ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಹುಬಲಿ’ ತೆರೆ ಹಿಂದಿನ ನಾಯಕರು

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ಬಾಹುಬಲಿ 2’ ಸಿನಿಮಾದ ಬಿಡುಗಡೆಯ ದಿನ (ಏ. 28) ಸಮೀಪಿಸುತ್ತಿದ್ದಂತೆಯೇ ಆ ಸಿನಿಮಾದ ಕುರಿತು ನಿರೀಕ್ಷೆಗಳೂ ಜನರಲ್ಲಿ ಹೆಚ್ಚುತ್ತಿವೆ. ಮೊದಲ ಭಾಗ ‘ಬಾಹುಬಲಿ’ ಕುತೂಹಲದ ಉತ್ತುಂಗದಲ್ಲಿ ಕೊನೆಗೊಂಡಿದ್ದ ಕಥೆ ಮತ್ತು ಮೇಕಿಂಗ್‌ನಲ್ಲಿನ ದೃಶ್ಯಶ್ರೀಮಂತಿಕೆಯ ಕಾರಣಕ್ಕೆ ಚಿತ್ರರಸಿಕರು ‘ಬಾಹುಬಲಿ–2’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
 
‘ಬಾಹುಬಲಿ’ ಸಿನಿಮಾ ನಿರ್ಮಾಣದ ಹಿಂದೆ ಹಲವು ವರ್ಷಗಳ ಪರಿಶ್ರಮ ಇದೆ. 2015ರಲ್ಲಿ ಬಿಡುಗಡೆಯಾದ ‘ಬಾಹುಬಲಿ’ ಮೊದಲ ಭಾಗವು ಅದ್ಭುತ ಗ್ರಾಫಿಕ್ಸ್‌, ಸಾಹಸ, ಥ್ರಿಲ್ಲರ್‌ ಕಥೆಯ ಕಾರಣಕ್ಕೆ ಎಲ್ಲರ ಮೆಚ್ಚುಗೆ ಗಳಿಸಿತ್ತು.
 
ಈ ಯಶಸ್ಸಿನಲ್ಲಿ ಮತ್ತು ‘ಬಾಹುಬಲಿ–2’ ಸಿನಿಮಾದ ನಿರ್ಮಾಣದಲ್ಲಿ ಹಲವು ಪ್ರತಿಭಾವಂತರು ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಅಂಥ ಐದು ಪ್ರಮುಖರ ಪರಿಚಯ ಇಲ್ಲಿದೆ.
 
ವಿಎಫ್‌ಎಕ್ಸ್‌ ತಂಡ
ಈ ಚಿತ್ರದಲ್ಲಿ ಶೇ. 90ರಷ್ಟು ಸಿಜಿಐ (ಕಂಪ್ಯೂಟರ್‌ ರೂಪಿತ ದೃಶ್ಯಾವಳಿಗಳು) ಇರಲಿವೆ. ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಹಲವು ‘ವಿಎಫ್‌ಎಕ್ಸ್‌’ ಕಂಪೆನಿಗಳ ಸಮೂಹವು ಬಾಹುಬಲಿಯ ಎರಡೂ ಭಾಗಗಳಿಗೆ ಅವಿರತ ಕೆಲಸ ಮಾಡಿದೆ.
 
ಹೈದರಾಬಾದ್‌ನ ‘ಮಕುಟ ವಿಎಫ್‌ಎಕ್ಸ್‌’, ‘ಪ್ರಸಾದ್‌ ಇಎಫ್‌ಎಕ್ಸ್‌’, ಮಲೇಷ್ಯಾದ ‘ತಾವು ವಿಎಫ್‌ಎಕ್ಸ್‌’ ಈ ಸಮೂಹದಲ್ಲಿರುವ ಪ್ರಮುಖ ಕಂಪೆನಿಗಳು. ‘ಬಾಹುಬಲಿ’ ಗ್ರಾಫಿಕ್ಸ್‌ ಎಡಿಟ್‌ ನೇತೃತ್ವವನ್ನು ವಿ. ಶ್ರೀನಿವಾಸ್‌ ಮೋಹನ್‌ ವಹಿಸಿಕೊಂಡಿದ್ದರೆ, ಬಾಹುಬಲಿ–2ರ ನೇತೃತ್ವವನ್ನು ಆರ್‌.ಸಿ. ಕಮಲಾಕರನ್ ವಹಿಸಿಕೊಂಡಿದ್ದಾರೆ.   
***
ಪೀಟರ್‌ ಹೆನ್‌, ಸಾಹಸ ನಿರ್ದೇಶಕ
ವಿಯೆಟ್ನಾಂ ಮೂಲದ ಪೀಟರ್‌ ಹೆನ್‌ ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಟನಾಗಿ. ಆರಂಭದಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದರು. ಕೆಲವು ಚಿತ್ರಗಳಲ್ಲಿ ಸಹಾಯಕ ಸಾಹಸ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
 
ಹೆಸರಾಂತ ನಿರ್ದೇಶಕರಾದ ಮಣಿರತ್ನಂ, ಶಂಕರ್‌, ಎ.ಆರ್‌. ಮುರುಗದಾಸ್‌, ಶ್ರೀರಾಮ್‌ ರಾಘವನ್‌ ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ.
 
‘ಬಾಹುಬಲಿ’ ಮೊದಲ ಭಾಗದಲ್ಲಿ ಅವರು ನಿರ್ದೇಶಿಸಿದ ಯುದ್ಧದ ದೃಶ್ಯಗಳಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ‘ಬಾಹುಬಲಿ–2’ ಸಿನಿಮಾಕ್ಕೂ ಅವರೇ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.
 
 
ಸಾಬು ಸಿರಿಲ್‌, ಕಲಾ ನಿರ್ದೇಶಕ
‘ಬಾಹುಬಲಿ’ ಸಿನಿಮಾ ನೋಡಿದವರು ಅದರಲ್ಲಿನ ಸಾವಿರ ಅಡಿ ಎತ್ತರದ ಜಲಪಾತವನ್ನು, ಅಲ್ಲಿನ ಪ್ರಭಾಸ್‌ ಮತ್ತು ತಮನ್ನಾ ಪ್ರಣಯಗೀತೆಯನ್ನು ಮರೆಯಲು ಸಾಧ್ಯವೇ ಇಲ್ಲ. ಈ ನಯನ ಮನೋಹರ ಜಲಪಾತದ ಪರಿಕಲ್ಪನೆ ಕಲಾ ನಿರ್ದೇಶಕ ಸಾಬು ಸಿರಿಲ್‌ ಅವರದು.
 
ಕಾಲ್ಪನಿಕ ಸಾಮ್ರಾಜ್ಯಗಳು ಹಾಗೂ ಯುದ್ಧದ ದೃಶ್ಯಗಳು ಸೇರಿದಂತೆ, ರಾಜಮೌಳಿ ಅವರ ಕಲ್ಪನೆಯಲ್ಲಿದ್ದ ಕಥೆಯ ಕಾಲಮಾನವನ್ನು ಪರದೆಯ ಮೇಲೆ ಸೃಷ್ಟಿಸುವಲ್ಲಿ ಇವರ ಪ್ರತಿಭೆಯೇ ಬೆನ್ನೆಲುಬಾಗಿ ಕೆಲಸ ಮಾಡಿದೆ.
 
 
ಕೆ.ವಿ ವಿಜಯೇಂದ್ರ ಪ್ರಸಾದ್‌, ಕಥೆಗಾರ
ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್‌ ‘ಬಾಹುಬಲಿ’ಗೆ ಕತೆ ಬರೆದಿದ್ದಾರೆ. ಈ ಕಥೆಯನ್ನು ಬರೆಯಲು ಅವರಿಗೆ ಸ್ಫೂರ್ತಿಯಾಗಿದ್ದು ‘ಚಂದಮಾಮ’, ‘ಅಮರ ಚಿತ್ರಕತೆ’ ಹಾಗೂ ಮಹಾಭಾರತದ ಕತೆಗಳು.

ವಿಜಯೇಂದ್ರ ಪ್ರಸಾದ್‌ 1988ರಿಂದ ಸಿನಿಮಾಗಳಿಗೆ ಚಿತ್ರಕತೆ ಬರೆಯುತ್ತಿದ್ದಾರೆ. ಸಲ್ಮಾನ್‌ ಖಾನ್‌ ಅಭಿನಯದ ‘ಭಜರಂಗಿ ಭಾಯಿಜಾನ್‌’ ಸಿನಿಮಾಕ್ಕೂ ಇವರದೇ ಕಥೆ.
 
ಕೆ.ಕೆ. ಸೆಂದಿಲ್‌ ಕುಮಾರ್‌, ಸಿನಿಮಾ ಛಾಯಾಗ್ರಾಹಕ
ರಾಜಮೌಳಿ ನಿರ್ದೇಶನದ ‘ಮಗಧೀರ’ ಹಾಗೂ ‘ಈಗ’ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡಿದ್ದ ಸೆಂದಿಲ್‌ ಕುಮಾರ್‌ ‘ಬಾಹುಬಲಿ’ಯ ದೃಶ್ಯವೈಭವಕ್ಕೂ ಕ್ಯಾಮೆರಾ ಕಣ್ಣಾಗಿದ್ದಾರೆ. ಇವರು 2003ರಲ್ಲಿ ‘ಐತೆ’ ಎಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT