ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಕ್ರಿಯ ಕೊಳವೆಬಾವಿಗಳಿಗೆ ಮುಕ್ತಿ

Last Updated 25 ಏಪ್ರಿಲ್ 2017, 5:08 IST
ಅಕ್ಷರ ಗಾತ್ರ

ಚಳ್ಳಕೆರೆ: ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ ಮತ್ತು ಕುಡಿಯುವ ನೀರಿಗಾಗಿ ಕೊರೆಯಿಸಿ, ವಿಫಲವಾಗಿ  ತೆರೆದ ಸ್ಥಿತಿಯಲ್ಲೇ ಇದ್ದಂಥ ಕೊಳವೆ ಬಾವಿಗಳನ್ನು ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಮುಚ್ಚಿಸಲಾಯಿತು.

ತಾಲ್ಲೂಕಿನ ಸಾಣಿಕೆರೆ, ಕಮ್ಮತ್‌ಮರಿಕುಂಟೆ, ಹೊಟ್ಟೆಪ್ಪನಹಳ್ಳಿ ಸೇರಿದಂತೆ ಚಳ್ಳಕೆರೆ ನಗರದ ಹಲವು ಪ್ರದೇಶಗಳಲ್ಲಿ ನೀರು ದೊರೆಯದೆ ಬಾಯಿ ತೆರೆದಿದ್ದ ಕೊಳವೆಬಾವಿಗಳ ಗುಂಡಿಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಮುಚ್ಚಿಸುವ ಕಾರ್ಯ ಸೋಮವಾರ ನಡೆಯಿತು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ತಾಲ್ಲೂಕಿನಾದ್ಯಂತ ಬೇಸಿಗೆ ಆವರಿಸಿ ಅಂತರ್ಜಲ ಮಟ್ಟ ಕುಸಿದು ನೀರಿಗೆ ಹಾಹಾಕಾರ ಉಂಟಾಗಿದೆ. ಈ ಸಂದರ್ಭ ನೀರಾವರಿ ಆಧಾರಿತ ಕೃಷಿ ಚಟುವಟಿಕೆಗಳಿಗಾಗಿ 600ರಿಂದ 800 ಅಡಿಗಳವರೆಗೆ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ಆದರೂ, ನೀರು ದೊರೆಯುತ್ತಿಲ್ಲ. ಕೊಳವೆಬಾವಿ ಕೊರೆಸಿದ ನಂತರ ಸಾರ್ವಜನಿಕರು ಅವುಗಳನ್ನು ಮುಚ್ಚಿಸದೆ ಬೇಜವಾಬ್ದಾರಿಯಿಂದ ನಡೆದು ಕೊಳ್ಳುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಅವಘಡಗಳು ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇಸಿಗೆ ರಜಾ ಇರುವುದರಿಂದ ಶಾಲಾ ಮಕ್ಕಳು ಹೆಚ್ಚಿನ ಸಮಯ ಮನೆಯಿಂದ ಹೊರಗೆ ಆಟವಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ತೆರೆದ ಕೊಳವೆಬಾವಿಗಳಲ್ಲಿ ಮಕ್ಕಳು ಸಿಲುಕುವ ಆತಂಕವಿದೆ. ಆದ್ದರಿಂದ ತಾಲ್ಲೂಕಿನಲ್ಲಿರುವ ಇಂತಹ ಬಾವಿಗಳನ್ನು ಪತ್ತೆ ಹಚ್ಚುವ ಮೂಲಕ ಅವುಗಳನ್ನು ಮುಚ್ಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್‌ ಟಿ.ಸಿ.ಕಾಂತರಾಜ ಮಾತನಾಡಿ, ‘ಬೆಳಗಾವಿಯ ಝಂಜರವಾಡದಲ್ಲಿ ಕಾವೇರಿ ಎಂಬ ಮಗು ಈಗೆಗೆ ಇಂತಹ ಗುಂಡಿಯಲ್ಲಿ ಸಿಲುಕಿದ್ದನ್ನು ನೋಡಿದ್ದೇವೆ. ಇಂತಹ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡದೊಂದಿಗೆ ತೆರೆದ ಕೊಳವೆಬಾವಿ ಮುಚ್ಚಿಸುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ತಾಲ್ಲೂಕಿನ ಎಲ್ಲಾ ಕಡೆಗಳಲ್ಲಿ ಈ ರೀತಿಯ ಗುಂಡಿಗಳು ಕಂಡು ಬಂದಲ್ಲಿ ಯುವಕರು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂಜಾಗ್ರತೆ ಕೈಗೊಳ್ಳುವ ಅಗತ್ಯವಿದೆ. ಜತೆಗೆ, ಸ್ಥಳೀಯ ಆಡಳಿತ ಮತ್ತು ಪಂಚಾಯ್ತಿಗಳಿಗೆ ವಿಷಯ ತಿಳಿಸಿ ಗುಂಡಿಗಳನ್ನು ಮುಚ್ಚಿಸುವ ಕಾರ್ಯಕ್ಕೆ ಸಹಕಾರ ನೀಡಬೇಕು’ ಸಲಹೆ ನೀಡಿದರು.
–ರಾಜಾ ಪರಶುರಾಮ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT