ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪು ತಾಣ: ನುಲಿಚಂದಯ್ಯ ಗುಹೆ

Last Updated 23 ಏಪ್ರಿಲ್ 2017, 8:58 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಶರಣ ನುಲಿ ಚಂದಯ್ಯನವರ ಗುಹೆಯ ಪರಿಸರವು ಹಸಿರಿನಿಂದ ಕಂಗೊಳಿಸುತ್ತಿದ್ದು, ತಂಪು ತಾಣವಾಗಿರುವ ಕಾರಣ ಬೇಸಿಗೆಯ ಬಿಸಿಲಿನಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಇಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುಹೆ, ಅಕ್ಕನಾಗಮ್ಮನವರ ಗುಹೆ, ತ್ರಿಪುರಾಂತಕೇಶ್ವರ ಮಂದಿರ, ಮಡಿವಾಳ ಮಾಚಿದೇವರ ಹೊಂಡ, ಅಲ್ಲಮಪ್ರಭುದೇವರ ಗದ್ದುಗೆ ಮಠ, ಹರಳಯ್ಯನವರ ಗುಹೆ, ಬಸವಣ್ಣನವರ ಅರಿವಿನ ಮನೆ, ಉರಿಲಿಂಗಪೆದ್ದಿಯವರ ಮಂದಿರ, ಜೇಡರ ದಾಸಿಮಯ್ಯನವರ ಮಂದಿರ ಸೇರಿದಂತೆ ಹಲವು ಪ್ರಮುಖ ಶರಣ ಸ್ಮಾರಕಗಳು ಇವೆ.

ಇವುಗಳಲ್ಲಿ ನುಲಿ ಚಂದಯ್ಯನವರ ಗುಹೆಯು ಪ್ರಮುಖವಾದದ್ದು. 12 ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದ ನುಲಿ ಚಂದಯ್ಯನವರು ಕಾರ್ಯಗೈದ ಮತ್ತು ಧ್ಯಾನ ಮಾಡಿದ ಸ್ಥಳ ಇದಾಗಿದೆ. ಚಂದಯ್ಯನವರು ಕಾಯಕ ಸಂಸ್ಕೃತಿ ಸಾರಿದರು. ವಚನಗಳನ್ನು ಬರೆದು ಲೋಕಜ್ಞಾನ ನೀಡಿದ್ದಾರೆ. ಬಸವಜಯಂತಿಯ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಹಾಗೂ ಇತರೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮೊದಲು ಇಲ್ಲಿ ಬರೀ ಗುಹೆ ಇತ್ತು. 10 ವರ್ಷಗಳ ಹಿಂದೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಈ ಗುಹೆಯ ಎದುರಲ್ಲಿ ಕೆತ್ತನೆಯ ಕಲ್ಲುಗಳಿಂದ ಚಾಲುಕ್ಯ ಶೈಲಿಯ ಮಂಟಪ ಕಟ್ಟಲಾಗಿದೆ.

ಇದಕ್ಕಿಂತ ಮುಖ್ಯವೆಂದರೆ, ಸುತ್ತಲಿನಲ್ಲಿ ಗಿಡಗಳನ್ನು, ಹುಲ್ಲು ಹೂ ಗಿಡಗಳನ್ನು ಬೆಳೆಸಿ ಉದ್ಯಾನ ನಿರ್ಮಿಸಿದ್ದರಿಂದ ಪರಿಸರ ಸುಂದರವಾಗಿದೆ. ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಾನುಗಳು ಕೂಡ ಇವೆ. ಇದಲ್ಲದೆ ಸುತ್ತಲಿನಲ್ಲಿ ಆವರಣಗೋಡೆ ಮತ್ತು ಭವ್ಯವಾದ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಪ್ರವೇಶ ದ್ವಾರದಿಂದ ತಗ್ಗು ಪ್ರದೇಶದಲ್ಲಿನ ಗುಹೆಗೆ ಹೋಗಲು ಮೆಟ್ಟಿಲುಗಳು ನಿರ್ಮಿಸಿದ್ದು, ಅವುಗಳ ಮೇಲೆ ಅಲ್ಲಲ್ಲಿ ಚಿಕ್ಕ ಮಂಟಪಗಳಿವೆ.

ಎದುರಿನಲ್ಲಿಯೇ ತ್ರಿಪುರಾಂತಕೆರೆಯಿದೆ. ಪಕ್ಕದಿಂದ ಮುಖ್ಯ ರಸ್ತೆ ಹಾದು ಹೋಗುತ್ತದೆ. ಹೀಗೆ ಮುಖ್ಯ ಸ್ಥಳದಲ್ಲಿ ಇರುವುದರಿಂದ ಪ್ರತಿದಿನ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಿದೆ. ದೂರದ ಪ್ರದೇಶಗಳಿಂದ ಪ್ರವಾಸಿಗರು, ಶಾಲಾ ಮಕ್ಕಳು ಕೂಡ ಇಲ್ಲಿಗೆ ಬರುತ್ತಿದ್ದಾರೆ.ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಉದ್ಯಾನದಲ್ಲಿನ ಹುಲ್ಲಿಗೆ ಹೆಚ್ಚಿನ ನೀರು ಹರಿಸಿ ಸದಾ ಹಸಿರಾಗಿರುವಂತೆ ನೋಡಿಕೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT