ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಭಾಗ್ಯದ ಅಕ್ಕಿ ಅನ್ಯ ರಾಜ್ಯಗಳ ಪಾಲು

Last Updated 25 ಏಪ್ರಿಲ್ 2017, 4:49 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಅನ್ನಭಾಗ್ಯದ ಅಕ್ಕಿ ಹೊರ ರಾಜ್ಯಗಳ ಪಾಲಾಗುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಉಸ್ತುವಾರಿ ಶೋಭಾ ಕರಂದ್ಲಾಜೆ ಆರೋಪಿಸಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ದಂಧೆಕೋರರು ಈ ಅವ್ಯವಹಾರದಲ್ಲಿ ಮುಳುಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

‘ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ದಿನವೇ ಪ್ರತಿ ಕುಟುಂಬಕ್ಕೆ 30 ಕೆ.ಜಿ. ಅಕ್ಕಿ ಘೋಷಿಸಿದರು. ಆದರೆ, ಯಾವುದಾದರೂ ಕುಟುಂಬಕ್ಕೆ 30 ಕೆ.ಜಿ. ಅಕ್ಕಿ ಸಿಕ್ಕಿದೆಯೇ’ ಎಂದು ಪ್ರಶ್ನಿಸಿದರು.

‘ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ₹400 ಕೋಟಿ ಅನುದಾನ ನೀಡುತ್ತಿದೆ. ಆದರೆ, ಫೋಟೊ ಮಾತ್ರ ಸಿದ್ದರಾಮಯ್ಯ ಅವರದ್ದು’ ಎಂದು ಟೀಕಿಸಿದ ಅವರು, ‘ಸಿದ್ದರಾಮಯ್ಯ ಎರಡು ಕ್ಷೇತ್ರ ಗೆದ್ದು ಬೀಗಿಬಿಟ್ಟರೆ ಆಗಲಿಲ್ಲ, ಬರ ಪರಿಹಾರ ಕಾಮಗಾರಿಗಳನ್ನು ಹೇಗೆ ಕೈಗೊಂಡಿದ್ದೀರಿ ಎಂಬುದನ್ನು ತಿಳಿಸಿ. ನೀವು ಹೆಲಿಕಾಪ್ಟರ್ ಓಡಾಟ ನಿಲ್ಲಿಸಿ ರಸ್ತೆ ಮೂಲಕ ಪ್ರವಾಸ ಮಾಡಿ. ರಾಜ್ಯದ ರಸ್ತೆಗಳ ಸ್ಥಿತಿ ಅರಿವಿಗೆ ಬರುತ್ತದೆ’ ಎಂದರು.

‘ಯುಪಿಎ ಆಡಳಿತದ ವೇಳೆ ದೇಶದ ಪ್ರತಿಷ್ಠೆ ಪಾತಾಳಕ್ಕೆ ಇಳಿದಿತ್ತು. ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ವಿಶ್ವಮಟ್ಟದಲ್ಲಿ ದೇಶಕ್ಕೆ ಗೌರವ ತಂದುಕೊಟ್ಟರು. ಚುನಾವಣೆ ಸಂದರ್ಭದಲ್ಲಿ ಮೋದಿ ಅವರ ಬಗ್ಗೆ ಕೆಲವರಿಗೆ ಭಯ ಇತ್ತು. ಈಗ ಅದು ಹೋಗಿದೆ. ಅವರೊಬ್ಬ ವಿಶ್ವದ ನಾಯಕರಾಗಿ ಕಂಗೊಳಿಸುತ್ತಿದ್ದಾರೆ’ ಎಂದರು.

ಚುನಾವಣೆಗೂ ಮೊದಲು ಭ್ರಷ್ಟಾಚಾರರಹಿತ ಆಡಳಿತ, ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಕೆಲಸ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಈಗ ಈ ಮೂರನ್ನೂ ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ಮುಂದಾಗಿದೆ ಎಂದರು.

ಮುಂದಿನ ದಿನಗಳು ಬಿಜೆಪಿಯದ್ದು: ‘ದೇಶದಲ್ಲಿ 10 ರಾಜ್ಯಗಳನ್ನು ಬಿಟ್ಟರೆ ಉಳಿದ ಎಲ್ಲಾ ಕಡೆ ಬಿಜೆಪಿ ಆಡಳಿತ ಇದೆ. ಮುಂದಿನ ದಿನಗಳು ಬಿಜೆಪಿ ದಿನಗಳು. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುವುದು ಶತಃಸಿದ್ಧ’ ಎಂದು ದೃಢವಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ ಮಹೇಶ್, ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಮಹಿಳೆಯರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ತಡೆಯುವಲ್ಲಿ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ’ ಎಂದು ಟೀಕಿಸಿದರು.

ಸರ್ಕಾರದ ಮಹಿಳಾ ವಿರೋಧಿ ನೀತಿ ಖಂಡಿಸಿ ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ರಮೇಶ್, ಉಪಾಧ್ಯಕ್ಷ ಡಿ.ಸಿದ್ದಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕರಾದ ಎಸ್‌.ವಿ.ರಾಮಚಂದ್ರಪ್ಪ, ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಹನಾ ರವಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುವರ್ಣ ಅರುಂಡಿ ನಾಗರಾಜ, ದೀಪಾ ಜಗದೀಶ್, ಶಾಂತಕುಮಾರಿ, ಶೈಲಜಾ ಬಸವರಾಜ್ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಸಿ.ಜಯಮ್ಮ ಸ್ವಾಗತಿಸಿದರು. ಸಹನಾ ಮಂಜುನಾಥ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT