ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆ ತಂದ ಗೌರಿ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಇತ್ತೀಚಿನ ದಿನಗಳಲ್ಲಿ ಬಾವಿಗಳು ಕಾಣಸಿಗುವುದೇ ಅಪರೂಪ. ಹಿಂದಿನ ಕಾಲದಲ್ಲಿ ಮನೆಗೊಂದು ಬಾವಿ ಇರಲೇಬೇಕೆಂಬ ಸಂಪ್ರದಾಯ ಕೂಡ ಹೆಚ್ಚಿನ ಕಡೆಗಳಲ್ಲಿತ್ತು. ಇಪ್ಪತ್ತರಿಂದ ಇಪ್ಪತ್ತೈದು ಅಡಿ ಆಳ ತೋಡಿದರೆ ಬೇಕಾದಷ್ಟು ನೀರು ಸಿಗುತ್ತಿತ್ತು.

ಬಾವಿ ತೋಡುವ ಕೆಲಸವನ್ನು ಗುತ್ತಿಗೆಗೆ ಪಡೆದುಕೊಳ್ಳುವ ಹಲವಾರು ಯುವಕರ ತಂಡಗಳಿದ್ದುವು. ಇದೀಗ ಬಾವಿ ತೋಡಲು ಕೂಲಿಯಾಳುಗಳು ಸಿಗುತ್ತಿಲ್ಲ. ಕಷ್ಟಪಟ್ಟು ಬಾವಿ ತೋಡಿದರೂ ಜಲದರ್ಶನವಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಇದೀಗ ಪ್ರತಿ ಮನೆಗೆ ಒಂದೆರಡರಂತೆ ಕೊಳವೆಬಾವಿಗಳಿವೆ.
 
ಬಾವಿ ತೋಡಿ ಅದಕ್ಕೆ ಸುತ್ತಲೂ ರಿಂಗ್ ಬಿಡಬೇಕಾದರೆ ಎಪ್ಪತ್ತರಿಂದ ಎಂಬತ್ತು ಸಾವಿರ ರೂಪಾಯಿ ಬೇಕು. ಸ್ವಲ್ಪ ತೋಡಿದಾಗ ಕಲ್ಲು ಸಿಕ್ಕರಂತೂ ದೇವರೆ ಗತಿ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಬಾವಿ ತೋಡುವ ಪ್ರಯತ್ನವನ್ನು ಕೈಗೆತ್ತಿಕೊಳ್ಳುವವರೇ ಅಪರೂಪ.
 
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಗೌರಿ ಸಿ. ನಾಯ್ಕ ಎಂಬ ಮಹಿಳೆಯ ಪ್ರಯತ್ನ ಇವೆಲ್ಲಕ್ಕಿಂತ ಭಿನ್ನ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಟೀಲು ಸ್ವಸಹಾಯ ಸಂಘದ ಸದಸ್ಯರಾದ ಇವರ ಬಳಿ ನಿತ್ಯ ಬಳಕೆಗಾಗಿ ಬಾವಿಯೊಂದಿದೆ.
 
ಆದರೆ ಪಕ್ಕದ ಜಮೀನಿನಲ್ಲಿರುವ 150 ಅಡಿಕೆ, 15 ತೆಂಗು ಹಾಗೂ ಬಾಳೆಗಿಡಗಳು ನೀರಿಲ್ಲದೆ ಒಣಗಿ ಬಿಡುವ ಹಂತದಲ್ಲಿವೆ. ಇವನ್ನು ಹೇಗಾದರೂ ಮಾಡಿ ಉಳಿಸಬೇಕೆಂಬ ನಿಟ್ಟಿನಲ್ಲಿ ಗೌರಿ ತೋಟದಲ್ಲಿ ಬಾವಿ ತೋಡುವ ನಿರ್ಧಾರಕ್ಕೆ ಬಂದರು. ಬಾವಿ ತೋಡಲು ಕೂಲಿಯಾಳು ಸಮಸ್ಯೆ ಎದುರಾಯಿತು. ಕೊನೆಗೆ ಏಕಾಂಗಿಯಾಗಿ ಬಾವಿ ತೋಡುವ ಕೆಲಸವನ್ನು ಕೈಗೆತ್ತಿಕೊಂಡರು.
 
ಈ ಹಿಂದೆ ತನ್ನ ತಮ್ಮನ ಜಮೀನಿನಲ್ಲಿ ತಾನು ಏಕಾಂಗಿಯಾಗಿ ಇಪ್ಪತ್ತು ಅಡಿ ಆಳದ ಬಾವಿಯನ್ನು ತೋಡಿದ್ದಾರೆ. ನಂತರ ಮನೆಯವರು ಏಕಾಂಗಿಯಾಗಿ ಬಾವಿ ತೋಡಬಾರದು ಎಂದು ಒತ್ತಾಯಿಸಿದಾಗ ಆ ಪ್ರಯತ್ನ ಕೈಬಿಟ್ಟಿದ್ದಾರೆ. ನಂತರ ಅದೇ ಬಾವಿಯನ್ನು ನಾಲ್ಕೈದು ಜನ ಸೇರಿ ತೋಡಿದ್ದಾರೆ.
 
42 ಅಡಿ ತೋಡಿದಾಗ ನೀರು ಸಿಕ್ಕಿದೆ. ಅದಕ್ಕೆ ಅವರಿಗೆ 16000 ರೂಪಾಯಿ ಖರ್ಚು ತಗಲಿದೆಯಂತೆ. ಒಂದು ಬಾವಿ ತೋಡಬೇಕಾದರೆ ನಲವತ್ತು, ಐವತ್ತು ಸಾವಿರ ರೂಪಾಯಿ ಖರ್ಚು ತಗಲುತ್ತದೆ, ಇನ್ನು ಕೂಲಿಯಾಳುಗಳು ಸಿಗುವುದು ಕಷ್ಟ.

ಅದಕ್ಕಾಗಿ ಯಾರಿಗೂ ತಿಳಿಸದೆ ಮಗ, ಮಗಳನ್ನು ಕಷ್ಟಪಟ್ಟು ತನ್ನ ಬಿಡುವಿನ ಸಮಯದಲ್ಲಿ ಮಾತ್ರ ಬಾವಿ ತೋಡುವುದಾಗಿ ಒಪ್ಪಿಸಿ ತಮ್ಮ ಜಮೀನಿನಲ್ಲಿ ಬಾವಿ ತೋಡುವ ಪ್ರಯತ್ನ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ನೀರು ಪಡೆಯಲೇಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. 
 
ನಿತ್ಯ ಅಡಿಕೆ ಸುಲಿಯುವ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿರುವ ಇವರು ಜನವರಿ 22 ರಂದು ತೋಟದಲ್ಲೊಂದು ಕಡೆ ಜಾಗವನ್ನು ತಾನೇ ಗುರುತಿಸಿ ಹಾರೆ, ಪಿಕ್ಕಾಸು, ಗುದ್ದಲಿ ಹಿಡಿದು ಬಾವಿ ತೆಗೆಯಲು ಆರಂಭಿಸಿದರು.
 
ನಿತ್ಯ  ಮೂರರಿಂದ ನಾಲ್ಕು ತಾಸುಗಳಂತೆ ಎರಡು ತಿಂಗಳುಗಳ ಕಾಲ ಬಾವಿ ತೋಡುವ ಕಾಯಕದಲ್ಲಿ ನಿರತರಾದರು. ಬಾವಿ ಆಳವಾದಂತೆ ಬೇಕಾದಾಗ ಹತ್ತಿ ಇಳಿಯಲು ಸುಲಭವಾಗುವ ನಿಟ್ಟಿನಲ್ಲಿ ಬಾವಿಯ ಒಳಭಾಗದ ಸುತ್ತ ಮಣ್ಣಿನಿಂದ ಮೆಟ್ಟಿಲುಗಳನ್ನು ನಿರ್ಮಿಸಿ ಮೇಲಿನಿಂದ ಹಗ್ಗವೊಂದನ್ನು ಇಳಿಯಬಿಟ್ಟರು. ನಲವತ್ತು ಅಡಿಗಳಷ್ಟು ತೋಡುವಾಗ ಮಣ್ಣನ್ನು ಮೇಲಕ್ಕೆತ್ತಲು ಯಾರ ಸಹಾಯವನ್ನು ಪಡೆಯಲಿಲ್ಲ.
 
ಅಗೆದ ಮಣ್ಣನ್ನು ಬಕೆಟ್‌ನಲ್ಲಿ ತುಂಬಿಟ್ಟು ಬಾವಿಯಿಂದ ಮೇಲೆ ಬಂದು ರಾಟೆ ಮೂಲಕ ಮಣ್ಣಿನ ಬುಟ್ಟಿ ಎಳೆದು ಮೇಲಕ್ಕೆ ಸಾಗಿಸಿದರು. ಪ್ರತಿ ದಿನ ಬಾವಿ ಮೇಲ್ಭಾಗದಲ್ಲಿ ರಾಶಿ ಬಿದ್ದ ಮಣ್ಣನ್ನು ಹತ್ತಿರದ ತೋಟಕ್ಕೆ ಹಾರೆಯಲ್ಲಿ ಎಳೆದು ಹಾಕಿದ್ದಾರೆ.
 
ಅರ್ಧದಷ್ಟು ಮಣ್ಣು ಬಾವಿಯ ಸುತ್ತಲಿನ ತಗ್ಗು ಪ್ರದೇಶಕ್ಕೆ, ಅಡಿಕೆ ಗಿಡಗಳ ಬುಡಕ್ಕೆ ಬಳಕೆ ಆಗಿದೆ. ನಿತ್ಯ ಅದೆಷ್ಟೋ ಬಾರಿ ಚಕಚಕನೇ ಬಾವಿಗಿಳಿದು ಮೇಲೆ ಹತ್ತುತ್ತಿದ್ದರು. ಆರಂಭದಲ್ಲಿ ಈ ಕೆಲಸ ಒಂಚೂರು ಕಷ್ಟವೆನಿಸಿದರೂ ದಿನಕಳೆದಂತೆ ಅದು ಮಾಮೂಲಿಯಾಗಿಬಿಟ್ಟಿತು. ಇವರ ಸಾಹಸ ಕಂಡು ಬೆರಗಾದರು.
 
ಎರಡು ತಿಂಗಳುಗಳ ಕಾಲ 60 ಅಡಿ ಆಳ ಬಾವಿ ತೋಡಿದ್ದಾರೆ. 40 ಅಡಿ ತೋಡಿದ ನಂತರ ನೀರು ಮಿಶ್ರಿತ ಮಣ್ಣು ದೊರೆತದ್ದರಿಂದ ನಂತರ ಒಬ್ಬರಿಂದ ಮಣ್ಣನ್ನು ಮೇಲಕ್ಕೆತ್ತುವುದು ಅಸಾಧ್ಯವಾಯಿತು. ಆಗ ಇಬ್ಬರು ಮಹಿಳೆಯರು ಮಣ್ಣನ್ನು ಮೇಲಕ್ಕೆತ್ತುವ ಕೆಲಸಕ್ಕೆ ಸಾಥ್ ನೀಡಿದರು.
 
ಇವರ ಏಕಾಂಗಿ ಪ್ರಯತ್ನದ ಫಲವಾಗಿ ಇದೀಗ ಆರರಿಂದ ಏಳು ಅಡಿಯಷ್ಟು ನೀರು ಸಿಕ್ಕಿದೆ. ಇವರ ಪ್ರಯತ್ನ ನೀರಿಗಾಗಿ ಜಮೀನಿನಲ್ಲಿ ನಾಲ್ಕೈದು ಕೊಳವೆಬಾವಿ ತೋಡಿ ಕೈಸುಟ್ಟುಕೊಂಡಿರುವ ರೈತರಿಗೆ ಮಾದರಿ. ಗೌರಿಯವರ ಸಂಪರ್ಕಕ್ಕೆ: 8277515377.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT