ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 19 ಶುದ್ಧ ಕುಡಿಯುವ ನೀರಿನ ಘಟಕ

Last Updated 24 ಏಪ್ರಿಲ್ 2017, 6:55 IST
ಅಕ್ಷರ ಗಾತ್ರ

ಹಾಸನ:  ಶುದ್ಧ ಕುಡಿಯುವ ನೀರು ಘಟಕದ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ರಾಜಕೀಯ ತಿಕ್ಕಾಟದ ನಡುವೆಯೇ ಹೊಸದಾಗಿ ನಗರದ 19 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ.

ನಗರದ 3ನೇ ವಾರ್ಡ್‌ನಲ್ಲಿ  ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾದ ಸ್ವಲ್ಪ ಹೊತ್ತಿನ ಬಳಿಕ ಬಂದ್‌ ಆಗಿದೆ. ವಾರ್ಡ್‌ನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೈಕ್ರೋಚಿಪ್‌ ಹೊಂದಿರುವ ಸ್ವೈಪಿಂಗ್‌ ಕಾರ್ಡ್‌ ಅಳವಡಿಸಲಾಗಿತ್ತು. ಸುವ್ಯವಸ್ಥಿವಾಗಿ ಮಾಡಿದ ಯೋಜನೆಗೆ ಅಡ್ಡಿಪಡಿಸಲು ಘಟಕಕ್ಕೆ ಬೀಗ ಜಡಿದು ಜನರಿಗೆ ವಂಚಿಸಲಾಗಿದೆ ಎಂದು ವಾರ್ಡ್‌ ಸದಸ್ಯ ಸುರೇಶ್‌ ಕುಮಾರ್‌ ಆರೋಪಿಸಿದ್ದರು.

ಆರೋಪ ನಿರಾಕರಿಸಿದ ನಗರಸಭೆ ಅಧ್ಯಕ್ಷ ಅನಿಲ್‌ ಕುಮಾರ್‌, ‘ವಾಲ್‌ಮನ್‌ ಬೀಗ ಹಾಕಿಕೊಂಡು ಹೋಗಿದ್ದರು. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಬಳಿಕ ಘಟಕ ಮತ್ತೆ ಆರಂಭಗೊಂಡಿದೆ’ ಎಂದು ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದರು.

ನಗರಸಭೆ ಅನುದಾನದಲ್ಲಿ ವಿವಿಧ ವಾರ್ಡ್‌ಗಳಲ್ಲಿ 19 ಕಡೆ ನೀರಿನ ಘಟಕ ಆರಂಭಿಸಲಾಗುತ್ತಿದೆ. ಇ ಟೆಂಡರ್‌ ಮೂಲಕ ನಾಲ್ಕು ಏಜೆನ್ಸಿಗಳು ಗುತ್ತಿಗೆ ಪಡೆದಿದ್ದು, ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕೆಲಸ ಆರಂಭವಾಗಲಿದೆ. 

₹ 2 ಲಕ್ಷ ವೆಚ್ಚದಲ್ಲಿ 250 ಲೀಟರ್‌ ಸಾಮರ್ಥ್ಯದ ಘಟಕ, ₹ 3 ಲಕ್ಷ ವೆಚ್ಚದ 500 ಲೀಟರ್‌ ಸಾಮರ್ಥ್ಯದ ಘಟಕ ಮತ್ತು ₹ 4 ಲಕ್ಷ ವೆಚ್ಚದಲ್ಲಿ 1000 ಲೀಟರ್‌ ಸಾಮರ್ಥ್ಯದ ಘಟಕ ಸ್ಥಾಪಿಸಲಾಗುವುದು.

ಸಾವಿರ ಲೀಟರ್‌ ಸಾಮರ್ಥ್ಯದ ಘಟಕವನ್ನು ದೇವಿಗೆರೆ, ಪೆನಷ್‌ನ್‌ ಮೊಹಲ್ಲಾದಲ್ಲಿ, 500 ಲೀಟರ್‌ ಘಟಕವನ್ನು ಸರ್ಕಾರಿ ಕಾಲೇಜು ಮತ್ತು ಜನದಟ್ಟಣೆ ಇರು ಕಡೆ ಹಾಗೂ ಉಳಿದ ಕಡೆ 250 ಲೀಟರ್‌ ಘಟಕ ಅಳವಡಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೂರು ತಿಂಗಳಲ್ಲಿ ನಗರದ ಜನತೆಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ.

‘ ಕಲುಷಿತ ನೀರು ಸೇವಿಸಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರಕಬೇಕು. ಕಳೆದ ಸಾಲಿನಲ್ಲಿ ಐದು ಘಟಕ ಆರಂಭಿಸಲಾಗಿದೆ. ಹೊಸ ಘಟಕಗಳು ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.
‘ನಗರದ ಜನಸಂಖ್ಯೆ 1.70 ಲಕ್ಷ. ದಿನಕ್ಕೆ 24 ಎಂಎಲ್‌ಡಿ ನೀರು ಅಗತ್ಯವಿದೆ. ವಿವಿಧ ಮೂಲಗಳಿಂದ 10 ಎಂಎಲ್‌ಡಿ ಮಾತ್ರ  ಲಭ್ಯವಿದೆ. ನಗರಸಭೆ 10 ಟ್ಯಾಂಕರ್‌ಗಳಲ್ಲಿ  ನೀರು ಪೂರೈಕೆ ಮಾಡುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT