ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆಗೆ ಪರಿಹಾರ ನೀಡದ ಕೇಂದ್ರ

Last Updated 24 ಏಪ್ರಿಲ್ 2017, 4:54 IST
ಅಕ್ಷರ ಗಾತ್ರ

ಹಿರಿಯೂರು: ‘ದೇಶದಲ್ಲಿ ಸಾಲದ ಹೊರೆಯಿಂದ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಕುಟುಂಬಗಳಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಯಾ ಪೈಸೆ ಪರಿಹಾರವನ್ನೂ ನೀಡದೆ ವಂಚಿಸಿದೆ’ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.

ನಗರದಲ್ಲಿರುವ ಶಾಸಕ ಡಿ.ಸುಧಾಕರ್ ಅವರ ಕಚೇರಿ ಮುಂಭಾಗ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳೊಂದಿಗೆ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ ಒಂದು ಸಾವಿರ ದಾಟಿದೆ. ಅವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹ 5 ಲಕ್ಷ ಪರಿಹಾರ ನೀಡಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದವು. ಪ್ರಧಾನಿ ಮೋದಿ ಅವರ ಭಾಷಣಗಳಲ್ಲಿ ರೈತಾಪಿ ವರ್ಗದ ಬವಣೆಗಳ ಕುರಿತು ಒಂದೇ ಒಂದು ಮಾತು ಇಲ್ಲದಿರುವುದು ಬೇಸರ ತಂದಿದೆ. ಅವರು ಬಡವರ ಪರ ಒಂದೇ ಒಂದು ಕಾರ್ಯಕ್ರಮ ಘೋಷಣೆ ಮಾಡಲಿಲ್ಲ’ ಎಂದು ಟೀಕಿಸಿದರು.

‘ಯುಪಿಎ ಸರ್ಕಾರ ಜಾರಿಗೆ ತಂದ ಮಹತ್ವದ ಯೋಜನೆಗಳ ಹೆಸರು ಬದಲಿಸಿ ಮರು ಅನುಷ್ಠಾನ ಮಾಡಿ ಕೇಂದ್ರ ಸರ್ಕಾರ ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ರಾಜ್ಯಗಳ ಮರು ವಿಂಗಡಣೆ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರಿಂದಲೇ ಇಂದು ಪ್ರಜಾತಂತ್ರ ಉಳಿದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಜನಸಾಮಾನ್ಯರು ಕೇವಲ ₹ 15 ನೀಡಿ ದಾಖಲೆಗಳನ್ನು ಪಡೆಯಬಹುದು. ಇದು ಕಾಂಗ್ರೆಸ್‌ಗೆ ಕೆಲವೆಡೆ ತಿರುಗು ಬಾಣವಾಗಿದ್ದರೂ ಜನರ ಕೈಗೆ ಪರಮಾಧಿಕಾರ ನೀಡಿದ ಶ್ರೇಯಸ್ಸು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ₹ 10 ಸಾವಿರ ಕೋಟಿ ಮೀಸಲಿಡುವುದಾಗಿ ಹೇಳಿದ್ದೆವು. ಆದರೆ, ಕೇವಲ ನಾಲ್ಕು ವರ್ಷಗಳಲ್ಲಿ ₹ 62 ಸಾವಿರ ಕೋಟಿ ನೀಡಿ ಬದ್ಧತೆ ಮೆರೆದಿದ್ದೇವೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ ನಿರೀಕ್ಷೆಗೂ ಮೀರಿ ಹಣ ನೀಡಿದ್ದು, ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಮುಂದಿನ ವರ್ಷ ಬಯಲುಸೀಮೆಗೆ ಭದ್ರೆ ಹರಿಯುವುದು ಖಚಿತ’ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಡಿ.ಸುಧಾಕರ್ ಸ್ವಂತ ಖರ್ಚಿನಲ್ಲಿ ಮೇವು ಬೆಳೆದಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಪರಮೇಶ್ವರ್, ‘ಚಿಕ್ಕಮಗಳೂರು ಪ್ರವಾಸದಲ್ಲಿದ್ದಾಗ ಅಲ್ಲಿನ ರೈತರು ಸುಧಾಕರ್ ಅವರ ಪ್ರಯೋಗವನ್ನು ಅಲ್ಲೂ ಮಾಡಬೇಕು ಎಂದು ಚರ್ಚಿಸುತ್ತಿದ್ದರು. ಈ ಕ್ರಮ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.

ಶಾಸಕ ಸುಧಾಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರ ನಾಯ್ಕ, ಸದಸ್ಯರಾದ ಶಶಿಕಲಾ ಸುರೇಶ್ ಬಾಬು, ಗೀತಾ ನಾಗಕುಮಾರ್, ಸಿ.ಬಿ.ಪಾಪಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಸ್.ಚಂದ್ರಪ್ಪ, ಸದಸ್ಯರಾದ ಮುಕುಂದ್, ತಿಪ್ಪಮ್ಮ ನಾಗರಾಜ್, ಓಂಕಾರಪ್ಪ, ಅಪ್ಪಾಜಿ ಖಾದಿ ರಮೇಶ್, ಕಲ್ಲಟ್ಟಿ ತಿಪ್ಪೇಸ್ವಾಮಿ, ಅಮೖತೇಶ್ವರ್ ಸ್ವಾಮಿ, ಬಿ.ಎನ್.ಪ್ರಕಾಶ್, ಇ.ಮಂಜುನಾಥ್, ಕಂದೀಕೆರೆ ಸುರೇಶ್ ಬಾಬು, ಈರಲಿಂಗೇಗೌಡ, ಗಿಡ್ಡೋಬನಹಳ್ಳಿ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT