿ ಗೌರವ ಸಲ್ಲಿಸಿದಂತಾಗುತ್ತದೆ’ ಎಂದರು.
ಬೀದರ್ ಬಸವಗಿರಿ ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಪಾಟೀಲ ಸಾನ್ನಿಧ್ಯ ವಹಿಸಿದ್ದರು.

ಮಹಾಸಭಾದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ, ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ, ಜೆಡಿಎಸ್‌ ಮುಖಂಡ ನಾಸೀರ ಹುಸೇನ್ ಉಸ್ತಾದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಮೇಶ ನಾಗನಳ್ಳಿ, ವೀರಶೈವ ಸಮಾಜದ ಮುಖಂಡರಾದ ಶರಣು ಪಪ್ಪಾ, ಮಂಜುನಾಥ ರೆಡ್ಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಜಯಂತ್ಯುತ್ಸವ ಜಿಲ್ಲಾ ಸಮಿತಿ ಅಧ್ಯಕ್ಷ ವಿಶಾಲ ಎಸ್‌.ನವರಂಗ, ಬಸವ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಈರಣ್ಣ ಗೊಳೇದ್ ಇದ್ದರು. 
****
‘ಅಭಿವೃದ್ಧಿಗೆ ಆದ್ಯತೆ’
‘ಮಹಾನಗರ ಪಾಲಿಕೆ ಕಚೇರಿ ಬಳಿ ಇರುವ ಬಸವೇಶ್ವರ ಮೂರ್ತಿ ಆವರಣವನ್ನು ಅಭಿವೃದ್ಧಿಪಡಿಸಲು ವಿಶೇಷ ಆದ್ಯತೆ ನೀಡಲಾಗುವುದು’ ಎಂದು ಮೇಯರ್‌ ಶರಣಕುಮಾರ ಮೋದಿ ಭರವಸೆ ನೀಡಿದರು.

‘ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಲಭ್ಯವಿರುವ ಅನುದಾನ ಸದ್ಬಳಕೆ ಮಾಡಿಕೊಂಡು ಆವರಣಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT