ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ: 24ರೊಳಗೆ ಆಧಾರ್ ಜೋಡಿಸಿ

Last Updated 23 ಏಪ್ರಿಲ್ 2017, 7:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಧಾರ್ ಜೋಡಣೆ ಆಗದಿರುವ ರೈತರ ಬ್ಯಾಂಕ್ ಖಾತೆಗೆ, ಇದೇ 24ರೊಳಗೆ ಆಧಾರ್ ಸಂಖ್ಯೆ ಜೋಡಿಸಿ ತಕ್ಷಣ ಪರಿಹಾರ ವಿತರಿಸಲು ವ್ಯವಸ್ಥೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಂಜೀವ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಬರ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮುಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ನಷ್ಟ ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲು ಆಧಾರ್ ಸಂಖ್ಯೆ ಅಗತ್ಯವಾಗಿದೆ. ಈಗಾಗಲೇ ಆಧಾರ್ ಜೋಡಣೆಯಾದ 1,24,243 ರೈತರ ಖಾತೆಗೆ ನೇರವಾಗಿ ₹ 86.47 ಕೋಟಿ ಪರಿಹಾರದ ಹಣ ಜಮಾ ಮಾಡಲಾಗಿದೆ. ಸೋಮವಾರದೊಳಗೆ ಬಾಕಿ ಉಳಿದ ರೈತರ ವಿವರ ಹಾಗೂ ಆಧಾರ್ ಜೋಡಣೆ ಮಾಡುವಂತೆ ಸೂಚಿಸಿದರು.

ಜಾನುವಾರು ಸಮೀಕ್ಷೆ: ಜಿಲ್ಲೆಯಲ್ಲಿರುವ ಜಾನುವಾರು ಸಂಖ್ಯೆ (ಕುರಿ, ಮೇಕೆ ಸೇರಿ) ಸಮೀಕ್ಷೆ ಮಾಡಿ. ಅವುಗಳಿಗೆ ಬೇಕಾದ ಮೇವು ಪೂರೈಕೆ ಬಗ್ಗೆ ವಿವರವಾದ ವರದಿಯನ್ನು ತುರ್ತಾಗಿ ನೀಡಲು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕ ಡಾ. ಪ್ರಸನ್ನ ಕುಮಾರ್, ‘ಜಿಲ್ಲೆಯಲ್ಲಿ 4 ಲಕ್ಷದ 26 ಸಾವಿರದ 677 ಹಸು, ಎಮ್ಮೆ, ಎತ್ತುಗಳಿವೆ. ಸುಮಾರು 10 ಲಕ್ಷ ಕುರಿ, ಮೇಕೆಗಳಿವೆ. ಇವುಗಳಿಗೆ ಪ್ರತಿ ದಿನಕ್ಕೆ 15 ಸಾವಿರ ಮೆಟ್ರಿಕ್ ಟನ್ ಮೇವು ಅಗತ್ಯವಾಗಿದೆ. ಇದಕ್ಕಾಗಿ ಜಿಲ್ಲೆಯ 16 ಕಡೆ ಗೋಶಾಲೆ, 15 ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಲಾಗಿದೆ. ಪ್ರತಿನಿತ್ಯ 180 ಟನ್ ಮೇವು ಅಗತ್ಯ’ ಎಂದು ಅಂಕಿ ಅಂಶ ನೀಡಿದರು.

‘ಜಿಲ್ಲಾ ಪಂಚಾಯ್ತಿಯವರು ಜನರಿಗಷ್ಟೆ ನೀರು ಕೊಟ್ಟರೆ ಸಾಲದು. ಜಾನುವಾರಿಗೂ ನೀರು ಪೂರೈಸಬೇಕು. ಪ್ರತಿ ಹಳ್ಳಿಗೆ ಕನಿಷ್ಠ ಎರಡು ಮೂರು ನೀರಿನ ತೊಟ್ಟಿಗಳನ್ನು ಜಾನುವಾರು, ಕುರಿ, ಮೇಕೆಗಳಿಗಾಗಿ ಕಟ್ಟಿಸಬೇಕು’ ಎಂದು ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಉದ್ಯೋಗ ಖಾತ್ರಿ: ‘ಬರಗಾಲದಿಂದ ಜನರು ವಲಸೆ ಹೋಗದಂತೆ ತಡೆಯಲು ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು. ಜನರು ಉದ್ಯೋಗಕ್ಕೆ ಬೇಡಿಕೆ ಇಟ್ಟಾಗ, ಉದ್ಯೋಗ ನೀಡಲಾಗಿದ್ದರೆ ಪರಿಹಾರ ನೀಡಬೇಕಾಗುತ್ತದೆ. ಉದ್ಯೋಗ ಖಾತ್ರಿಯಲ್ಲಿ ಕನಿಷ್ಠ 90 ದಿನಗಳವರೆಗೆ ವೈಯಕ್ತಿಕವಾಗಿ ಕೆಲಸ ಮಾಡುವ ಕಾರ್ಮಿಕರು, ಕಾರ್ಮಿಕ ಕಲ್ಯಾಣ ನಿಧಿಯಡಿ ನೋಂದಣಿ ಮಾಡಿಸಿಕೊಳ್ಳಬಹುದು. ಆಯಾ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಕಾರ್ಮಿಕರನ್ನು ದೃಢೀಕರಿಸಬಹುದು. ಈ ಬಗ್ಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ’ ಎಂದರು.

‘ನರೇಗಾ ಯೋಜನೆಯಲ್ಲಿ ಕೆಲಸ ಮಾಡುವವರನ್ನು ಕಾರ್ಮಿಕರೆಂದೇ ನೋಂದಣಿ ಮಾಡಿಸಿಕೊಂಡು ಕಾರ್ಡ್ ಪಡೆದುಕೊಂಡರೆ, ಅಂಥವರ ಮಕ್ಕಳ ಶಿಕ್ಷಣ, ವಿದ್ಯಾರ್ಥಿವೇತನ, ಆರೋಗ್ಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅಪಘಾತದಲ್ಲಿ ಗಾಯಗೊಂಡಲ್ಲಿ ಪರಿಹಾರ, ಮರಣ ಹೊಂದಿದಲ್ಲಿ₹2 ಲಕ್ಷ ಪರಿಹಾರ ನೀಡಬೇಕಾಗುತ್ತದೆ’ ಎಂದು ಯೋಜನೆಗಳ ಸೌಲಭ್ಯಗಳನ್ನು  ಅವರು ವಿವರಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ, ಉಪ ವಿಭಾಗಾಧಿಕಾರಿ ರಾಘವೇಂದ್ರ, ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಓಂಕಾರಪ್ಪ, ತಹಶೀಲ್ದಾರ್ ಮಲ್ಲಿಕಾರ್ಜುನ್, ವಿವಿಧ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT