ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ, ಯಡಿಯೂರಪ್ಪ ನಡುವೆ ಒಳಒಪ್ಪಂದ

Last Updated 23 ಏಪ್ರಿಲ್ 2017, 7:17 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಒಳಒಪ್ಪಂದ ಮಾಡಿಕೊಂಡು ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಲಂಚಮುಕ್ತ ಕರ್ನಾಟಕ ವೇದಿಕೆ ರಾಜ್ಯ ಸಂಚಾಲಕ ರವಿಕೃಷ್ಣಾರೆಡ್ಡಿ ಆರೋಪಿಸಿದರು.ನಗರದ ಗೋಪಿವೃತ್ತದಲ್ಲಿ ಶನಿವಾರ ಜನಾಂದೋಲನಗಳ ಮಹಾಮೈತ್ರಿ ಸಂಘಟನೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ದುಷ್ಟ ರಾಜಕಾರಣದ ವಿರುದ್ಧ ಜನಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ‘ಜನ ಪರ್ಯಾಯ ಕಟ್ಟೋಣ ಜಾಥಾ’ದಲ್ಲಿ ಅವರು ಮಾತನಾಡಿದರು.

‘ಪ್ರೇರಣಾ ಟ್ರಸ್ಟ್‌ಗೆ ನೀಡಿದ್ದ ಲಂಚದ ಆರೋಪದಿಂದ ಮುಕ್ತರಾಗಲು ಯಡಿಯೂರಪ್ಪ ತಮ್ಮ ಆಪ್ತರ ಮೂಲಕ ಕಾಣಿಕೆ ಕಳುಹಿಸಿದ್ದರು.  ₹ 2 ಕೋಟಿ  ಹಣ ಸೂಟ್‌ಕೇಸ್ ಮೂಲಕ ತೆಗೆದುಕೊಂಡು ಹೋಗುವಾಗ  ವಿಧಾನಸೌಧ ಆವರಣದಲ್ಲೇ ಅವರ ಆಪ್ತ ಸಿಕ್ಕಿ ಬಿದ್ದಿದ್ದರು. ಈ ವಿಷಯ ಸಿದ್ದರಾಮಯ್ಯ ಅವರಿಗೂ ತಿಳಿದಿದೆ. ಇಬ್ಬರೂ ಒಪ್ಪಂದ ಮಾಡಿಕೊಂಡು ರಾಜ್ಯದ ಜನರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಸ್ತುತ ಯಾವ ಮುಖಂಡರು, ಯಾವ ಪಕ್ಷದಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಬ್ಯಾಂಕ್ ಲೂಟಿ ಮಾಡಿದವರು ಕಾಂಗ್ರೆಸ್‌ಗೆ ಹಾರಿದ್ದಾರೆ. ಕುಮಾರ ಬಂಗಾರಪ್ಪ ಬಿಜೆಪಿ ಸೇರಿದ್ದಾರೆ. ಅವರ ಸಹೋದರ ಮಧು ಬಂಗಾರಪ್ಪ ಕಾಂಗ್ರೆಸ್‌ಗೆ ತೆರಳಲು ವೇದಿಕೆ ಸಿದ್ಧವಾಗಿದೆ. ಎಸ್.ಎಂ.ಕೃಷ್ಣ ಬಿಜೆಪಿಗೆ ಹೋಗಿದ್ದಾರೆ. ಇನ್ನು ಕೆಲವರು ಇತರೆ ಪಕ್ಷಗಳಿಗೆ ಕಾಲಿಡಲು ಕಾಯುತ್ತಿದ್ದಾರೆ. ಬಟ್ಟೆ ಕಳಚಿದಂತೆ ಮುಖಂಡರು ಪಕ್ಷ ಬದಲಾಯಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಬಿಹಾರವನ್ನು ಮದ್ಯಮುಕ್ತ ರಾಜ್ಯ ಎಂದು ಘೋಷಿಸಲಾಗಿದೆ. ಕರ್ನಾಟಕ ವನ್ನೂ  ಮಾಡಬಹುದು. ಆದರೆ, ಮದ್ಯ ಮುಕ್ತ ರಾಜ್ಯವಾಗಲು ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಬಿಡುವುದಿಲ್ಲ. ಸರ್ಕಾರಕ್ಕೆ ₹ 16 ಸಾವಿರ ಕೋಟಿ ಹಣ ಮದ್ಯಮಾರಾಟದಿಂದ ಬರುತ್ತಿದೆ. ₹ 60 ಸಾವಿರ ಕೋಟಿ ಅನಧಿಕೃತವಾಗಿ ಲೂಟಿಕೋರರ ಪಾಲಾಗುತ್ತಿದೆ ಎಂದು ಆರೋಪಿಸಿದರು.

‘ಜನಪ್ರಿಯ ಯೋಜನೆ ಜಾರಿ ಮಾಡುವ ಮೂಲಕ ಅವರು ಮಾಡಿದ ಭ್ರಷ್ಟಾಚಾರ ಮರೆಮಾಚುತ್ತಿದ್ದಾರೆ. ರೈತರ ಆತ್ಮಹತ್ಯೆ, ಸಾಲ ಮನ್ನಾ, ನಿರುದ್ಯೋಗ, ಶಿಕ್ಷಣ, ಬರಗಾಲದ ಚರ್ಚೆ ನಡೆಯುತ್ತಿಲ್ಲ. ರಾಜ್ಯದ ಹಣ ದೋಚುತ್ತಿರುವ ಪಕ್ಷ ಗಳನ್ನು ಮುಂಬರುವ ಚುನಾವಣೆಯಲ್ಲಿ ವಿರೋಧಿಸಿ, ಹೊಸ ಪರ್ಯಾಯ ಜನಶಕ್ತಿ ಸಂಘಟನೆ ಕಟ್ಟಬೇಕಿದೆ. ಜನರ ಮನಸ್ಥಿತಿಯಲ್ಲಿ ಬದಲಾವಣೆ ತರಬೇಕಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿಪರ ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ದಲಿತ ಸಂಘಟನೆ, ವಿದ್ಯಾರ್ಥಿ ಚಳವಳಿ, ಕಾರ್ಮಿಕ ಚಳವಳಿ, ಪ್ರಗತಿಪರ ಹೋರಾಟಗಾರರು ಒಟ್ಟುಗೂಡಿ ರಾಜ್ಯದಲ್ಲಿ ಹೋರಾಟ ನಡೆಸಿದರೆ, ಹೊಸ ನಾಡು ಕಟ್ಟಬಹುದು ಎಂದು ಅಶಿಸಿದರು.ಜನಾಂದೋಲನಗಳ ಮಹಾಮೈತ್ರಿ ರಾಜಕೀಯ ಪಕ್ಷವಲ್ಲ. ಅದು ಪರ್ಯಾಯ ರಾಜಕೀಯ ಚಳವಳಿ. ಜನ ಸಾಮಾನ್ಯರಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ.  ಈ ಕಾರ್ಯ ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಂದ ಆಗುವುದಿಲ್ಲ. ಸಾಮಾನ್ಯ ಜನರು ತಿಳಿವಳಿಕೆ ಹೊಂದಿ ಭ್ರಷ್ಟಾಚಾರ ದೂರ ಮಾಡಬೇಕು ಎಂದುಅವರು ಕರೆ ನೀಡಿದರು.

ರಾಜ್ಯ ರೈತಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ‘ಜನವಿರೋಧಿ ರಾಜಕಾರಣ ಮಾಡುತ್ತಾ ಬಂದಿರುವ ಪ್ರಮುಖ ರಾಜಕೀಯ ಪಕ್ಷಗಳನ್ನು ಜನರು ತಿರಸ್ಕರಿಸುವ ಸಮಯ ಬಂದಿದೆ’ ಎಂದರು.ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ.ಎಲ್. ಅಶೋಕ್, ವಾಮದೇವಗೌಡ, ಮಲ್ಲಿಗೆ, ದೀಪಕ್, ಶಿವಾನಂದ ಕುಗ್ವೆ, ಸೈಯದ್ ಪಾಟೀಲ್, ಯಶವಂತರಾವ್ ಘೋರ್ಪಡೆ, ವಿನಾಯಕ, ಜಯಪ್ಪಗೌಡ್ರು, ಕೆ.ಪಿ.ಶ್ರೀಪಾಲ್  ಜಾಥಾದಲ್ಲಿ ಭಾಗವಹಿಸಿದ್ದರು.ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಜಾಥಾ ಭಾನುವಾರ ದಾವಣಗೆರೆಗೆ ತೆರಳಲಿದೆ. ಏ. 27ರಂದು ರಾಯಚೂರಿನಲ್ಲಿ ಸಮಾರೋಪ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT