ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಆಕ್ರೋಶ, ಪ್ರದರ್ಶನ ರದ್ದು

Last Updated 25 ಏಪ್ರಿಲ್ 2017, 7:11 IST
ಅಕ್ಷರ ಗಾತ್ರ

ರಾಮನಗರ: ವರನಟ ಡಾ.ರಾಜ್‍ ಕುಮಾರ್ ಜನ್ಮದಿನದ ಅಂಗವಾಗಿ ‘ರಾಜಕುಮಾರ’ ಚಿತ್ರ ವೀಕ್ಷಣೆಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಟಿಕೆಟ್ ನೀಡುವಂತೆ ಚಿತ್ರತಂಡ ಘೋಷಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ದರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಇಲ್ಲಿನ ಶ್ರೀರಾಮ ಚಿತ್ರಮಂದಿರದ ಎದುರು ಅಭಿಮಾನಿಗಳು ಜಮಾಯಿಸಿ ಘೋಷಣೆ ಕೂಗಿದರು. ಮಧ್ಯಾಹ್ನದ ಪ್ರದರ್ಶನ ರದ್ದಾಗಿತ್ತು.

ಚಿತ್ರತಂಡದ ಘೋಷಣೆಯ ನಡುವೆಯೂ ಬೆಳಿಗ್ಗೆ ಮೊದಲ ಪ್ರದರ್ಶನ  ಪೂರ್ತಿ ದರದಲ್ಲಿ ಟಿಕೆಟ್ ಪಡೆದು ಅಭಿಮಾನಿಗಳು ವೀಕ್ಷಿಸಿದರು.

ಮಧ್ಯಾಹ್ನದ ಪ್ರದರ್ಶನಕ್ಕೆ ಟಿಕೆಟ್‌ ಪಡೆಯುವ ವೇಳೆ ಅಭಿಮಾನಿಗಳು ಚಿತ್ರಮಂದಿರದ ವ್ಯವಸ್ಥಾಪಕರ ಬಳಿ ಪ್ರಶ್ನಿಸಿದರು. ಆದರೆ, ಚಿತ್ರಮಂದಿರದ ವ್ಯವಸ್ಥಾಪಕರು ಇಡೀ ಪ್ರದರ್ಶನವನ್ನೇ ರದ್ದು ಪಡಿಸಿದ್ದು, ನೆರೆದ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರದರ್ಶನ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಚಿತ್ರ ವಿಕ್ಷೀಸಲು ಬಂದಿದ್ದ ಅಭಿಮಾನಿಗಳು ನಿರಾಸೆ ಅನುಭವಿಸಿದರು. ವರನಟ ಡಾ.ರಾಜ್‍ ಕುಮಾರ್‌ ಹುಟ್ಟು ಹಬ್ಬದಂದೇ ಈ ರೀತಿ ಕನ್ನಡ ಚಿತ್ರಗಳಿಗೆ ಅಪಮಾನ ಮಾಡಲಾಗಿದೆ ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಆರೋಪಿಸಿದರು. ಅಭಿಮಾನಿ ಮಧುಗೌಡ ಮಾತನಾಡಿ, ‘ಶೇ 50 ರಷ್ಟು ರಿಯಾಯಿತಿ ದರದಲ್ಲಿ ಟಿಕೆಟ್‌ ಅನ್ನು ಎಲ್ಲೆಡೆ ನೀಡಲಾಗುತ್ತಿದೆ. ಆದರೆ, ನಗರದ ಚಿತ್ರಮಂದಿರದಲ್ಲಿ ಮಾತ್ರ ಇದನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಚಿತ್ರಮಂದಿರದ ಮಾಲೀಕರನ್ನು ಪ್ರಶ್ನಿಸಿದರೆ, ಉಡಾಫೆ ಉತ್ತರ ನೀಡುತ್ತಾರೆ’ ಎಂದರು.

‘ಇದು ಇಡೀ ಕನ್ನಡ ಚಿತ್ರರಂಗಕ್ಕೆ ಮಾಡಿದ ಅಪಮಾನ. ಕನ್ನಡ ವಿರೋಧಿ ನೀತಿ ಅನುಸರಿಸಿರುವ ಈ ಚಿತ್ರಮಂದಿರದಲ್ಲಿ ಮುಂದಿನ ದಿನಗಳಲ್ಲಿ ಡಾ.ರಾಜ್ ಕುಟುಂಬದವರ ಚಿತ್ರಗಳು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲು ಬಿಡುವುದಿಲ್ಲ’ ಎಂದು ತಿಳಿಸಿದರು.

‘ಈಗ ಪೂರ್ತಿ ದರದಲ್ಲಿ ಟಿಕೆಟ್ ನೀಡಿ ಚಿತ್ರ ನೋಡಲು ಸಿದ್ಧರಿದ್ದೇವೆ. ಆದರೆ, ಇಡೀ ಚಿತ್ರಪ್ರದರ್ಶನವನ್ನೇ ರದ್ದು ಪಡಿಸಲಾಗಿದೆ. ಇದು ಖಂಡನೀಯ’ ಗೋವಿಂದರಾಜು ಹೇಳಿದರು.

‘ಕನ್ನಡದ ಹೆಸರು ಮೆರೆಸಿದ ಹೆಮ್ಮೆಯ ನಾಯಕ’
ರಾಮನಗರ:
‘ದೇಶದಲ್ಲೇ ಕನ್ನಡದ ಹೆಸರನ್ನು ಮೆರೆಸಿದ ಹೆಮ್ಮೆಯ ನಾಯಕ ಡಾ.ರಾಜ್ ಕುಮಾರ್ ಅವರ ಸರಳತೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಚಂದ್ರಶೇಖರ್‌ ಹೇಳಿದರು. ನಗರದಲ್ಲಿ ಕರುನಾಡ ಸೇನೆ ಸಂಘಟನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್ ಅವರ 89ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸ್ಟಾರ್ ಪಟ್ಟವನ್ನು ಬದಿಗಿಟ್ಟು ಜನರ ನಡುವೆ ಬೆರೆಯುತ್ತಿದ್ದ ಅವರ ವ್ಯಕ್ತಿತ್ವ ಇಂದಿನ ನಟ-, ನಟಿಯರಿಗೂ ಮಾದರಿಯಾಗಬೇಕು’ ಎಂದರು.

‘ಆಡು ಮುಟ್ಟದ ಸೊಪ್ಪಿಲ್ಲ. ರಾಜ್ ಅಭಿನಯಿಸದ ಪಾತ್ರಗಳಿಲ್ಲ. ಸಂತ ಕಬೀರನಾಗಿ, ಪುರಂದರ, ಕನಕದಾಸರಾಗಿ, ದೇವತಾ ಮನುಷ್ಯರಾಗಿ ನಟಿಸಿದ ಅವರು ನಿಜ ಜೀವನದಲ್ಲಿಯೂ ದೇವತಾ ಮನುಷ್ಯರು. ಅಭಿಮಾನಿಗಳಲ್ಲಿ ದೇವರನ್ನು ಕಂಡ ಅವರಿಗೆ ಇಂದು ಅಭಿಮಾನಿಗಳೇ ಪೂಜಿಸುತ್ತಿದ್ದಾರೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಯೋಗಾನಂದ್‌, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ನಗರಸಭೆ ಸದಸ್ಯ ಪರ್ವೀಜ್‌ ಪಾಷಾ, ಕರುನಾಡ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಜಗದೀಶ್‌, ಜಿಲ್ಲಾ ಘಟಕದ ಅಧ್ಯಕ್ಷೆ ಗಾಯಿತ್ರಿಬಾಯಿ, ಪದಾಧಿಕಾರಿಗಳಾದ ಸುಮಂತ್, ಸುರೇಶ್, ಜಯರಾಂ, ಹನುಮಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT