ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಸ್ತಾನಿ ಆಗಿದ್ದರೆ ಸೀಟು ಬಿಟ್ಟು ಕೊಡುತ್ತಿದ್ದೆವು, ಪಾಕಿಸ್ತಾನಿಗೆ ಸೀಟು ಕೊಡಲ್ಲ; ದೆಹಲಿ ಮೆಟ್ರೊ ರೈಲಿನಲ್ಲಿ ನಡೆದದ್ದೇನು?

Last Updated 25 ಏಪ್ರಿಲ್ 2017, 7:20 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕರೊಬ್ಬರನ್ನು ಯುವಕರು ಪಾಕಿಸ್ತಾನಿ ಎಂದು ಹೇಳಿ ಅವಮಾನಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಕಳೆದ ವಾರ ದೆಹಲಿ ಮೆಟ್ರೊದಲ್ಲಿ ನಡೆದ ಘಟನೆ ಇದು. ಹಿರಿಯ ನಾಗರಿಕರಿಗೆ ಮೀಸಲಿರಿಸಿದ ಆಸನದಲ್ಲಿ ಕುಳಿತಿದ್ದ ಯುವಕರಲ್ಲಿ ಸೀಟು ಬಿಟ್ಟುಕೊಡುವಂತೆ ಹಿರಿಯ ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ. ಆದರೆ ಅಲ್ಲಿ ಕುಳಿತಿದ್ದ ಯುವಕರು  ಹಿಂದೂಸ್ತಾನಿ ಆಗಿದ್ದರೆ ಸೀಟು ಬಿಟ್ಟು ಕೊಡುತ್ತಿದ್ದೆವು, ನಿಮ್ಮಂತ ಪಾಕಿಸ್ತಾನಿಗೆ ಸೀಟು ಬಿಟ್ಟುಕೊಡಲ್ಲ ಅಂದಿದ್ದಾರೆ.

ಸೀಟು ಬಿಟ್ಟುಕೊಡುವಂತೆ ಮನವಿ ಮಾಡಿದ ಹಿರಿಯ ವ್ಯಕ್ತಿಗೆ ಮೀಸೆ ಇರಲಿಲ್ಲ, ಆದರೆ ಗಡ್ಡ ಬೆಳೆಸಿದ್ದರು. ಹಾಗಾಗಿ ಅವರೊಬ್ಬ ಮುಸ್ಲಿಂ ಆಗಿರುವುದರಿಂದ ಎಂದು ಯುವಕರು ಈ ರೀತಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ನಡೆದ ಈ ಘಟನೆ ಬಗ್ಗೆ ಮಹಿಳಾ ಹೋರಾಟಗಾರ್ತಿ ಕವಿತಾ ಕೃಷ್ಣನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ನ್ನು ಹಲವಾರು ಮಂದಿ ಶೇರ್ ಮಾಡಿದ್ದಾರೆ.

ಕವಿತಾ ಕೃಷ್ಣನ್ ಅವರ ಪೋಸ್ಟ್ ನಲ್ಲಿ ಏನಿದೆ?
ಸೀಟು ಬಿಟ್ಟುಕೊಡುವಂತೆ ಹಿರಿಯ ವ್ಯಕ್ತಿ ಮನವಿ ಮಾಡಿಕೊಂಡಾಗ ಪಾಕಿಸ್ತಾನದವರಿಗೆ ಸೀಟು ಬಿಟ್ಟು ಕೊಡಲ್ಲ ಎಂದು ಯುವಕರು ಹೇಳಿದ್ದಾರೆ. ಯುವಕರು ಈ ರೀತಿ ಮಾತನಾಡಿದನ್ನು ನೋಡಿ ನನ್ನ ಸಹ ಪ್ರಯಾಣಿಕರಾದ ಕಾಮ್ರೇಡ್ ಸಂತೋಷ್ ರಾಯ್ ಮಧ್ಯ ಪ್ರವೇಶಿಸಿದ್ದಾರೆ. ಸಂತೋಷ್ ಅವರು ಎಐಸಿಸಿಟಿಯು ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ.

ಹಿರಿಯ ವ್ಯಕ್ತಿಯ ಜತೆ ಆ ರೀತಿ ಮಾತನಾಡಿದ್ದಕ್ಕಾಗಿ ಕ್ಷಮೆ ಕೇಳಿ ಎಂದು ರಾಯ್, ಆ ಯುವಕರಿಗೆ ಹೇಳಿದ್ದಾರೆ. ಈ ಮಾತಿಗೆ ಕುಪಿತಗೊಂಡ ಯುವಕನೊಬ್ಬ ರಾಯ್  ಅವರ ಕಾಲರ್ ಪಟ್ಟಿ ಹಿಡಿದು, ನೀನು ಪಾಕಿಸ್ತಾನಕ್ಕೆ ಹೋಗು ಎಂದು ಗದರಿದ್ದಾರೆ.

ಕೊನೆಗೆ ರೈಲಿನ ಗಾರ್ಡ್ ಗಳು ಬಂದು ಜಗಳ ನಿಲ್ಲಿಸಿದ್ದಾರೆ. ಖಾನ್ ಮಾರ್ಕೆಟ್ ನಲ್ಲಿ ಮೆಟ್ರೊ ನಿಂತಾಗ, ಜಗಳವಾಡಿದ ಆ ಯುವಕರನ್ನು ಗಾರ್ಡ್ ಗಳ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ  ಪಂಡಾರಾ ರೋಡ್ ಪೊಲೀಸ್  ಠಾಣೆ ಯಲ್ಲಿ ಕೇಸು ದಾಖಲಿಸಲಾಗಿದೆ.

ನಮ್ಮ ಜನ ಬಂದೇ ಬರ್ತಾರೆ ಎಂದು ಆ ಯುವಕರು ಒಂದೇ ಸಮನೆ ಬೆದರಿಕೆ ಹಾಕುತ್ತಲೇ ಇದ್ದರು. ಆದಾಗ್ಯೂ, ಪ್ರಯಾಣಿಕರಾಗಿದ್ದ ಆ ಮುಸ್ಲಿಂ ವ್ಯಕ್ತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತೇವೆ ಎಂದು ಪೊಲೀಸರು ಹೇಳಿದರೂ, ಆ ಹಿರಿಯರು ಅದೇನೂ ಬೇಡ ಎಂದು ನಿರಾಕರಿಸಿದ್ದಾರೆ.

ಕೇಸು ದಾಖಲಿಸಿದ ಮರುದಿನ ರಾಯ್ ಅವರಿಗೆ ಹಲವಾರು ಫೋನ್ ಕರೆಗಳು ಬಂದಿವೆ. ಆ ಯುವಕರು ಕ್ಷಮೆ ಕೇಳಲು ತಯಾರಿದ್ದಾರೆ ಎಂದು ಫೋನ್‍ ಕರೆ ಮಾಡಿದವರು ಹೇಳಿದ್ದಾರೆ. ಆದರೆ ನನ್ನಲ್ಲಿ ಕ್ಷಮೆ ಕೇಳಬೇಕಾಗಿಲ್ಲ, ಆ ಹಿರಿಯ ವ್ಯಕ್ತಿಯ ಕ್ಷಮೆ ಕೇಳಿ ಎಂದು ರಾಯ್ ಹೇಳಿದ್ದಾರೆ.

ಕೆಲವು ದಿನ ಕಳೆದ ನಂತರ ರಾಯ್ ಪೊಲೀಸ್ ಠಾಣೆಗೆ ಹೋದಾಗ ತಿಳಿದು ಬಂದ ವಿಷಯವೇನೆಂದರೆ ಆ ಹಿರಿಯ ವ್ಯಕ್ತಿ ಕೇಸು ಮುಂದುವರಿಸುವುದು ಬೇಡ ಎಂದು ಹೇಳಿದ್ದಾರೆ. ಯುವಕರನ್ನು ನಾನು ಕ್ಷಮಿಸಿದ್ದೇನೆ. ಈ ಬಗ್ಗೆ ಕೇಸು ಮುಂದುವರಿಸುವುದಿಲ್ಲ ಎಂದು ಆ ಹಿರಿಯರು ಬರೆದು ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯಾವುದೇ ಜಾಗದಲ್ಲಿ ಕೋಮು ದ್ವೇಷ, ಲೇವಡಿ ಅಥವಾ ವದಂತಿ ಹಬ್ಬಿಸುವ ಕ್ರಿಯೆಗಳು ನಡೆದರೆ ಅದರ ವಿರುದ್ಧ ನಿಲ್ಲುವ ಧೈರ್ಯವನ್ನು ಪ್ರತಿಯೊಬ್ಬ ಭಾರತೀಯನೂ ತೋರಿಸಬೇಕು. ಜನಾಂಗಿಯ ದ್ವೇಷದ ವಿರುದ್ಧ ಪ್ರತಿಯೊಬ್ಬರೂ ದನಿಯೆತ್ತಬೇಕು ಎಂದು ಕವಿತಾ ಕೃಷ್ಣನ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT