ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದರ್ಶ ಗ್ರಾಮ’ಕ್ಕೆ ಆದರ್ಶ ಗ್ರಾಮವೇ ಆಯ್ಕೆ!

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಶಶಿಕಾಂತ ಎಸ್‌. ಶೆಂಬೆಳ್ಳಿ
ಒಂದು ‘ಆದರ್ಶಗ್ರಾಮ’ವೆಂದು ಕರೆಯಲು ಏನೇನೂ ಬೇಕೋ ಅದೆಲ್ಲ ಈ ಗ್ರಾಮದಲ್ಲಿದೆ. ಹೀಗಿದ್ದರೂ ಈ ಗ್ರಾಮವನ್ನು ಸಂಸದರ ‘ಆದರ್ಶ ಗ್ರಾಮ’ ಯೋಜನೆಗೆ ಆರಿಸಲಾಗಿದೆ.
 
ಯೋಜನೆಗೆ ಆಯ್ಕೆಗೊಂಡಿರುವ ಗ್ರಾಮ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ. ಜಿಲ್ಲಾ ಕೇಂದ್ರದಿಂದ 120 ಕಿ.ಮೀ ಹಾಗೂ ತಾಲ್ಲೂಕು ಕೇಂದ್ರದಿಂದ 17 ಕಿ.ಮೀ ದೂರದಲ್ಲಿರುವ ತಂಬ್ರಹಳ್ಳಿ ಹೋಬಳಿ ಕೇಂದ್ರವಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಕೂಡ ಹೌದು.
 
ತಾಲ್ಲೂಕು ಕೇಂದ್ರದಿಂದ ಈ ಗ್ರಾಮಕ್ಕೆ ಉತ್ತಮ ರಸ್ತೆ ಸಂಪರ್ಕ ಇದೆ. ಸಾರಿಗೆ ಸಂಪರ್ಕ ಕೂಡ ಅಷ್ಟೇ ಉತ್ತಮವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಗೆ ಬಸ್ಸಿನ ಸೌಲಭ್ಯವಿದೆ. ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ಗುಣಮಟ್ಟದ ಸಿಮೆಂಟ್‌ ರಸ್ತೆಗಳಿವೆ.
 
ಯೋಜನಾಬದ್ಧವಾಗಿ ಚರಂಡಿ ನಿರ್ಮಿಸಲಾಗಿದೆ. ಎಲ್ಲ ಬೀದಿಗಳಲ್ಲಿ ವಿದ್ಯುದ್ದೀಪಗಳ ವ್ಯವಸ್ಥೆ ಇದೆ. ನಾಲ್ಕು ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳಿವೆ. ಗ್ರಾಮದಲ್ಲಿರುವ ಹೆಚ್ಚಿನ ಮನೆಗಳು ಹೆಂಚು, ಆರ್‌.ಸಿ.ಸಿ ಇಂದ ಕೂಡಿವೆ.
 
ಇಷ್ಟೇ ಅಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರ (ಆಂಬ್ಯುಲೆನ್ಸ್‌ ಇದೆ), ಸರ್ಕಾರಿ ಪ್ರಾಥಮಿಕ ಶಾಲೆ, ಅನುದಾನಿತ ಪ್ರೌಢಶಾಲೆ, ಅನುದಾನರಹಿತ ಪದವಿಪೂರ್ವ ಕಾಲೇಜು, ಭಾರತೀಯ ಸ್ಟೇಟ್‌ ಬ್ಯಾಂಕ್‌, ಅಂಚೆ ಕಚೇರಿ, ನಾಡಕಚೇರಿ, ಪೊಲೀಸ್‌ ಠಾಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಕೂಡ ಗ್ರಾಮದಲ್ಲಿದೆ. ನಾಲ್ಕು ಮೊಬೈಲ್‌ ಟವರ್‌ಗಳಿವೆ. ನೆಟ್‌ವರ್ಕ್‌ಗಾಗಿ ಪರದಾಡಬೇಕಿಲ್ಲ.
 
ತುಂಗಭದ್ರಾ ಹಿನ್ನೀರಿಗೆ ಹೊಂದಿಕೊಂಡಂತೆ ಈ ಗ್ರಾಮ ಇರುವುದರಿಂದ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಇಲ್ಲ. ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಜಲಾಶಯ ನೀರಿನಿಂದ ತುಂಬಿಕೊಂಡರೆ ಈ ಗ್ರಾಮದ ಸುತ್ತಮುತ್ತಲಿನ ಪರಿಸರ ಹಚ್ಚಹಸಿರಾಗಿ ಇರುತ್ತದೆ. ಈ ಕಾರಣಕ್ಕಾಗಿಯೇ ತಂಬ್ರಹಳ್ಳಿ ಗ್ರಾಮವನ್ನು ‘ಹಗರಿಬೊಮ್ಮನಹಳ್ಳಿಯ ಮಲೆನಾಡು’ ಪ್ರದೇಶ ಎಂದು ಕರೆಯಲಾಗುತ್ತದೆ.
 
ಮೂಲ ಗ್ರಾಮ 1954ರಲ್ಲಿ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಮೊದಲಿನಿಂದಲೂ ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡುತ್ತ ಬರಲಾಗಿದೆ. ಹೀಗಾಗಿ ಎಲ್ಲೂ ಹೊಲಸು ಕಣ್ಣಿಗೆ ರಾಚುವುದಿಲ್ಲ. ಈ ಕಾರಣಕ್ಕಾಗಿಯೇ 2011ರಲ್ಲಿ ಈ ಗ್ರಾಮಕ್ಕೆ ‘ಸ್ವರ್ಣ ನೈರ್ಮಲ್ಯ’ ಪ್ರಶಸ್ತಿ ಒಲಿದು ಬಂದಿತ್ತು. ಇಷ್ಟೇ ಅಲ್ಲ, 2014ರಲ್ಲಿ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೂ ಪಾತ್ರವಾಗಿತ್ತು.
 
ಸಕಲ ಸವಲತ್ತುಗಳನ್ನು ಹೊಂದಿರುವ ತಂಬ್ರಹಳ್ಳಿಯನ್ನು ಸಂಸದರ ‘ಆದರ್ಶ ಗ್ರಾಮ’ಕ್ಕೆ ಆಯ್ಕೆ ಮಾಡಿದ ದಿನದಿಂದಲೇ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು, ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟಾಗಿಯೂ ಅದನ್ನು ಕೈಬಿಟ್ಟು ಬೇರೊಂದು ಗ್ರಾಮವನ್ನು ಆರಿಸುವ ಚಿಂತನೆ ನಡೆದಿಲ್ಲ.
 
‘ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಮುಖವನ್ನೇ ಕಾಣದ ಅನೇಕ ಕುಗ್ರಾಮಗಳಿವೆ. ಅವುಗಳ ಪೈಕಿ ಯಾವುದಾದರೊಂದು ಹಳ್ಳಿಯನ್ನು ಆರಿಸಿ ಅಭಿವೃದ್ಧಿಪಡಿಸಬಹುದಿತ್ತು. ಆದರೆ, ಬಹುತೇಕ ಎಲ್ಲ ರೀತಿಯ ಸೌಲಭ್ಯ ಹೊಂದಿರುವ ತಂಬ್ರಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿರುವುದು ಸರಿಯಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಕಲ್ಲೇಶ ಅಂಕಸಮುದ್ರ.
 
ಕನಿಷ್ಠ ಸವಲತ್ತುಗಳಿಲ್ಲದ ಗ್ರಾಮವನ್ನು ಆರಿಸಿ ಅದನ್ನು ಆದರ್ಶ ಗ್ರಾಮವಾಗಿ ಬದಲಿಸಬೇಕು ಎನ್ನುವುದು ಯೋಜನೆಯ ಪ್ರಮುಖ ತಿರುಳು. ಆದರೆ, ಇಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ರಾಜಕೀಯ ಕಾರಣ, ಇಚ್ಛಾಶಕ್ತಿ ಕೊರತೆ ಎರಡೂ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದರು.
 
ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಡಿವಾಳರ ಕೊಟ್ರೇಶ್‌ ಹೇಳುವುದೇ ಬೇರೆ. ‘ನಮ್ಮ ಗ್ರಾಮದಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಆದರೆ, ಗ್ರಾಮದ ಜನಸಂಖ್ಯೆ ಬಹಳ ವೇಗವಾಗಿ ಬೆಳೆಯುತ್ತಿದೆ. ಎಷ್ಟೇ ಸೌಕರ್ಯ ಕಲ್ಪಿಸಿದರೂ ಜನರಿಗೆ ಸಾಲುತ್ತಿಲ್ಲ. ಹಾಗಾಗಿ ಯೋಜನೆಗೆ ಗ್ರಾಮವನ್ನು ಆಯ್ಕೆ ಮಾಡಿರುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸುತ್ತಾರೆ.
 
‘ಗ್ರಾಮವನ್ನು ಯೋಜನೆಗೆ ಆಯ್ಕೆ ಮಾಡಿದ ದಿನವೇ ₹4ರಿಂದ ₹5 ಕೋಟಿ ಹಣ ಮೀಸಲಿಡಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ. ಇದರಿಂದಾಗಿ ಇಲ್ಲಿಯವರೆಗೆ ಅಂತಹ ಹೇಳಿಕೊಳ್ಳುವ ಕೆಲಸಗಳೇನು ನಡೆದಿಲ್ಲ. ಇತ್ತೀಚೆಗೆ ₹19.50 ಲಕ್ಷ ವೆಚ್ಚದಲ್ಲಿ ನಾಲ್ಕು ಕಡೆ ಹೈಮಾಸ್ಟ್‌ ವಿದ್ಯುದ್ದೀಪ ಹಾಕಲಾಗಿದೆ’ ಎಂದು ಹೇಳಿದರು.
 
ಶೇ 72ರಷ್ಟು ಸಾಕ್ಷರತೆ
2011ರ ಜನಗಣತಿ ಪ್ರಕಾರ, ತಂಬ್ರಹಳ್ಳಿಯಲ್ಲಿ ಶೇ 72ರಷ್ಟು ಸಾಕ್ಷರತೆಯ ಪ್ರಮಾಣವಿದೆ. ಗ್ರಾಮದಲ್ಲಿ ಪದವಿ ಕಾಲೇಜು ಸ್ಥಾಪಿಸಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.
 
ಇಲ್ಲೇ ಕಾಲೇಜು ಸ್ಥಾಪಿಸಿದರೆ ಸ್ಥಳೀಯ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕಾಗಿ ತಾಲ್ಲೂಕು ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ ಎನ್ನುತ್ತಾರೆ. ಈ ಸಂಬಂಧ ಇತ್ತೀಚೆಗೆ ಗ್ರಾಮಸ್ಥರು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಕೂಡ ಸಲ್ಲಿಸಿದ್ದು, ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.
 
ಗ್ರಾಮದ ಒಟ್ಟು ಜನಸಂಖ್ಯೆ 5,028 ಇದ್ದು, 2,571 ಪುರುಷರು, 2,457 ಮಹಿಳೆಯರು ಸೇರಿದ್ದಾರೆ. ಒಟ್ಟು ಮತದಾರರ ಸಂಖ್ಯೆ 3,800 ಇದೆ. 
 
ಪ್ರತ್ಯೇಕ ಅನುದಾನವಿಲ್ಲ: ‘ಸಂಸದರ ಆದರ್ಶ ಗ್ರಾಮ ಯೋಜನೆಗೆ ಪ್ರತ್ಯೇಕ ಅನುದಾನ ಬರುವುದಿಲ್ಲ. ಇರುವ ಅನುದಾನದಲ್ಲೇ ಕೆಲಸ ಮಾಡಿಸಬೇಕು’ ಎನ್ನುತ್ತಾರೆ ಯೋಜನೆಯ ಉಸ್ತುವಾರಿ ಅಧಿಕಾರಿ ಎ. ಚನ್ನಪ್ಪ.
 
ತಂಬ್ರಹಳ್ಳಿಯಲ್ಲಿ ₹3.42 ಕೋಟಿ ಖರ್ಚಿನಲ್ಲಿ ಅತಿಥಿಗೃಹ ನಿರ್ಮಾಣ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂ.ಜಿ.ಎನ್‌.ಆರ್‌.ಇ.ಜಿ) ಅಡಿ ಬದು ನಿರ್ಮಾಣ, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್‌.ಆರ್‌) ಯೋಜನೆಯಡಿ ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆಗೆ ₹10 ಲಕ್ಷ, ಕೊಳವೆಬಾವಿ ನಿರ್ಮಾಣಕ್ಕೆ ₹30 ಲಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ₹8 ಲಕ್ಷ ಮಂಜೂರಾಗಿದ್ದು, ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. 
 
ಚಿತ್ರ: ಸಿ. ಶಿವಾನಂದ
****
ಸಂಸದರು ಏನೆನ್ನುತ್ತಾರೆ?

‘ತಂಬ್ರಹಳ್ಳಿ ಗ್ರಾಮವನ್ನು ಈಗಾಗಲೇ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿ ಕೆಲಸ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಅದರ ಬದಲಾಗಿ ಬೇರೊಂದು ಗ್ರಾಮ ಆಯ್ಕೆ ಮಾಡಬೇಕಿತ್ತು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಸಂಸದ ಬಿ. ಶ್ರೀರಾಮುಲು ಹೇಳಿದರು.

ಗ್ರಾಮದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯಾವುದೇ ಸಹಕಾರ ನೀಡುತ್ತಿಲ್ಲ. ಆದರೂ ₹6 ಕೋಟಿ ವೆಚ್ಚದಲ್ಲಿ ಕೆಲಸಗಳಾಗಿವೆ. ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ₹2 ಕೋಟಿ ಅನುದಾನ ನೀಡಿದ್ದು, ಶೀಘ್ರದಲ್ಲೇ ಮಾದರಿ ಶಾಲೆ ಹಾಗೂ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತಿದ್ದು, ತಂಬ್ರಹಳ್ಳಿ ಇಡೀ ದೇಶಕ್ಕೆ ಆದರ್ಶ ಮಾದರಿ ಗ್ರಾಮ ಅನಿಸಿಕೊಳ್ಳುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT