ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡಿ’

ಕಾನೂನು–ಸುವ್ಯವಸ್ಥೆಗೆ ಧಕ್ಕೆ: ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಪ್ರತಿಭಟನೆ
Last Updated 22 ಏಪ್ರಿಲ್ 2017, 7:30 IST
ಅಕ್ಷರ ಗಾತ್ರ
ಬಾಗಲಕೋಟೆ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 
 
ನಗರದ ಶಿವಾನಂದ ಜಿನ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಸವೇಶ್ವರ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಕೆಲಕಾಲ ರಸ್ತೆ ತಡೆ ನಡೆಸಿದರು.
 
ಎಬಿವಿಪಿ ನಗರ ಕಾರ್ಯದರ್ಶಿ ಪ್ರಕಾಶ ಪೂಜಾರ ಮಾತನಾಡಿ, ‘ಶಾಂತಿ ಹಾಗೂ ದಕ್ಷ ಆಡಳಿತ ವ್ಯವಸ್ಥೆಗೆ ಈ ಹಿಂದೆ ಕರ್ನಾಟಕ ಹೆಸರಾಗಿತ್ತು. ಆದರೆ, ಇತ್ತೀಚೆಗೆ ಮರಳು ಮಾಫಿಯಾದಿಂದ ಉಡುಪಿ ಜಿಲ್ಲಾಧಿಕಾರಿ ಕೊಲೆ ಯತ್ನ, ಮಂಗಳೂರಿನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ ಮೇಲೆ ದಾಳಿ ನಡೆದಿದೆ.
 
ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಮೇಲೆ ಪಡಿತರ ಅಕ್ಕಿ ಮಾಫಿಯಾ ನಡೆಸಿದ ಕೊಲೆ ಯತ್ನ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಆದರೆ ಸರ್ಕಾರ ಮಾತ್ರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ ತೋರುತ್ತಿದೆ’ ಎಂದು ಆರೋಪಿಸಿದರು.
 
‘ಪ್ರಾಮಾಣಿಕ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಆತ್ಮಹತ್ಯೆಯಂತಹ ಘಟನೆಗಳಿಗೆ ಕೆಲ ಸಚಿವರು ಮತ್ತು ಶಾಸಕರೇ ಪರೋಕ್ಷವಾಗಿ ಕಾರಣವಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ. ಇದು ಖಂಡನೀಯ’ ಎಂದರು.
 
‘ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸಂಘಟನೆಯೊಂದರ ಮೇಲೆ ದಾಖಲಾಗಿದ್ದ ಕೆಲವು ಪ್ರಕರಣಗಳನ್ನು ಸರ್ಕಾರ ಕೇವಲ ರಾಜಕೀಯ ಕಾರಣಕ್ಕಾಗಿ ಹಿಂಪಡೆದಿದೆ. ಕೆಲ ರಾಜಕೀಯ ನಾಯಕರ ಹಿಂಬಾಲಕರು ಪ್ರಾಮಾಣಿಕ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ’ ಎಂದು ಆರೋಪಿಸಿದರು. 
 
‘ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಶೇಷ ಒತ್ತು ನೀಡಿ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ, ಹಲ್ಲೆ, ಕೊಲೆ ಯತ್ನದ ಭಾಗ್ಯಗಳಿಗೆ ಅವಕಾಶ ನೀಡದೇ ನೈತಿಕವಾಗಿ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಬೇಕು. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಯಾವುದೇ ಸಂಘಟನೆಯನ್ನು ಓಲೈಕೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
 
ಸಂಘಟನೆಯ ಮುಖಂಡರಾದ ಪ್ರಶಾಂತ್ ಮುತ್ತಕ್ಕನವರ, ನೀಲಪ್ಪ, ರಂಜಿತ್, ವಿನಾಯಕ, ಸಚಿನ್, ವಿದ್ಯಾ, ಭೀಮಾ, ಮೇಘಾ, ಪಲ್ಲವಿ, ಅಪೂರ್ವ, ಕಾವ್ಯಾ, ರೋಷನ್, ಅರ್ಪಿತಾ, ಅನ್ವಿತಾ, ಐಶ್ವರ್ಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT