ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಾಯಪೂರ್ವಕವಾಗಿ ಹಿಂದುತ್ವ ಹೇರಿಕೆ

Last Updated 25 ಏಪ್ರಿಲ್ 2017, 6:29 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಈಗ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವ ಮೂಲಕ ಬಹುಸಂಸ್ಕೃತಿಯನ್ನು ದಮನ ಮಾಡುವ ಪಿತೂರಿ ನಡೆಯುತ್ತಿದೆ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಅಧ್ಯಯನ ವಿಭಾಗ ಸೋಮ ವಾರ ಆಯೋಜಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ 126ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೇವಲ ಅಧಿಕಾರ ರಾಜಕಾರಣ ಕ್ಕಾಗಿ ದೇಶದಲ್ಲಿ ಸಮುದಾಯ, ಧರ್ಮ, ಸಂಸ್ಕೃತಿ ನಡುವೆ ವಿಷಬೀಜ ಬಿತ್ತುವ ಷಡ್ಯಂತ್ರ ನಡೆಯುತ್ತಿದೆ. ದೇಶವನ್ನು ವಿಭಜಿಸುವ ಹುನ್ನಾರವಾಗಿ ಅದು ಕಾಣುತ್ತಿದೆ. ಬರುವ ದಿನಗಳಲ್ಲಿ ಮತ್ತಷ್ಟು ಆತಂಕಕಾರಿ ವಾತಾವರಣ ನಿರ್ಮಾಣವಾಗಲಿದೆ’ ಎಂದರು.

‘ಇಲ್ಲಿ ಎಷ್ಟೊಂದು ಧರ್ಮ, ಜಾತಿ, ಆಚರಣೆ, ಜೀವನ ಕ್ರಮ, ಆಹಾರ ಪದ್ಧತಿಗಳು ಇವೆ. ಬಹುಸಂಸ್ಕೃತಿಯ ಮಹಾನ್‌ ದೇಶದಲ್ಲಿ ಏಕಸಂಸ್ಕೃತಿ ಹೇರುವ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲಾಗುತ್ತಿದೆ’ ಎಂದರು.

‘ಹಿಂದುತ್ವದ ರಾಷ್ಟ್ರೀಯವಾದ ಎನ್ನುವುದೇ ಸಂಕುಚಿತ ಚಿಂತನಾಧಾರೆ. ಇದು ರಾಜಕೀಯ ಹಾಗೂ ಧರ್ಮಾಧಾರಿತ ಸಿದ್ಧಾಂತವೇ ಹೊರತು ಸಮಗ್ರ ಹಿಂದೂಗಳ ಸುಧಾರಣೆಯ ಸಿದ್ಧಾಂತವಾಗಿ ರೂಪ ತಳೆದುದಲ್ಲ. ಆದರೆ, ಹಿಂದೂ ಧರ್ಮವೇ ಭಾರತೀಯ ಧರ್ಮ, ಹಿಂದೂ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂಬ ವಿಚಾರಧಾರೆಯನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಲಾಗುತ್ತಿದೆ. ಹಳೆಯ ವೈದಿಕ ಧರ್ಮವೇ ಇವತ್ತಿನ ಹಿಂದುತ್ವ ರೂಪದಲ್ಲಿ ನಮ್ಮ ಮುಂದೆ ಪ್ರಕಟ ವಾಗುತ್ತಿದೆ. ಸಮಸ್ತ ಹಿಂದೂಗಳನ್ನು ಒಳಗೊಳ್ಳುವ ಚಿಂತನೆ ಇದರಲ್ಲಿ ಇಲ್ಲ’ ಎಂದು ಪ್ರತಿಪಾದಿಸಿದರು.

‘ಮೇಲ್ವರ್ಗದ ಹಿಂದೂಗಳು ಕೆಳವರ್ಗದ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯ, ಕ್ರೌರ್ಯವನ್ನು ಬೇರೆ ಯಾವುದೇ ಧರ್ಮದವರು ಮಾಡಿಲ್ಲ. ಹೀಗಿದ್ದಾಗ ಹಿಂದುತ್ವವಾದ ಸಮಗ್ರ ಭಾರತೀಯ ಸಿದ್ಧಾಂತವಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಮೋದಿ ಸರ್ವಾಧಿಕಾರಿ: ‘ಪ್ರಧಾನಿ ಮೋದಿ ಅವರಿಗೆ ಒಮ್ಮೆಲೇ ಅಂಬೇಡ್ಕರ್‌ ಮೇಲೆ ಒಲವು ಬಂದಿದೆ. ಒಂದು ಸಮುದಾಯವನ್ನು ತೃಪ್ತಿ ಗೊಳಿಸಲು ಈ ರೀತಿ ಮಾಡುತ್ತಿರ ಬಹುದು. ಹಾಗೆಂದ ಮಾತ್ರಕ್ಕೆ ಅವರು ಪ್ರಜಾಪ್ರಭುತ್ವವಾದಿ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಅವರೊಬ್ಬ ಸರ್ವಾಧಿಕಾರಿ’ ಎಂದರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಮೈಸೂರು ವಿ.ವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್‌, ಆಡಳಿತಾಧಿಕಾರಿ ಪ್ರೊ.ಸಿ.ರಾಮಸ್ವಾಮಿ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ಎಂ.ರುದ್ರಯ್ಯ, ಮುಖ್ಯಸ್ಥ ಎಸ್‌.ವೆಂಕಟೇಶ್‌ ಇದ್ದರು.

**

ಗಾಂಧಿ ಚಿಂತನೆ ಸರಿ
ಮೈಸೂರು
: ಗಾಂಧೀಜಿ ಮುಸ್ಲಿಮರ ಮೇಲೆ ತೋರಿದ ಔದಾರ್ಯವನ್ನು ದಲಿತರ ಮೇಲೂ ತೋರಬೇಕಿತ್ತು. ಹಾಗಂತ ಅವರು ದಲಿತ ವಿರೋಧಿಯೇನೂ ಆಗಿರಲಿಲ್ಲ. ಅಂಬೇಡ್ಕರ್‌ ರೀತಿ ಗಾಂಧೀಜಿ ಚಿಂತಿಸಿದ್ದರೆ ದೇಶಕ್ಕೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.

**

ಸಾಮಾನ್ಯರ ಅಭ್ಯುದಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಾಮಾಜಿಕ ವ್ಯವಸ್ಥೆಯಲ್ಲಿನ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಒಂದು ಆಯೋಗ ರಚಿಸಬೇಕು
-ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT