ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತ್ಯುತ್ಸವ: ರಜೆ ರದ್ದಿಗೆ ಒತ್ತಾಯ

Last Updated 25 ಏಪ್ರಿಲ್ 2017, 5:34 IST
ಅಕ್ಷರ ಗಾತ್ರ

ಧಾರವಾಡ:  ‘ಬಸವ ಜಯಂತಿಗೆ ಇರುವ ಸರ್ಕಾರಿ ರಜೆಯನ್ನು ರದ್ದು ಮಾಡಬೇಕು’ ಎಂದು ಇಲ್ಲಿನ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಗ್ರಹಿಸಿದರು.
ಈ ಸಂಬಂಧ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಬಸವಣ್ಣನವರ ಭಾವಚಿತ್ರ ಇಡಲು ಆದೇಶಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಕೋರಿದ್ದಾರೆ.

‘ಕಾಯಕವೇ ಕೈಲಾಸ ಎಂದು ನುಡಿದ ಬಸವಣ್ಣವರು ಆ ಪ್ರಕಾರವೇ ಜೀವನ ಸಾಗಿಸಿದ್ದಾರೆ. ಹೀಗಾಗಿ ರಜೆ ರದ್ದುಪಡಿಸಬೇಕು. ಮಹಾರಾಷ್ಟ್ರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡುವಂತೆ ಆದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಆದೇಶ ಹೊರಡಿಸಲು ಮುಂದಾಗಬೇಕು’ ಎಂದು ಹೇಳಿದರು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.

‘1913ಕ್ಕಿಂತ ಮೊದಲು ಬಸವ ಜಯಂತಿ ಆಚರಣೆ ಇರಲಿಲ್ಲ. ಆದರೆ, ಮುರುಘಾಮಠದ ಮೃತ್ಯುಂಜಯಪ್ಪಗಳು ಮತ್ತು ಹರ್ಡೇಕರ ಮಂಜಪ್ಪ ಅವರು ಮೊದಲ ಬಾರಿಗೆ ಬಸವ ಜಯಂತಿ ಆಚರಿಸಿದರು. ಸದ್ಯ ಶತಮಾನೋತ್ಸವ ಆಚರಿಸಿರುವ ಮುರುಘಾಮಠಕ್ಕೆ ಇದು ಹೆಮ್ಮೆಯ ಸಂಗತಿ’ ಎಂದರು.‘ಏ.29ರಂದು ಬಸವ ಜಯಂತಿ ಆಚರಣೆ ಜರುಗಲಿದೆ. ಈ ನಿಮಿತ್ತ ಅಂದು ಬೆಳಿಗ್ಗೆ ಇಲ್ಲಿನ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಬಸವ ಜಯಂತಿ ಉತ್ಸವಕ್ಕೆ ಸಚಿವ ವಿನಯ ಕುಲಕರ್ಣಿ ಚಾಲನೆ ನೀಡುವರು. ಮಧ್ಯಾಹ್ನ 3ಕ್ಕೆ ಕಲಾ ಭವನದಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಮತ್ತು ಶರಣ, ಶರಣೆಯರ ಭಾವಚಿತ್ರಗಳ ಮೆರವಣಿಗೆ ನಡೆಯಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುರುಘಾಮಠ ತಲುಪಿ ಸಮಾಪ್ತಿಗೊಳ್ಳಲಿವೆ’ ಎಂದರು.

‘ಸಂಜೆ 7ಕ್ಕೆ ಮುರುಘಾಮಠದಲ್ಲಿ ಜಿಲ್ಲಾಡಳಿತದ ವತಿಯಿಂದ ಬಸವ ಜಯಂತಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ. ಬೆಳಗಾವಿಯ ಜ್ಯೋತಿ ಬದಾಮಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶ್ರೀಧರ ಕುಲಕರ್ಣಿ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.ಗೋಷ್ಠಿಯಲ್ಲಿ  ಸಚಿವ ವಿನಯ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT