ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದ ಸಮಯದಲ್ಲೇ ನಕ್ಸಲ್‌ ಅಟ್ಟಹಾಸ

ಅನಿರೀಕ್ಷಿತವಾಗಿ ಬಂದೆರಗಿತ್ತು ಗುಂಡು, ಗ್ರೆನೇಡ್‌ ಸುರಿಮಳೆ, ಅತ್ಯಾಧುನಿಕ ಶಸ್ತ್ರಗಳ ಬಳಕೆ
Last Updated 25 ಏಪ್ರಿಲ್ 2017, 19:32 IST
ಅಕ್ಷರ ಗಾತ್ರ

ನವದೆಹಲಿ:  ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ 12.30ಕ್ಕೆ ನಕ್ಸಲರು ಹೊಂಚು ಹಾಕಿ ದಾಳಿ ನಡೆಸಿದಾಗ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) 25 ನತದೃಷ್ಟ ಯೋಧರು ಊಟ ಮಾಡುತ್ತಿದ್ದರು.

ಜಿಲ್ಲೆಯ ಛಿತಗುಫಾವನ್ನು ಸಂಪರ್ಕಿಸುವ 5. 5 ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ ಭದ್ರತೆ ಒದಗಿಸುವುದಕ್ಕಾಗಿ 99 ಯೋಧರನ್ನು ಮೂರು ತಂಡವಾಗಿ ನಿಯೋಜಿಸಲಾಗಿತ್ತು. ಈ ಪೈಕಿ 36 ಜನರಿದ್ದ ತುಕಡಿಯ ಮೇಲೆ ನಕ್ಸಲರು ಮೊದಲು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ಊಟಕ್ಕೆ ಕುಳಿತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನಕ್ಸಲರು, ಸ್ಥಳೀಯರ ನೆರವು ಪಡೆದುಕೊಂಡು ಯೋಧರ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಆಧುನಿಕ ಶಸ್ತ್ರಾಸ್ತ್ರಗಳನ್ನು  ಹೊಂದಿದ್ದ ನಕ್ಸಲರ ಗುಂಪು ಹಠಾತ್‌ ದಾಳಿ ನಡೆಸಿ ಗುಂಡಿನ ಮಳೆಗರೆಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

‘ದಾಳಿಯ ಸಂದರ್ಭದಲ್ಲಿ ಯೋಧರು ಊಟ ಮುಗಿಸಿದ್ದರು. ಆ ಸಂದರ್ಭದಲ್ಲಿ ಅವರು ಜಾಗರೂಕ ಸ್ಥಿತಿಯಲ್ಲಿ ಇದ್ದಿರುವ ಸಾಧ್ಯತೆ ಇಲ್ಲ’ ಎಂದು ಸಿಆರ್‌ಪಿಎಫ್‌ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ, ಕೆಲವು ಸಿಬ್ಬಂದಿಯ ಊಟ  ಆಗಿರಲಿಲ್ಲ ಎಂದು ಬೇರೆ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ 25 ಯೋಧರು ಮತ್ತು ಗಾಯಗೊಂಡಿದ್ದ ಆರು ಸಿಬ್ಬಂದಿ, ದಾಳಿ ಆರಂಭವಾದ ತಕ್ಷಣ ತಮ್ಮ ಶಸ್ತ್ರಾಸ್ತ್ರಗಳನ್ನು ಹಿಡಿದು ನಕ್ಸಲರತ್ತ ಗುರಿ ಇಡಲು ಯತ್ನಿಸಿದರು. ಜೊತೆಗಿದ್ದ ಶಸ್ತ್ರ ಸಜ್ಜಿತ ಇತರ ಯೋಧರು ಪ್ರತಿದಾಳಿ ನಡೆಸಿ, 40 ನಾಗರಿಕರು ಮತ್ತು ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರನ್ನು ರಕ್ಷಿಸಿದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದಾಳಿಗೆ ಯುಬಿಜಿಎಲ್‌ (ಅಂಡರ್‌ ಬ್ಯಾರೆಲ್‌ ಗ್ರೆನೇಡ್‌ ಲಾಂಚರ್‌) ಮತ್ತು ಇತರ ಅತ್ಯಾಧುನಿಕ ಶಸ್ತ್ರಗಳನ್ನು ನಕ್ಸಲರು ಬಳಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಭದ್ರತಾ ಪಡೆಗಳು ಇಂತಹ ಅಸ್ತ್ರಗಳನ್ನು ಬಳಸುತ್ತವೆ.

‘ಈ ಯುಬಿಜಿಎಲ್‌ಗಳನ್ನು ಭದ್ರತಾ ಪಡೆಗಳಿಂದ ದೋಚಿರುವ ಸಾಧ್ಯತೆ ಇದೆ. ನಕ್ಸಲರು ಮಾರ್ಚ್‌ 11ರಂದು ಸುಕ್ಮಾದಲ್ಲಿ ನಡೆಸಿದ್ದ ದಾಳಿ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಕೊಳ್ಳೆ ಹೊಡೆದಿರಬಹುದು’ ಎಂದು ಶಂಕಿಸಲಾಗಿದೆ.  ಮಾರ್ಚ್‌ 11ರ ದಾಳಿಯಲ್ಲಿ 12 ಸಿಆರ್‌ಪಿಎಫ್‌ ಸಿಬ್ಬಂದಿ ಮೃತಪಟ್ಟಿದ್ದರು.

ಸೋಮವಾರದ  ದಾಳಿಯಲ್ಲಿ ಕಚ್ಚಾ ಬಾಂಬ್‌ ಬಳಸಲಾಗಿಲ್ಲ. ಆಧುನಿಕ ಬಂದೂಕು ಮತ್ತು ಗ್ರೆನೇಡ್‌ ದಾಳಿಯಿಂದಾಗಿ ಈ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಶಸ್ತ್ರಾಸ್ತ್ರ ದೋಚಿದ ಮಾವೋವಾದಿಗಳು
ದಾಳಿ ನಡೆಸಿದ ಬಳಿಕ ನಕ್ಸಲರು ಯೋಧರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ದೋಚಿದ್ದಾರೆ. ಎ.ಕೆ ಸರಣಿಯ 13 ರೈಫಲ್‌ಗಳು, 5 ಐಎನ್‌ಎಸ್‌ಎಎಸ್‌ ರೈಫಲ್‌ ಸೇರಿದಂತೆ 22 ಅತ್ಯಾಧುನಿಕ ಶಸ್ತ್ರಗಳನ್ನು ಅವರು ಕದ್ದೊಯ್ದಿದ್ದಾರೆ.

ಇದಲ್ಲದೇ, ವಿವಿಧ ರೈಫಲ್‌ಗಳ 3,420 ಸುತ್ತು ಸಜೀವ ಗುಂಡುಗಳು, ಎ.ಕೆ. ರೈಫಲ್‌ಗಳ 75 ಮ್ಯಾಗಜೀನ್‌, ಯುಬಿಜಿಎಲ್‌ನ 67 ಸುತ್ತು ಸಜೀವ ಗುಂಡುಗಳು, 22 ಗುಂಡು ನಿರೋಧಕ ಜಾಕೆಟ್‌ಗಳು, ಎರಡು ಬೈನಾಕ್ಯುಲರ್‌, ಐದು ವೈರ್‌ಲೆಸ್‌ ಫೋನ್‌ ಮತ್ತು ಒಂದು ಲೋಹ ಪರಿಶೋಧಕವನ್ನೂ ಅವರು  ದೋಚಿದ್ದಾರೆ.

ಹಿದ್ಮಾ ನೇತೃತ್ವ?
ನಕ್ಸಲ್‌ ಕಮಾಂಡರ್‌ ಮಾದ್ವಿ ಹಿದ್ಮಾ ನೇತೃತ್ವದ ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿಯು ಈ ದಾಳಿ ನಡೆಸಿರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಆತ ಸಕ್ರಿಯನಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಕ್ಸಲರ ಬಳಿ ರಾಕೆಟ್‌ ಲಾಂಚರ್‌
ರಾಯಪುರ (ಪಿಟಿಐ):  ‘ಮೊದಲು ಗ್ರಾಮಸ್ಥರು ಬಂದರು. ಆ ನಂತರ ಕಪ್ಪು ಬಟ್ಟೆ ಧರಿಸಿದ್ದ ನಕ್ಸಲರು ಬಂದು ದಾಳಿ ನಡೆಸಿದರು. ತಂಡದಲ್ಲಿ ಸುಮಾರು 300 ನಕ್ಸಲರಿದ್ದರು’ ಎಂದು ಘಟನೆಯಲ್ಲಿ ಬದುಕುಳಿದ ಯೋಧರೊಬ್ಬರು ಹೇಳಿದ್ದಾರೆ.

ಕೆಲವು ಮಾವೋವಾದಿಗಳ ಕೈಯಲ್ಲಿ ರಾಕೆಟ್‌ ಲಾಂಚರ್‌ಗಳಿದ್ದವು ಎಂದು ಹೆಸರು ಹೇಳಲು ಇಚ್ಛಿಸದ ಆ ಯೋಧ ತಿಳಿಸಿದ್ದಾರೆ.

‘ನಾವಿದ್ದ ಸ್ಥಳ ಪರಿಶೀಲಿಸುವುದಕ್ಕಾಗಿ ನಕ್ಸಲರು ಮೊದಲು ಗ್ರಾಮಸ್ಥರನ್ನು ಕಳುಹಿಸಿದ್ದರು. ಅವರ ಬಳಿ ಶಸ್ತ್ರಗಳಿರಲಿಲ್ಲ. ಹೀಗಿರುವಾಗ ಅವರ ಮೇಲೆ ನಾವು ಗುಂಡಿನ ದಾಳಿ ನಡೆಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ದಾಳಿಕೋರರ ಬಳಿ ಎ.ಕೆ. 47, ಸ್ವಯಂ ಆಗಿ ಗುಂಡು ತುಂಬಿಕೊಳ್ಳುವ ರೈಫಲ್‌ ಸೇರಿದಂತೆ ಹಲವಾರು ಸ್ವಯಂಚಾಲಿತ ಅಸ್ತ್ರಗಳಿದ್ದವು’ ಎಂದು ದಾಳಿಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ಯೋಧ ಮೊಹಮ್ಮದ್ ಖಾನ್‌  ಹೇಳಿದ್ದಾರೆ.

ಇಬ್ಬರೂ ಈಗ ರಾಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಧಿಕಾರ ಕೊಡಿ:  ‘ನಕ್ಸಲರನ್ನು ಹತ್ತಿಕ್ಕಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅಡಿಯಲ್ಲಿ ನಮಗೆ ವಿಶೇಷ ಅಧಿಕಾರ ನೀಡುವಂತೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡುತ್ತೇನೆ’ ಎಂದು ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT