ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿಗೆ ಬಾಲಕಿ: ರಕ್ಷಣಾ ಕಾರ್ಯ ಆರಂಭ

Last Updated 23 ಏಪ್ರಿಲ್ 2017, 5:58 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದಲ್ಲಿ ಶನಿವಾರ ಸಂಜೆ ಆರು ವರ್ಷದ ಬಾಲಕಿಯೊಬ್ಬಳು ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ಜಿಲ್ಲಾಡಳಿತ ರಕ್ಷಣಾ ಕಾರ್ಯ ಆರಂಭಿಸಿದೆ.ಕಾವೇರಿ ಅಜಿತ್‌ ಮಾದರ ಕೊಳವೆ ಬಾವಿಗೆ ಬಿದ್ದಿರುವ ಬಾಲಕಿ. ಶಂಕರ ಹಿಪ್ಪರಗಿ ಅವರಿಗೆ ಸೇರಿದ ಹೊಲದಲ್ಲಿ ಸಂಜೆ ಆಟವಾಡುತ್ತಿದ್ದ ಆಕೆ ಆಕಸ್ಮಿಕವಾಗಿ ಕೊಳವೆ ಬಾವಿಯೊಳಗೆ ಜಾರಿಬಿದ್ದಿದ್ದಾಳೆ ಎನ್ನಲಾಗಿದೆ.

ಕಾವೇರಿಯ ತಂದೆ ಅಜಿತ ಮಾದರ ಹಾಗೂ ತಾಯಿ ಸವಿತಾ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದವರು. ಇವರಿಗೆ ಒಟ್ಟು ಮೂರು ಮಕ್ಕಳಿದ್ದಾರೆ. ಈ ದಂಪತಿ ಮಕ್ಕಳೊಂದಿಗೆ ಎರಡು ತಿಂಗಳ ಹಿಂದೆಯಷ್ಟೇ ಕೂಲಿ ಅರಸಿ ಝುಂಜರವಾಡಕ್ಕೆ ಬಂದಿದ್ದರು. ದುರ್ಘಟನೆ ನಡೆದಿರುವ ಶಂಕರ ಹಿಪ್ಪರಗಿ ಅವರ ಹೊಲದ ಬಳಿಯೇ ಮನೆಯನ್ನು ಬಾಡಿಗೆಗೆ ಪಡೆದು ವಾಸವಿದ್ದಾರೆ.ಘಟನಾ ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಪೊಲೀಸರು ಅವರನ್ನು ನಿಯಂತ್ರಿಸು ತ್ತಿದ್ದಾರೆ.ಕಾರ್ಯಾಚರಣೆ ನಡೆದಿದೆ.

ಅಳುವ ಶಬ್ದ ಕೇಳುತ್ತಿತ್ತು: ‘ನಾಲ್ಕು ವರ್ಷಗಳ ಹಿಂದೆ ಈ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು. ನೀರು ಸಿಗದ ಕಾರಣ ಅದನ್ನು ಹಾಗೆಯೇ ಬಿಡಲಾಗಿತ್ತು. ಇದೇ ಜಾಗದಲ್ಲಿ ಕಾವೇರಿ ಆಟವಾಡುತ್ತಿದ್ದಾಗ ಜಾರಿ ಬಿದ್ದಿದ್ದಾಳೆ. ಆಕೆ ಸುಮಾರು 30 ಅಡಿ ಆಳದಲ್ಲಿ ಸಿಲುಕಿರಬಹುದು. ಆರಂಭದಲ್ಲಿ ಅವಳು ಅಳುವ ಶಬ್ದ ಕೇಳುತ್ತಿತ್ತು’ ಎಂದು ಗ್ರಾಮಸ್ಥ ಬಸವರಾಜ ‘ಪ್ರಜಾವಾಣಿಗೆ ತಿಳಿಸಿದರು.

ಹೈದರಾಬಾದ್‌ ತಂಡಕ್ಕೆ ಮಾಹಿತಿ: ‘ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್‌ಡಿಆರ್‌ಎಫ್‌) ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ. ಅಲ್ಲಿಂದ ತಂಡ ಹೊರಟಿದ್ದು, ಇಲ್ಲಿಗೆ ಬರಲು ಕನಿಷ್ಠ ಎಂಟು ಗಂಟೆ ಬೇಕಾಗುತ್ತದೆ. ಅಲ್ಲಿಯ ವರೆಗೆ ನಾವೂ ಪ್ರಾಥಮಿಕ ಹಂತದ ರಕ್ಷಣಾ ಕಾರ್ಯ ಕೈಗೊಂಡಿದ್ದೇವೆ. ವೈದ್ಯರ ತಂಡವನ್ನು ಕಳುಹಿಸಲಾಗಿದೆ. ಪೈಪ್‌ ಮೂಲಕ ನಿರಂತರವಾಗಿ ಆಮ್ಲಜನಕವನ್ನು ಪೂರೈಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ ಸುದ್ದಿಗಾರ ರಿಗೆ ತಿಳಿಸಿದರು.

‘ಜೆಸಿಬಿ ಸಹಾಯದಿಂದ ಕೊಳವೆ ಬಾವಿ ಪಕ್ಕದಲ್ಲಿ 50 ಅಡಿ ಗುಂಡಿ ತೋಡುವ ಕಾರ್ಯ ಆರಂಭವಾಗಿದೆ. ಕ್ಯಾಮೆರಾವೊಂದನ್ನು ಕೊಳವೆಗೆ ಇಳಿ ಬಿಡಲಾಗಿದೆ. ಆದರೆ, ಮಣ್ಣು ಬಿದ್ದಿರುವುದರಿಂದ ಬಾಲಕಿಯ ಯಾವುದೇ ಚಿತ್ರ ಕಂಡುಬರುತ್ತಿಲ್ಲ. ಕಾರ್ಯಾಚರಣೆಗೆ ನೆರವಾಗಲು ಪುಣೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಯಚೂರು ಹಟ್ಟಿ ಚಿನ್ನದ ಗಣಿ ತಜ್ಞರ ತಂಡವನ್ನು ಕರೆಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಗೀತಾ ಕೌಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT