ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ವಿರೋಧಿ ಚಟುವಟಿಕೆ: ಜಾಗೃತಿ ಅಗತ್ಯ

Last Updated 24 ಏಪ್ರಿಲ್ 2017, 6:23 IST
ಅಕ್ಷರ ಗಾತ್ರ

ಭಾಲ್ಕಿ: ‘ಸಂಘಟನೆ, ಜನ ಜಾಗೃತಿ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯಲು ಸಾಧ್ಯವಾಗುತ್ತದೆ’ ಎಂದು ಗದಗ ಜಗದ್ಗುರು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನುಡಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಶನಿವಾರ ನಡೆದ ಲಿಂ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ, ವಚನ ಜಾತ್ರೆ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪ್ರತಿವರ್ಷ ನಡೆಯುವ ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಮೈಸೂರಿನ ಜಂಬೂ ಸವಾರಿಯ ಹಾಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಾಂಸ್ಕೃತಿಕ ಪುನರುತ್ಥಾನ ಕಾರ್ಯವನ್ನು ನಿಶ್ಯಬ್ದವಾಗಿ ಮುಂದುವರಿಸಿಕೊಂಡು ಹೋಗುತ್ತಿದೆ’ ಎಂದು ತಿಳಿಸಿದರು.

‘ಶಾಲೆಯೇ ಎಲ್ಲರನ್ನೂ ಜಾಣರನ್ನಾಗಿಸುವುದಿಲ್ಲ. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಪ್ರತಿನಿತ್ಯ ನಡೆದ ಅರ್ಥಗರ್ಭಿತ ಚರ್ಚೆ ಸಾಮಾನ್ಯ ಮಹಿಳೆಯರನ್ನು ಜಾಣರನ್ನಾಗಿಸಿತು. ಅಕ್ಕಮಹಾದೇವಿ ಜ್ಞಾನದ ಉತ್ತುಂಗ ಶಿಖರವಾಗಿದ್ದರು’ ಎಂದು ಹೇಳಿದರು.

‘ಸರ್ಕಾರ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ಸಂಗತಿ. ಆದರೆ, ಈಗಿರುವ ಅನುಭವ ಮಂಟಪದ ಸ್ಥಳದಲ್ಲೇ ಮಂಟಪ ನಿರ್ಮಿಸಬೇಕು. ಬೇರೆಡೆ ನಿರ್ಮಿಸಲು ಮುಂದಾಗಿ ಜನರಲ್ಲಿ ಗೊಂದಲಕ್ಕೆ ಆಸ್ಪದ ಮಾಡಿಕೊಡಬಾರದು. ಇಂದಿನ ಕೆಲ ಸ್ವಾಮೀಜಿಗಳು ರಾಜಕಾರಣಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅನಾಥ, ನಿರ್ಗತಿಕ ಬಡವರನ್ನು ಕಾಪಾಡುತ್ತಿರುವ ಬಸವಲಿಂಗ ಪಟ್ಟದ್ದೇವರಿಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಭಕ್ತರನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತಿರುವ ಕೆಲವೇ ಮಠಗಳಲ್ಲಿ ಭಾಲ್ಕಿ ಹಿರೇಮಠವೂ ಒಂದು’ ಎಂದು ನುಡಿದರು.

ಭೂಸೇನಾ ನಿಗಮ ಮಂಡಳಿ ಅಧ್ಯಕ್ಷ ರಾಜಶೇಖರ ಪಾಟೀಲ ಮಾತನಾಡಿ, ‘ಹಿರೇಮಠ ವೈಚಾರಿಕ ಮಠವಾಗಿದ್ದು, ಬಸವ ತತ್ವ ಮತ್ತು ಕನ್ನಡ ಭಾಷೆಯ ಏಳಿಗೆ, ಉಳಿವು ಇದರ ಉಸಿರು’ ಎಂದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ‘ಸ್ವಾಮೀಜಿಗಳ ಹಾಗೆ ರಾಜಕಾರಣಿಗಳು ಸಮಾಜ ಸೇವೆ ಮಾಡುವಲ್ಲಿ ಇಚ್ಛಾಶಕ್ತಿ ತೋರಿಸಬೇಕು. ಇಚ್ಛಾಶಕ್ತಿಯ ಕೊರತೆಯಿಂದ ತಾಲ್ಲೂಕಿನ ಬ್ಯಾರೇಜ್‌ಗಳಲ್ಲಿ ನೀರು ನಿಂತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಪ್ರಭು ಚವ್ಹಾಣ, ಎಸ್.ಪಿನಾಕಪಾಣಿ, ಎಸ್.ದಿವಾಕರ್, ಜಹೀರಾಬಾದ್ ಲಿಂಗಾಯತ ಸಮಾಜದ ಕಾರ್ಯದರ್ಶಿ ಪ್ರಭುರಾವ ಗೊನ್ನಳ್ಳಿ ಮಾತನಾಡಿದರು.

ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಹರಿಬಾಬು, ನೀರಾವರಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಎಂಜಿನಿಯರ್ ಜಗನ್ನಾಥ ಹಲಂಗೆ, ವಿ.ಎಂ.ಕೋರಿ, ಗುರುನಾಥ ಕೊಳ್ಳುರು, ಬಾಬು ವಾಲಿ, ಸ್ವತಂತ್ರ ಸೇನಾನಿ ಬಸವಣಪ್ಪ ಶೇರಿಕಾರ, ಕಾಶಪ್ಪಾ ಧನ್ನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಪ್ರಕಾಶ ಟೊಣ್ಣೆ, ಬಂಡೆಪ್ಪ ಕಂಟೆ, ರವಿ ಮೀಸೆ, ಸೂರ್ಯಕಾಂತ ಅಲ್ಮಾಜೆ, ಜಗದೀಶ ಖೂಬಾ, ಚಂದ್ರಕಾಂತ ಬಿರಾದರ, ಸುಭಾಶ ಗಾಜರೆ, ಚಂದ್ರಪ್ಪಾ ಬಿರಾದರ, ಎಸ್.ಬಿ ಬಿರಾದರ, ಪಿ.ಸಂಗಪ್ಪ ಅಬ್ಯಂದ ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಸೋಮನಾಥ ಯಾಳವಾರ ಪ್ರಾಸ್ತಾವಿಕ ಮಾತನಾಡಿದರು. ಕಿರಣಕುಮಾರ ಶೆಟಕಾರ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಿಸಿದರು. ಸಂಜುಕುಮಾರ ಸ್ವಾಮಿ, ಪುಂಡಲೀಕ ಪಾಟೀಲ ಗುಮ್ಮಾ ವಚನ ಸಂಗೀತ ನಡೆಸಿಕೊಟ್ಟರು. ವಿಶ್ವನಾಥ ಬಿರಾದರ ವಂದಿಸಿದರು.

**

ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಗುರುಕುಲ ಶಾಲೆ, ಉತ್ತಮ ಸಾಮಾಜಿಕ ಕಾರ್ಯ ಮಾಡುತ್ತಿರುವ ಹಿರೇಮಠ ಈ ಭಾಗದ ಜನರ ಕಲ್ಪವೃಕ್ಷವಾಗಿದೆ.
ಸಿದ್ಧಲಿಂಗ ಸ್ವಾಮೀಜಿ
ಜಗದ್ಗುರು ತೋಂಟದಾರ್ಯ ಮಠ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT