ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಪಂಗಡ ಬಿಡಿ, ಲಿಂಗಾಯತರೆನ್ನಿ

Last Updated 25 ಏಪ್ರಿಲ್ 2017, 4:32 IST
ಅಕ್ಷರ ಗಾತ್ರ

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಒಳಪಂಗಡಕ್ಕೆ ಮೀಸಲಾತಿ ಕೊಡಿ ಎನ್ನುವ ಬದಲು ‘ವೀರಶೈವ ಲಿಂಗಾಯತ’ ಎಂದು ಗುರುತಿಸಿಕೊಳ್ಳಲು ಹೆಚ್ಚು ಒತ್ತು ಕೊಡಬೇಕು’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸಲಹೆ ನೀಡಿದರು.

ಕೂಡಲಸಂಗಮದಲ್ಲಿ ಭಾನುವಾರ ಏರ್ಪಡಿಸಿದ್ದ ಆದಿಬಣಜಿಗರ ರಾಜ್ಯ ಮಟ್ಟದ ಪ್ರಥಮ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮೀಸಲಾತಿಯ ನೆಪದಲ್ಲಿ
ಉಪ ಪಂಗಡಗಳಾಗಿ ವಿಭಜಿಸಿ, ಲಿಂಗಾಯತ ಸಮಾಜವನ್ನು  ಒಡೆಯುವ ಷಡ್ಯಂತ್ರ ನಡೆಯುತ್ತಿದೆ.  ಇದಕ್ಕೆ ಯಾವುದೇ ರಾಜಕೀಯ ಪಕ್ಷವೂ ಹೊರತಲ್ಲ. ಸೌಲಭ್ಯ ಬೇಕಾದರೆ ಹಕ್ಕು ಪ್ರತಿಪಾದಿಸಿ ಪಡೆದುಕೊಳ್ಳಬಹುದು. ಆದರೆ ಸಮಾಜವು ಉಪ ಪಂಗಡಗಳಾಗಿ ಹಂಚಿ ಹೋದರೆ ಅದರ ಶಕ್ತಿ ಕುಂದುತ್ತದೆ’ ಎಂದು
ಎಚ್ಚರಿಸಿದರು.

‘ಲಿಂಗಾಯತರ ಹಿತ ಕಾಯುವ ದಿಸೆಯಲ್ಲಿ ಕೇಂದ್ರಬಿಂದುವಾಗಿ ಕೆಲಸ ಮಾಡಬೇಕಿದ್ದ ವೀರಶೈವ ಮಹಾಸಭಾ ಹಿಂದುಳಿದಿದೆ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಇರಲಿ. ಆದರೆ ಮೂಲಕ್ಕೆ ಧಕ್ಕೆ ಬರದಂತೆ ಮೀಸಲಾತಿ ಪಡೆಯಬೇಕು. ಆದಿಬಣಜಿಗ ಸಮಾಜದ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಈಡೇರಿಸಲಾಗು ವುದು’ ಎಂದು ಅವರು ಭರವಸೆ ನೀಡಿದರು.

ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ‘ಸಮಾಜ ಬಂಧುಗಳು ಸ್ವಾಭಿಮಾನಿಗಳಾಗಿ, ಮೂಲ ಉದ್ಯೋಗ ಹೈನುಗಾರಿಕೆಯಲ್ಲಿ ಸಫಲತೆ ಸಾಧಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಬಸವಣ್ಣನ ತತ್ವ ಪ್ರಸಾರಕ್ಕಾಗಿ ಆರಂಭಗೊಂಡ ಅಖಿಲ ಭಾರತ ವೀರಶೈವ ಮಹಾಸಭಾ ಕೆಲವರ ಕಪಿಮುಷ್ಟಿಯಲ್ಲಿದೆ. ಈ ಸಭಾಕ್ಕೆ ಎಲ್ಲ ವರ್ಗದವರಿಗೆ ಸದಸ್ಯತ್ವ ಕೊಡುವ ಮೂಲಕ ಬಸವಣ್ಣ ಕಂಡ ಕಲ್ಯಾಣ ರಾಜ್ಯ ನಿರ್ಮಿಸುವ ಕಾರ್ಯ ನಡೆಯಬೇಕು’ ಎಂದರು.
ಬೀದರಿನ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ ಸಮಾವೇಶ ಉದ್ಘಾಟಿಸಿದರು. ಸವದತ್ತಿಯ ಜಂಬಲದಿನ್ನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದಿಬಣಜಿಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್.ಬಿ. ಶಂಕರಗೌಡ ಅಧ್ಯಕ್ಷತೆ ವಹಿಸಿದ್ದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಕೆಎಂಎಫ್ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ, ಹಾಪ್‌ಕಾಮ್ಸ್‌ ಅಧ್ಯಕ್ಷ ಭೀಮಸೇನ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಪೀರಗೊಂಡ ಗದ್ಯಾಳ, ವಿಜಯಪುರ ಜೆಡಿಎಸ್ ಮುಖಂಡ ಪವಾಡೆಪ್ಪಗೌಡ ಹವಾಲ್ದಾರ್, ಮುಖಂಡರಾದ ಶಿವು ಸಾಹುಕಾರ ಭೈರಗೊಂಡ, ವೀರಣ್ಣ ಮಹಾಂತಗೌಡರ, ಸುಖದೇವಿ ರಮಾಜಿ, ಮಂಜುಳಾ ಕಾಳಿಂಗೌಡರ, ಮಸ್ಕಿಯ ಡಾ.ಬಸಲಿಂಗಪ್ಪ ದಿವಟರ್, ಗುರುಬಸಪ್ಪ ಪಾಟೀಲ, ಹೊಸಪೇಟೆಯ ಮಲ್ಲಿನಾಥ ಬಿರಾದಾರ, ಹುಬ್ಬಳ್ಳಿಯ ಸೈಬಣ್ಣ ಡೆಂಗಿ, ವಿಜಯಪುರದ ಶರಣಗೌಡ ಬಿರಾದಾರ, ಗದುಗಿನ ರಾಮಚಂದ್ರ ಝಳಕಿ,  ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಪತಿಗೌಡ ಬಿರಾದಾರ ಸೇರಿ 10 ಜಿಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ರಾಜ್ಯದ ವಿವಿಧೆಡೆಯಿಂದ 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT