ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷವರ್ತುಲದಿಂದ ಮುಕ್ತಿ ಯಾವಾಗ?

ಬೆಳ್ಳಂದೂರಿನಂತೆ ನನ್ನ ಮೇಲೂ ಕಾಳಜಿ ತೋರಿಸಿ: ವರ್ತೂರು ಕೆರೆಯ ಆರ್ತನಾದ
Last Updated 25 ಏಪ್ರಿಲ್ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು: ರಾಮ– ಲಕ್ಷ್ಮಣರಂತೆ ನಾವೂ ಸೋದರರು. ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆ ಎಂದು ನಮ್ಮ ಹೆಸರು. ನೆಮ್ಮದಿಯ ಬದುಕು ನಡೆಸುತ್ತಿದ್ದ ನಮಗೆ ಅಗ್ನಿಪರೀಕ್ಷೆಯಂತೆ ಅನೇಕ ಸವಾಲುಗಳು ಎದುರಾಗಿವೆ. ನಗರೀಕರಣ, ಕೈಗಾರೀಕರಣದ ಪ್ರಭಾವದಿಂದ ಕಲುಷಿತ, ವಿಷಯುಕ್ತ ನೀರು ಒಡಲು ಸೇರಿ ಬೆಂಕಿಯ ಉಂಡೆಯಂತಾಗಿದೆ. ಒಡಲ ಬೇಗೆ ತಾಳಲಾರದೆ ಆಗಾಗ ಬೆಂಕಿಯನ್ನು ಉಗುಳುತ್ತಾ, ನೊರೆಯನ್ನು  ಉಕ್ಕಿಸುತ್ತಾ ನಮ್ಮ ವೇದನೆಯನ್ನು ವ್ಯಕ್ತಪಡಿಸುತ್ತಿದ್ದೇವೆ.

ನಮ್ಮ ಆರ್ತನಾದವನ್ನು ಕೇಳಿಯೂ ಕೇಳದಂತಿದ್ದ ಬಿಬಿಎಂಪಿ, ಬಿಡಿಎ ಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ ಎಚ್ಚೆತ್ತ ಬಿಡಿಎ, ಬೆಳ್ಳಂದೂರು ಕೆರೆಯನ್ನು ₹ 3.35 ಕೋಟಿ ವೆಚ್ಚದಲ್ಲಿ ಪುನಶ್ಚೇತನ ಗೊಳಿಸಲು ಮುಂದಾಗಿದೆ. ಈಗಾಗಲೇ ಕಳೆ ತೆಗೆಯುವ ಕೆಲಸ ಆರಂಭವಾಗಿದೆ ಎಂಬ ಸುದ್ದಿ ಕೇಳಿ ಸಂತೋಷವಾಗಿದೆ. ಆದರೆ, ನನ್ನ ಒಡಲಲ್ಲೂ ಅದರಷ್ಟೇ ವಿಷ ಸೇರಿಕೊಂಡಿದೆ. ಒಳ ಬೇಗುದಿ ಬೂದಿ ಮುಚ್ಚಿದ ಕೆಂಡದಂತಿದೆ. ಆದರೂ ನನ್ನನ್ನು ಪುನಶ್ಚೇತನ ಗೊಳಿಸಲು ಯಾರೂ ಮುಂದಾಗುತ್ತಿಲ್ಲ.

ಒಂದೊಮ್ಮೆ ನೆರೆಹೊರೆಯವರಿಗೆ ಆಹ್ಲಾದ ನೀಡುತ್ತಿದ್ದ ನನ್ನ ಮೈ ಈಗ   ದುರ್ವಾಸನೆ ಬೀರುತ್ತಿದೆ. ಈ ಭಾಗದಲ್ಲಿ ವಾಸಿಸುವ ಹಾಗೂ ಸಂಚರಿಸುವ ಜನರು ಈ ಕಾರಣಕ್ಕೆ ನನಗೆ ಹಿಡಿಶಾಪ ಹಾಕುತ್ತಿದ್ದಾರೆ. ನೊರೆ, ಕೆಟ್ಟ ವಾಸನೆಯಿಂದ ಹಲವು ರೋಗ–ರುಜಿನಗಳಿಗೆ ಒಳಗಾಗುತ್ತಿದ್ದೇವೆ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಹೊಣೆಗಾರನೇ? ನನ್ನನ್ನು ಹಾಳು ಮಾಡಿದ್ದಾದರೂ ಯಾರು?

ಬೆಳ್ಳಂದೂರು ಕೆರೆಯಂತೆ ನಾನೂ  ಪರಿಶುದ್ಧಗೊಳ್ಳಬೇಕು. ಈ ವಿಷವರ್ತುಲದಿಂದ ಪಾರಾಗಬೇಕು. ನನ್ನ ಸುತ್ತಮುತ್ತ ವಾಸಿಸುವಂತಹ ಜನರಿಗೆ ಆಹ್ಲಾದಕರ ವಾತಾವರಣ ನೀಡಬೇಕು. ಆಬಾಲವೃದ್ಧರಾದಿಯಾಗಿ ಎಲ್ಲರೂ ಪ್ರತಿದಿನ ವಾಯುವಿಹಾರಕ್ಕೆ ಬಂದು ನನ್ನ ಸೌಂದರ್ಯವನ್ನು ಸವಿಯಬೇಕು. ಪರಿ ಶುದ್ಧನಾಗಿ ಅಂತರ್ಜಲ ಸೇರಿ ಕೊಳವೆ ಬಾವಿಗಳ ಮೂಲಕ ಹೊರ ಬಂದು ಜನರ ಬಾಯಾರಿಕೆಯನ್ನು ನೀಗಿಸಬೇಕು.

ನನ್ನೊಡಲಲ್ಲಿ ಬೆಳೆವ ಹುಲ್ಲು ಜಾನುವಾರುಗಳ ಒಡಲು ಸೇರಿ,  ಅವುಗಳು ಹಾಲಿನ ನೊರೆಯನ್ನು ಉಕ್ಕಿಸಬೇಕು. ಪೌಷ್ಟಿಕಾಂಶಯುಕ್ತ ಸೊಪ್ಪು– ತರಕಾರಿಗಳನ್ನು ಬೆಳೆಯು ವಂತಾಗಬೇಕು.ಅದನ್ನು ಸೇವಿಸುವವರ ಆರೋಗ್ಯ ವರ್ಧಿಸಬೇಕು ಎಂಬ ಮಹದಾಸೆ ನನ್ನದು.

ವರ್ತೂರು ಕೆರೆಯ ದಡದಲ್ಲಿ ನಿಂತಾಗ  ಅದು ಈ ರೀತಿ ಅಳಲು ತೋಡಿಕೊಳ್ಳುವಂತೆ, ಅದರ ಆರ್ತನಾದ, ವೇದನೆ, ಆಸೆ ಎಲ್ಲವೂ ಒಮ್ಮೆಲೆ ಕಿವಿಗೆ ಅಪ್ಪಳಿಸುವಂತೆ  ಭಾಸವಾಗುತ್ತದೆ.

ಜಲಮೂಲವನ್ನೇ ನಂಬಿ ಬದುಕಿದ್ದ  ಅನೇಕರು, ಕೆರೆಯ ಜತೆಗೆ ಇಟ್ಟುಕೊಂಡಿದ್ದ ಒಡನಾಟ, ಈಗ ಕೆರೆಯ  ದುಸ್ಥಿತಿ ಬಗ್ಗೆ  ಅಭಿಪ್ರಾಯ ಹಂಚಿಕೊಂಡರು.
ಅಲ್ಲೇ ಕೆರೆಯ ದಡದಲ್ಲಿ ಹಾಕಿದ್ದ ಕಲ್ಲಿನ ಮೇಲೆ ಕುಳಿತಿದ್ದ ಕೃಷ್ಣಪ್ಪ, ‘ನಾನು ಪಣತ್ತೂರಿನವನು. ನನ್ನ ಮಗ ವರ್ತೂರಿನಲ್ಲಿ ಇರುವುದರಿಂದ ಇಲ್ಲೇ ವಾಸವಾಗಿದ್ದೇನೆ. 25 ವರ್ಷಗಳ ಹಿಂದೆ ಈ ಕೆರೆ ಸಮೃದ್ಧವಾಗಿತ್ತು. ಸುತ್ತಲೂ ಗದ್ದೆ, ತೋಟಗಳಿದ್ದವು. ಕುಡಿಯುವ ನೀರಿಗೆ ಇದನ್ನೇ ಅವಲಂಬಿಸಿದ್ದೆವು. ಕ್ರಮೇಣ ಇದರ ಚಿತ್ರಣ ಬದಲಾಗ ತೊಡಗಿತು. ಸುತ್ತಲೂ ಮನೆಗಳು, ಕಾರ್ಖಾನೆಗಳು ತಲೆಎತ್ತಿದವು. ನಗರದ ಕೊಳಚೆ ನೀರು ಚಲ್ಲಘಟ್ಟ ಕಣಿವೆಗೆ ಬಂದು ಅಲ್ಲಿಂದ ವರ್ತೂರು ಕೆರೆ ಸೇರಲಾರಂಭಿಸಿತು. ರಾಸಾಯನಿಕ ವಸ್ತುಗಳು ಕೆರೆಗೆ ಸೇರಿದ್ದರಿಂದ ನೀರು ಕಲುಷಿತಗೊಂಡಿತು’ ಎಂದು
ಕೆರೆ ಹದಗೆಟ್ಟ ಬಗೆಯನ್ನು ವಿವರಿಸಿದರು.

‘ಐದಾರು ವರ್ಷಗಳಿಂದ ನೊರೆ ಸಮಸ್ಯೆ ಕಾಣಿಸಿಕೊಂಡಿದೆ. ಗಾಳಿ ಬೀಸುವ ಕಡೆಗೆ ಅದು ಹಾರುತ್ತದೆ. ಚರ್ಮದ ಮೇಲೆ ಬಿದ್ದರೆ ಬೊಬ್ಬೆಗಳು ಏಳುತ್ತವೆ. ಕೆಲವೊಮ್ಮೆ ನೊರೆ ವಿಪರೀತ ಹೆಚ್ಚಾಗಿ, ಅದು ಪಕ್ಕದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೂ ಬೀಳುತ್ತದೆ. ಆಗ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.’

‘ನೊರೆ ಜನರ ಹಾಗೂ ವಾಹನಗಳ ಮೇಲೆ ಬೀಳದಿರಲಿ ಎಂದು ಸೇತುವೆಯ ಪಕ್ಕದಲ್ಲೇ ದೊಡ್ಡ ಗಾತ್ರದ ನೆಟ್‌ ಹಾಕುತ್ತಿದ್ದಾರೆ. ಆದರೆ, ಗಾಳಿ ವೇಗವಾಗಿ ಬೀಸಿದರೆ ನೊರೆ ನೆಟ್‌ಗಿಂತ ಎತ್ತರಕ್ಕೆ ಹಾರುತ್ತದೆ’ ಎಂದು ವಿವರಿಸಿದರು.

‘ಬೆಳ್ಳಂದೂರು ಕೆರೆಯಂತೆ ಇದರಲ್ಲಿರುವ ಕಳೆಯನ್ನೂ ತೆಗೆಯಬೇಕು. ರಾಸಾಯನಿಕ ತ್ಯಾಜ್ಯವನ್ನು ಕೆರೆಗೆ ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೊಳಚೆ ನೀರನ್ನು ಶುದ್ಧೀಕರಿಸಿ ಬಿಡಬೇಕು. ಇಡೀ ಕೆರೆಯನ್ನು ಅಭಿವೃದ್ಧಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಚರ್ಮ ಸುಟ್ಟು ಹೋಗುತ್ತದೆ’: ಕೆರೆಗೆ ಹೊಂದಿಕೊಂಡಂತೆ ಹಲವು ಗ್ಯಾರೇಜ್‌ಗಳಿವೆ. ಒಂಬತ್ತು ವರ್ಷಗಳಿಂದ ಈ ಕೆಲಸ ಮಾಡುತ್ತಿರುವ ಮಹೇಶ್‌, ‘ನೊರೆ, ದುರ್ವಾಸನೆಯಿಂದ ಯಾವಾಗ ಮುಕ್ತಿ ಸಿಗುತ್ತದೆ ಎಂದು ಎದುರು ನೋಡುತ್ತಿದ್ದೇನೆ. ಕೆಟ್ಟ ಗಾಳಿಯನ್ನು ಉಸಿರಾಡುವುದರಿಂದ ಗಂಟಲುರಿ ಕಾಣಿಸಿಕೊಳ್ಳುತ್ತಿದೆ. ನೊರೆ ಮೈಮೇಲೆ ಬಿದ್ದರೆ ಚರ್ಮ ಸುಟ್ಟು ಹೋಗುತ್ತದೆ’   ಎಂದು ಅಳಲು ತೋಡಿಕೊಂಡರು.

ಗ್ಯಾರೇಜ್‌ ಮಾಲೀಕ ಇಮ್ತಿಯಾಜ್‌, ‘ಕೆರೆಯಲ್ಲಿರುವುದು ನೀರಲ್ಲ, ಅದು ರಾಸಾಯನಿಕ. ನೊರೆಯಿಂದ ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶ
ದಿಂದ ಬಿಡಿಎ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೆಟ್‌ ಹಾಕುತ್ತಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನ ಇಲ್ಲ’ ಎಂದು
ಹೇಳಿದರು.

ಅಂಕಿ–ಅಂಶ

471.43 ಎಕರೆ‌ ವರ್ತೂರು ಕೆರೆಯ ಒಟ್ಟು ವಿಸ್ತೀರ್ಣ

30.64 ಎಕರೆ ಒತ್ತುವರಿಯಾದ ಜಾಗ

* ಸೊಳ್ಳೆ ಹಾವಳಿಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಕೆರೆ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರೂ ಜನಪ್ರತಿನಿಧಿ­ಗಳು ಗಮನ ಹರಿಸುತ್ತಿಲ್ಲ.
–ಲೋಕೇಶ್‌ ನಾಯಕ್‌, ಸ್ಥಳೀಯ ನಿವಾಸಿ

* ಕೆರೆಯಿಂದ ವರ್ತೂರು ಗ್ರಾಮ ಒಂದೂವರೆ ಕಿ.ಮೀ ದೂರವಿದೆ. ಆದರೆ, ದುರ್ವಾಸನೆ ಇಲ್ಲಿಯವರೆಗೆ ಬರುತ್ತದೆ. ಇದರಿಂದ ನಮ್ಮ ನೆಮ್ಮದಿ ಹಾಳಾಗಿದೆ.

– ರತ್ನಮ್ಮ, ಸ್ಥಳೀಯ ನಿವಾಸಿ

* ಚರ್ಮ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಔಷಧ ತೆಗೆದುಕೊಳ್ಳಲು ಹೆಚ್ಚಿನ ಜನ ಬರುತ್ತಾರೆ. ನೊರೆ, ಕೆಟ್ಟ ಗಾಳಿ ಇದಕ್ಕೆ ಕಾರಣ.

– ನಾಗರಾಜ್‌, ಔಷಧಾಲಯದ ಮಾಲೀಕ

ಚರ್ಮ, ಶ್ವಾಸಕೋಶ ಸಂಬಂಧಿ ಕಾಯಿಲೆ ಉಲ್ಬಣ

ವರ್ತೂರಿನ ಗುರು ರಾಘವೇಂದ್ರ ಕ್ಲಿನಿಕ್‌ನ ವೈದ್ಯ ಡಾ. ದರ್ಶನ್‌, ‘ಕಲುಷಿತ ನೀರಿನಿಂದಾಗಿ ಜನರಿಗೆ ಚರ್ಮ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಕ್ಲಿನಿಕ್‌ಗೆ ಪ್ರತಿದಿನ ಐದಾರು ಮಂದಿಯಾದರೂ ಈ ಸಮಸ್ಯೆ ಹೊತ್ತು ಬರುತ್ತಾರೆ’ ಎಂದರು.

‘ವರ್ತೂರು, ಸೋರಹುಣಸೆ, ಮಧುರಾನಗರ, ಗುಂಜೂರುಪಾಳ್ಯ, ಪಣತ್ತೂರು ಗ್ರಾಮಗಳಲ್ಲಿ ಹೈನುಗಾರಿಕೆ ಹೆಚ್ಚಾಗಿದೆ. ಕೆರೆಯಲ್ಲಿ ಬೆಳೆದ ಹುಲ್ಲನ್ನು ಹಸುಗಳಿಗೆ ಹಾಕುತ್ತಾರೆ. ಹುಲ್ಲು ಕೊಯ್ಯಲು ಕೆರೆಗೆ ಇಳಿಯುತ್ತಾರೆ. ಇದರಿಂದ ಅವರ ಮೊಣಕಾಲುಗಳವರೆಗೆ ಚರ್ಮದ ಅಲರ್ಜಿ ಉಂಟಾಗುತ್ತಿದೆ’ ಎಂದು ವಿವರಿಸಿದರು.

‘ಕಲುಷಿತ ನೀರಿನಲ್ಲಿ ಬೆಳೆದ ಹುಲ್ಲನ್ನು ಹಸುಗಳು ತಿನ್ನುವುದರಿಂದ ಹಾಲಿನಲ್ಲಿ ವಿಷಕಾರಿ ಅಂಶ ಸೇರುತ್ತಿದೆ. ಅನೇಕರು ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲು ಕೆರೆಯ ನೀರನ್ನೇ ಬಳಸುತ್ತಿದ್ದಾರೆ. ಈ ತರಕಾರಿಗಳಲ್ಲೂ ವಿಷಕಾರಿ ಅಂಶಗಳು ಸೇರುತ್ತಿವೆ’ ಎಂದರು.

ವರ್ತೂರು ಕೆರೆ ಅಭಿವೃದ್ಧಿ ಸದ್ಯಕ್ಕಿಲ್ಲ

‘ಬೆಳ್ಳಂದೂರು ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ತೆಗೆಯಲಾಗುತ್ತಿದೆ. ವರ್ತೂರು ಕೆರೆಯನ್ನು ಪುನರುಜ್ಜೀವನಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ. ಬೆಳ್ಳಂದೂರು ಕೆರೆ ಸ್ವಚ್ಛಗೊಂಡ ಬಳಿಕ ಅದರ ಬಗ್ಗೆ ಗಮನ ಹರಿಸುತ್ತೇವೆ’ ಎಂದು ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್‌ ವೀರಸಿಂಗ್‌ ನಾಯಕ್‌  ತಿಳಿಸಿದರು.

‘ವರ್ತೂರು ಕೆರೆಯ ಒತ್ತುವರಿಯನ್ನು ತೆರವುಗೊಳಿಸುತ್ತಿದ್ದೇವೆ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ  ಮಾಡುತ್ತಿದ್ದು, ಗಡಿರೇಖೆ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

ಕೆರೆಯ ಹುಲ್ಲು ಬಳಸದೆ ಬೇರೆ ಮಾರ್ಗವಿಲ್ಲ

ಸೋರಹುಣಸೆ ಗ್ರಾಮದ ರವಿ ಅವರಿಗೆ ಹೈನುಗಾರಿಕೆಯೇ ಜೀವನಾಧಾರ. ಅವರ ಮನೆಯಲ್ಲಿ ಮೂರು ಹಸುಗಳು, ತಲಾ ಎರಡು ಕರು ಹಾಗೂ ಕುರಿಗಳಿವೆ.

‘ಕೆರೆ ಪಕ್ಕದಲ್ಲೇ ಜಮೀನೊಂದನ್ನು ಗುತ್ತಿಗೆ ಪಡೆದು, ಹುಲ್ಲು ಬೆಳೆಯುತ್ತಿದ್ದೇನೆ. ಬೆಳಿಗ್ಗೆ 7 ಗಂಟೆಗೆ ಹಸುಗಳನ್ನು ಕರೆದೊಯ್ದು, ಹುಲ್ಲು ಕೊಯ್ದು ಹಾಕುತ್ತೇನೆ. ಒಂದು ಮೂಟೆ ಹುಲ್ಲನ್ನು ಮನೆಗೆ ತಂದು, ಕರು ಹಾಗೂ ಕುರಿಗಳಿಗೆ ಹಾಕುತ್ತೇನೆ’ ಎಂದು ರವಿ ಹೇಳಿದರು.

‘ಜಮೀನು ಇಲ್ಲದೇ ಇರುವವರು ಕೆರೆಯಲ್ಲಿ ಬೆಳೆದಿರುವ ಹುಲ್ಲನ್ನು ತಂದು ಹಸುಗಳಿಗೆ ಹಾಕುತ್ತಾರೆ. ಈವರೆಗೂ ಹಸುಗಳಿಗೆ ಯಾವುದೇ ತೊಂದರೆ ಆಗಿಲ್ಲ. ಮೇವಿಗೆ ಅಭಾವ ಇರುವುದರಿಂದ ಕೆರೆಯನ್ನೇ ಅವಲಂಬಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT