ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನ್ತ್‌ ಮುಗೀತು, ಮುಂದ...

ಅಕ್ಷರ ಗಾತ್ರ
‘ಬೋರ್ಡ್‌ ಮಾದರಿಯ’ 10ನೇ ತರಗತಿ ಪರೀಕ್ಷೆ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೊದಲ ‘ಅಧಿಕೃತ’ ಅಗ್ನಿಪರೀಕ್ಷೆ. ಅದು ರಾಜ್ಯ ಪಠ್ಯಕ್ರಮವಿರಲಿ, ಸಿಬಿಎಸ್‌ಇ ಅಥವಾ ಐಸಿಎಸ್ಇ ಇರಲಿ – ವಿದ್ಯಾರ್ಥಿಯ ಭವಿಷ್ಯ ನಿರ್ಧರಿತವಾಗುವ ನಿಟ್ಟಿನಲ್ಲಿ ಇದು ಮೊದಲ ಮೆಟ್ಟಿಲು.
 
ವೃತ್ತಿಪರ ತರಬೇತಿಗೆ ಸಂಬಂಧಿಸಿ ಪಿಯು ನಿರ್ಣಾಯಕವಾದರೂ ಪಿಯುಸಿ ಹಂತದಲ್ಲಿ ಯಾವ ಕೋರ್ಸ್‌ ಆಯ್ದುಕೊಳ್ಳಬೇಕು ಎಂದು ನಿರ್ಧರಿಸಬೇಕಾದುದು 10ನೇ ತರಗತಿಯ ನಂತರ ಎಂಬುದು ಮಹತ್ವದ ಅಂಶ.
 
10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಅವುಗಳಲ್ಲಿ ಕೆಲವು ಸಾಮಾನ್ಯ ಶೈಕ್ಷಣಿಕ ಅವಕಾಶಗಳಾದರೆ, ಇನ್ನೂ ಕೆಲವು ವೃತ್ತಿಪರ ಶಿಕ್ಷಣ ಅವಕಾಶಕ್ಕೆ ಸಂಬಂಧಿಸಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅರ್ಹತೆ, ಅಗತ್ಯಕ್ಕೆ ಅನುಗುಣವಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕಷ್ಟೇ. ಈ ನಿಟ್ಟಿನಲ್ಲಿ ಶಿಕ್ಷಕರ, ತಜ್ಞರ, ಪೋಷಕರ ಸೂಕ್ತ ಮಾರ್ಗದರ್ಶನ ಅಗತ್ಯ.
 
ಏನೇನು ಮಾಡಬಹುದು?
10ನೇ ತರಗತಿ ನಂತರ ‘ಮುಂದೇನು?’ ಎಂದು ಯೋಚಿಸಿದಾಗ ತಕ್ಷಣ ಹೊಳೆಯುವುದು ಪಿಯುಸಿ. ಸುಮಾರು ಶೇ. 80ರಷ್ಟು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವುದು ‘ಪಿಯುಸಿ’ ಅಧ್ಯಯನವನ್ನು. ಕೆಲವರು ವೃತ್ತಿ ತರಬೇತಿ ಪಡೆಯಲು ಮನಸ್ಸು ಮಾಡುತ್ತಾರೆ.
 
ಪಿಯುಸಿ ಸೇರಬೇಕು ಎನ್ನುವವರು ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗಕ್ಕೆ ಸೇರಬಹುದು. ಆಯಾ ವಿಭಾಗದಲ್ಲಿ ವಿಷಯಗಳ ಆಯ್ಕೆಗೆ ಅವಕಾಶವಿದ್ದು, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ–ಆಸಕ್ತಿಗೆ ಅನುಗುಣವಾದ ವಿಷಯಗಳನ್ನು ಆಯ್ದುಕೊಳ್ಳಬಹುದು.
 
ವಿಜ್ಞಾನ ವಿಭಾಗ: ಪಿಯುಸಿ ಹಂತದಲ್ಲಿ ವಿಜ್ಞಾನ ವಿಭಾಗವನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ‘ಪಿಸಿಎಂಬಿ’ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ) ವಿಷಯಗಳನ್ನು ‘ಕೋರ್’ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
 
‘ಪಿಸಿಎಂಬಿ’ ಅಲ್ಲದೇ ‘ಪಿಸಿಎಂಸಿ’ ಅಥವಾ ‘ಪಿಸಿಎಂಎ’ ವಿಷಯ ಸಂಯೋಜನೆಯನ್ನು ಆಯ್ದುಕೊಳ್ಳಲೂ ಅವಕಾಶವಿದ್ದು, ಎರಡು ಭಾಷಾ ವಿಷಯಗಳ ಅಧ್ಯಯನ ಈ ಹಂತದಲ್ಲಿ ಕಡ್ಡಾಯವಾಗಿರುತ್ತದೆ.
 
ಈ ಕೋರ್ಸ್ ನಂತರ ಭವಿಷ್ಯದಲ್ಲಿ ವೃತ್ತಿಪರ ಸಿಇಟಿ ಹಾಗೂ ‘ಪಿಸಿಬಿ’ ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ‘ವೈದ್ಯಕೀಯ’ ಅಥವಾ ‘ಪಿಸಿಎಂ’ ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ತಾಂತ್ರಿಕ (ಎಂಜಿನಿಯರಿಂಗ್) ಕೋರ್ಸ್ ಸೇರಲು ಅವಕಾಶವಿದೆ. 
 
ವಾಣಿಜ್ಯ ವಿಭಾಗ: ಪಿಯುಸಿ ಹಂತದಲ್ಲಿ ವಾಣಿಜ್ಯ (ಕಾಮರ್ಸ್‌) ವಿಭಾಗವನ್ನು ಆಯ್ದುಕೊಂಡರೆ ಸಾಮಾನ್ಯವಾಗಿ ಲೆಕ್ಕಪತ್ರ, ವಾಣಿಜ್ಯ ಅಧ್ಯಯನ, ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ / ಇತಿಹಾಸ ವಿಷಯ ಸಂಯೋಜನೆಯನ್ನು ‘ಕೋರ್’ ವಿಷಯಗಳಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಎರಡು ಭಾಷಾ ವಿಷಯಗಳ ಅಧ್ಯಯನ ಈ ಹಂತದಲ್ಲಿ ಕಡ್ಡಾಯವಾಗಿರುತ್ತದೆ.
 
ಇದನ್ನು ಹೊರತುಪಡಿಸಿ, 10ನೇ ತರಗತಿ ನಂತರ ನೇರವಾಗಿ ‘ಸಿಎ’ (ಚಾರ್ಟರ್ಡ್‌ ಅಕೌಂಟೆಂಟ್), ‘ಸಿಎಸ್’ (ಕಂಪೆನಿ ಸೆಕ್ರೆಟರಿ), ‘ಐಸಿಡಬ್ಲುಎ’ (ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್‌ ಅಕೌಂಟ್ಸ್) ಮುಂತಾದ ಉನ್ನತ ಅಧ್ಯಯನಕ್ಕೆ ಸಂಬಂಧಿಸಿ ಫೌಂಡೇಷನ್ ಕೋರ್ಸ್‌ಗಳಿಗೆ ಸೇರಲು ಅವಕಾಶವಿದೆ. ಈ ಕೋರ್ಸ್ ನಂತರ ಭವಿಷ್ಯದಲ್ಲಿ – ಬಿಕಾಂ, ಬಿಬಿಎ, ಬಿಸಿಎ, ಬಿಬಿಎಂ, ಸಿಎ, ಸಿಎಸ್, ಐಸಿಡಬ್ಲುಎ ಮುಂತಾದ ತರಗತಿಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ.
 
ಕಲಾ ವಿಭಾಗ: ಪಿಯುಸಿ ಹಂತದಲ್ಲಿ ಕಲಾ ವಿಭಾಗ (ಆರ್ಟ್ಸ್) ಆಯ್ದುಕೊಂಡರೆ ವೈವಿಧ್ಯಮಯ ಮಾನವಿಕ ವಿಷಯಗಳಾದ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮನೋವಿಜ್ಞಾನ, ತತ್ವಶಾಸ್ತ್ರ, ಅಲ್ಲದೇ ಭಾಷಾ ವಿಷಯಗಳನ್ನು ‘ಕೋರ್’ (ಐಚ್ಛಿಕ) ವಿಷಯಗಳನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇವುಗಳ ಜತೆ ಎರಡು ಭಾಷಾ ವಿಷಯಗಳ ಅಧ್ಯಯನ ಈ ವಿಭಾಗದಲ್ಲಿ ಕಡ್ಡಾಯವಾಗಿರುತ್ತದೆ.
ತಾಂತ್ರಿಕ– ವೃತ್ತಿಪರ ಶಿಕ್ಷಣ: 10ನೇ ತರಗತಿ ನಂತರ ಹಲವು ವಿಭಾಗಗಳಲ್ಲಿ ‘ಜೆಒಸಿ’, ‘ಐಟಿಐ’, ‘ಐಟಿಸಿ’, ‘ಪಾಲಿಟೆಕ್ನಿಕ್’, ‘ಡಿಪ್ಲೊಮಾ’ ಕೋರ್ಸ್‌ಗಳಿಗೆ ಸೇರಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಆಟೊಮೊಬೈಲ್, ಕಂಪ್ಯೂಟರ್, ಆರ್ಕಿಟೆಕ್ಟ್ ಮುಂತಾದ ಟ್ರೇಡ್‌ಗಳಲ್ಲಿ ಅಧ್ಯಯನ ಮಾಡಲು ಅವಕಾಶವಿದೆ.
 
ಸರ್ಟಿಫಿಕೇಟ್ ಕೋರ್ಸ್‌ಗಳು:  ‘ಎನ್ಐಐಟಿ’, ‘ಆಪ್ಟೆಕ್’, ‘ಕಿಯೋನಿಕ್ಸ್’ ಮೊದಲಾದ ನೋಂದಾಯಿತ ಗಣಕಯಂತ್ರ ತರಬೇತಿ ಕೇಂದ್ರಗಳಲ್ಲಿ ಕಂಪ್ಯೂಟರ್ ಸಂಬಂಧಿತ ‘ಕ್ರ್ಯಾಶ್‌’ ಕೋರ್ಸ್, ಜಾವಾ, ಟ್ಯಾಲಿ, ಹಾರ್ಡ್‌ವೇರ್, ಸಾಫ್ಟ್‌ವೇರ್ ನೆಟ್‌ವರ್ಕಿಂಗ್, ಎನಿಮೇಶನ್ ಆಧರಿತ ಸರ್ಟಿಫಿಕೇಟ್ ಕೋರ್ಸ್‌ಗಳಿಗೂ ಸೇರಲು ಅವಕಾಶವಿದೆ.
 
ಲಲಿತಕಲಾ ಕೋರ್ಸ್‌ಗಳು: ಲಲಿತಕಲೆಯಲ್ಲಿ ಆಸಕ್ತಿ ಇರುವವರು ‘ಲಲಿತಕಲಾ’ ಕಾಲೇಜುಗಳಿಗೆ ಸೇರಿ ನೃತ್ಯ, ಸಂಗೀತ, ಚಿತ್ರಕಲೆ, ವಾಸ್ತಶಿಲ್ಪ, ನಾಟಕಾಭಿನಯ ಇತ್ಯಾದಿ ಕಲೆಗಳಲ್ಲಿ ತರಬೇತಿ ಪಡೆಯಬಹುದು. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸಾಕಷ್ಟು ಲಲಿತಕಲಾ ಕಾಲೇಜುಗಳಿದ್ದು ಸಾಕಷ್ಟು ಅವಕಾಶಗಳಿವೆ.
 
ಜತೆಗೆ ನುರಿತ ಗುರುವಿನ ಮಾರ್ಗದರ್ಶನದಲ್ಲಿ ಸ್ವಯಂ ಅಧ್ಯಯನ ನಡೆಸಿ, ವಿದ್ವತ್ ಪರೀಕ್ಷೆಗಳನ್ನು ಎದುರಿಸಲೂ ಅವಕಾಶವಿದೆ. ರಂಗಕಲೆಯಲ್ಲಿ ಆಸಕ್ತಿ ಇರುವವರು ‘ರಂಗಾಯಣ’, ‘ನೀನಾಸಮ್’, ‘ರಾಷ್ಟ್ರೀಯ ನಾಟಕ ಶಾಲೆ’ಗಳನ್ನು ಸೇರಿ ವೃತ್ತಿಪರ ರಂಗಕಲಾವಿದರಾಗಿಯೂ ರೂಪಗೊಳ್ಳಬಹುದು.
 
‘ಫೇಲ್’ ಆದವರಿಗೂ ಅವಕಾಶ!
ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದವರಿಗೂ ಕಲಿಕೆಗೆ ಸಾಕಷ್ಟು ಅವಕಾಶಗಳಿವೆ. ಬ್ಯೂಟಿಷಿಯನ್ ಕೋರ್ಸ್, ಕಾಸ್ಮೆಟಿಕ್ ಕೋರ್ಸ್, ನರ್ಸಿಂಗ್, ಬೇಕರಿ ತಂತ್ರಜ್ಞಾನ, ಪ್ರವಾಸೋದ್ಯಮ, ಆನ್‌ಲೈನ್ ಪ್ರವಾಸೋದ್ಯಮ, ಪ್ರವಾಸಿ–ಮಾರ್ಗದರ್ಶಿ ಕೋರ್ಸ್, ಇವೆಂಟ್ ಮ್ಯಾನೇಜ್‌ಮೆಂಟ್, ಹೊಟೆಲ್ ಮ್ಯಾನೇಜ್‌ಮೆಂಟ್, ಸಹಕಾರ ನಿರ್ವಹಣೆ, ಆಹಾರ ತಂತ್ರಜ್ಞಾನ, ವಾಹನ ಚಾಲನೆ, ಫಾರೆಸ್ಟ್ ಗಾರ್ಡ್... ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ಸೇರಿ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಬಹುದು.
 
ಕೃಷಿ ಸಂಬಂಧಿತ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಅಲ್ಲದೆ, ಕೃಷಿಗೆ ಪೂರಕವಾಗಿರುವ ತೋಟಗಾರಿಕೆ, ಅರಣ್ಯ ಕೃಷಿ, ಹೈನುಗಾರಿಕೆ, ಜೇನುಗಾರಿಕೆ, ಮತ್ಸ್ಯೋದ್ಯಮ, ಕುಕ್ಕುಟೋದ್ಯಮ, ಕುರಿಸಾಕಣೆ ಮುಂತಾದ ಕೋರ್ಸ್‌ಗಳನ್ನೂ ಸೇರಿಕೊಂಡು ಬದುಕು ರೂಪಿಸಿಕೊಳ್ಳಬಹುದು.
 
ಸಾಮಾನ್ಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ‘ಓಪನ್ ಸ್ಕೂಲಿಂಗ್’ ಮೂಲಕ 10ನೇ ತರಗತಿ ಪಾಸಾದ ವಿಶೇಷ ಮಕ್ಕಳಿಗೂ (ಕಿವುಡ, ಮೂಗ, ಅಂಧ, ಅಂಗವಿಕಲ, ಮಾನಸಿಕ ಅಸ್ವಸ್ಥ...) ಸಂಬಂಧಿಸಿದ ಹಲವು ಶಿಕ್ಷಣ ಸಂಸ್ಥೆ ಹಾಗೂ ವೃತ್ತಿಪರ ಕಾಲೇಜುಗಳು ರಾಜ್ಯದಾದ್ಯಂತ ಹಲವು ಕಡೆಗಳಲ್ಲಿವೆ.
 
***
10ರ ನಂತರ ಹತ್ತಾರು ಉದ್ಯೋಗಾವಕಾಶ
ಸೇನೆ, ಅರೆಸೇನಾ ಪಡೆಯಲ್ಲಿ ಅವಕಾಶ: ಹತ್ತನೇ ತರಗತಿ ನಂತರ ಹಲವು ಉದ್ಯೋಗಾವಕಾಶಗಳಿವೆ. ಅದರಲ್ಲಿ ಮುಖ್ಯವಾದುದು ‘ಸೇನೆ’. 10ನೇ ತರಗತಿ ಪಾಸಾದವರು ಭೂಸೇನೆಯಲ್ಲಿ ಜನರಲ್‌ ಡ್ಯೂಟಿ (ಸೋಲ್ಜರ್), ಟ್ರೇಡ್ಸ್‌ಮನ್, ನೌಕಾಸೇನೆಯಲ್ಲಿ ಸೇಲರ್ ಆಗಿ, ವಾಯುಸೇನೆಯಲ್ಲಿ ‘ಏರಮನ್’ ಆಗಿ ಉದ್ಯೋಗಕ್ಕೆ ಸೇರಬಹುದು. ಅಲ್ಲದೆ, ‘ಸಿಆರ್‌ಪಿಎಫ್’ (ಕೇಂದ್ರೀಯ ಮೀಸಲು ಪೊಲೀಸ್ ಪಡೆ), ‘ಆರ್‌ಪಿಎಫ್’ (ರೈಲ್ವೆ ಪೊಲೀಸ್ ಪಡೆ), ‘ಸಿಐಎಸ್ಎಫ್’ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ), ‘ಬಿಎಸ್ಎಫ್’ (ಗಡಿ ಭದ್ರತಾ ಪಡೆ), ‘ಐಟಿಬಿಎಸ್ಎಫ್’ (ಇಂಡೋ–ಟಿಬೆಟನ್ ಗಡಿ ಭದ್ರತಾ ಪಡೆ) ಮುಂತಾದ ಅರೆಸೇನಾ ಪಡೆಗಳಲ್ಲೂ ಉದ್ಯೋಗಕ್ಕೆ ಸೇರಬಹುದು. ಇದಕ್ಕೆ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗುವುದು ಅಗತ್ಯ. ಅಲ್ಲದೆ, ಈ ಹುದ್ದೆಗಳಿಗೆ ನಿರ್ದಿಷ್ಟ ವಯೋಮಾನ ಹಾಗೂ ದೇಹದಾರ್ಢ್ಯತೆಯನ್ನು ನಿಗದಿಗೊಳಿಸಲಾಗಿರುತ್ತದೆ. ‘ಪಿಎಸ್‌ಸಿ’ (ಲೋಕ ಸೇವಾ ಆಯೋಗ) ಹಾಗೂ ‘ಎಸ್ಎಸ್‌ಸಿ’ (ಸ್ಟಾಫ್ ಸೆಲೆಕ್ಷನ್ ಕಮಿಷನ್) ಗಳಲ್ಲೂ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಆಧರಿಸಿ ಕ್ಲೆರಿಕಲ್ ಹಾಗೂ ‘ಗ್ರೇಡ್– ಸಿ/ಡಿ’ ಹುದ್ದೆಗಳ ನೇಮಕಾತಿಗೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT