ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಪಿ. ಶಾಂತ ಮತ್ತೆ ಅಮಾನತು

Last Updated 24 ಏಪ್ರಿಲ್ 2017, 5:41 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಧನದಾಹದಿಂದ ಮಹಿಳೆಯರ ಗರ್ಭಕೋಶಗಳನ್ನು ತೆಗೆದು ಹಾಕಿದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಪಿ. ಶಾಂತ ಅವರನ್ನು ಸರ್ಕಾರವು ಮತ್ತೆ ಅಮಾನತು ಮಾಡಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಅಖಂಡಾನಂದ ಸ್ವಾಮಿ ಬಣ) ರಾಜ್ಯ ಘಟಕದ ಅಧ್ಯಕ್ಷ ಶಿವಪುತ್ರಪ್ಪ ಮಲ್ಲಾಡದ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತು ಆರೋಗ್ಯ ಇಲಾಖೆಯ ಆಯುಕ್ತಾಲಯ ಆದೇಶ ಹೊರಡಿಸಿದ್ದು, ವೈದ್ಯಾಧಿಕಾರಿಯ ಕರ್ತವ್ಯ ನಿರ್ಲಕ್ಷತೆ ಹಾಗೂ ದುರ್ನಡತೆ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶ ಎನ್‌.ಸುಬ್ಬರಾವ್‌ ಅವರನ್ನು ನೇಮಕ ಮಾಡಿದೆ’ ಎಂದರು.
‘ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಪಿ.ಶಾಂತ 2013ರಿಂದ 2016ರ ತನಕ 530 ಶಸ್ತ್ರ ಚಿಕಿತ್ಸೆಗಳನ್ನು ಮಾಡಿದ್ದರು. ಧನದಾಹದಿಂದ ಮಹಿಳೆಯರ ಗರ್ಭಕೋಶ ತೆಗೆದಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಆರೋಪಗಳು ಕ್ರಿಮಿನಲ್‌ ಸ್ವರೂಪದಿಂದ ಕೂಡಿದ ಕಾರಣ ಆಯುಕ್ತಾಲಯವು ಪ್ರಕರಣವನ್ನು ಸಿಐಡಿ ತನಿಖೆಗೂ ನೀಡಿದೆ’ ಎಂದರು.

‘ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿನ ಹೆಸರು ನೋಂದಣಿ ರದ್ದುಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ, ಅವರ ಅಮಾನತು ಮುಗಿದ ಬಳಿಕ ಯಾವುದೇ ಸ್ಥಳಕ್ಕೆ ನಿಯೋಜನೆಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮವಲ್ಲ’ ಎಂದರು.

ಏನಿದು ಪ್ರಕರಣ: ‘ಹಣದ ಆಸೆಗಾಗಿ ಡಾ. ಪಿ. ಶಾಂತ ಅವರು ದಲಿತ ಕುಟುಂಬದ ಹೆಣ್ಣು ಮಕ್ಕಳಿಗೆ ಗರ್ಭಕೋಶ ತೆಗೆಯುವ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಹೊಟ್ಟೆನೋವಿನ ಚಿಕಿತ್ಸೆಗೆ ಬಂದ ಸುಮಾರು 18 ರಿಂದ 30 ವರ್ಷದೊಳಗಿನ ಯುವತಿಯರಿಗೂ, ‘ಗರ್ಭಕೋಶದ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಪ್ರಾಣಕ್ಕೆ ಅಪಾಯ’ ಎಂದು ಹೆದರಿಸಿ ಚಿಕಿತ್ಸೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಇವು ಮೇಲ್ನೋಟಕ್ಕೆ ಸತ್ಯಕ್ಕೆ ಸಮೀಪವಾಗಿ ಕಂಡುಬಂದ ಕಾರಣ ಆರೋಗ್ಯ ಇಲಾಖೆಯ ಆಯುಕ್ತಾಲಯವು, ಅವರನ್ನು ಅಮಾನತು ಮಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು’ ಎಂದರು.

‘ಆದರೆ, ಡಾ.ಶಾಂತ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಕೆಎಟಿ  ಅಮಾನತು ಆದೇಶವನ್ನು ರದ್ದುಗೊಳಿಸಿತ್ತು. ‘ಡಾ.ಪಿ. ಶಾಂತ ಅಧಿಕಾರ ಬಳಸಿ, ಪ್ರಭಾವ ಬೀರಿ ಸಾಕ್ಷ್ಯ ನಾಶ ಪಡಿಸಬಹುದು’ ಎಂಬ ಕಾರಣಕ್ಕೆ ಆಯುಕ್ತಾಲಯವು ತನ್ನ ವಿಶೇಷಾಧಿಕಾರ ಬಳಸಿಕೊಂಡು 10 ಫೆಬ್ರುವರಿ 2017ರಿಂದ ಅನ್ವಯವಾಗುವಂತೆ ಎರಡನೇ ಬಾರಿಗೆ ಸರ್ಕಾರಿ ಸೇವೆಯಿಂದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚೆನ್ನವ್ವ ಲಮಾಣಿ, ಜಯಮ್ಮ ಲಮಾಣಿ, ಜಗದೀಶ ಕೆರೂಡಿ,ರವಿ ಕೆರೂಡಿ, ಗೋವಿಂದ ಲಮಾಣಿ, ಲಲಿತವ್ವ ಲಮಾಣಿ, ಶಾಂತವ್ವ ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT