ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗು ಗುಂಡಿ ಮಾಡಿ ಬೇಸಿಗೆ ಗೆದ್ದವರು...

Last Updated 24 ಏಪ್ರಿಲ್ 2017, 5:49 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಬೇಸಿಗೆ ಬಂದರೆ ಸಾಕು, ಕೇವಲ ನೀರಿನದ್ದೇ ಕಥೆ–ವ್ಯಥೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ. ನಗರಸಭೆಯ ನೀರು ಪೂರೈಕೆ ಬಹುತೇಕ ಅಸ್ತವ್ಯಸ್ತಗೊಂಡರೆ, ಕೊಳವೆಬಾವಿಗಳೂ ಬತ್ತಿ ಹೋಗುತ್ತವೆ. ಆರು ಕೆರೆಗಳಿದ್ದರೂ, ಅಂತರ್ಜಲಕ್ಕೆ ತತ್ವಾರ. ಈ ನಡುವೆಯೇ ತಮ್ಮ ಕೊಳವೆಬಾವಿಗಳಿಗೆ ಇಂಗುಗುಂಡಿ ಮಾಡಿಸಿ ಬೇಸಿಗೆಯಲ್ಲೂ ನೀರಿನ ಸಮಸ್ಯೆಯನ್ನು ಗೆದ್ದವರು ಹಲವರು ಇದ್ದಾರೆ.

ನೀರು ಮತ್ತು ಪರಿಸರ ಬಗ್ಗೆ ವಿಶೇಷ ಕಾಳಜಿ ವಹಿಸಿದವರ ಪೈಕಿ ವಿದ್ಯಾನಗರದ ನಿವಾಸಿ ರಾಜಣ್ಣ ಹಂದ್ರಾಳ ಒಬ್ಬರು. 10 ವರ್ಷಗಳ ಹಿಂದೆಯೇ ತಮ್ಮ ಮನೆಯ ಕೊಳವೆಬಾವಿಗೆ ಇಂಗುಗುಂಡಿ ಮಾಡಿಸಿದ್ದಾರೆ. ಹೀಗಾಗಿ, ಅವರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ಕಳೆದೆರಡು ವರ್ಷಗಳಲ್ಲಿ ಸತತ ಬರದ ಪರಿಣಾಮ, ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಆದರೂ, ಕೊಳವೆಬಾವಿ ಕೈಕೊಟ್ಟಿಲ್ಲ.

‘ನಮ್ಮ ಸುತ್ತಲ ಮನೆಗಳಲ್ಲಿ ಸುಮಾರು 12 ಕೊಳವೆ ಬಾವಿಗಳಿವೆ. ಪ್ರತಿಯೊಬ್ಬರೂ ಇಂಗುಗುಂಡಿ ಮಾಡಿಸಿಕೊಂಡರೆ, ನೀರಿಗಾಗಿ ನಗರಸಭೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ’ ಎನ್ನುತ್ತಾರೆ ರಾಜಣ್ಣ ಹಂದ್ರಾಳ.‘ಲಕ್ಷಗಟ್ಟಲೆ ಖರ್ಚು ಮಾಡಿ ದೊಡ್ಡ ಮನೆ ಕಟ್ಟಿಸುತ್ತಾರೆ. ವಿನ್ಯಾಸ ಮಾಡಿಸುತ್ತಾರೆ. ‘ಇಷ್ಟೊಂದು ದೊಡ್ಡ ಮನೆ ಏಕೆ?’ ಎಂದು ಪ್ರಶ್ನಿಸಿದರೆ, ‘ಮಕ್ಕಳಿಗಾಗಿ’ ಎಂಬ ಉತ್ತರ ನೀಡುತ್ತಾರೆ. ಆದರೆ, ಅದೇ ಮಕ್ಕಳ ಭವಿಷ್ಯಕ್ಕಾಗಿ ಜೀವಜಲವಾದ ನೀರಿನ ಸಂರಕ್ಷಣೆ ಮಾಡಲು ಕೇವಲ ₹10ರಿಂದ ₹15 ಸಾವಿರ ಖರ್ಚಿನ ಇಂಗುಗುಂಡಿ ಮಾಡಿಸುವುದಿಲ್ಲ. ಜೀವಕ್ಕೆ ನೀಡದ ಬೆಲೆಯನ್ನು ಪ್ರತಿಷ್ಠೆಗೆ ನೀಡುತ್ತಾರೆ’ ಎನ್ನುತ್ತಾರೆ ಅವರು.

‘ನೀರು ಇಂಗಿಸುವ ಹಾಗೂ ಗಿಡ ಬೆಳೆಸುವ ಕಾರ್ಯವನ್ನು ನಾಗರಿಕರೇ ಮಾಡಬೇಕು. ಸರ್ಕಾರವನ್ನು ಅವಲಂಬಿಸಲು ಸಾಧ್ಯವಿಲ್ಲ. ನಿರ್ಲಕ್ಷ್ಯ ವಹಿಸಿದರೆ ಮುಂದಿನ 20ರಿಂದ 30 ವರ್ಷಗಳಲ್ಲಿ ಕುಡಿಯುವ ನೀರಿಲ್ಲದೇ ಸಾಯುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ’ ಎನ್ನುತ್ತಾರೆ ಅವರು.ವಿದ್ಯಾನಗರದ ದಾಕ್ಷಾಯಿಣಿ ಗಾಣಿಗೇರ ಅವರು ಕಳೆದ ವರ್ಷ ತಮ್ಮ ಮನೆಯ ಕೊಳವೆಬಾವಿಗೆ ಇಂಗುಗುಂಡಿ ಮಾಡಿಸಿಕೊಂಡಿದ್ದಾರೆ. ತಮ್ಮ ನಿವೇಶನದ ಮೂರ್ನಾಲ್ಕು ಮನೆಗಳ ಮೇಲ್ಚಾವಣಿಯ ನೀರೆಲ್ಲ ಹರಿದು ಇಂಗುಗುಂಡಿಗೆ ಬರುವಂತೆ ಮಾಡಿಸಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದ ಅವರ ಮನೆಯ ಕೊಳವೆಬಾವಿಯಲ್ಲಿ ಈ ಬಾರಿ ನೀರಿದೆ.

ಕಳೆದ ವರ್ಷ ಬರದ ಪರಿಣಾಮ ಉತ್ತಮ ಮಳೆ ಆಗಲಿಲ್ಲ. ಕೆಲವೇ ದಿನ ಮಳೆ ಸುರಿಯಿತು. ಆದರೆ, ಬೆರಳೆಣಿಕೆ ಮಳೆಯ ನೀರಿನಲ್ಲೇ ಕೊಳವೆಬಾವಿ ಮರುಪೂರಣಗೊಂಡಿದೆ. ಇನ್ನೂ ಕೊಳವೆಬಾವಿಯಲ್ಲಿ ನೀರಿದೆ. ಈ ಬಾರಿ ಉತ್ತಮ ಮಳೆಯಾದರೆ, ಮುಂದಿನ ದಿನಗಳಲ್ಲಿ ಯಾವುದೇ ಚಿಂತೆ ಇಲ್ಲ ಎನ್ನುವ ದೃಢವಿಶ್ವಾಸ ಅವರದ್ದು.‘ಸ್ವಂತ ಮನೆ, ಎಲ್ಲ ವ್ಯವಸ್ಥೆಯಿದ್ದರೂ, ಬೇಸಿಗೆಯಲ್ಲಿ ನೀರಿನ ಕೊರತೆ ಕಾಡುತ್ತಿತ್ತು. ಆದರೆ, ಇಂಗುಗುಂಡಿ ಮಾಡಿಸಿದ ಬಳಿಕ ಸಂಪೂರ್ಣ ನೆಮ್ಮದಿಯ ಬದುಕು’ ಎನ್ನುತ್ತಾರೆ ಅವರು.

ಶಿವಶಕ್ತಿ ಪ್ಯಾಲೇಸ್ ಹಿಂಭಾಗದಲ್ಲಿರುವ ಓಂ ಶ್ರೀ ಸಾಯಿ ಬಾಲಾಜಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಹಯೋಗದ ‘ಗಂಗೋತ್ರಿ ಪರಿಶುದ್ಧ ನೀರಿನ ಘಟಕ’ದ ಶ್ರೀಕಾಂತ ರಾಮಗೌಡ ಪಾಟೀಲ್ ಕೊಳವೆಬಾವಿಗೆ ಇಂಗುಗುಂಡಿ ಮಾಡಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಮೇಲ್ಚಾವಣಿ ನೀರೆಲ್ಲ ಹರಿದು ಇಂಗುಗುಂಡಿಗೆ ಬರುವಂತೆ ಮಾಡಿದ್ದಾರೆ.
‘ಕೇವಲ, ತಮ್ಮ ಮನೆಗೆ ಮಾತ್ರವಲ್ಲ, ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಬೇಕಾದ ನೀರು ಈ ಕೊಳವೆಬಾವಿಯಲ್ಲಿ ಸಿಗುತ್ತದೆ. ಒಂದು ವರ್ಷದಿಂದ ನೀರಿನ ಸಮಸ್ಯೆ ಇಲ್ಲ. ಸುತ್ತ ಎಲ್ಲರೂ ಮಾಡಿಸಿಕೊಂಡರೆ, ಈ ಪ್ರದೇಶದ ಅಂತರ್ಜಲಮಟ್ಟ ವೃದ್ಧಿ ಸಾಧ್ಯ’ ಎನ್ನುತ್ತಾರೆ ಅವರು. 

‘ಒಂದೆಡೆ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಇನ್ನೊಂದೆಡೆ, ಕೆಲವರು ರಸ್ತೆ, ಅಂಗಳಕ್ಕೆ ನೀರು ಹಾಯಿಸುತ್ತಾರೆ. ವಾಹನ ತೊಳೆಯಲು ವಿಪರೀತ ಬಳಸುತ್ತಾರೆ. ಇಂತಹ ನೀರಿನ ದುರ್ಬಳಕೆಯ ಬಗ್ಗೆಯೂ ಜಾಗೃತಿ ಮುಖ್ಯ’ ಎನ್ನುತ್ತಾರೆ ವಿದ್ಯಾನಗರ ನಿವಾಸಿ ರಾಜೂ ಪೇಟಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT