ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹೋರಾತ್ರಿ ಕಾರ್ಯಾಚರಣೆ; ಕೊನೆಗೂ ಬದುಕುಳಿಯದ ‘ಕಾವೇರಿ’

Last Updated 24 ಏಪ್ರಿಲ್ 2017, 20:32 IST
ಅಕ್ಷರ ಗಾತ್ರ

ಝುಂಜರವಾಡ (ಅಥಣಿ ತಾಲ್ಲೂಕು): ಪ್ರಾರ್ಥನೆ ಫಲಿಸಲಿಲ್ಲ. ಹರಕೆ ಹೊತ್ತರೂ ಪ್ರಯೋಜನವಾಗಲಿಲ್ಲ. 53 ತಾಸು ನಿರಂತರ ಕಾರ್ಯಾಚರಣೆ ನಡೆಸಿದರೂ ಜಿಲ್ಲಾಡಳಿತದ ಯತ್ನ ಫಲಪ್ರದವಾಗಲಿಲ್ಲ...

ಕಾಲುಜಾರಿ ಕೊಳವೆಬಾವಿಯೊಳಗೆ ಬಿದ್ದಿದ್ದ ಕಾವೇರಿ ಅದರೊಳಗೆ ಕೊನೆಯುಸಿರೆಳೆದಿದ್ದಳು. ರಕ್ಷಣೆಗಾಗಿ ಅಹೋರಾತ್ರಿ ನಡೆಸಿದ ಕಾರ್ಯಾಚರಣೆ ವಿಫಲಗೊಂಡಿತು. ಸೋಮವಾರ ರಾತ್ರಿ 11.45ರ ಸುಮಾರಿಗೆ ಕಾವೇರಿ ಶವವನ್ನು ಕೊಳವೆ ಬಾವಿಯಿಂದ ಹೊರ ತೆಗೆಯಲಾಯಿತು. ಭಾನುವಾರ ರಾತ್ರಿ ಕೊಳವೆಬಾವಿ ಕೊರೆಯುವ ಯಂತ್ರ, ಬ್ರೇಕರ್‌ ಬಳಸಿ ಬಂಡೆ ಪುಡಿಗಟ್ಟಿ, 24 ಅಡಿ ಆಳದ ಸುರಂಗ ತೋಡಿದರೂ, ಕಾವೇರಿ ಸಿಲುಕಿಕೊಂಡಿದ್ದ ಸ್ಥಳಕ್ಕೆ ತೆರಳಲು ಕಾರ್ಯಾಚರಣೆ ತಂಡ ಪ್ರಯಾಸ ಪಡಬೇಕಾಯಿತು.

ಸಂಜೆ 4 ಗಂಟೆ ವೇಳೆಗೆ ಹಟ್ಟಿ ಚಿನ್ನದ ಗಣಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ನಡೆದಿದ್ದ ಡಿಗ್ಗಿಂಗ್ ಸ್ಥಗಿತಗೊಳಿಸಿ, ಪುಣೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಎಲೆಕ್ಟ್ರಿಕಲ್‌ ಬ್ರೇಕರ್ ಬಳಸಿ ಬಾಲಕಿ ಸಿಲುಕಿದ್ದ ಸ್ಥಳ ತಲುಪಲು ಕಾರ್ಯಾಚರಣೆ ಮುಂದುವರಿಸಿತು. ಮುಸ್ಸಂಜೆ 5.30ರ ವೇಳೆಗೆ ಕಾವೇರಿಯಿದ್ದ ಸ್ಥಳ ತಲುಪಿದರೂ, ಆಕೆಯನ್ನು ರಕ್ಷಿಸಿಕೊಂಡು ಬರಲು ಕಾರ್ಯಾಚರಣೆ ತಂಡಕ್ಕೆ ಸಾಧ್ಯವಾಗಲಿಲ್ಲ. ಬಲಗೈ ಮಾತ್ರ ಸ್ಪರ್ಶಿಸಿದ ರಕ್ಷಣಾ ತಂಡ ಕೊಳವೆಬಾವಿಯಿಂದ ಹೊರತರಲು ಅನಿವಾರ್ಯವಾಗಿ ಮತ್ತೊಮ್ಮೆ ಬೃಹತ್ ಯಂತ್ರೋಪ ಕರಣಗಳ ಮೊರೆ ಹೊಕ್ಕಿತು.

ನಿರಂತರ ಕಾರ್ಯಾಚರಣೆ ಬಳಿಕ ಕಾವೇರಿಯನ್ನು ಕೊಳವೆಬಾವಿಯೊಳಗಿನಿಂದ ರಕ್ಷಿಸಿ ಹೊರ ತರುವಲ್ಲಿ ಎನ್‌ಡಿಆರ್‌ಎಫ್, ರಾಯಚೂರಿನ ಹಟ್ಟಿ ಚಿನ್ನದ ಗಣಿಯ ವಿಜ್ಞಾನಿಗಳ ತಂಡ ಯಶಸ್ವಿಯಾದರೂ, ಸತತ ಪರಿಶ್ರಮಕ್ಕೆ ಫಲ ಸಿಗಲಿಲ್ಲ. ಸೋಮವಾರ ನಸುಕಿನ ವೇಳೆಗೆ ಕಾರ್ಯಾಚರಣೆ ಪೂರ್ಣಗೊಳಿಸುವ ನಿರೀಕ್ಷೆ ಹೊಂದಿದ್ದ ಜಿಲ್ಲಾಡಳಿತದ ಭರವಸೆಯೂ ಹುಸಿಯಾಯಿತು.

ಜಂಟಿ ಕಾರ್ಯಾಚರಣೆ ತಂಡದೊಳಗಿನ ಹೊಂದಾಣಿಕೆ ಕೊರತೆಯಿಂದ ನಿಖರವಾಗಿ ಬಾಲಕಿಯ ಕೆಳ ಭಾಗಕ್ಕೆ ಸುರಂಗ ಕೊರೆಯುವ ಯತ್ನ ವಿಫಲವಾಯಿತು. ತಕ್ಷಣವೇ ಹಟ್ಟಿ ತಂಡದ ವಿಜ್ಞಾನಿಗಳು ಸುರಂಗದೊಳಗಿಳಿದು ಹಿಟಾಚಿಯ ಬ್ರೇಕರ್‌ ಬಳಸಿ ಬಂಡೆ ಪುಡಿಗಟ್ಟಲು ಸೂಚನೆ ನೀಡಿದರು. ಬಳಿಕ ತಮ್ಮ ಸಲಕರಣೆಗಳನ್ನು ಉಪಯೋಗಿಸಿಕೊಂಡು ಬಾಲಕಿ ಸಿಲುಕಿದ್ದ ಸ್ಥಳದಲ್ಲಿನ ಸುತ್ತಲಿನ ಬಂಡೆ ಸಡಿಲಿಸುವಿಕೆ ಕಾರ್ಯ ನಡೆಸಿದರು.

ನಿರಂತರ ಕಾರ್ಯಾಚರಣೆ ಬಳಿಕ ಕಾವೇರಿಯನ್ನು ಕೊಳವೆಬಾವಿಯೊಳಗಿನಿಂದ ರಕ್ಷಿಸಿ ಹೊರ ತರುವಲ್ಲಿ ಎನ್‌ಡಿಆರ್‌ಎಫ್, ರಾಯಚೂರಿನ ಹಟ್ಟಿ ಚಿನ್ನದ ಗಣಿಯ ವಿಜ್ಞಾನಿಗಳ ತಂಡ ಯಶಸ್ವಿಯಾದರೂ, ಸತತ ಪರಿಶ್ರಮಕ್ಕೆ ಫಲ ಸಿಗಲಿಲ್ಲ.

ಸೋಮವಾರ ನಸುಕಿನ ವೇಳೆಗೆ ಕಾರ್ಯಾಚರಣೆ ಪೂರ್ಣಗೊಳಿಸುವ ನಿರೀಕ್ಷೆ ಹೊಂದಿದ್ದ ಜಿಲ್ಲಾಡಳಿತದ ಭರವಸೆಯೂ ಹುಸಿಯಾಗಿ, 18 ಗಂಟೆ ಹೆಚ್ಚಿನ ಅವಧಿ ರಕ್ಷಣಾತ್ಮಕವಾಗಿ ಆಪರೇಷನ್ ಕೈಗೊಂಡರೂ, ಕಾವೇರಿಯ ಪ್ರಾಣಪಕ್ಷಿ ಮಾತ್ರ ಉಳಿದಿರಲಿಲ್ಲ.

ಮುಗಿಲು ಮುಟ್ಟಿದ ಆಕ್ರಂದನ: ಶನಿವಾರ ಮುಸ್ಸಂಜೆಯಿಂದಲೂ ಕಾವೇರಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸೋಮವಾರ ನಸುಕಿನಿಂದಲೇ ಕೊಳವೆಬಾವಿಯ ಅನತಿ ದೂರದಲ್ಲೇ ಜಮಾಯಿಸಿದ್ದ ಸಂಬಂಧಿಕರು, ನೆತ್ತಿ ಸುಡುತ್ತಿದ್ದ ಕೆಂಡದಂಥ ಬಿಸಿಲನ್ನೂ ಲೆಕ್ಕಿಸದೆ ‘ಕಾವೇರಿ’ಗಾಗಿ ಸಾಮೂಹಿಕವಾಗಿ ಪ್ರಾರ್ಥಿಸುವ ಜತೆಗೆ, ತಮ್ಮ ಮನದೊಳಗಿನ ದುಃಖವನ್ನು ಕಣ್ಣೀರ ಮೂಲಕ ಹೊರಹಾಕುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಭಾನುವಾರ ‘ಕಾವೇರಿ’ ಚಿಂತೆಯಲ್ಲೇ ಪದೇ ಪದೇ ಪ್ರಜ್ಞಾಹೀನರಾಗಿ ಕುಸಿದು ಬೀಳುತ್ತಿದ್ದ ಆಕೆಯ ತಾಯಿ ಸವಿತಾ ಅವರನ್ನು ಚಿಕಿತ್ಸೆಗಾಗಿ ಸೋಮವಾರ ಕೊಕಟನೂರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಜ್ಜಿ ಚಂದ್ರವ್ವಳ ರೋದನ ಮುಗಿಲು ಮುಟ್ಟಿತ್ತು. ಬಿಸಿಲನ್ನು ಲೆಕ್ಕಿಸದೆ ತಾನುಟ್ಟಿದ್ದ ಸೀರೆಯ ಸೆರಗನ್ನೊಡ್ಡಿ ‘ಕಾವಕ್ಕ ನೀ ನನ್ನ ಮಡಿಲಿಗೆ ಬಾರೋ ಬಂಗಾರ. ನೀ ಇಲ್ಲದೆ ನಾ ಹೆಂಗ ದಿನ ಕಳೀಲಿ. ನಿದ್ದೇನೆ ಹತ್ತದು. ತುತ್ತು ಅನ್ನ ಗಂಟಲಲ್ಲಿ ಇಳಿಯೋದು.

ನನ್ನ ಸಣ್ಣ ತಾಯಿ ನೀನೇ ಕಣವ್ವಾ. ನೀ ಬಂದರೇ ನನ್ನ ಜೀವ ಉಳಿಯೋದು. ಇಲ್ಲದಿದ್ರ ನಿನ್ನ ಕೊರಗಲ್ಲೇ ನಾ ಸಾಯ್ತೀನವ್ವಾ. ಮೂರ್‌ ದಿನದಿಂದ ನನ್ನ ಮಗ ನೀರ್‌ ಸಹ ಕುಡ್ದಿಲ್ಲ. ದೇವ್ರೇ ಹೆಚ್ಗೆ ಶಿಕ್ಷೆ ಕೊಡಬ್ಯಾಡಪ್ಪ. ನನ್ನ ಮೊಮ್ಮಗುನಾ ರಕ್ಷಿಸಪ್ಪಾ...’ ಎಂದು ಸೆರಗೊಡ್ಡಿ ಬೇಡುತ್ತಿದ್ದರೆ, ಸನಿಹದಲ್ಲೇ ಕುಳಿತಿದ್ದ ಕಾವೇರಿಯ ಅಕ್ಕ ಅನ್ನಪೂರ್ಣ ಸಹ ತನ್ನ ತಂಗಿಯನ್ನು ನೆನೆದು ಕಣ್ಣೀರ ಕೋಡಿ ಹರಿಸುತ್ತಿದ್ದ ದೃಶ್ಯ, ಸಂಬಂಧಿಕರು ಎದೆ ಬಡಿದುಕೊಂಡು ಸಾಮೂಹಿಕವಾಗಿ ರೋದಿಸುತ್ತಿದ್ದ ಚಿತ್ರಣ ಕಾರ್ಯಾಚರಣೆ ವೀಕ್ಷಿಸಲು ಬಂದಿದ್ದವರ ಕರುಳು ಹಿಂಡಿದಂತಾಗುತ್ತಿತ್ತು.

ಕೊಳವೆಬಾವಿಯೊಳಗೆ ಸಿಲುಕಿದ್ದ ಸ್ಥಳದಿಂದ ಕಾವೇರಿಯ ದೇಹವನ್ನು  ಕಾರ್ಯಾಚರಣೆ ತಂಡ ಮೇಲಕ್ಕೆ ತರುತ್ತಿದ್ದಂತೆ ಕುಟುಂಬದವರ ದುಃಖದ ಕಟ್ಟೆಯೊಡೆಯಿತು. ಮೃತದೇಹ ನೋಡಲು ಸಾಮೂಹಿಕವಾಗಿ ಎಲ್ಲರೂ ಮುಂದಾಗುತ್ತಿದ್ದಂತೆ ಪೊಲೀಸರು ತಡೆದು, ವೈದ್ಯಕೀಯ ಪರೀಕ್ಷೆಗೆ ಅನುವು ಮಾಡಿಕೊಟ್ಟರು.

ಕಾವೇರಿ ತಲೆ ಮೇಲೆ ಮಣ್ಣು: ‘ಕಾಲುಜಾರಿ ಕೊಳವೆಬಾವಿಯೊಳಗೆ ಕಾವೇರಿ ಬಿದ್ದ ಬೆನ್ನಿಗೆ ಮಣ್ಣು–ಕಲ್ಲು ಬಿದ್ದಿವೆ. ಭಾನುವಾರ ಬೆಳಿಗ್ಗೆವರೆಗೂ ಇದನ್ನು ತೆರವುಗೊಳಿಸಿರಲಿಲ್ಲ. ಬಾವಿಯೊಳಗೆ ನಿರಂತರವಾಗಿ ಆಕ್ಸಿಜನ್ ಪೂರೈಸಿದ್ದರೂ, ಮಣ್ಣು ಬ್ಲಾಕ್‌ ಆಗಿದ್ದರಿಂದ ಬಾಲಕಿ ಬದುಕಿರುವ ಸಾಧ್ಯತೆ ತುಂಬಾ ಕ್ಷೀಣಿಸಿತ್ತು. ಆದರೂ ಜೀವ ರಕ್ಷಣೆಯ ಉದ್ದೇಶದಿಂದ ಬಾಲಕಿಯ ಮೇಲಿದ್ದ ಎರಡರಿಂದ ಮೂರಡಿ ಮಣ್ಣನ್ನು ಹೊರ ತೆಗೆಯಲಾಯಿತು. ಮೂರು ದಿನ ಕಾರ್ಯಾಚರಣೆ ನಡೆಸಲಾಯಿತು’ಎಂದು ಹೆಸರು ಬಹಿರಂಗಪಡಿಸಲಿ ಚ್ಛಿಸದ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯೊಂದರ ಮುಖ್ಯಸ್ಥರು ತಿಳಿಸಿದರು.

‘ಜಂಟಿ ಕಾರ್ಯಾಚರಣೆ ಹಂತದಲ್ಲಿ ಪರಸ್ಪರ ಸಮನ್ವಯ ಇರದಿದ್ದುದೇ ವಿಳಂಬಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಸಹ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವುತ್ತಿತ್ತು’ ಎಂದು ಅವರು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಸಾವು ದೃಢಪಡಿಸಿದ ಜಿಲ್ಲಾಧಿಕಾರಿ
ಸೋಮವಾರ ರಾತ್ರಿ 11.45ರ ವೇಳೆಗೆ ಕೊಳವೆ ಬಾವಿಯಿಂದ ಕಾವೇರಿಯನ್ನು ರಕ್ಷಣಾ ಪಡೆ ಹೊರ ತೆಗೆದ ಬಳಿಕ ಪರೀಕ್ಷೆ ನಡೆಸಿದ ವೈದ್ಯರ ತಂಡ ಆಕೆ ಮೃತಪಟ್ಟಿರುವುದಾಗಿ ದೃಢಪಡಿಸಿತು.

ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಮೃತದೇಹವನ್ನು ಸಮೀಪದ ಕೊಕಟನೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು.
‘ಜೀವಂತವಾಗಿ ಕಾವೇರಿಯನ್ನು ಹೊರತೆಗೆಯಲಾಗದ್ದಕ್ಕೆ ವಿಷಾದವಿದೆ’ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ತಿಳಿಸಿದರು.

* ಕಾವೇರಿ ಸಾವು ನೋವು ತಂದಿದೆ. ಕುಟುಂಬಕ್ಕೆ ವೈಯಕ್ತಿಕವಾಗಿ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು

–ಲಕ್ಷ್ಮಣ ಸವದಿ, ಅಥಣಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT