ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಪ್ಪು ಹಣ ಜಾಲದಲ್ಲಿ ಸಿಎಂ ಆಪ್ತರು’ ನಾಗರಾಜ್‌ ಹೊಸ ‘ಬಾಂಬ್’

Last Updated 22 ಏಪ್ರಿಲ್ 2017, 12:48 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಪ್ರಕರಣವೊಂದರ ಸಂಬಂಧ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ ವೇಳೆ ಪರಾರಿಯಾಗಿದ್ದ ಮಾಜಿ ಕಾರ್ಪೊರೇಟರ್‌ ವಿ. ನಾಗರಾಜ್‌ ಅಜ್ಞಾತ ಸ್ಥಳದಿಂದ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ‘ಪೊಲೀಸರು ಕಪ್ಪು ಹಣದ ಕತೆ ಹೆಣೆದು ನನ್ನನ್ನು ಎನ್‌ಕೌಂಟರ್‌ ಮಾಡಲು ಬಂದಿದ್ದರು’ ಎಂದು ಹೊಸ ‘ಬಾಂಬ್‌’ ಸಿಡಿಸಿದ್ದಾರೆ. ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಮಂಜುನಾಥ್‌ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ.

ನಾಗರಾಜ್‌ ಪರ ವಕೀಲ ಸಿ.ಡಿ. ಬಿಡುಗಡೆ ಮಾಡಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಟಿವಿ9 ಸುದ್ದಿ ಹಾಗೂ ವಿಡಿಯೊ ಪ್ರಸಾರ ಮಾಡಿದೆ. ವಿಡಿಯೊದಲ್ಲಿ ನಾಗರಾಜ್‌ ಮಾತನಾಡಿ, ‘ನನ್ನ ಎನ್‌ಕೌಂಟರ್‌ಗೆ ₹ 10 ಕೋಟಿಯ ಡೀಲ್‌ ನಡೆದಿದೆ. ನಾನು ಪರಾರಿಯಾಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ನಾನು ಬೆಂಗಳೂರು ಬಿಟ್ಟು ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೇನೆ’ ಎಂದು ಹೇಳಿದ್ದಾರೆ.

‘ಕಪ್ಪು ಹಣ ಬಿಳಿಯಾಗಿಸುವಲ್ಲಿ ಮೂವರು ಐಎಎಸ್‌, ಐಪಿಎಸ್‌ ಅಧಿಕಾರಿಗಳೂ ಇದ್ದಾರೆ. ಪೊಲೀಸ್‌ ಅಧಿಕಾರಿಗಳೇ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ನನ್ನ ಬಳಿ ಬರುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮಂಜುನಾಥ್‌ ಅವರು ಹಣವನ್ನು ಉಮೇಶ್‌ ಮತ್ತು ಕಿಶೋರ್‌ ಮೂಲಕ ಕಳುಹಿಸುತ್ತಿದ್ದರು. ನನ್ನ ಮನೆಗೆ ಬರುವ ವೇಳೆ ಸಿ.ಸಿ.ಟಿವಿ ಕ್ಯಾಮೆರಾ ಬಂದ್‌ ಮಾಡುತ್ತಿದ್ದೆ. ಕತ್ತಲಲ್ಲಿ ಬಂದು ಹೋಗುತ್ತಿದ್ದರು’ ಎಂದಿದ್ದಾರೆ.

‘ನಾನು ವಾಸವಿರುವುದು ಶ್ರೀರಾಂಪುರದಲ್ಲಿ ಆದರೆ, ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಸರ್ಚ್‌ ವಾರೆಂಟ್‌ ಪಡೆದು ಪೊಲೀಸರು ಮನೆಗೆ ಬಂದಿದ್ದರು. ಅಂದು ನಾನು ಊರಿಗೆ ಹೋಗಿದ್ದೆ. ತಪ್ಪಿಸಿಕೊಂಡು ಹೋಗಿಲ್ಲ‘ ಎಂದು ಹೇಳಿದ್ದಾರೆ.

‘ನಕಲಿ ಎನ್‌ಕೌಂಟರ್‌ ಮಾಡಲು ಪೊಲೀಸರು ಸಂಚು ರೂಪಿಸಿದ್ದರು. ಈ ಹಿಂದೆ ರಾಜ್ಯದಲ್ಲಿ 10–15 ನಕಲಿ ಎನ್‌ಕೌಂಟರ್‌ಗಳನ್ನು ಪೊಲೀಸರು ಮಾಡಿದ್ದಾರೆ. ಅದೇ ರೀತಿ ನನ್ನ ಎನ್‌ಕೌಂಟರ್‌ ಮಾಡಲು ಮಾಡಿದ ಪ್ಲಾನ್‌ ಇದು’ ಎಂದಿದ್ದಾರೆ. 

‘ಮುಂದೆ ಚುನಾವಣೆ ಬರುತ್ತಿದೆ. ನಾಗರಾಜ್‌ ಮೇಲೆ ಗೂಬೆ ಕೂರಿಸಿ ಗಾಂಧಿನಗರದಿಂದ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಈ ಕೆಲಸ ಮಾಡಿದ್ದಾರೆ. ಪ್ರತಿಷ್ಠಿತ ಕ್ಷೇತ್ರ ಗಾಂಧಿನಗರದಲ್ಲಿ ನಾನು ಸ್ಪರ್ಧಿಸದಂತೆ ಉದ್ದೇಶ ಪೂರ್ವಕವಾಗಿ ಕತೆ ಕಟ್ಟಿದ್ದಾರೆ’ ಎಂದಿದ್ದಾರೆ.

‘ದಾಳಿ ವೇಳೆ ನನ್ನ ಮನೆಯ ಬೀಗ ಮುರಿದಿದ್ದಾರೆ. ಅಷ್ಟು ದುಡ್ಡನ್ನು ಪೊಲೀಸರು ಹೇಗೆ ಅಲ್ಲಿಗೆ ತಂದಿಟ್ಟರು? ಪೊಲೀಸರೇ ಹಣ ತಂದಿಟ್ಟು ನನ್ನದು ಎಂದು ತೋರಿಸಿದ್ದಾರೆ. ಅಲ್ಲಿ ನನ್ನ ಹೊಸ ನೋಟಿನ ಹಣವೂ ಇತ್ತು, ಅದನ್ನೂ ಸೇರಿಸಿ ಬಾಚಿಕೊಂಡುಹೋಗಿದ್ದಾರೆ. ನನ್ನ ಹಣ ಎಷ್ಟೋ ಇತ್ತು...’ ಎಂದು ಹೇಳಿದ್ದಾರೆ.

‘ಪೊಲೀಸರು ಕಾಸಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಕಾಸು ಪಡೆದು ನನ್ನ ವಿರುದ್ಧ ಗೂಬೆ ಕೂರಿಸಿದ್ದಾರೆ’ ಎಂದು ಪೊಲೀಸರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿರುವ ನಾಗರಾಜ್‌, ‘ನನ್ನ ಮೇಲೆ ಗೂಬೆ ಕೂರಿಸಿದರೆ ನಿನ್ನ ಹೆಂಡತಿ ಮಕ್ಕಳು ಕಷ್ಟ ಅನುಭವಿಸುತ್ತಾರೆ. ನಾನು ದಾನ, ಧರ್ಮದ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT