ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹೈಜಾಕ್‌

Last Updated 24 ಏಪ್ರಿಲ್ 2017, 5:24 IST
ಅಕ್ಷರ ಗಾತ್ರ

ದಾವಣಗೆರೆ: ಭ್ರಷ್ಟ ರಾಜಕಾರಣಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್‌ ಮಾಡಿದ್ದಾರೆ. ಜನರ ಕೈಗೆ ಮತ್ತೆ ಪ್ರಜಾತಂತ್ರ ವ್ಯವಸ್ಥೆ ಸಿಗಬೇಕಾದರೆ ಜನಾಂದೋಲನಗಳ ಮಹಾಮೈತ್ರಿಯ ಹೋರಾಟ ಅಗತ್ಯ ಎಂದು ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಹೇಳಿದರು.

ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜನಾಂದೋಲನಗಳ ಮಹಾಮೈತ್ರಿ, ಜೆಸಿಬಿ ಪಕ್ಷಗಳ ದುಷ್ಟ ರಾಜಕಾರಣದ ವಿರುದ್ಧ ಜನ ಪರ್ಯಾಯ ಕಟ್ಟೋಣ’ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದು 7 ದಶಕಗಳು ಕಳೆಯುತ್ತ ಬಂದರೂ ಗಂಭೀರ ಸಮಸ್ಯೆಗಳು ಬಗೆಹರಿದಿಲ್ಲ. ಕೃಷಿ ಸಂಕಟ ಹೆಚ್ಚಾಗಿದೆ. ನಿರುದ್ಯೋಗ, ಭ್ರಷ್ಟಾಚಾರ ಮಿತಿಮೀರಿದೆ. ರೈತರ ಬದುಕು ಸಂಕಷ್ಟದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲಮನ್ನಾ ಮಾಡದೆ ಜನಹಿತ ಮೆರೆತಿವೆ ಎಂದು ವಾಗ್ದಾಳಿ’ ನಡೆಸಿದರು.

‘ರೈತರ, ಕೃಷಿಕರ, ಕಾರ್ಮಿಕರ ಸಮಸ್ಯೆಗಳಿಗೆ ಜನ ಪರ್ಯಾಯವೇ ಪರಿಹಾರ. ಜನಾಂದೋಲನದ ಮಹಾ ಮೈತ್ರಿಯ ಅವಶ್ಯಕತೆಯನ್ನು ತಿಳಿಸಲು ರಾಜ್ಯದ ಹಲವೆಡೆ ಜನ ಪರ್ಯಾಯ ಕಟ್ಟೋಣ ಜಾಥಾ ಹಮ್ಮಿಕೊಳ್ಳಲಾಗಿದೆ. ಜೆಸಿಬಿ ಪಕ್ಷಗಳ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಹೊರತಾಗಿ ಪರ್ಯಾಯ ರಾಜಕೀಯ ಇಂದಿನ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಶೇ 60ರಷ್ಟು ಭೂರಹಿತ ಕೃಷಿಕರು, ಕಾರ್ಮಿಕರು, ಕುಶಲಕರ್ಮಿ ಗಳು ಇದ್ದಾರೆ. ಇವರ ಅಭಿವೃದ್ಧಿಗೆ ಶ್ರಮಿಸದ ಸರ್ಕಾರಗಳು ಮೂರು ಕೋಟಿ ಹೆಕ್ಟೇರ್ ಕೃಷಿ ಭೂಮಿ ಯನ್ನು ರೈತರಿಂದ ಕಸಿದುಕೊಂಡು ಉದ್ಯಮಿಗಳಿಗೆ ನೀಡಿವೆ. ಗಣಿ ಕಂಪೆನಿ ಗಳಿಗೆ ಪರಿಸರವನ್ನು ಲೂಟಿ ಮಾಡಲು ಅವಕಾಶ ನೀಡಿವೆ’ ಎಂದು ಆರೋಪಿಸಿದರು.

‘ನ್ಯಾಯಾಧೀಶರು, ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬ ಸರ್ಕಾರಕ್ಕೆ ಪತ್ರ ಬರೆಯುತ್ತಾನೆ ಎಂದರೆ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ತಿಳಿಯುತ್ತದೆ. ಮಹಾ ಭ್ರಷ್ಟರನ್ನು ಸಾರ್ವಜನಿಕ ಜೀವನದಿಂದ ಮುಕ್ತ ಗೊಳಿಸುವುದೇ ಜನಾಂದೋಲನಗಳ ಮಹಾಮೈತ್ರಿಯ ಉದ್ದೇಶ’ ಎಂದರು.

ಪ್ರಜಾಸೇವಕರಾಗಿ ಕೆಲಸ ಮಾಡಬೇಕಾದವರು ಜನರ ಹಿತ ಕಡೆಗಣಿಸಿದ್ದಾರೆ. ಸಾವಿರಾರು ಕೋಟಿ ಆಸ್ತಿಗಳಿಸಿ ಶಿಕ್ಷಣ ವ್ಯವಸ್ಥೆಯನ್ನು ಬಡವರಿಂದ ದೂರವಿಟ್ಟಿದ್ದಾರೆ’ ಎಂದು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ‘ಸಾಂವಿಧಾನಿಕ ಚೌಕಟ್ಟಿನಲ್ಲಿ ಹೋರಾಟ ಮಾಡುವ ಸಂಘಟನೆಗಳನ್ನು ಹಿಂಬಾಲಿಸಬೇಕಿದೆ. ಕಾಗೋಡು ಚಳವಳಿ ನಡೆದು ದಶಕಗಳ ಬಳಿಕ ಜನಾಂದೋಲನದ ಮಹಾಮೈತ್ರಿ ಬಲಗೊಂಡಿದ್ದು, ಎಲ್ಲರೂ ಕೈಜೋಡಿ ಸೋಣ’ ಎಂದು ಕರೆನೀಡಿದರು.

ಪ್ರಗತಿಪರ ಹೋರಾಟಗಾರ ಚಂದ್ರಶೇಖರ ಮೇಟಿ ಮಾತನಾಡಿ, ‘ಜನಾಂದೋಲನಗಳ ಮಹಾಮೃತ್ರಿ ರಾಜಕೀಯ ಪಕ್ಷವಲ್ಲ; ಇದೊಂದು ಜನಪರ ಚಳವಳಿಗಳನ್ನು ಮುನ್ನಡೆಸುತ್ತಿರುವ ಸಂಘಟನೆಗಳ, ವ್ಯಕ್ತಿಗಳ ವೇದಿಕೆ. ಕರ್ನಾಟಕದಲ್ಲಿ ಜೆಡಿಎಸ್‌,ಕಾಂಗ್ರೆಸ್‌, ಬಿಜೆಪಿಗಳಿಗೆ ಪರ್ಯಾಯವಾಗಿ ರಾಜಕೀಯ ಆಂದೋಲನ ನಿರ್ಮಾಣ ಮಾಡುವುದು ನಮ್ಮ ಗುರಿ’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹಲವೆಡೆ ಜನಪರ್ಯಾಯ ಕಟ್ಟೋಣ ಜಾಥಾ ನಡೆಸಲಾಯಿತು. ಏ.17ರಂದು ಮಂಡ್ಯದಲ್ಲಿ ಜಾಥಾಗೆ ಚಾಲನೆ ನೀಡಲಾಗಿದ್ದು, ಏ.27ರಂದು ರಾಯಚೂರಿನಲ್ಲಿ ಜಾಥಾ ಸಮಾರೋಪಗೊಳ್ಳಲಿದೆ.

ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್, ಪ್ರಗತಿಪರ ಚಿಂತಕ ರಾದ ರವಿಕೃಷ್ಣಾ ರೆಡ್ಡಿ ಶಿವನಕೆರೆ ಬಸವ ಲಿಂಗಪ್ಪ, ಮಂಜುನಾಥ್‌ ಕುಕ್ಕುವಾಡ, ಜ್ಯೋತಿ ಕುಕ್ಕುವಾಡ, ಆದಿಲ್‌ ಖಾನ್, ತಿಪ್ಪೇ ಸ್ವಾಮಿ, ಹೆಗ್ಗೆರೆ ರಂಗಪ್ಪ, ಗುರುಮೂರ್ತಿ, ಜಬೀನಾ ಖಾನಂ, ಮೌಲಾನಾಯಕ್, ವಾಸನದ ಓಂಕಾರಪ್ಪ, ಬಲ್ಲೂರು ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT