ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ದಾಹ ತಣಿಸಿ ಮಾದರಿಯಾದ ಯುವಕ

Last Updated 23 ಏಪ್ರಿಲ್ 2017, 5:29 IST
ಅಕ್ಷರ ಗಾತ್ರ

ಇಂಡಿ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಮಣ್ಣಿನ ಮಡಕೆಗಳನ್ನಿಟ್ಟು ಅವುಗಳಲ್ಲಿ ಪ್ರತಿದಿನ ಮೂರು ಬಾರಿ ನೀರು ತುಂಬಿಸಿ ಬಿಸಿಲಿನಿಂದ ಬಾಯಾರಿದ ಜನರ ದಾಹ ತಣಿಸುತ್ತಿರುವ ಯುವಕ ಸಂಜು ಪವಾರ ಅವರ ಸೇವೆ ಯುವ­ಕರಿಗೆ ಮಾದರಿಯಾಗಿದೆ.ಕಳೆದ 1 ತಿಂಗಳಿಂದ ಸತತ ಈ ಕಾರ್ಯ ನಡೆಯುತ್ತಿದ್ದು  ಸಂಜು ತಮ್ಮ ಸ್ವಂತ ನೀರಿನ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕೆಲಸ ಮಾಡು­ತ್ತಿದ್ದಾರೆ. ಇದೇ ವರ್ಷ ಮಾತ್ರವಲ್ಲದೆ ಕಳೆದ ಮೂರು ವರ್ಷಗಳಿಂದ ಇದೇ ಕಾಯಕವನ್ನು ಅವರು ಮಾಡುತ್ತಾ ಬಂದಿದ್ದಾರೆ. ‘ಬಿಸಿಲಿನಿಂದ ಬಾಯಾ­ರಿದ ಜನರಿಗೆ ನೀರು ಕೊಡುವ ಕೆಲಸದಲ್ಲಿ ನನಗೆ ತೃಪ್ತಿ ಇದೆ. ಮಳೆ ಬಂದು ಬಿಸಿಲು ಕಡಿಮೆ ಆಗುವವರೆಗೂ ಈ ಕೆಲಸ ಮುಂದುವರಿಸುತ್ತೇನೆ’ ಎಂದು ಸಂಜು ಹೇಳುತ್ತಾರೆ.

ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಡಾ. ಬಿ.ಆರ್.ಅಂಬೇಡ್ಕರ್‌ ವೃತ್ತ, ಮಹಾವೀರ ಸರ್ಕಲ್ ಮತ್ತು ಮಹಾತ್ಮಾ ಗಾಂಧಿ ವೃತ್ತಗಳಲ್ಲಿ ನಾಲ್ಕೈದು ದೊಡ್ಡ ಗಾತ್ರದ ಮಣ್ಣಿನ ಮಡಿಕೆ ಇಟ್ಟಿದ್ದಾರೆ. ಇಂಡಿ ಪಟ್ಟಣಕ್ಕೆ ಬರುವ ಪ್ರವಾಸಿಗರು, ವಿವಿಧ ಗ್ರಾಮಗಳಿಂದ ಬರುವ ಜನರು ಬಿಸಿಲಿನಿಂದ ಬಸವಳಿದು ತಂಪು ನೀರು ಪಡೆಯುತ್ತ ನೀರು ಕೊಡುವವರಿಗೆ ಆಶೀರ್ವಾದ ಮಾಡಿ ಹೋಗುತ್ತಿದ್ದಾರೆ.

ಬರದ ನಾಡಿನಲ್ಲಿ ನೀರು ನೀಡುತ್ತಿರುವ ಸಂಜು ಪವಾರ ಅವರ ಕಾರ್ಯವನ್ನು ಜನಸಾಮಾನ್ಯರು ಶ್ಲಾಘಿಸುತ್ತಿದ್ದಾರೆ. ಸರ್ಕಾರ ಮಾಡದಿರುವ ಕಾರ್ಯವನ್ನು ಸಂಜು ಪವಾರ ಮಾಡುತ್ತಿದ್ದಾರೆ. ಸ್ವಂತ ಟ್ರ್ಯಾಕ್ಟರ್ ಹೊಂದಿರುವ ಅವರು ಬೇರೆಯವರ ಬಳಿ ಹಣ ಕೊಟ್ಟು ನೀರು ತುಂಬಿಸಿಕೊಂಡು ಬಂದು ಮಡಿಕೆ ತುಂಬಿಸುತ್ತಿದ್ದಾರೆ. ಮಡಕೆಯಲ್ಲಿ ನೀರು ಖಾಲಿಯಾದೊಡನೆ ಅವರು ತಡ ಮಾಡದೆ ನೀರು ತಂದು ತುಂಬಿಸುತ್ತಾರೆ.

ಪ್ರವಾಸಿಗರು, ಗ್ರಾಮೀಣ ಜನರು ಅಷ್ಟೇ ಅಲ್ಲದೆ ಪಟ್ಟಣದ ವಿವಿಧ ವೃತ್ತ­ಗಳಲ್ಲಿ ಕೆಲಸ ಮಾಡುವ ಪೊಲೀಸರು, ವಿದ್ಯಾರ್ಥಿಗಳು ಕೂಡ ಇದೇ ಮಡಕೆ ನೀರು ಕುಡಿದು ದಾಹ ತೀರಿಸಿಕೊ­ಳ್ಳುತ್ತಿದ್ದಾರೆ. ಸಂಜು ಪವಾರ ಮಡಿಕೆ ಇಟ್ಟಿರುವ ಸ್ಥಳದಲ್ಲಿ ಒಂದು ಫಲಕ ಹಾಕಿದ್ದಾರೆ. ಅದರಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಮಡಿಕೆಯಲ್ಲಿ ನೀರು ಖಾಲಿಯಾದರೆ ಜನರು ತಕ್ಷ­ಣವೇ ಕರೆ ಮಾಡಿ ವಿಷಯ ತಿಳಿಸು­ತ್ತಾರೆ. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಖಾಲಿಯಾದ ಮಡಕೆ­ಗಳು ತುಂಬುತ್ತವೆ.

ಈ ಮಡಿಕೆ ಇಟ್ಟ ದಿನದಿಂದ ಇಂಡಿ ಪಟ್ಟಣದಲ್ಲಿ ಬಾಟೆಲ್‌ ನೀರಿಗೆ ಮೊರೆ ಹೋಗಿದ್ದ ಜನರು ಮಡಿಕೆ ನೀರಿಗೆ ಮರಳಿರುವುದು ವಿಶೇಷವಾಗಿದೆ. ಹೀಗಾಗಿ ಬಾಟೆಲ್‌ ನೀರಿನ ವ್ಯಾಪಾರ ಕಡಿಮೆಯಾಗಿದೆ. ಇದೇ ಕೆಲಸವನ್ನು  ಪ್ರತೀ ಪಟ್ಟಣಗಳಲ್ಲಿ ಪಟ್ಟಣ ಪಂಚಾಯ್ತಿ, ಪುರಸಭೆ ಮಾಡಿದರೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಜನರು ತಿಳಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT