ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಗೂ ಬಸವಳಿದ ‘ರಥಯಾತ್ರಿ’

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವಿಭಜನಾಪೂರ್ವ ಭಾರತದ ಕರಾಚಿಯಲ್ಲಿ ಜನಿಸಿ ದೇಶವಿಭಜನೆಯ ಕಾಲದಲ್ಲಿ ಮುಂಬೈಗೆ ಬಂದಿಳಿದಾಗ ಲಾಲ್ ಕೃಷ್ಣ ಅಡ್ವಾಣಿ ಅವರ ವಯಸ್ಸು ಇಪ್ಪತ್ತರ ಆಸುಪಾಸು. ಸಮರಕಲೆಯಲ್ಲಿ ನಿಸ್ಸೀಮರಾದ ಮಹಾಯೋಧರನ್ನು ಹಿಂದೂ ಪುರಾಣಗಳಲ್ಲಿ ಅತಿಮಹಾರಥಿ, ಮಹಾ ಮಹಾರಥಿ ಎಂದು ಬಣ್ಣಿಸಿರುವುದುಂಟು. ಕರಾಚಿಯಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪಳಗಿದ್ದ ಸಿಂಧೀ ವ್ಯಾಪಾರಿ ಕುಟುಂಬದ ಅಡ್ವಾಣಿ ವಿಭಜನೆಯ ನಂತರದ ಭಾರತದ ಹಿಂದೂಕೇಂದ್ರಿತ ರಾಜಕಾರಣದ ಮಹಾ ಮಹಾರಥಿಯಾಗಿ ವಿಜೃಂಭಿಸಿದರು.

‘ಹಿಂದೂರಾಷ್ಟ್ರ’ ವನ್ನು ಪರಮ ವೈಭವದ ಸ್ಥಿತಿಗೆ ಏರಿಸಬೇಕೆಂಬ ಹೋರಾಟದ ದಾರಿಯಲ್ಲಿ ಜರುಗಿದ ಬಾಬರಿ ಮಸೀದಿ ಧ್ವಂಸ ಪ್ರಕರಣ ಇದೀಗ ಎಂಬತ್ತೊಂಬತ್ತರ ಇಳಿವಯಸ್ಸಿನಲ್ಲಿ ಅವರನ್ನು ಕಟಕಟೆಗೆ ಹತ್ತಿಸಿದೆ. ಪಾಕಿಸ್ತಾನದ ಜನಕ ಮಹಮ್ಮದ್‌ ಅಲಿ ಜಿನ್ನಾ ಅವರನ್ನು ಜಾತ್ಯತೀತ ಎಂದು ಕರೆದ ‘ಅಪರಾಧ’ ಅವರ ಹೆಬ್ಬಯಕೆಯನ್ನು ಬಲಿ ತೆಗೆದುಕೊಂಡಿತು.

ಒಂದರ ನಂತರ ಮತ್ತೊಂದರಂತೆ ಅಕ್ಷರಶಹ ಆರು ರಥಗಳನ್ನು ಏರಿ ಹಿಂದೂವಾದದ ಅಶ್ವಮೇಧದ ಕುದುರೆಯನ್ನು ಬಿಟ್ಟು ದೇಶವನ್ನು ಬಿಜೆಪಿಗೆ ಗೆದ್ದು ಕೊಟ್ಟರು. ಆದರೆ ಬೆನ್ನಟ್ಟಿ ಬರಬೇಕಿದ್ದ ಸಿಂಹಾಸನ ಇವರಿಂದ ದೂರ ದೂರವೇ ಸರಿಯಿತು. ತಾವು ಮುಂದೆ ನಿಂತು ಕೊರಳು ಕಾದಿದ್ದ ನೆಚ್ಚಿನ ಶಿಷ್ಯನೇ ತಮ್ಮ ಮಹತ್ವಾಕಾಂಕ್ಷೆಗೆ ಗೋರಿ ತೋಡಿದ ದುರಂತ ಅವರದು.

ರಾಮರಥವನ್ನು ಗ್ರಾಮ ಭಾರತಕ್ಕೆ ನುಗ್ಗಿಸಿ ಭಾವನೆಗಳನ್ನು ಬಡಿದೆಬ್ಬಿಸಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಅಡ್ವಾಣಿ. ಕಟ್ಟರ್ ಹಿಂದೂವಾದಿಯಾದ ತಾವು, ಮಿತ್ರಪಕ್ಷಗಳಿಗೆ ಸಮ್ಮತವಲ್ಲ ಎಂದು ಅರಿತು ಉದಾರವಾದಿ ವಾಜಪೇಯಿಯ ನೆರಳಿಗೆ ಸರಿದವರು. ಮರೆಯಿಂದಲೇ ಗುರಿ ಹೊಡೆಯುತ್ತಿದ್ದವರು. ಬಹು ನಿರೀಕ್ಷೆಯಿಂದ ಕಾದು ನಿಂತರೂ ಅವರ ಸರದಿ ಬರಲೇ ಇಲ್ಲ.

ಅಟಲ್ ಬಿಹಾರಿ ವಾಜಪೇಯಿ ಶರಶಯ್ಯೆಯ ಮೇಲೆ ಮಲಗಿದ ನಂತರ ಅಡ್ವಾಣಿಯವರೇ ಬಿಜೆಪಿಯ ಸಕ್ರಿಯ ಪಿತಾಮಹ ಎನಿಸಿದ್ದರು. ಮಹಮ್ಮದ್‌ ಅಲಿ  ಜಿನ್ನಾ ಅವರನ್ನು ಜಾತ್ಯತೀತ ನಾಯಕ ಎಂದು ಕರೆದು ಸಂಘದ ಕೆಂಗಣ್ಣಿಗೆ ಗುರಿಯಾಗಿದ್ದ ಅಡ್ವಾಣಿ ಅವರು ಪಕ್ಷದಲ್ಲಿ ನರೇಂದ್ರ ಮೋದಿ
ಯವರ ಪಟ್ಟಾಭಿಷೇಕವನ್ನು ಬಹಿರಂಗವಾಗಿ ವಿರೋಧಿಸಿದ ನಂತರ ಮೂಲೆಗುಂಪಾಗುತ್ತಲೇ ಬಂದದ್ದು ಹಳೆಯ ವಿದ್ಯಮಾನ.

ಇಬ್ಬರು ಲೋಕಸಭಾ ಸದಸ್ಯರ ಸ್ಥಿತಿಯಿಂದ ಕೇಂದ್ರದಲ್ಲಿ ಸರ್ಕಾರ ರಚಿಸುವ ಎತ್ತರಕ್ಕೆ ಭಾರತೀಯ ಜನತಾ ಪಕ್ಷವನ್ನು ಮುಟ್ಟಿಸಿದ ಐತಿಹಾಸಿಕ ಶ್ರೇಯಸ್ಸು ಅವರದು. ಆದರೆ ಮೋದಿ ಬೆಂಬಲಿಗರು ತಮ್ಮನ್ನು ಸೋಲಿಸಿಯಾರು ಎಂಬ ಅಳುಕಿನಿಂದ ಮಧ್ಯಪ್ರದೇಶದ ‘ಸುರಕ್ಷಿತ ಸೀಟು’ ಭೋಪಾಲವನ್ನು ತಬ್ಬಿಕೊಳ್ಳಲು ಹಾತೊರೆಯುವ ದುರ್ಗತಿ ಅವರಿಗೆ ಒದಗಿದ್ದು ಬಹುದೊಡ್ಡ ರಾಜಕೀಯ ವಿಡಂಬನೆ.

ಬದುಕಿಡೀ ಬೆವರು ಸುರಿಸಿದ ನಂತರವೂ ಪ್ರಧಾನಿ ಹುದ್ದೆ ಕೈ ತಪ್ಪಿತೆಂಬ ಹತಾಶೆ, ತಾವು ಪೊರೆದು ಪೋಷಿಸಿದ ಶಿಷ್ಯನೇ ಎದುರು ಬಿದ್ದನೆಂಬ ಬೇಗುದಿ, ಪಕ್ಷದ ನೆನ್ನೆ ಮೊನ್ನೆಯ ಮೌಲ್ಯಗಳು- ಸಿದ್ಧಾಂತಗಳು ಇಂದಿನ ಪೀಳಿಗೆಯ ಕೈಯಲ್ಲಿ ನಶಿಸಿ ಹೋದವು ಎಂಬ ಭ್ರಮನಿರಸನ ಇತ್ತೀಚಿನ ವರ್ಷಗಳಲ್ಲಿ ಅಡ್ವಾಣಿಯವರನ್ನು ಕವಿದಿತ್ತು. ಮೋದಿ ಪ್ರವಾಹಕ್ಕೆ ಎದುರಾಗಿ ಈಜಿದ ಅಡ್ವಾಣಿ ಒಂಟಿಯಾಗಿ ನಡೆಯುತ್ತಿರುವ ಹತಾಶ ದಾರಿಹೋಕನಂತೆ ಕಾಣತೊಡಗಿ ಬಹಳ ಕಾಲವಾಯಿತು. ಈ ವಯೋವೃದ್ಧ ನಾಯಕ ಬಿಜೆಪಿ ಪಾಲಿಗೆ ಉಪಯುಕ್ತತೆ ತೀರಿದ ಸರಕು. ಸಂಘ ಪರಿವಾರ ಅಡ್ವಾಣಿ  ಅವರನ್ನು ಹೇಗೆ ನಡೆಸಿಕೊಂಡಿತೆಂಬುದನ್ನು ಇತಿಹಾಸ ಎಂದಾದರೊಂದು ದಿನ ತೀರ್ಮಾನಿಸಲಿದೆ.

ತಮ್ಮ ಸರ್ಕಾರವನ್ನು ಟೀಕಿಸಿದ್ದ ಅಡ್ವಾಣಿ ವಿರುದ್ಧ ಅಂದಿನ ದಿನಗಳಲ್ಲಿ ಕುದಿದು ಹೋಗಿದ್ದರು ಬಿ.ಎಸ್. ಯಡಿಯೂರಪ್ಪ. ನೀರಾ ರಾಡಿಯಾ ಟೇಪುಗಳ ಕುರಿತು ಬಿಡುಗಡೆಗೆ ಮುನ್ನವೇ ಮಾರುಕಟ್ಟೆ ಪ್ರವೇಶಿಸಿದ್ದ ಪುಸ್ತಕವೊಂದರ ಹಲವು ಡಜನ್ ಪ್ರತಿಗಳನ್ನು ಖರೀದಿಸಿ ದಿಲ್ಲಿಗೆ ತಂದಿದ್ದುಂಟು, ಪುಸ್ತಕದ ಪ್ರತಿಯೊಂದನ್ನು ನಾಯಕನ ಕೈಗಿತ್ತು ‘ಓದಿಕೊಳ್ಳಿ ನಿಮ್ಮ ಅನುಯಾಯಿಯ ಕತೆಯನ್ನು’ ಎಂದು ಹೇಳಿ ಬರುವುದಾಗಿ ದಿಲ್ಲಿಯ ಕರ್ನಾಟಕ ಭವನದಲ್ಲಿ ಆಪ್ತರ ಮುಂದೆ ಘರ್ಜಿಸಿದ್ದುಂಟು. ಸಂಗಾತಿಗಳು ಸಮಾಧಾನ ಮಾಡಿದ ನಂತರ ಯಡಿಯೂರಪ್ಪ ಕೋಪ ತಣಿದಿತ್ತು.

ಗೋಧ್ರಾ ನಂತರದ ಹಿಂಸಾಚಾರದಲ್ಲಿ ಗುಜರಾತು ಮುಳುಗೆದ್ದಿತ್ತು. ಇತ್ತ ದಿಲ್ಲಿಯಲ್ಲಿ ಸಂಸತ್ ಅಧಿವೇಶನ ನಡೆದಿದ್ದ ಹೊತ್ತು. ಮೋದಿಯವರಿಗೆ ರಾಜಧರ್ಮ ಪಾಲನೆಯ ಪಾಠ ಹೇಳಿದ್ದ ಪ್ರಧಾನಿ ವಾಜಪೇಯಿ ಮನಸ್ಸು ಕದಡಿಹೋಗಿತ್ತು. ಸಂಸದ್ ಭವನದ ತಮ್ಮ ಕಚೇರಿಯಲ್ಲಿ ಕುಳಿತು ಬಿಳಿ ಕಾಗದ ಕೈಗೆತ್ತಿಕೊಂಡವರೇ ರಾಜೀನಾಮೆ ಬರೆ ಯತೊಡಗಿದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಜಸ್ವಂತ್ ಸಿಂಗ್ ಪ್ರಧಾನಿಯವರನ್ನು ತಡೆದಿದ್ದರು.
ಅದೇ ದಿನಗಳು. ಪ್ರಧಾನಿ ವಾಜಪೇಯಿ, ಉಪಪ್ರಧಾನಿ ಅಡ್ವಾಣಿ, ಮಂತ್ರಿಗಳಾದ ಅರುಣ್ ಶೌರಿ ಹಾಗೂ ಜಸ್ವಂತ್ ಸಿಂಗ್ ಅವರನ್ನು ಹೊತ್ತಿದ್ದ ವಿಶೇಷ ವಿಮಾನ ಬಿಜೆಪಿಯ ಸಭೆಗಾಗಿ ಗೋವೆಯತ್ತ ಹಾರುತ್ತಿತ್ತು. ಮಾತು ಗುಜರಾತಿನ ಮುಖ್ಯಮಂತ್ರಿಯತ್ತ ಹೊರಳಿತ್ತು.

‘ಗುಜರಾತ್ ಕಾ ಕ್ಯಾ ಕರ್ನಾ ಹೈ’ ಎಂಬ ಪ್ರಶ್ನೆ ಎಸೆದಿದ್ದರು ವಾಜಪೇಯಿ. ಕ್ಷಣ ಕಾಲ ಮೌನ. ಅಟಲ್ ಮತ್ತೆ ಹೇಳಿದರು- ‘ಗುಜರಾತ್ ಕೇ ಬಾರೇ ಮೇಂ ಸೋಚನಾ ಚಾಹೀಯೇ..’ ಕಸಿವಿಸಿಯಿಂದ ಮೇಲೆದ್ದ ಅಡ್ವಾಣಿ ಬಾತ್ ರೂಮಿನತ್ತ ಹೆಜ್ಜೆ ಹಾಕಿದ್ದರು. ‘ಪೂಛೀಯೇ ಫಿರ್ ಕ್ಯಾ ಕರ್ನಾ ಹೈ’ ಎಂದು ಜಸ್ವಂತ್ ಸಿಂಗ್ ಅವರನ್ನು ಹಿಂದೇ ಕಳಿಸಿದರು ವಾಜಪೇಯಿ.

ಅಡ್ವಾಣಿ ಅವರದು ಕಡ್ಡಿ ಮುರಿದಂತೆ ಒಂದೇ ಮಾತು- ‘ಬವಾಲ್ ಖಡಾ ಹೋ ಜಾಯೇಗಾ!’ (ಕೋಲಾಹಲ ಕವಿದೀತು). ಅದೇ ದಿನಗಳಲ್ಲಿ ಮತ್ತೊಮ್ಮೆ ಒಡನೆಯೇ ಪ್ರಧಾನಿ ನಿವಾಸಕ್ಕೆ ಧಾವಿಸುವಂತೆ ಜಸ್ವಂತ್ ಅವರಿಗೆ ತುರ್ತು ಕರೆ. ‘ರಾಜೀನಾಮೆಗೆ ಮುಂದಾಗಿದ್ದಾರೆ, ಸಂಭಾಳಿಸಿ’ ಎಂದಿದ್ದರು ಪ್ರಮೋದ್ ಮಹಾಜನ್. ಎರಡನೆಯ ಸಲ ವಾಜಪೇಯಿ ಅವರನ್ನು ತಡೆದಿದ್ದರು ಜಸ್ವಂತ್. ವಾಜಪೇಯಿ ಕೈ ಕಟ್ಟಿ ಹಾಕಿ ಮೋದಿಯವರನ್ನು ಪಾರು ಮಾಡಿದ್ದರು ಅಡ್ವಾಣಿ.

ರಾಮಜನ್ಮಭೂಮಿ ಆಂದೋಲನವನ್ನು ಬಡಿದೆಬ್ಬಿಸಿದ್ದ ದಿನಗಳು. ತಾವು ಕೈಗೊಂಡ ಪ್ರಸಿದ್ಧ ರಾಮ ರಥಯಾತ್ರೆಯ ಸಾರಥಿಯನ್ನಾಗಿ ಅಡ್ವಾಣಿ ಆರಿಸಿದ್ದು ನೆಚ್ಚಿನ ಶಿಷ್ಯ ನರೇಂದ್ರ ಮೋದಿಯವರನ್ನೇ. ಗುರು ಕಾರುಣ್ಯದ ನೆರಳಿನಲ್ಲಿ ಬೆಳೆದ ನರೇಂದ್ರ ಮೋದಿ ಒಂದು ದಿನ ಗುರುವಿನ ಪಟ್ಟಕ್ಕೇ ಸಂಚಕಾರ ತರುವ ಶಿಷ್ಯ ಆದಾರೆಂದು ಖುದ್ದು ಗುರುವೂ ಎಣಿಸಿರಲಾರರು. ಆದರೆ ಸಿಂಹಾಸನದ ಮೋಹವೆಂಬುದು ತಂದೆ- ಮಗ, ಅಣ್ಣ-ತಮ್ಮಂದಿರ ನಡುವೆ ಹಗೆತನದ ಹೊಗೆಯಾಡಿಸಿ ಪ್ರಾಣಗಳಿಗೇ ಎರವಾಗಿರುವ ನಿದರ್ಶನಗಳಿಂದ ಇತಿಹಾಸ ರಕ್ತರಂಜಿತವಾಗಿದೆ. ಇಂತಹುದೇ ಪರಂಪರೆಯ ಉರುಳಲ್ಲಿ ಸಿಕ್ಕವರು ಗುರು ಅಡ್ವಾಣಿ ಮತ್ತು ಶಿಷ್ಯ ನರೇಂದ್ರ ಮೋದಿ.
1967ರಿಂದ ಆರೆಸ್ಸೆಸ್ ಪ್ರತಿನಿಧಿಯಾಗಿ ಜನಸಂಘಕ್ಕೆ ಅಡಿಯಿಟ್ಟು, ಭಾರತೀಯ ಜನತಾ ಪಾರ್ಟಿಯಲ್ಲಿ ಉಪಪ್ರಧಾನಿ ಹುದ್ದೆಯ ತನಕ ಬೆಳೆದ ಆಡ್ವಾಣಿ ಅವರದು ಸರಳ ಸ್ವಚ್ಛ ಬದುಕು. ಪತ್ನಿ ಕಮಲಾ, ಮಗಳು ಪ್ರತಿಭಾ ಹಾಗೂ ಮಗ ಜಯಂತ್ ಅವರನ್ನೊಳಗೊಂಡ ಸುಖ ಸಂಸಾರ ಅವರದು. ನೆರಳಿನಂತೆ ಕಾಳಜಿ ವಹಿಸಿಕೊಂಡು ಬಂದಿದ್ದ ಸಹಧರ್ಮಿಣಿ ಕಮಲಾ ಕಳೆದ ವರ್ಷ ತೀರಿ ಹೋದ ನಂತರ ಆಡ್ವಾಣಿ ಮತ್ತಷ್ಟು ಕುಗ್ಗಿದರು.

ಕ್ರಿಕೆಟ್, ಸಿನೆಮಾ, ಪುಸ್ತಕ ಓದುವುದು ಅವರ ಬಹುಪ್ರಿಯ ಹವ್ಯಾಸಗಳು. ಸಚಿನ್, ದ್ರಾವಿಡ್, ಅಮಿತಾಭ್ ಬಚ್ಚನ್ ಅವರು ಮೆಚ್ಚಿದ ತಾರೆಗಳು. ವೇದಿಕೆಯ ಮೇಲೆ ಗಳ ಗಳ ಅಳುವುದು ದೌರ್ಬಲ್ಯದ ಸಂಕೇತವೆಂದು ಅವರು ಭಾವಿಸಿಲ್ಲ. ಹೀಗಾಗಿಯೇ ಕರುಳು ಹಿಂಡುವ ಚಲನಚಿತ್ರ
ವಾಗಲೀ, ರಾಜಕೀಯ ಬದುಕಿನ ನೈಜ ಸನ್ನಿವೇಶಗಳೇ ಆಗಿರಲಿ ಗಳ ಗಳ ಅತ್ತುಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT