ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಮಣ್ಣಿನ ಸಂರಕ್ಷಣೆಯ ‘ಲಾಭದಾಯಕ ತೋಟ’

ಹೊಲದ ಮೇಲ್ಪದರದ ಫಲವತ್ತ ಮಣ್ಣಿನ ರಕ್ಷಣೆಗೂ ಪರಿಣಾಮಕಾರಿ ಕ್ರಮವಹಿಸಿದ ರೈತ ರಾಜೀವ್ ಡೊಂಕಣ್ಣನವರ
Last Updated 22 ಏಪ್ರಿಲ್ 2017, 6:58 IST
ಅಕ್ಷರ ಗಾತ್ರ
ಹಾವೇರಿ: ಸತತ ಮೂರನೇ ವರ್ಷಕ್ಕೆ ಕಾಲಿಟ್ಟ ಬರ, 40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ, ಎಲ್ಲೆಲ್ಲೂ ನೀರಿಗೆ ಹಾಹಾಕಾರ... ಇಂತಹ ವಾತಾವರಣದಲ್ಲಿ ಹಚ್ಚ ಹಸಿರಾಗಿ ಬೆಳೆದು ನಳನಳಿಸುತ್ತಿರುವ ಬಾಳೆಗಿಡಗಳು, ನಡು ನಡುವೆ ಚಿಕ್ಕು, ಮಾವು, ಪೇರಲೆ (ಸೀಬೆಕಾಯಿ), ಬದುವಿನಲ್ಲಿ ಮೇವಿನ ಹುಲ್ಲು, ಸಮೀಪದಲ್ಲೇ ಸಿಲ್ವರ್‌ ಗಿಡ, ಮೂರು ಬದಿಯಲ್ಲಿ ತೆಂಗು...
 
ಇದು, ಕರ್ಜಗಿಯಿಂದ ಹಾವೇರಿಗೆ ಬರುವ ರಸ್ತೆಯ ಸುಮಾರು 2 ಕಿ.ಮೀ ದೂರದಲ್ಲಿ ಬಲ ಬದಿಗೆ ಕಾಣುವ ರಾಜೀವ್‌ ಸಿ. ಡೊಂಕಣ್ಣನವರ ತೋಟಗಾರಿಕಾ ಬೆಳೆ. ಎಲ್ಲೆಡೆ ನೀರಿನ ಸಮಸ್ಯೆಯಿಂದ ರೈತರು ಕೃಷಿಯನ್ನು ಕೈ ಬಿಡುತ್ತಿದ್ದರೆ, ಅಲ್ಪ ನೀರಿನಲ್ಲೇ ಉತ್ತಮ ಬೆಳೆ ತೆಗೆಯಲು ರೈತ ರಾಜೀವ್ ಸಿ. ಡೊಂಕಣ್ಣನವರ ಪಣ ತೊಟ್ಟಿದ್ದಾರೆ. ತೋಟಗಾರಿಕಾ ಇಲಾಖೆಯ ಸಹಕಾರದ ಜೊತೆ ಅವರು ನೀರಿನ ಬಳಕೆ ಮತ್ತು ಫಲವತ್ತತೆಯ ಸಂರಕ್ಷಣೆಗೆ ಅನುಸರಿಸಿದ ವಿಧಾನವೇ ಮಾದರಿಯಾಗಿದೆ. 
 
ಸುಮಾರು ಮೂರು ಎಕರೆ ತೋಟದಲ್ಲಿ ಚಿಕ್ಕು, ಮಾವು, ಪೇರಲೆ ಬೆಳೆದಿದ್ದಾರೆ. ಈ ತೋಟಗಾರಿಕಾ ಬೆಳೆಗಳ ಫಸಲು ಕೈಗೆ ಸಿಗಲು ಸುಮಾರು ಮೂರು ವರ್ಷ ಬೇಕು. ಹೀಗಾಗಿ ನಡುವೆ ಸುಮಾರು 1,600 ಬಾಳೆಗಿಡಗಳನ್ನು ಹಾಕಿದ್ದಾರೆ. ಈ ತೋಟಕ್ಕೆ ಏಕೈಕ ಕೊಳವೆಬಾವಿಯ ನೀರನ್ನು ಅವಲಂಬಿಸಿದ್ದಾರೆ.
 
ಆದರೆ, ಹನಿ ನೀರೂ ವ್ಯರ್ಥವಾಗದಂತೆ ಇಡೀ ಹೊಲಕ್ಕೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ಹೀಗಾಗಿ ಪ್ರತಿ ಹನಿ ನೀರು ಗಿಡದ ಬುಡಕ್ಕೆ ಬೀಳುತ್ತದೆ. ಬಿರುಬಿಸಿಲಿನಲ್ಲೂ ಬಿದ್ದ ಹನಿ ನೀರು ನೇರವಾಗಿ ಬೇರಿಗೆ ಸೇರುತ್ತದೆ. ಇದರಿಂದ ನೀರಿನ ನಷ್ಟವಿಲ್ಲ. 
 
ಕೈಕೊಡುವ ವಿದ್ಯುತ್: ಕೊಳವೆಬಾವಿ ಪಂಪ್‌ಗೆ ತ್ರಿಫೇಸ್ ವಿದ್ಯುತ್ ಅನಿವಾರ್ಯ. ಆದರೆ, ಆಗಾಗ್ಗೆ ವಿದ್ಯುತ್ ಕೈಕೊಡುವುದು ಸಾಮಾನ್ಯ. ಲೋಡ್‌ ಶೆಡ್ಡಿಂಗ್ ಅವಧಿ ಬದಲಾವಣೆ ಆಗುವ ಪರಿಣಾಮ ಪಂಪ್ ಚಾಲನೆ ಮಾಡುವುದೇ ಒಂದು ಕೆಲಸ. ಅದಕ್ಕಾಗಿ ಅಟೊಮೆಟಿಕ್ ತಂತ್ರಜ್ಞಾನ ಅಳವಡಿಸಿದ್ದಾರೆ. ಯಾವುದೇ ಕ್ಷಣದಲ್ಲಿ ವಿದ್ಯುತ್ ಬಂದರೂ ಪಂಪ್‌ ತನ್ನಿಂದತಾನೇ ಚಾಲನೆಗೊಳ್ಳುತ್ತದೆ. ನೀರು ನೇರವಾಗಿ ಗಿಡಗಳ ಬುಡಕ್ಕೆ ಸೇರುತ್ತದೆ. 
 
‘ಮಧ್ಯರಾತ್ರಿ 12ಕ್ಕೆ ವಿದ್ಯುತ್ ಕೊಡುತ್ತಾರೆ. ರಾತ್ರಿ ಹೊಲಕ್ಕೆ ಹೋಗಿ ಪಂಪ್ ಚಾಲನೆ ಮಾಡುವ ಕೆಲಸವಿಲ್ಲ. ಅದಾಗಿಯೇ ಚಾಲುಗೊಳ್ಳುತ್ತದೆ’ ಎನ್ನುತ್ತಾರೆ ರಾಜೀವ್ ಸಿ. ಡೊಂಕಣ್ಣನವರ. 
 
ಕೃಷಿ ಹೊಂಡ: ಹೊಲದಲ್ಲಿ ಬಿದ್ದ ಹೆಚ್ಚುವರಿ ನೀರು, ಮಳೆ ನೀರು ಹರಿದು ಹೊರಹೋಗಬಾರದು ಎಂಬ ಕಾರಣಕ್ಕೆ ಕೃಷಿ ಹೊಂಡ ನಿರ್ಮಿಸಿದ್ದಾರೆ. ಅಚ್ಚುಕಟ್ಟಾಗಿ ನಿರ್ಮಿಸಿದ ಕೃಷಿ ಹೊಂಡದಲ್ಲಿ ಹೆಚ್ಚುವರಿಯಾಗಿ ಬಿದ್ದ ನೀರು ಸಂಗ್ರಹಗೊಳ್ಳುತ್ತದೆ. ಒಂದೆಡೆ ನೀರು ಇಂಗುತ್ತದೆ. ಹೊಂಡದಲ್ಲಿ ನೀರು ನಿಂತರೆ ಮರಳಿ ಹೊಲಕ್ಕೆ ಹಾಯಿಸುತ್ತಾರೆ.
 
ಮಣ್ಣಿನ ಸಂರಕ್ಷಣೆ: ಕೇವಲ ನೀರು ಮಾತ್ರವಲ್ಲ, ಹೊಲದ ಮೇಲ್ಪದರದ ಫಲವತ್ತ ಮಣ್ಣಿನ ರಕ್ಷಣೆಯನ್ನೂ ಮಾಡಿದ್ದಾರೆ. ಮಳೆಗಾಲದಲ್ಲಿ ಹೊಲದ ಮೇಲ್ಪದರದ ಫಲವತ್ತ ಮಣ್ಣು ಕೊಚ್ಚಿ ಹೋದರೂ, ತೋಟದ ಕೆಳಗಿರುವ ಕೃಷಿಹೊಂಡದಲ್ಲಿ ಸಂಗ್ರಹಗೊಳ್ಳುತ್ತದೆ. ಅಲ್ಲಿಂದ ಹೂಳನ್ನು ಮತ್ತೆ ಹೊಲಕ್ಕೆ ಹಾಕುತ್ತಾರೆ. ಹೀಗಾಗಿ ಮಣ್ಣಿನ ಸಂರಕ್ಷಣೆಯೂ ಸಾಧ್ಯವಾಗಿದೆ. 
 
ಬದುಗಳಲ್ಲಿ ಹುಲ್ಲು: ಹೊಲದ ಬದುಗಳಲ್ಲಿ ಮೇವಿನ ಹುಲ್ಲನ್ನು ಹಾಕಿದ್ದಾರೆ. ಇದು ಮಣ್ಣಿನ ಸಂರಕ್ಷಣೆ ಮಾಡುತ್ತದೆ. ಇನ್ನೊಂದೆಡೆ ಹೊಲದ ಕೆಳ ಭಾಗದ ಉದ್ದಕ್ಕೂ ಸುಮಾರು ಐದಡಿ ಜಾಗದಲ್ಲಿ ಹುಲ್ಲು ಬೆಳೆದಿದ್ದಾರೆ. ಇದರಿಂದ ನೀರು ಬಹುತೇಕ ಸೋಸಿ ಹೋಗುತ್ತದೆ. ಹೊಲದ ಮಣ್ಣು ಬಹುತೇಕ ಇಲ್ಲೇ ಉಳಿಯುತ್ತದೆ. ಮಣ್ಣಿನ ಸವಕಳಿ ತಡೆಯೂ ಸಾಧ್ಯವಾಗಿದೆ. 
 
‘ನಮ್ಮಲ್ಲಿ ಆರು ಹಸುಗಳಿವೆ. ಹೊಲದ ಬದು, ಬದಿಗಳ ಹುಲ್ಲನ್ನು ಹಸುಗಳಿಗೆ ಬಳಸುತ್ತೇವೆ. ಪ್ರತಿನಿತ್ಯ ಡೇರಿಗೆ ಹಾಲು ಹಾಕುತ್ತೇವೆ’ ಎಂದು ರೈತ ರಾಜೀವ್ ಸಿ. ಡೊಂಕಣ್ಣನವರ ತಮ್ಮ ಉಪಕಸುಬಿಸನ ಬಗ್ಗೆ ವಿವರಿಸಿದರು. 
 
ಮಿಶ್ರ ಬೆಳೆ: ತೋಟದಲ್ಲಿ ಚಿಕ್ಕು, ಮಾವು, ಪೇರಲೆಯ ಮಧ್ಯೆ ಬಾಳೆ ಗಿಡಗಳನ್ನು ಹಾಕಿ ವಾರ್ಷಿಕ ಬೆಳೆ ತೆಗೆಯುತ್ತಿದ್ದಾರೆ. ಇದರಿಂದ ಅವಧಿ ಪೂರ್ವದಲ್ಲೇ ಆದಾಯ ಪಡೆಯುವ ಯೋಜನೆ ಅವರದ್ದು. ಹೊಲದ ಬದಿಯಲ್ಲಿ ಸಿಲ್ವರ್, ಹೆಬ್ಬೇವು ಗಿಡಗಳನ್ನೂ ಹಾಕಿದ್ದಾರೆ. ಇದು ದೀರ್ಘಾವಧಿಯಲ್ಲಿ ಹೆಚ್ಚುವರಿ ಲಾಭವಾಗಲಿದೆ. ಹೊಲದ ಮೂರು ಸುತ್ತ ಐದಡಿ ಅಂತರದಲ್ಲಿ ತೆಂಗು ನಾಟಿ ಮಾಡಿದ್ದಾರೆ. ಭವಿಷ್ಯದಲ್ಲಿ ತೆಂಗು ಅವರ ಕೈ ಹಿಡಿಯಲಿದೆ. 
 
‘ತೋಟವು ತಂದೆ ಚೆನ್ನವೀರಪ್ಪ ಚೆನ್ನಬಸಪ್ಪ ಡೊಂಕಣ್ಣನವರ ಹೆಸರಿನಲ್ಲಿದೆ. ತೋಟಗಾರಿಕೆ, ಕೃಷಿ ಇಲಾಖೆಯ ಸಬ್ಸಿಡಿಗಳ ಸಹಾಯವನ್ನೂ ಪಡೆದಿದ್ದೇವೆ’ ಎನ್ನುತ್ತಾರೆ ಅವರು. 
 
ಹೀಗೆ, ಮೂರು ಎಕರೆ ತೋಟದಲ್ಲಿ ನೀರು ಮತ್ತು ಮಣ್ಣಿನ ಸಂಕ್ಷಣೆ ಮಾಡಿಕೊಂಡು, ಮಿಶ್ರ ಬೆಳೆ ತೆಗೆಯುತ್ತಿದ್ದಾರೆ. ಬರದ ಛಾಯೆಯಲ್ಲೂ ಲಾಭದಾಯಕ ಕೃಷಿ ಮಾಡುವ ಉದ್ದೇಶ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT